ತೋರುಬೆರಳು

7

ತೋರುಬೆರಳು

Published:
Updated:
ತೋರುಬೆರಳು

ತೋರುಬೆರಳು

ವಿಭಿನ್ಞ್ನ ಸಂವೇದನೆಯ ಕವಿ `ಆರಫ್ ರಾಜಾ~

 ಸಾವಿಗೆ ಸಮಾಧಿ

ಬೆಳಕಿಗೆ ಕತ್ತಲು ತೋರಿಸಿದೆ

ತಕ್ಷಣ ಬೆಳಕು ಕತ್ತಲನ್ನಪ್ಪಿತು

ಮೌನಕ್ಕೆ ಮಾತು ಪರಿಚಯಿಸಿದೆ

ಮೌನ ಮಾತಿನ ಬೆನ್ನು ಹತ್ತಿತು

ಸಾವಿಗೆ ಸಮಾಧಿ ತೋಡಿದೆ

ಸಾವು ಜೀವಭಯದಿಂದ ನಡುಗಿತು

-- ಆರಿಫ್ ರಾಜಾ

 

ಜಂಗಮ ಫಕೀರನ ಜೋಳಿಗೆ~ ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಆರಿಫ್ ರಾಜಾ ಕನ್ನಡದ ಹೊಚ್ಚ ಹೊಸ ಪ್ರತಿಭೆ. ಅವರ ಕವಿತೆಗಳಲ್ಲಿ ಒಂದು ವಿಭಿನ್ನ ಪ್ರಪಂಚವಿದೆ; ಹೊಸ ಬಗೆಯಿಂದ ಜೀವನವನ್ನು ನೋಡಬಲ್ಲ ತಾಕತ್ತಿದೆ. ಇದನ್ನು ಮುಸ್ಲಿಂ ಸಂವೇದನೆಯೆಂಬ ಸಿದ್ಧ ಖಾನೆಯಲ್ಲಿ ಕೂರಿಸಬಾರದು, ಕೂರಿಸಲು ಬಿಡದಂತೆ ಅವರು ಬರೆಯುತ್ತಾರೆ ಕೂಡ. ಕವಿತೆ ಎಂದರೆ ಎಷ್ಟು ಲೌಕಿಕವೋ ಅಷ್ಟೇ ಅಲೌಕಿಕ ಅನ್ನುವುದನ್ನು ತಿಳಿದಂತೆ ಬರೆಯುವ ಈ ಕವಿ ತನ್ನ ಸುತ್ತಲಿನ, ಒಂದು ನಿರ್ದಿಷ್ಟ ಜೀವನಕ್ರಮದ ವಿವರಗಳನ್ನು ಬಳಸಿಕೊಂಡೂ ಅದನ್ನು ಮೀರಿದ್ದನ್ನು ಹೇಳಬಲ್ಲರೆಂಬುದಕ್ಕೆ ಸಾಕಷ್ಟು ಪುರಾವೆಗಳು ಅವರ ಮೊದಲ ಸಂಕಲನದಲ್ಲಿಯೇ ಇವೆ. ಅವರ ವೇದನೆ, ಪ್ರತಿಭಟನೆ, ಬಂಡಾಯ ಎಲ್ಲವೂ ಅವಸರದ ಪ್ರತಿಕ್ರಿಯೆಯಲ್ಲ; ಬದಲಿಗೆ ಅವು ಸಮಚಿತ್ತದ ಒಳನೋಟಗಳು. ಈ ಕೆಲವು ಸಾಲುಗಳನ್ನು ಗಮನಿಸಿ:ಕುರಿಯ ರೂಪದಲಿ ಸಾವು ಸತ್ತುಹೋಯಿತು

ಸಾವಿಗೆ ಸಾವು ಬಂತು ಸಾವಾಯಿತು

   (ಕಂಬನಿವರೆಸುವ ಕವಿತೆ)

ಹಾದಿ ಇದ್ದಲ್ಲಿ ಮಾತ್ರ ನಡೆಯುವವರಿಗೆ ಆರಿಫ್‌ರ ಕಾವ್ಯ ಸಪ್ಪೆಯೆನಿಸಬಹುದು. ಆದರೆ ಕಾಡಲ್ಲಿ ಹಾದಿ ಹುಡುಕುವ ತಾಳ್ಮೆ, ಧೈರ್ಯ, ಗೊತ್ತಿಲ್ಲದ್ದನ್ನು ತಿಳಿಯುವ ಹಂಬಲ ಇದ್ದವರಿಗೆ ಇವರು ರುಚಿಸುತ್ತಾರೆ. ಮೇಲ್ನೋಟಕ್ಕೆ ಕಾರ್ಯಕಾರಣ ಸಂಬಂಧ ಹುಡುಕುವವರನ್ನು ಆರಿಫ್ ಸುಲಭವಾಗಿ ಬೇಸ್ತುಬೀಳಿಸುತ್ತಾರೆ. ಹಾಗಿದ್ದೂ, ಸಂಕೀರ್ಣತೆಯ ಸೋಗಿನಲ್ಲಿ ಅತಾರ್ಕಿಕತೆ, ಅಸ್ಪಷ್ಟತೆಗಳನ್ನು ಕಾವ್ಯವೆಂದು ದಾಟಿಸುವ ಬೇಜವಾಬ್ದಾರಿತನ, ಉಡಾಫೆ ಇವರಲ್ಲಿ ಕಾಣುವುದಿಲ್ಲ. ಇದು ಹೊಸ ಕವಿಯ ಸಾಧನೆಯೇ ಸರಿ. ಆರಿಫ್‌ರ ಕವಿತೆಗಳ ಕುರಿತು ಬರೆಯಹೊರಟವರು ತಮಗೆ ತಿಳಿದ ವಿಮರ್ಶೆಯ ಸಿದ್ಧ ಶಬ್ದಗಳಲ್ಲಿ, ಸವೆದ ನುಡಿಗಟ್ಟುಗಳಲ್ಲಿ ಅವರನ್ನು ಹಿಡಿಯಲು ಪ್ರಯತ್ನಿಸಿ ಹೈರಾಣಾಗಿರುವುದು, ಅವರ ಸರಳ ಸಾಲುಗಳನ್ನು ಮಾತ್ರ ಎತ್ತಿಕೊಂಡು ವಿಶ್ಲೇಷಿಸುತ್ತಿರುವುದು ಆರಿಫ್‌ರ ಕಾವ್ಯಶಕ್ತಿ ಮತ್ತು ಪ್ರಯೋಗಶೀಲತೆಯ ಕುರಿತು ಬಹಳಷ್ಟನ್ನು ಹೇಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry