ಸೋಮವಾರ, ಅಕ್ಟೋಬರ್ 14, 2019
22 °C

ತ್ಯಾಗರ್ತಿ ಗ್ರಾಮದ ಅರಣ್ಯರೋದನ

Published:
Updated:
ತ್ಯಾಗರ್ತಿ ಗ್ರಾಮದ ಅರಣ್ಯರೋದನ

ಒಂದೆಡೆ ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ನಾಶ, ಮತ್ತೊಂದೆಡೆ ಎಲ್ಲೆಂದರಲ್ಲಿ ನಡೆಯುತ್ತಿರುವ ಅಕ್ರಮ ಜಂಬಿಟ್ಟಿಗೆ ಕ್ವಾರಿಗಳು. ಇದರ ಪರಿಣಾಮ ಅಪ್ಪಟ ಮಲೆನಾಡು ಆಗಿದ್ದ ಸಾಗರ ತಾಲ್ಲೂಕಿನ ತ್ಯಾಗರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳು ಬಯಲುಸೀಮೆಯ ಸ್ವರೂಪ ಪಡೆಯುತ್ತಿವೆ.ಸಾಗರ ನಗರದಿಂದ 17 ಕಿ.ಮೀ. ದೂರದಲ್ಲಿರುವ ತ್ಯಾಗರ್ತಿ ಗ್ರಾಮ ಪಂಚಾಯ್ತಿ ಬೆಳಂದೂರು, ಕುಡಿಗೆರೆ, ನಾಡವಳ್ಳಿ, ಚನ್ನಾಪುರ, ಮೈಲಾರಕೊಪ್ಪ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಸಾಗರದ ಜತೆಗೆ ಶಿರಾಳಕೊಪ್ಪ, ಶಿಕಾರಿಪುರ, ಸೊರಬ  ತಾಲ್ಲೂಕುಗಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಇಲ್ಲಿನ ಗ್ರಾಮಗಳು ಆ ತಾಲ್ಲೂಕಿನ ಜತೆಗೂ ನಿಕಟ ಸಂಪರ್ಕ ಹೊಂದಿವೆ.ತ್ಯಾಗರ್ತಿ ಗ್ರಾಮ 3073, ಬೆಳಂದೂರು, ಮೈಲಾರಿಕೊಪ್ಪ, ತೊರಗದ್ದೆ ಗ್ರಾಮಗಳು ಸೇರಿ 989, ಕುಡಿಗೆರೆ ಮತ್ತು ಸಾಡಗಳಲೆ 491, ನಾಡವಳ್ಳಿ ಚನ್ನಾಪುರ 670 ಜನರನ್ನು ಹೊಂದಿದ್ದು ಪಂಚಾಯ್ತಿ ವ್ಯಾಪ್ತಿಯ ಒಟ್ಟು ಜನಸಂಖ್ಯೆ 5,223. ಈಡಿಗರು ಈ ಭಾಗದ ಬಹುಸಂಖ್ಯಾತರಾಗಿದ್ದು ಗಂಗಾಮತಸ್ಥರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿದಂತೆ ವಿವಿಧ ಜಾತಿ ಜನಾಂಗದವರು ಇಲ್ಲಿ ವಾಸವಾಗಿದ್ದಾರೆ.ತ್ಯಾಗರ್ತಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 12,500ಎಕರೆ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಈ ಪೈಕಿ ಸುಮಾರು 2,890 ಎಕರೆ ಪ್ರದೇಶ ಸಾಗುವಳಿಗೆ ಒಳಪಟ್ಟಿದೆ.  ನಾಡವಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ 960 ಎಕರೆ ಪ್ರದೇಶ ಅಂಬ್ಲಿಗೊಳ ಜಲಾಶಯಕ್ಕಾಗಿ ಮುಳುಗಡೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನಾರ್ಹ.ಪಂಚಾಯ್ತಿ ದಾಖಲೆಗಳ ಪ್ರಕಾರ ಬೆಳಂದೂರಿನಲ್ಲಿ 5, ತ್ಯಾಗರ್ತಿಯಲ್ಲಿ 11, ನಾಡವಳ್ಳಿಯಲ್ಲಿ 2 ಹಾಗೂ ಕುಡಿಗೆರೆಯಲ್ಲಿ 9 ಕೆರೆಗಳು ಇವೆ. ಇಲ್ಲಿನ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು ಹೂಳೆತ್ತುವ ಕಾರ್ಯ ನಡೆದಿಲ್ಲ. ಕೆರೆಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದು ಕೃಷಿ ಕಾರ್ಯಕ್ಕೆ ಹಿನ್ನಡೆ ತಂದಿರುವ ಸಂಗತಿ.ತ್ಯಾಗರ್ತಿ ಗ್ರಾಮದಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ, ಒಂದು ಖಾಸಗಿ ಪ್ರೌಢಶಾಲೆ, ಎರಡು ಸರ್ಕಾರಿ ಮಾಧ್ಯಮಿಕ ಶಾಲೆ ಇವೆ. ಆದರೆ, ಇಲ್ಲಿನ ಶೈಕ್ಷಣಿಕ ಗುಣಮಟ್ಟ ಅಷ್ಟಕಷ್ಟೇ. ಈ ಭಾಗದಿಂದ ಸರ್ಕಾರಿ ನೌಕರಿ ಪಡೆದವರು ಹಾಗೂ ಉನ್ನತ ಹುದ್ದೆಗೆ ಹೋದವರ ಸಂಖ್ಯೆ ಹೆಚ್ಚೇನೂ ಇಲ್ಲ. ಇಲ್ಲಿಂದ ನೂರಕ್ಕೂ ಹೆಚ್ಚು ಮಕ್ಕಳು ಸಾಗರಕ್ಕೆ  ಹಾಗೂ ಬರೂರು ಗ್ರಾಮಕ್ಕೆ ಪದವಿಪೂರ್ವ ಕಾಲೇಜಿಗೆ ಪ್ರತಿನಿತ್ಯ ಸಂಚರಿಸುತ್ತಿದ್ದು ತ್ಯಾಗರ್ತಿಯ್ಲ್ಲಲೇ ಪಿಯು ಕಾಲೇಜು ಆಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಇಲ್ಲಿ ಉತ್ತಮ ಸೌಲಭ್ಯಗಳು ಇದ್ದರೂ ಗ್ರಾಮಸ್ಥರಿಗೆ ಅಗತ್ಯವಿರುವಷ್ಟು ಔಷಧಿ ಪೂರೈಕೆಯಾಗುತ್ತಿಲ್ಲ. ಇಲ್ಲಿನ ಆಸ್ಪತ್ರೆಗೆ ಮಹಿಳಾ ವೈದ್ಯರು ಬೇಕು ಎಂಬ ಬಹುಕಾಲದ ಬೇಡಿಕೆ ನೆನಗುದಿಗೆ ಬಿದ್ದಿದೆ.ಮಲೆನಾಡಿನ ಬಹುತೇಕ ಹಳ್ಳಿಗಳಂತೆ ತ್ಯಾಗರ್ತಿ ಕೂಡ ತೀವ್ರವಾದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದೆ. ಬೇಸಿಗೆಯಲ್ಲಿ ಇಲ್ಲಿನ ಗ್ರಾಮಗಳ ಜನರು ನೀರಿಗಾಗಿ ಮೈಲುಗಟ್ಟಲೇ ದೂರ ಹೋಗಬೇಕಾದ ಸ್ಥಿತಿ ಇದೆ.  ಜಿಲ್ಲಾ ಪಂಚಾಯ್ತಿ 20ಲಕ್ಷ ವೆಚ್ಚದ ನೀರು ಸರಬರಾಜು ಯೋಜನೆ ರೂಪಿಸಿದ್ದರೂ ಅದರ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ.ವಿದ್ಯುತ್ ಕಣ್ಣಾಮುಚ್ಚಾಲೆ ತ್ಯಾಗರ್ತಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆ. ಇಲ್ಲಿನ ಗ್ರಾಮಗಳಿಗೆ ಆನಂದಪುರಂನ 11 ಕೆ.ವಿ. ಮಾರ್ಗದಿಂದ ವಿದ್ಯುತ್ ಸರಬರಾಜು ಆಗುತ್ತಿದೆ. ತ್ಯಾಗರ್ತಿಯಲ್ಲೇ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪನೆಯಾಗಬೇಕು ಎಂಬ ಒತ್ತಾಯ ಇಲ್ಲಿನವರದ್ದು.ಈ ಭಾಗದ ಗ್ರಾಮಗಳ ರಸ್ತೆ ಗುಣಮಟ್ಟವೂ ಅಷ್ಟಕಷ್ಟೆ. ಗ್ರಾಮದ ಪ್ರಮುಖ ರಸ್ತೆಗಳ ಡಾಂಬರೀಕರಣವಾಗಿದ್ದರೂ ಒಳ ಭಾಗಗಳ ಹಳ್ಳಿಗಳಿಗೆ ಹೋಗಲು ಹರಸಾಹಸ  ಮಾಡಬೇಕು. ಇಲ್ಲಿನ ರಸ್ತೆಗಳು ಹಾಳಾಗಲು ಕಲ್ಲು ತುಂಬಿದ ಲಾರಿಗಳ ನಿರಂತರ ಓಡಾಟ ಕಾರಣವಾಗಿದೆ.ಮೈಲಾರಕೊಪ್ಪದಿಂದ ಕೊರ್ಲಿಕೊಪ್ಪ, ಮೈಲಾರಕೊಪ್ಪದಿಂದ ಇಡುವಳ್ಳಿ ಸರ್ಕಲ್, ತ್ಯಾಗರ್ತಿಯಿಂದ ಸೊರಬಕ್ಕೆ ಹೋಗಲು ಮುಳಕೇರಿ ಗ್ರಾಮದಿಂದ ಮೈಸಾವಿಗೆ ಸಂಪರ್ಕ ರಸ್ತೆ, ತ್ಯಾಗರ್ತಿಯ ಜನತಾ ಕಾಲೊನಿ ಹೀಗೆ ಅನೇಕ ಭಾಗಗಳು ಗುಣಮಟ್ಟದ ರಸ್ತೆ ಇಲ್ಲದೆ ನರಳುತ್ತಿವೆ.

 

ತ್ಯಾಗರ್ತಿ ಗ್ರಾಮ ಇನಾಂ ಗ್ರಾಮವಾಗಿದ್ದು ಇಲ್ಲಿನ 228 ಸ.ನಂ. ಭೂಮಿಗೆ 518 ಪಿ.ಆರ್.ನಂ. (ಪ್ರಾಥಮಿಕ ದಾಖಲಾತಿ ) ನೀಡಲಾಗಿದೆ. ಹೊಸದಾಗಿ ಸರ್ವೆ ನಡೆಸಿ ಈ ಎಲ್ಲಾ ಪಿ.ಆರ್.ನಂಬರ್‌ಗಳಿಗೆ ಸರ್ವೆ ನಂಬರ್ ನೀಡುವ ಕಾರ್ಯ ಆಗಬೇಕೆಂಬ ಗ್ರಾಮಸ್ಥರ ಬೇಡಿಕೆ ಈಡೇರುತ್ತಿಲ್ಲ. ಪಕ್ಕದ ಗೌತಮಪುರ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಮುಕ್ತಾಯವಾದ ಈ ಕೆಲಸ ತ್ಯಾಗರ್ತಿಯಲ್ಲಿ ಯಾಕೆ ಆಗುತ್ತಿಲ್ಲ ಎಂಬುದು ಇಲ್ಲಿನ ಜನರ ಪ್ರಶ್ನೆ.ಅರಣ್ಯ ನಾಶ ತ್ಯಾಗರ್ತಿ ಗ್ರಾಮವನ್ನು ಕಾಡುತ್ತಿರುವ ಪೆಡಂಭೂತವಾಗಿದೆ. ಎರಡು ದಶಕಗಳ ಹಿಂದೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಈ ಪಂಚಾಯ್ತಿ ವ್ಯಾಪ್ತಿ ಹಳ್ಳಿಗಳು ಮರ ಕಡಿತಲೆಯಿಂದ ಬಯಲುಸೀಮೆ ಸ್ವರೂಪ ಪಡೆಯುತ್ತಿವೆ.ಈ ಮೊದಲು ಬತ್ತ ಇಲ್ಲಿನ ಪ್ರಮುಖ ಬೆಳೆಯಾಗಿದ್ದು ಇತ್ತೀಚಿನ ವರ್ಷಗಳಲ್ಲಿ ಶುಂಠಿ, ಮೆಕ್ಕೆಜೋಳ, ರಬ್ಬರ್ ಬೆಳೆಗಳು ಈ ಪ್ರದೇಶಕ್ಕೆ ದಾಳಿ ಇಟ್ಟಿರುವುದು ಕಾಡಿನ ನಾಶಕ್ಕೆ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಂದಾಯ ಭೂಮಿಯಲ್ಲಿನ ಬಹುತೇಕ ಮರಗಳು ನೆಲಕ್ಕೆ ಉರುಳಿದ್ದು ಕಾಡಿದ್ದ ಪ್ರದೇಶದಲ್ಲಿ ನಿಂತರೆ ಈಗ  ಬೋಳುಗುಡ್ಡಗಳು ಕಾಣುತ್ತವೆ.ಎಲ್ಲೆಂದರಲ್ಲಿ ಅಕ್ರಮವಾಗಿ ನಡೆಯುತ್ತಿರುವ ಜಂಬಿಟ್ಟಿಗೆ ಕಲ್ಲು ಕ್ವಾರಿ ದಂಧೆಯಿಂದ ತ್ಯಾಗರ್ತಿ ಹಾಗೂ ಸುತ್ತಮುತ್ತಲ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪವೇ ಬದಲಾಗಿದೆ. ಕಲ್ಲು ಕ್ವಾರಿ ದಂಧೆ ನಡೆಸಿ ಅಕ್ರಮವಾಗಿ ಹೇರಳ  ಹಣ ಗಳಿಸಿದವರೇ ಪಂಚಾಯ್ತಿ ಚುನಾವಣೆಗೆ ನಿಂತು ಪ್ರತಿನಿಧಿಗಳಾಗಿ ಗೆಲ್ಲುವ ಮೂಲಕ ಇಲ್ಲಿನ ರಾಜಕೀಯ ವ್ಯವಸ್ಥೆಯನ್ನು ಕಲ್ಲು ಕ್ವಾರಿ ದಂಧೆ ನಿಯಂತ್ರಿಸುವ ಸ್ಥಿತಿ ನಿರ್ಮಾಣವಾಗಿದೆ.ಕಲ್ಲು ಕ್ವಾರಿ ದಂಧೆಯಿಂದ ಕೃಷಿಗೆ ಕೂಲಿ ಕಾರ್ಮಿಕರೇ ದೊರಕುತ್ತಿಲ್ಲ. ಲಾರಿಗಳ ನಿರಂತರ ಓಡಾಟದಿಂದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ಭೂಮಿಯಿಂದ ದೊರಕುವ ಸಂಪತ್ತನ್ನು ದೋಚಿದ ನಂತರ ಒಮ್ಮೆಯಾದರೂ ಯಾವುದಕ್ಕೂ ಬಾರದು ಎಂದು ಗೊತ್ತಾದ ನಂತರ ಹಾಗೆಯೆ ಬಿಟ್ಟು ತೆರಳುವ ಮನುಷ್ಯನ ದುರಾಸೆಯ ಪ್ರವೃತ್ತಿಯಿಂದ ಕಲ್ಲು ಕ್ವಾರಿ ನಡೆಸಿದ ಪ್ರದೇಶಗಳು ಪ್ರಾಚೀನ ಸ್ಮಾರಕಗಳಂತೆ ಗೋಚರಿಸುತ್ತಿವೆ.ತ್ಯಾಗರ್ತಿ ಗ್ರಾಮದಲ್ಲಿ  ಐದು ವರ್ಷಕ್ಕೊಮ್ಮೆ ಮಾರಿಕಾಂಬಾ ಜಾತ್ರೆ ಅದ್ದೂರಿಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ಎರಡು ದಿನ ನಡೆಯುವ ಕುಸ್ತಿ ಪಂದ್ಯಾವಳಿಗಳಲ್ಲಿ ದೆಹಲಿ, ರಾಜಸ್ತಾನ, ಕೊಲ್ಲಾಪುರ ಮೊದಲಾದ ಪ್ರದೇಶಗಳಿಂದ ಪ್ರಖ್ಯಾತ ಪೈಲ್ವಾನರುು ಭಾಗವಹಿಸುವುದು ವಿಶೇಷ. ಗ್ರಾಮದಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಹೋರಿ ಬೆದರಿಸುವ ಆಚರಣೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಭಾಗವಹಿಸುತ್ತಾರೆ.ತ್ಯಾಗರ್ತಿಯಲ್ಲಿ ಎಚ್. ನರಹರಿ ದೀಕ್ಷಿತ್ ಅವರು ಸ್ಥಾಪಿಸಿರುವ ಸಚ್ಚಿದಾನಂದ ಆಶ್ರಮ ಅಧ್ಯಾತ್ಮದ ಕೇಂದ್ರವಾಗಿದೆ. ನರಹರಿ ಸಂಪ್ರದಾಯದ ಪಂಚೀಕರಣ ಶಾಸ್ತ್ರದ ಮೂಲಕ ಸಮಾಜವನ್ನು ವಿಶ್ಲೇಷಿಸುವ ದೃಷ್ಟಿಕೋನವನ್ನು ಇಲ್ಲಿ ಹೇಳಿಕೊಡಲಾಗುತ್ತದೆ ಎನ್ನುತ್ತಾರೆ ಕೇಂದ್ರದ ಪ್ರಮುಖರಾದ ನರಹರಿ ದೀಕ್ಷಿತ್.ತ್ಯಾಗರ್ತಿ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ 50 ವರ್ಷ ದಾಟುವ ಮುನ್ನವೇ ವಿವಿಧ ಕಾಯಿಲೆಗಳಿಗೆ ತುತ್ತಾಗಿ ನಿಧನರಾಗುವವರ ಸಂಖ್ಯೆ ಹೆಚ್ಚಿದೆ. ಗ್ರಾಮಕ್ಕೆ ಹೆಚ್ಚುವರಿ ಸರ್ಕಾರಿ ಬಸ್ ಸೇವೆ ಕಲ್ಪಿಸಬೇಕು. ಮುಜರಾಯಿ ಇಲಾಖೆಗೆ ಸೇರಿದ ಕಾಳೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

 

Post Comments (+)