ಶನಿವಾರ, ಏಪ್ರಿಲ್ 17, 2021
24 °C

ತ್ಯಾಜ್ಯಗಳ ಅಸಮರ್ಪಕ ವಿಲೇವಾರಿಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಘನ ತ್ಯಾಜ್ಯ ವಸ್ತುಗಳನ್ನು ಅಸಮರ್ಪಕ ವಿಲೇವಾರಿ ಮಾಡುತ್ತಿರುವುದನ್ನು ಖಂಡಿಸಿ ಸೋಮವಾರ ತಾಲ್ಲೂಕಿನ ದ್ಯಾಮೇನಹಳ್ಳಿ, ತೋಪರಮಾಳಿಗೆ ಗ್ರಾಮಸ್ಥರು ನಗರಸಭೆಯ ಕಸ ಸಾಗಿಸುವ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.ದ್ಯಾಮೇನಹಳ್ಳಿ ಗ್ರಾಮದ ಬಳಿಯ ಘಟಕದಲ್ಲಿ ನಗರದ ಘನ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತಿದೆ. ಆದರೆ, ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ದುರ್ನಾತ ಬೀರುತ್ತಿದ್ದು, ಸುತ್ತಮುತ್ತ ಗ್ರಾಮಗಳಲ್ಲಿ ಕಾಯಿಲೆಗಳು ಹರಡುತ್ತಿವೆ ಎಂದು ಗ್ರಾಮಸ್ಥರು ದೂರಿದರು.ನಾರುತ್ತಿರುವ ಕಸದ ರಾಶಿಯಿಂದ ಈ ಪ್ರದೇಶದಲ್ಲಿ ಬದುಕುವುದೇ ದುಸ್ತರವಾಗುತ್ತಿದೆ. ಕಸದ ರಾಶಿಗೆ ಬೆಂಕಿ ಹಚ್ಚುವುದರಿಂದ ಹೊಗೆ ಇಡೀ ಪ್ರದೇಶದಲ್ಲಿ ಆವರಿಸುತ್ತಿದೆ. ನೊಣಗಳು ಮತ್ತು ನಾಯಿಗಳ ಹಾವಳಿ ಹೆಚ್ಚಾಗಿದೆ. ವಿವಿಧ ತ್ಯಾಜ್ಯ ವಸ್ತುಗಳನ್ನು ಕಚ್ಚಿಕೊಂಡು ಬಂದು ಎಲ್ಲೆಂದರೆಲ್ಲಿ ಬಿಸಾಕಿ ಹೋಗುತ್ತಿವೆ.

 

ಸುತ್ತಮುತ್ತ ಗ್ರಾಮಗಳಲ್ಲಿ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ. ಸಮರ್ಪಕವಾಗಿ ಮತ್ತು ಯಾವುದೇ ರೀತಿ ತೊಂದರೆಯಾಗದಂತೆ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ  ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಕಳೆದ 6-7 ತಿಂಗಳ ಹಿಂದೆಯೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತೇವೆ ಎಂದು ನಗರಸಭೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಕೇವಲ ಆಶ್ವಾಸನೆಯಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಯಿತು.

 

ಇನ್ನೂ 15 ದಿನಗಳಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯವನ್ನು ಶೇಖರಿಸಿದ್ದರೆ ನಾವು ಇಲ್ಲಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಗ್ರಾಮಸ್ಥರನ್ನು ಸಮಾಧಾನ ಮಾಡಿ ಸುತ್ತಮುತ್ತ ಪರಿಸರ ಕಾಪಾಡಲು ತ್ವರಿತಗತಿಯಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಬಸವರಾಜ್, ತಿಪ್ಪೇಸ್ವಾಮಿ, ಮಂಜುನಾಥ್  ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.