ತ್ಯಾಜ್ಯಮುಕ್ತ ಕಡಲತೀರ

7

ತ್ಯಾಜ್ಯಮುಕ್ತ ಕಡಲತೀರ

Published:
Updated:

ಕಾರವಾರ: ಅಂತರರಾಷ್ಟ್ರೀಯ ಕರಾವಳಿ ತೀರಗಳ ಸ್ವಚ್ಛತಾ ದಿನಾಚರಣೆ ಅಂಗವಾಗಿ ಭಾನುವಾರ ನಗರದ ರವೀಂದ್ರನಾಥ ಟ್ಯಾಗೋರ್‌ ಕಡಲ ತೀರವನ್ನು ತ್ಯಾಜ್ಯಮುಕ್ತಗೊಳಿಸಲಾಯಿತು.



ನಗರದ ವಿವಿಧ ಶಾಲಾ, ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ನೂರಾರು ಮಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ತ್ಯಾಜ್ಯಗಳನ್ನು ಸಂಗ್ರಹಿಸಿದರು. ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕಡಲತೀರಕ್ಕೆ ಬಂದು ಕಸ ಸಂಗ್ರಹಿಸಿದ್ದು ವಿಶೇಷವಾಗಿತ್ತು. 



ನಗರಸಭೆ ಅಧ್ಯಕ್ಷ ಲೀಲಾಬಾಯಿ ಠಾಣೇಕರ ಅವರು ಮಿತ್ರ ಸಮಾಜದ ಬಳಿ ಬೆಳಿಗ್ಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಯೂರ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.



ಪ್ರಭಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಮಾತನಾಡಿ, ‘ಪ್ರತಿವರ್ಷ ಸಾವಿರಾರು ಪ್ರವಾಸಿಗರು ಆಗಮಿಸುವ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರ್ಕಾರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇತ್ತೀಚೆಗೆ ಈ ಕುರಿತು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸ್ಥಳಗಳನ್ನು ಮಲಿನಗೊಳಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇದರಲ್ಲಿ ಅವಕಾಶಗಳಿವೆ. ಆದರೆ, ಸಾರ್ವಜನಿಕರು ಇದಕ್ಕೆ ಅವಕಾಶ ನೀಡದೆ ಸ್ವಇಚ್ಛೆಯಿಂದ ಸ್ವಚ್ಛತೆಯನ್ನು ಪಾಲಿಸಬೇಕಿದೆ’ ಎಂದು ಮನವಿ ಮಾಡಿದರು.



ಕೋಸ್ಟ್ ಗಾರ್ಡ್‌ ಸ್ಟೇಷನ್ ಕಮಾಂಡಿಂಗ್ ಆಫೀಸರ್ ಗುರ್ಮೀತ್ ಸಿಂಗ್ ರಾಲ್ಹಿ ಮಾತನಾಡಿ, ‘ಸಾರ್ವಜನಿಕರಲ್ಲಿ ಕಡಲ ತೀರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ’ ಎಂದರು.

ನಗರಸಭೆ ಉಪಾಧ್ಯಕ್ಷೆ ಛಾಯಾ ಜಾವಕರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುಬ್ರಾಯ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.



ಬಹುಮಾನ: ತ್ಯಾಜ್ಯಗಳನ್ನು ಅತಿಹೆಚ್ಚು ಸಂಗ್ರಹಿಸಿದ ತಂಡಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಆರ್‌. ದಿಲೀಪ್‌ ಬಹುಮಾನ ವಿತರಿಸಿದರು. ಕರ್ನಾಟಕ ಎನ್‌ಸಿಸಿ 28ನೇ ಬೆಟಾಲಿಯನ್ ತಂಡ ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನವನ್ನು ಕಾರವಾರ ಸರ್ಕಾರಿ ಕಾಲೇಜು ಹಾಗೂ ತೃತೀಯ ಬಹುಮಾನವನ್ನು ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಪಡೆದುಕೊಂಡರು.



ಅ.2ರಿಂದ ಸ್ವಚ್ಛತಾ ಅಭಿಯಾನ

ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಿಂತೆ ಅಕ್ಟೋಬರ್ 2ರಿಂದ 8ರವರೆಗೆ ಜಿಲ್ಲೆಯಾದ್ಯಂತ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುವುದು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಮಟ್ಟಗಳಲ್ಲಿ  ಅಭಿಯಾನ ಆಯೋಜಿಸಲಾಗುವುದು.

ವಿಜಯ ಮಹಾಂತೇಶ್, ಪ್ರಭಾರ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry