ತ್ಯಾಜ್ಯ ಉತ್ಪಾದನೆಯಾದ ಸ್ಥಳದಲ್ಲೇ ಸಂಸ್ಕರಣೆ:ಬಿಬಿಎಂಪಿ

7

ತ್ಯಾಜ್ಯ ಉತ್ಪಾದನೆಯಾದ ಸ್ಥಳದಲ್ಲೇ ಸಂಸ್ಕರಣೆ:ಬಿಬಿಎಂಪಿ

Published:
Updated:
ತ್ಯಾಜ್ಯ ಉತ್ಪಾದನೆಯಾದ ಸ್ಥಳದಲ್ಲೇ ಸಂಸ್ಕರಣೆ:ಬಿಬಿಎಂಪಿ

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳ ಸಹಭಾಗಿತ್ವದಲ್ಲಿ ತ್ಯಾಜ್ಯ ನಿರ್ವಹಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಬೃಹತ್ ಪ್ರಮಾಣದ ಹಸಿತ್ಯಾಜ್ಯ ಉತ್ಪಾದನೆಯಾಗುತ್ತದೆ.ಈ ತ್ಯಾಜ್ಯವನ್ನು ಉತ್ಪಾದನೆಯಾದ ಸ್ಥಳಗಳಲ್ಲೇ ಸಂಸ್ಕರಿಸುವ ಜೈವಿಕ ಇಂಧನ ಘಟಕಗಳ ಸ್ಥಾಪನೆಯ ಬಗ್ಗೆ ಬಿಬಿಎಂಪಿಯು ನಗರದ ಬಿಲ್ಡರ್‌ಗಳು ಹಾಗೂ ಹೋಟೆಲ್ ಮಾಲೀಕರ ಸಂಘಗಳೊಂದಿಗೆ ಗುರುವಾರ ಮಾತುಕತೆ ನಡೆಸಿದೆ.`ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಉತ್ಪಾದನೆಯಾಗುವ ಹಸಿತ್ಯಾಜ್ಯವನ್ನು ಬಳಸಿಕೊಂಡು ಬಯೊಗ್ಯಾಸ್ ಅಥವಾ ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ನಗರದ ಬಿಲ್ಡರ್‌ಗಳು, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳ ಪ್ರತಿನಿಧಿಗಳು ಮತ್ತು ಹೋಟೆಲ್ ಮಾಲೀಕರು ಆಸಕ್ತಿ ಹೊಂದಿದ್ದಾರೆ.ತ್ಯಾಜ್ಯವು ಉತ್ಪಾದನೆಯಾದ ಸ್ಥಳದಲ್ಲೇ ಅದನ್ನು ಇಂಧನವಾಗಿ ಪರಿವರ್ತಿಸುವುದರಿಂದ ಸಾಗಣೆ ಹಾಗೂ ಸಂಸ್ಕರಣಾ ವೆಚ್ಚವೂ ಉಳಿಯಲಿದೆ~ ಎಂದು ಮೇಯರ್ ಡಿ.ವೆಂಕಟೇಶಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

`ಪಾಲಿಕೆಯ ಈ ಕ್ರಮದಿಂದ ನಗರದ ಸುಮಾರು ಅರ್ಧದಷ್ಟು ಹಸಿತ್ಯಾಜ್ಯ ಉತ್ಪಾದನೆಯಾದ ಸ್ಥಳದಲ್ಲೇ ಸಂಸ್ಕರಣೆಗೊಳ್ಳಲಿದೆ.

 

ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಎಲ್‌ಪಿಜಿಗೆ ಪೂರಕವಾಗಿ ಹಸಿತ್ಯಾಜ್ಯದಿಂದ ಉತ್ಪಾದನೆಯಾದ ಬಯೊಗ್ಯಾಸ್ ಬಳಕೆ ಸಾಧ್ಯವಾಗಲಿದೆ. ಹಸಿತ್ಯಾಜ್ಯದಿಂದ ಬಯೊಗ್ಯಾಸ್ ಮತ್ತು ಸಾವಯವ ಗೊಬ್ಬರ ತಯಾರಿಕೆಯ ಬಗ್ಗೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ~ ಎಂದು ಅವರು ಹೇಳಿದರು.`ಒಣತ್ಯಾಜ್ಯದ ನಿರ್ವಹಣೆಗಾಗಿ ಪ್ರತಿ ವಾರ್ಡ್‌ಗಳಲ್ಲಿ ಮೂರು ಅಥವಾ ನಾಲ್ಕು ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಿಂದ ಒಣತ್ಯಾಜ್ಯವನ್ನು ಈ ಕೇಂದ್ರಗಳಿಗೆ ತಂದು ಹಾಕುವಂತೆ ತಿಳಿಸಲಾಗಿದೆ~ ಎಂದರು.ಹಸಿತ್ಯಾಜ್ಯ ಸಂಸ್ಕರಣೆ ಹಾಗೂ ಇಂಧನ ಉತ್ಪಾದನೆಯ ಬಗ್ಗೆ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ಬಿಬಿಎಂಪಿ ತಾಂತ್ರಿಕ ನೆರವನ್ನು ಪಡೆದಿದೆ. ಇದರಿಂದ ಹಸಿತ್ಯಾಜ್ಯ ಬಳಸಿಕೊಂಡು ಬಯೊಗ್ಯಾಸ್, ಸಾವಯವ ಗೊಬ್ಬರದ ಜತೆಗೆ ಬಯೊಗ್ಯಾಸ್ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನವನ್ನು ಮಂಡಳಿ ಒದಗಿಸಲಿದೆ.`ನಗರದ ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಉತ್ಪಾದನೆಯಾಗುವ ಹಸಿತ್ಯಾಜ್ಯದಿಂದ ಸಾಕಷ್ಟು ಇಂಧನ ಉತ್ಪಾದನೆ ಮಾಡಲು ಸಾಧ್ಯವಿದೆ. ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಸದ ಸಮಸ್ಯೆಯನ್ನು ನಿಭಾಯಿಸುವ ಇಚ್ಛಾಶಕ್ತಿಯನ್ನು ಬಿಬಿಎಂಪಿ ಪ್ರದರ್ಶಿಸಬೇಕು~ ಎಂದು ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸದಸ್ಯ ಅತ್ತಿಹಳ್ಳಿ ದೇವರಾಜ್ ಹೇಳಿದರು.`ನಗರದಲ್ಲಿ ಉತ್ಪಾದನೆಯಾದ ತ್ಯಾಜ್ಯವನ್ನು ನಗರದಲ್ಲೇ ಸಂಸ್ಕರಿಸಲು ಇಸ್ರೇಲ್ ಮಾದರಿಯಲ್ಲಿ ಯೋಜನೆ ರೂಪಿಸಬೇಕು. ಎಲ್ಲ ರೀತಿಯ ತ್ಯಾಜ್ಯವನ್ನು ವಿಂಗಡಣೆ ಮಾಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪಾಲಿಕೆ ಚಿಂತನೆ ನಡೆಸಬೇಕು~ ಎಂದು ಪಾಲಿಕೆಯ ಮಾಜಿ ಮೇಯರ್ ಎಸ್.ಕೆ.ನಟರಾಜ್ ಸಲಹೆ ನೀಡಿದ್ದಾರೆ.`ಅರಿವು ಮೂಡಿಸಬೇಕು~


`ಉತ್ತಮ ದರ್ಜೆಯ ತಂತ್ರಜ್ಞಾನ ಬಳಸಿ ಅಪಾರ್ಟ್‌ಮೆಂಟ್ ಹಾಗೂ ಹೋಟೆಲ್‌ಗಳ ಸಿಗುವ ಹಸಿತ್ಯಾಜ್ಯದಿಂದ ಬಯೊಗ್ಯಾಸ್ ಉತ್ಪಾದಿಸಬಹುದಾಗಿದೆ. ಕಡಿಮೆ ಖರ್ಚಿನಿಂದ ಪರಿಸರಸ್ನೇಹಿ ಇಂಧನ ತಯಾರಿಕೆ ಸಾಧ್ಯವಾಗಲಿದೆ.ಬಿಬಿಎಂಪಿ ಈಗಾಗಲೇ 10 ಸ್ಥಳಗಳನ್ನು ಗುರುತಿಸಿದ್ದು, ಒಂದು ತಿಂಗಳೊಳಗೆ ಈ ಸ್ಥಳಗಳಲ್ಲಿ ಜೈವಿಕ ಇಂಧನ ಘಟಕಗಳನ್ನು ಸ್ಥಾಪಿಸಲಾಗುವುದು. ಹಸಿತ್ಯಾಜ್ಯದಿಂದ ಮನೆ ಮನೆಗಳಲ್ಲೂ ಸಣ್ಣ ಪ್ರಮಾಣದಲ್ಲಿ ಬಯೊಗ್ಯಾಸ್ ಉತ್ಪಾದನೆ ಮಾಡಲು ಸಾಧ್ಯವಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು~

-ವೈ.ಬಿ.ರಾಮಕೃಷ್ಣ,

ಅಧ್ಯಕ್ಷರು, ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿ
ಮುಖ್ಯಾಂಶಗಳು

*ಹಸಿತ್ಯಾಜ್ಯ ನಿರ್ವಹಣೆಗೆ ಜೈವಿಕ ಇಂಧನ ಘಟಕಗಳ ಸ್ಥಾಪನೆಗೆ ಬಿಬಿಎಂಪಿ ಯೋಜನೆ*ರಾಜ್ಯ ಜೈವಿಕ ಇಂಧನ ಮಂಡಳಿಯಿಂದ ತಾಂತ್ರಿಕ ನೆರವು*ಹಸಿತ್ಯಾಜ್ಯದಿಂದ ಬಯೊಗ್ಯಾಸ್, ಸಾವಯವ ಗೊಬ್ಬರ ತಯಾರಿಕೆ*ಒಣತ್ಯಾಜ್ಯದ ನಿರ್ವಹಣೆಗಾಗಿ ಪ್ರತಿ ವಾರ್ಡ್‌ಗಳಲ್ಲಿ ಮೂರು ಅಥವಾ ನಾಲ್ಕು ಒಣತ್ಯಾಜ್ಯ ಸಂಗ್ರಹ ಕೇಂದ್ರಗಳ ಸ್ಥಾಪನೆ`ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ~

`ನಗರದ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಹಂತ ಹಂತವಾಗಿ ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸಿದರೆ ನಗರದ ತ್ಯಾಜ್ಯದ ಸಮಸ್ಯೆ ಗಂಭೀರವಾಗುವುದಿಲ್ಲ.

 

ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹದ ಕಾರ್ಯ ಸದ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ಕಾರ್ಯನಿರ್ವಹಿಸದೇ ಈ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸುವಂತೆ ನಿರ್ದೇಶನ ನೀಡಲಾಗಿದೆ~

 -ಡಿ.ವೆಂಕಟೇಶಮೂರ್ತಿ, ಮೇಯರ್, ಬಿಬಿಎಂಪಿ`ಅಗತ್ಯ ಸಹಕಾರ ನೀಡಿ~

`ಬಿಬಿಎಂಪಿ ಅಗತ್ಯ ತಾಂತ್ರಿಕ ಸಹಕಾರ ಹಾಗೂ ನೆರವು ನೀಡಿದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಜೈವಿಕ ಇಂಧನ ಘಟಕಗಳನ್ನು ಸ್ಥಾಪಿಸಲಾಗುವುದು. ನಗರದಲ್ಲಿ ಈಗಾಗಲೇ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸ್ವಯಂಪ್ರೇರಿತವಾಗಿ ಜೈವಿಕ ಇಂಧನ ಘಟಕಗಳನ್ನು ಸ್ಥಾಪಿಸಲಾಗಿದೆ.ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಜೈವಿಕ ಇಂಧನ ಘಟಕಗಳ ಸ್ಥಾಪನೆಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಕಲ್ಪಿಸಲು ನಿರ್ದೇಶನ ನೀಡಲಾಗುವುದು~

-ಅನಿಲ್ ನಾಯಕ್,

ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಭಾರತೀಯ ಕಟ್ಟಡ ನಿರ್ಮಾಣ ಸಂಸ್ಥೆಗಳ ಒಕ್ಕೂಟ(CREDAI)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry