ತ್ಯಾಜ್ಯ ಮರುಬಳಕೆ ಘಟಕ ಸ್ಥಾಪನೆಗೆ ಸಲಹೆ

7

ತ್ಯಾಜ್ಯ ಮರುಬಳಕೆ ಘಟಕ ಸ್ಥಾಪನೆಗೆ ಸಲಹೆ

Published:
Updated:

ಬೆಂಗಳೂರು: `ನಗರದ ಹೊರವಲಯದಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಬದಲು ನಗರದ ವಿವಿಧೆಡೆ ವಿಲೇವಾರಿ ಹಾಗೂ ಮರುಬಳಕೆ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಬೇಕು' ಎಂದು ಶಿಕ್ಷಣತಜ್ಞ ಟಿ.ವಿ.ಮೋಹನದಾಸ್ ಪೈ ಅಭಿಪ್ರಾಯಪಟ್ಟರು.ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ `ಬೆಂಗಳೂರು ಪುಸ್ತಕೋತ್ಸವ'ದಲ್ಲಿ `ಬೆಂಗಳೂರಿನ ಭವಿಷ್ಯ: ಅಪಾಯ: ಆಶಾದಾಯಕ?' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಪ್ರಸ್ತುತ ಎಲ್ಲ ಕ್ಷೇತ್ರಗಳನ್ನು ಒಂದಲ್ಲ ಒಂದು ಕಾರಣಕ್ಕೆ ಲಾಬಿಯೆಂಬ ಭೂತ ಆಳುತ್ತಿದೆ. ಆದರೆ ಕಸ ವಿಲೇವಾರಿಯಲ್ಲೂ ಭ್ರಷ್ಟಾಚಾರ ಮತ್ತು ಲಾಬಿ ನಡೆಯುತ್ತಿರುವುದು ಈ ನಗರದ ದುರಂತ. ನಗರ ಮಾತ್ರ ಸ್ವಚ್ಛತೆಯಿಂದ ಇರಬೇಕೆಂದು ಬಿಬಿಎಂಪಿಯು ಅಪೇಕ್ಷಿಸಿ ಹೊರವಲಯದಲ್ಲಿ ಕಸ ಬಿಸಾಡುವುದು ಸರಿಯಲ್ಲ. ಈ ಪ್ರವೃತ್ತಿಯನ್ನು ಕೈಬಿಡಬೇಕು' ಎಂದು ಮನವಿ ಮಾಡಿದರು.

`ಹೆಚ್ಚುತ್ತಿರುವ ಕೊಳ್ಳುಬಾಕ ಮತ್ತು ಮಾಲ್ ಸಂಸ್ಕೃತಿಯಿಂದ ಯುವಜನತೆಯ ಶಕ್ತಿ ವ್ಯಯಗೊಳ್ಳುತ್ತಿದೆ. ದೇಶದಲ್ಲೇ ಸಿಲಿಕಾನ್ ಸಿಟಿಯಲ್ಲಿ ಯುವಜನತೆಯ ಪ್ರಮಾಣ ಹೆಚ್ಚಿದ್ದು, ಅವರ ಬುದ್ಧಿಮತ್ತೆ ಮತ್ತು ಸಾಮರ್ಥ್ಯವನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಚಿಂತನೆ ನಡೆಸಬೇಕಿದೆ' ಎಂದರು.`ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ವಾಹನ ದಟ್ಟಣೆಯಂತಹ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೊಸ ಬಸ್ಸುಗಳು ರಸ್ತೆಗಿಳಿಯುವುದಕ್ಕೆ ಪ್ರಾಮುಖ್ಯತೆ ಕೊಡುವಷ್ಟೆ, ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದ್ದು, ಭವಿಷ್ಯದಲ್ಲಿ ಎದುರಾಗುವ ಅಷ್ಟೂ ಸವಾಲುಗಳ ಬಗ್ಗೆ ಸರ್ಕಾರ ರೂಪು ರೇಷೆಯನ್ನು ಸಿದ್ಧಪಡಿಸಬೇಕು' ಎಂದು ಹೇಳಿದರು.ರಂಗಕರ್ಮಿ ಪ್ರಕಾಶ ಬೆಳವಾಡಿ, `ಉದ್ಯೋಗ ಅರಸಿ ನಗರಕ್ಕೆ ಬರುವ ವಲಸಿಗರಿಗೆ ಬೆಂಗಳೂರು ನಮ್ಮದು ಎಂಬ ಭಾವನಾತ್ಮಕ ಸಂಬಂಧವಾಗಲಿ, ಇದರ ಬೆಳವಣಿಗೆಗೆ ಶ್ರಮಿಸುವ ದೂರದೃಷ್ಟಿಯಾಗಲಿ ಇಲ್ಲದೇ ಇರುವುದರಿಂದ ಹಲವು ಸಮಸ್ಯೆಗಳು ಉದ್ಭವಗೊಂಡಿವೆ' ಎಂದು ತಿಳಿಸಿದರು.`ಕಾವೇರಿ ನಾಲ್ಕನೇ ಹಂತದ ಯೋಜನೆಯಿಂದ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ಕೆರೆಗಳ ಸಂರಕ್ಷಣೆ ಮತ್ತು ನೀರಿನ ಮರುಬಳಕೆಯ ಬಗ್ಗೆ ಚಿಂತಿಸದೇ ಹೋದರೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯದು' ಎಂದು ಹೇಳಿದರು. ಚಿತ್ರನಿರ್ದೇಶಕ ಪವನ್ ಕುಮಾರ್, ಉದ್ಯಮಿ ವಿಜಯ ತಿರುವಾಡಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry