ತ್ಯಾಜ್ಯ ರಾಶಿ; ದುರ್ವಾಸನೆಯಿಂದ ತಲೆ ಬಿಸಿ
ಬೆಂಗಳೂರು: ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಸ, ಮ್ಯಾನ್ಹೋಲ್ನಿಂದ ನುಗ್ಗಿ ಹರಿಯುತ್ತಿದ್ದ ಕೊಳಚೆ ನೀರು, ಖಾಲಿ ನಿವೇಶನಗಳಲ್ಲಿ ರಾಶಿಯಾಗಿ ಹರಡಿಕೊಂಡಿದ್ದ ತ್ಯಾಜ್ಯ, ನಿಲ್ಲಲು ಆಗದಂತೆ ಹರಡಿದ್ದ ಗಬ್ಬುನಾತ, ಮಲಿನ ವಾತಾವರಣದಲ್ಲೇ ಆಡುತ್ತಿದ್ದ ಮಕ್ಕಳು...
ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಶನಿವಾರ ನಗರದಲ್ಲಿ ನಡೆಸಿದ ನೈರ್ಮಲ್ಯ ಪರಿಶೀಲನೆ ಯಾತ್ರೆಯಲ್ಲಿ ಕಂಡು ಬಂದ ನೋಟಗಳು ಇವು.
ಹೊಸ ಬಿಇಎಲ್ ರಸ್ತೆಗೆ ಬಂದ ಸಚಿವರು, ಖಾಲಿ ನಿವೇಶನದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಕಂಡು `ಛೇ, ಎಷ್ಟೊಂದು ಕಸ ಬಿದ್ದಿದೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ' ಎಂದು ಪ್ರಶ್ನಿಸಿದರು. `ಇಲ್ಲಿರುವ ತ್ಯಾಜ್ಯ ಏನೇನೂ ಅಲ್ಲ, ನಾಗವಾರದಲ್ಲಿ ಓಡಾಡಲು ಸಹ ಆಗಲ್ಲ. ಅಷ್ಟೊಂದು ಕಸದ ರಾಶಿ ತುಂಬಿಕೊಂಡಿದೆ' ಎಂಬ ಅಭಿಪ್ರಾಯ ಕೇಳಿಬಂತು. ಸಚಿವರ ಸವಾರಿ ಆ ಕಡೆಗೆ ಹೊರಟಿತು.
ಹೆಬ್ಬಾಳ ಮುಖ್ಯರಸ್ತೆಯಲ್ಲಿ ಹೊರಟಾಗ ಎರಡೂ ಪಕ್ಕದಲ್ಲಿ ಕಟ್ಟಡ ತ್ಯಾಜ್ಯದ ರಾಶಿಗಳು ಗೋಚರಿಸಿದವು. ನಾಗವಾರ ಮುಖ್ಯ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಮಾರ್ಗವೇ ಇಲ್ಲದಂತೆ ರಸ್ತೆಯನ್ನು ಅಗೆಯಲಾಗಿತ್ತು. ದೂಳು ಸಹ ತುಂಬಿಕೊಂಡಿತ್ತು. ರಸ್ತೆಯ ಎರಡೂ ಕಡೆಗಳಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿತ್ತು. ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಹೆಚ್ಚಿತ್ತು. ಗಲ್ಲಿಗಳಂತಿದ್ದ ಅಲ್ಲಿನ ರಸ್ತೆಗಳಲ್ಲಿ ಓಡಾಡುವುದೇ ಕಷ್ಟವಾಗಿತ್ತು.
ಕುಶಾಲನಗರದ ಡಾ. ಅಂಬೇಡ್ಕರ್ ರಸ್ತೆಯಲ್ಲಿ ಕೊಳಚೆ ನೀರು, ಬದಿಯಲ್ಲಿ ಕಸದ ರಾಶಿ. ತ್ಯಾಜ್ಯ ಸಂಗ್ರಹದ ಪಕ್ಕದಲ್ಲೇ ತರಕಾರಿ ಮಾರುವ ಅಂಗಡಿ ಇತ್ತು. ನೊಣಗಳ ರಾಜ್ಯಭಾರ ಜೋರಾಗಿತ್ತು. ಎದುರಿನ ಚಿಕನ್ ಅಂಗಡಿಯಲ್ಲೂ ನೊಣಗಳು ಜೇನಿಗೆ ಮುತ್ತಿಕೊಂಡಂತೆ ತುಂಬಿದ್ದವು. ಸೊಳ್ಳೆಗಳ ಹಾವಳಿಯೂ ಅತಿಯಾಗಿತ್ತು.
ಸರ್ವಜ್ಞನಗರದ ಖಾಲಿ ನಿವೇಶನಗಳನ್ನು ತ್ಯಾಜ್ಯದ ಗುಂಡಿಗಳನ್ನಾಗಿ ಪರಿವರ್ತಿಸಲಾಗಿತ್ತು. ಸ್ಥಳದಲ್ಲಿ ಕ್ಷಣವೂ ನಿಲ್ಲಲು ಆಗದಂತೆ ಗಬ್ಬುನಾತ ಹರಡಿಕೊಂಡಿತ್ತು. ಕೊಳಚೆ ನೀರು ಹರಿಯಬೇಕಿದ್ದ ಚರಂಡಿಗಳು ತ್ಯಾಜ್ಯದಲ್ಲಿ ಹೂತು ಹೋಗಿದ್ದವು. ಪಕ್ಕದಲ್ಲೇ ಮಕ್ಕಳು ಆಟ ಆಡುತ್ತಿದ್ದರು. ಟ್ಯಾನರಿ ರಸ್ತೆ ಸಹ ತ್ಯಾಜ್ಯಮಯವಾಗಿತ್ತು.
ತಮ್ಮ ಬಡಾವಣೆಗೆ ಬಂದ ಸಚಿವರ ಬಳಿ ಅಳಲು ತೋಡಿಕೊಳ್ಳಲು ಜನರ ನೂಕು-ನುಗ್ಗಲು ಹೆಚ್ಚಾಗಿತ್ತು. ನಿತ್ಯ ಕಸವನ್ನು ಎತ್ತುತ್ತಿಲ್ಲ ಎನ್ನುವುದೇ ಎಲ್ಲರ ದೂರಾಗಿತ್ತು. ಮಧ್ಯೆ ಬಾಯಿಹಾಕಿದ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್, `ಸರ್, ಇಂದಿನ ಕಸ ಮಾತ್ರ ಉಳಿದಿದೆ' ಎಂದು ಸಬೂಬು ಹೇಳಿದರು. ಅದಕ್ಕೆ ಸಚಿವರು, `ಒಂದು ದಿನದ ಕಸ ಇಷ್ಟೊಂದು ರಾಶಿಯಾಗಿ ಬೀಳುವುದೇ, ಸುಳ್ಳು ಹೇಳುವುದು ಬೇಕಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗವಾರ ವಾರ್ಡ್ ಸದಸ್ಯೆ ಇರ್ಷಾದ್ ಬೇಗಂ, ಬಡಾವಣೆಯಲ್ಲಿದ್ದ ಒಳ ರಸ್ತೆಗೂ ಸಚಿವರನ್ನು ಕರೆದೊಯ್ದು ಅಲ್ಲಿನ ವಾಸ್ತವ ಸ್ಥಿತಿಯನ್ನು ದರ್ಶನ ಮಾಡಿಸಿದರು. ಒಳರಸ್ತೆಗೆ ಹೋಗಿ ಅಲ್ಲಿನ ನರಕಸದೃಶ ವಾತಾವರಣ ಕಂಡ ಸಚಿವರು, ಮತ್ತೊಂದು ಕಡೆಗೆ ಬರುವಂತೆ ಆಹ್ವಾನ ಬಂದಾಗ ಹೋಗಲು ಹಿಂಜರಿದರು. ತಕ್ಷಣ ರಸ್ತೆಗಳನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
`ತ್ಯಾಜ್ಯ ನಿರ್ವಹಣೆಯಲ್ಲಿ ಎಡವಿದ್ದಕ್ಕೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದಿಂದಲೂ ಆದೇಶ ನೀಡಲಾಗಿದೆ. ಇಷ್ಟಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ' ಎಂದು ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು. `ಬಿಬಿಎಂಪಿಯಿಂದ ಕಸ ನಿರ್ವಹಣೆಗೆ ಹಣ ಖರ್ಚಾಗುತ್ತಿದೆ. ಅಗತ್ಯ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಪೌರಕಾರ್ಮಿಕರೂ ಇದ್ದಾರೆ. ಕಸ ಮಾತ್ರ ನಗರ ಬಿಟ್ಟು ಆಚೆ ಹೋಗುತ್ತಿಲ್ಲ' ಎಂದು ಸಿಟ್ಟುಮಾಡಿಕೊಂಡರು.
`ಕಸ ತೆಗೆಯದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಮತ್ತು ಸರಿಯಾಗಿ ಹೊಣೆ ನಿಭಾಯಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು' ಎಂದು ಸ್ಥಳದಲ್ಲಿದ್ದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರಿಗೆ ಸೂಚನೆ ನೀಡಿದರು.
`ಸೋಮವಾರ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಕಸದ ಸಮಸ್ಯೆ ನಿವಾರಣೆಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಹೊಣೆ ನಿಭಾಯಿಸಲು ವಿಫಲವಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಮೇಯರ್ ಡಿ.ವೆಂಕಟೇಶಮೂರ್ತಿ ತಿಳಿಸಿದರು.
ಬಿಬಿಎಂಪಿ ಹೆಚ್ಚುವರಿ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಸೇರಿದಂತೆ ಹಿರಿಯ ಅಧಿಕಾರಿಗಳು ಹಾರಿದ್ದರು.
ಕಸದಲ್ಲೂ ರಾಜಕೀಯ
ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಜತೆಗೆ ಕರೆತರದ ಕಾರಣ ನೈರ್ಮಲ್ಯ ಪರಿಶೀಲನೆಗೆ ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ಪಕ್ಷದ ಕಾರ್ಯಕರ್ತರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಆರ್.ರಾಮಲಿಂಗಾರೆಡ್ಡಿ ಅವರಿಗೆ ಆಕ್ಷೇಪ ವ್ಯಕ್ತಪಡಿಸಿದ ಘಟನೆ ಶನಿವಾರ ನಾಗವಾರದಲ್ಲಿ ನಡೆಯಿತು.
`ಬಂದ ವಾಹನದಲ್ಲಿ ತಾವು ವಾಪಸ್ ಹೋಗಬೇಕು. ಶಾಸಕರಿಲ್ಲದೆ ಪರಿಶೀಲನೆಗೆ ಅವಕಾಶ ನೀಡಲ್ಲ' ಎಂದು ಜೆಡಿಎಸ್ ಕಾರ್ಯಕರ್ತ ಅಬಿದುಲ್ಲಾ ಖಾನ್ ಪಟ್ಟು ಹಿಡಿದರು. ತಾಳ್ಮೆಯಿಂದ ಸ್ಪಷ್ಟನೆ ನೀಡಿದರೂ ಕೇಳದಿದ್ದಾಗ ಸಿಟ್ಟಿಗೆದ್ದ ಸಚಿವರು, `ನಿಮಗೆ ಶಾಸಕರು ಬರುವುದು ಮುಖ್ಯವೋ, ಕಸ ಹೋಗುವುದು ಮುಖ್ಯವೋ' ಎಂದು ಕೇಳಿದರು. `ಶಾಸಕರೂ ಬರಬೇಕು, ಕಸವೂ ಹೋಗಬೇಕು' ಎಂದು ಖಾನ್ ಮತ್ತೆ ಪಟ್ಟು ಹಿಡಿದರು.
ಸಿಡಿಮಿಡಿಗೊಂಡ ಸಚಿವರು, ಕಸ ತೆಗೆಯುವಂತೆ ಅಧಿಕಾರಿಗಳಿಗೆ ಆದೇಶಿಸಿ, ಅಲ್ಲಿಂದ ಹೊರಟುಹೋದರು.
`ತಿಂಗಳಾಂತ್ಯದಲ್ಲಿ ಸೇತುವೆ ಸಂಚಾರಕ್ಕೆ ಮುಕ್ತ'
`ನಗರದ ಸಿ.ವಿ. ರಾಮನ್ ರಸ್ತೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಕ್ಯಾಂಪಸ್ ಬಳಿ ನಿರ್ಮಿಸಲಾಗುತ್ತಿರುವ ಕೆಳಸೇತುವೆಯಲ್ಲಿ ತಿಂಗಳಾಂತ್ಯದೊಳಗೆ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು' ಎಂದು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಅವರೊಂದಿಗೆ ಶನಿವಾರ ನಗರ ಪ್ರದಕ್ಷಿಣೆ ನಡೆಸಿದ ಅವರು, ವರದಿಗಾರರ ಜತೆ ಮಾತನಾಡಿದರು.
`ಈಗಾಗಲೇ ಮಲ್ಲೇಶ್ವರದ ಕಡೆಯಿಂದ ಯಶವಂತಪುರಕ್ಕೆ ಹೋಗುವ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ತಿಂಗಳಾಂತ್ಯದೊಳಗೆ ಯಶವಂತಪುರ ಕಡೆಯಿಂದ ಮಲ್ಲೇಶ್ವರದತ್ತ ಬರುವ ಮಾರ್ಗವನ್ನೂ ಸಂಚಾರಕ್ಕೆ ತೆರೆಯಲಾಗುವುದು' ಎಂದು ಹೇಳಿದರು.
`ಸೇತುವೆ ನಿರ್ಮಾಣ ಕಾಮಗಾರಿ ಇನ್ನು ನಾಲ್ಕು ತಿಂಗಳಲ್ಲಿ ಸಂಪೂರ್ಣಗೊಳ್ಳಲಿದೆ. ಯಾವುದೇ ಕಾರಣಕ್ಕೂ ಮತ್ತೆ ಕಾಲಾವಕಾಶ ವಿಸ್ತರಣೆ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
-ಪ್ರಜಾವಾಣಿ ಚಿತ್ರಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.