ಮಂಗಳವಾರ, ಅಕ್ಟೋಬರ್ 22, 2019
21 °C

ತ್ಯಾಜ್ಯ ವಿಲೇವಾರಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: `ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಟೆಂಡರ್ ಪ್ರಕ್ರಿಯೆ ನಡೆಸದೆ ನೇರವಾಗಿ ಗುತ್ತಿಗೆ ನೀಡುವ ಮೂಲಕ 121 ಕೋಟಿ ರೂಪಾಯಿ ಬಿಡುಗಡೆ ಮಾಡಿ ಭಾರಿ ಅಕ್ರಮ ನಡೆಸಿರುವುದು ಬಯಲಾಗಿದೆ. ಈ ಹಗರಣ ಕುರಿತು ಕೂಡಲೇ ಸಿಬಿಐ ತನಿಖೆಗೆ ಆದೇಶಿಸಬೇಕು~ ಎಂದು ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.ಪಾಲಿಕೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, `ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಆದರೆ ಜನಪ್ರತಿನಿಧಿಗಳು ಆಯ್ಕೆಯಾದ ಬಳಿಕವೂ ನಿಯಮಗಳ ಉಲ್ಲಂಘನೆ ಮುಂದುವರಿದಿದೆ. ಕೋಟ್ಯಂತರ ರೂಪಾಯಿ ದುರ್ಬಳಕೆಯಾಗುತ್ತಿದೆ~ ಎಂದು ಆರೋಪಿಸಿದರು.`ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಸಂಬಂಧಪಟ್ಟ ಸ್ಥಾಯಿ ಸಮಿತಿಗಳು ಹಾಗೂ ಕೌನ್ಸಿಲ್ ಸಭೆಯ ಅನುಮತಿ ಪಡೆಯದೆ ಟೆಂಡರ್ ಕೂಡ ಆಹ್ವಾನಿಸದೆ, ನೇರವಾಗಿ ಗುತ್ತಿಗೆ ನೀಡಿ ಅಕ್ರಮ ನಡೆಸಲಾಗಿದೆ. ಹಾಗಾಗಿ ಪಾಲಿಕೆಯಲ್ಲಿ ನಿಯಮಗಳ ಪಾಲನೆಯೇ ಇಲ್ಲದಂತಾಗಿದೆ~ ಎಂದರು.ರೂ 121 ಕೋಟಿ ಬಿಡುಗಡೆ:

`ಎಲ್ಲ ಎಂಟು ವಲಯಗಳಲ್ಲಿ ತ್ಯಾಜ್ಯ ವಿಲೇವಾರಿಗೆಂದು ಟೆಂಡರ್ ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ಮಾಸಿಕ 12.28 ಕೋಟಿ ರೂಪಾಯಿ ನೀಡಲಾಗುತ್ತಿದೆ. ಆದರೆ ಟೆಂಡರ್ ಆಹ್ವಾನಿಸದೆ ಅಕ್ರಮವಾಗಿ ನೀಡಿದ ಗುತ್ತಿಗೆಗೂ ಮಾಸಿಕ ರೂ 6.74 ಕೋಟಿ ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ 18 ತಿಂಗಳಲ್ಲಿ ಟೆಂಡರ್ ಆಹ್ವಾನಿಸದೆ ಅಕ್ರಮವಾಗಿ 121 ಕೋಟಿ ರೂಪಾಯಿ ಬಿಡುಗಡೆಯಾಗಿದೆ~ ಎಂದು ಆರೋಪಿದರು.`ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಮಾಡಿ ಗುತ್ತಿಗೆ ನೀಡುವ ಅನಿವಾರ್ಯ ಏನಿತ್ತು ಎಂಬುದು ಗೊತ್ತಾಗುತ್ತಿಲ್ಲ. ದೇಶದ ಯಾವುದೇ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯ ಕರ ಸಂಗ್ರಹಿಸುತ್ತಿಲ್ಲ. ಆದರೆ ಬಿಜೆಪಿ ಆಡಳಿತಕ್ಕೆ ಬಂದ ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ಕರ ಸಂಗ್ರಹಿಸಲಾಗುತ್ತಿದೆ. ಆದರೆ ತ್ಯಾಜ್ಯವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ~ ಎಂದು ದೂರಿದರು.`ಗುತ್ತಿಗೆದಾರರು ಗುತ್ತಿಗೆ ಒಪ್ಪಂದದನ್ವಯ 1 ಲಾರಿ, ಏಳು ಆಟೊಗಳು ಹಾಗೂ 54 ಪೌರಕಾರ್ಮಿಕರನ್ನು ಹೆಚ್ಚುವರಿಯಾಗಿ ನಿಯೋಜಿಸಬೇಕು. ಆದರೆ ಎಲ್ಲಿಯೂ ಇದು ಪಾಲನೆಯಾಗುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ರೂಪಿಸಲಾಗಿರುವ ಟೆಂಡರ್ ನಿಯಮಗಳು ಸಹ ಹಿಂದಿನ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿವೆ. ಹಾಗಾಗಿ ಹೊಸ ಗುತ್ತಿಗೆದಾರರು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ~ ಎಂದು ಆರೋಪ ಮಾಡಿದರು.`ಟೆಂಡರ್ ಪ್ರಕ್ರಿಯೆ ನಡೆಸದೇ ಅಕ್ರಮವಾಗಿ ಗುತ್ತಿಗೆ ನೀಡಿ 121 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಖಂಡನೀಯ. ಜನರ ತೆರಿಗೆ ಹಣವನ್ನು ಅಧಿಕಾರಿಗಳು ಪೋಲು ಮಾಡುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಬೇಕು~ ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)