ತ್ಯಾಜ್ಯ ವಿಲೇವಾರಿ: ಗಮನಹರಿಸದ ಪುರಸಭೆ

7

ತ್ಯಾಜ್ಯ ವಿಲೇವಾರಿ: ಗಮನಹರಿಸದ ಪುರಸಭೆ

Published:
Updated:

ಬಾಗೇಪಲ್ಲಿ: ಪಟ್ಟಣದಲ್ಲಿ ಕಸ ವಿಲೇವಾರಿ, ಕುಡಿಯುವ ನೀರಿನ ಸರಬರಾಜು ಹಾಗೂ ಬೀದಿದೀಪಗಳ ಅಸಮರ್ಪಕ ನಿರ್ವಹಣೆಯಿಂದ ರೋಸಿ ಹೋಗಿರುವ ಜನತೆ ಪುರ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಪಟ್ಟಣದಲ್ಲಿರುವ ಎಲ್ಲ 23 ವಾರ್ಡ್‌ಗಳಲ್ಲಿ ಕಸ ತುಂಬಿ ತುಳುಕುತ್ತಿದೆ. ರಸ್ತೆ ಬದಿಯಲ್ಲಿರುವ ತ್ಯಾಜ್ಯವನ್ನು ನಾಯಿ, ಹಂದಿ ಹಾಗೂ ಕಾಗೆಗಳು ರಸ್ತೆಗೆ ಎಳೆದು ಹಾಕುತ್ತಿವೆ. ಸಾರ್ವಜನಿಕರು ಪ್ರತಿದಿನ ತ್ಯಾಜ್ಯ ಹಾಗೂ ಕಸ ತುಳಿದೇ ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಅಸಮರ್ಪಕ ತ್ಯಾಜ್ಯ ನಿರ್ವಹಣೆಯಿಂದಾಗಿ ಸೊಳ್ಳೆಗಳ ಕಾಟ ವಿಪರೀತ ಹೆಚ್ಚಿದೆ. ಸೊಳ್ಳೆಗಳ ಕಡಿತದಿಂದ ವಿವಿಧ ರೋಗಗಳಿಗೆ ತುತ್ತಾಗಿರುವ ನಾಗರಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಳ್ಳೆಗಳನ್ನು ನಿಯಂತ್ರಿಸಬೇಕಾದ ಪುರಸಭೆ ಸಿಬ್ಬಂದಿಯ ಕಾರ್ಯವೈಖರಿಗೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.ನಗರ ವ್ಯಾಪ್ತಿಯಲ್ಲಿ ಅಸಮರ್ಪಕ ಪಿಟ್‌ಗಳಿಂದಾಗಿ ಚರಂಡಿಗೆ ಶೌಚಾಲಯದ ಮಲಮೂತ್ರಗಳನ್ನು ಹರಿಸಲಾಗುತ್ತಿದೆ. ಕೆಲವೊಮ್ಮೆ ಕುಡಿಯುವ ನೀರಿನ ಪೈಪ್‌ಗೆ ಚರಂಡಿ ನೀರು ಮಿಶ್ರಣಗೊಂಡ ಉದಾಹರಣೆಗಳೂ ಇವೆ.ಮಳೆ ಕೊರತೆಯಿಂದಾಗಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪರಗೋಡಿನ ಬಳಿ ಚಿತ್ರಾವತಿಗೆ ಬ್ಯಾರೇಜ್ ನಿರ್ಮಿಸಲಾಗಿದೆ. ಆದರೆ ಶುದ್ಧೀಕರಣ ಘಟಕದ ಅಸಮರ್ಪಕ ನಿರ್ವಹಣೆಯಿಂದಾಗಿ ಕೆಲವು ವಾರ್ಡ್‌ಗಳಲ್ಲಿ 15- 20 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ.ಪಟ್ಟಣದ ಹೃದಯ ಭಾಗದಲ್ಲಿ ಬೀದಿದೀಪಗಳು ಹಗಲಿರುಳು ಉರಿಯುತ್ತವೆ. ಆದರೆ ಹೊರ ವಲಯದಲ್ಲಿ ಬೀದಿದೀಪಗಳೇ ಇಲ್ಲದೆ ಕಗ್ಗತ್ತಲೆಯ ಸಾಮ್ರಾಜ್ಯ ನಿರ್ಮಾಣವಾಗಿದೆ. ರಾತ್ರಿವೇಳೆ ಕಳ್ಳರ ಹಾಗೂ ಹಾವುಗಳ ಕಾಟದಿಂದ ಜನರು ಮನೆಯ ಹೊರಗೆ ಬರಲು ಹೆದರುತ್ತಿದ್ದಾರೆ ಎಂದು ನಾಗರಿಕ ಕ್ರಿಕೆಟ್‌ಮೂರ್ತಿ ದೂರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry