ಶುಕ್ರವಾರ, ಜೂನ್ 18, 2021
28 °C
ದರ ಕುಸಿತ; ಖರೀದಿಗೆ ಬಾರದ ವ್ಯಾಪಾರಿಗಳು

ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೂರಾರು ಟನ್‌ ಟೊಮೆಟೊ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಟೊಮೆಟೊ ಹಣ್ಣಿಗೆ ಬೆಂಬಲ ಬೆಲೆಯ ನೆರವು ಕಲ್ಪಿಸುವ ದಿಸೆಯಲ್ಲಿ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸರ್ಕಾರ ಹಾಪ್‌ಕಾಮ್ಸ್‌ ಸಂಸ್ಥೆಯ ಮೂಲಕ ಆರಂಭಿಸಿದ ಕೇಂದ್ರದಲ್ಲಿ ಖರೀದಿಯಾದ ಉತ್ಪನ್ನವನ್ನು ಸಂಸ್ಕರಣ ಘಟಕಕ್ಕೆ ಸಾಗಿಸದ ಪರಿಣಾಮ, 40ಕ್ಕೂ ಅಧಿಕ ಟನ್‌ ಟೊಮೆಟೊ ಹಣ್ಣು ಗೋದಾಮಿನಲ್ಲಿ ಕೊಳೆತು ದುರ್ವಾಸನೆ ಸೂಸಲು ಆರಂಭಿಸಿದೆ. ಪರಿಣಾಮ, ಖರೀದಿ ಮಾಡಿದ ಹಣ್ಣನ್ನು ನೇರವಾಗಿ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿಯಲಾಗುತ್ತಿದೆ.ಬೆಲೆ ಕುಸಿತದ ಹೊಡೆತಕ್ಕೆ ಬಸವಳಿದು ಹೋಗಿದ್ದ ಟೊಮೆಟೊ ಬೆಳೆಗಾರರಿಗೆ ಸಹಾಯಹಸ್ತ ನೀಡಲು ಸರ್ಕಾರ ಪ್ರತಿ ಕೆಜಿ ₨ 3 ಬೆಲೆ ಘೋಷಿಸುವ ಮೂಲಕ ಹಾಪ್‌ಕಾಮ್ಸ್‌ ಸಂಸ್ಥೆಯ ಮೂಲಕ ಖರೀದಿಸಲು ಫೆ. 24ರಂದು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿದೆ. ಕೇಂದ್ರ ಆರಂಭವಾಗಿ ನಾಲ್ಕು ದಿನ ಕಳೆದಿದೆ. ಕಸಬಾ ಹೋಬಳಿ ಸೇರಿದಂತೆ ವಿವಿಧೆಡೆಯಿಂದ ನಿತ್ಯವೂ ಸಾವಿರಾರು ಕ್ವಿಂಟಲ್‌ ಖರೀದಿ ಕೇಂದ್ರಕ್ಕೆ ಆವಕ ಆಗುತ್ತಿದೆ.ಆದರೆ, ಖರೀದಿ ಕೇಂದ್ರ ಆರಂಭಿಸಿ ಕೈತೊಳೆದುಕೊಂಡಿರುವ ಜಿಲ್ಲಾಡಳಿತ ಇಲ್ಲವೇ, ಖರೀದಿದಾರ ಏಜೆನ್ಸಿ ‘ಹಾಪ್‌ಕಾಮ್ಸ್‌’ ಸಂಸ್ಥೆ ಟೊಮೆಟೊ ಸಂಗ್ರಹಕ್ಕಾಗಿ ಹಾಗೂ ಹಣ್ಣು ಬೇಗನೆ ಕೊಳೆಯದಂತೆ ಸಂಸ್ಕರಿಸಿಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಆವಕವಾಗಿರುವ ಸುಮಾರು 40 ಟನ್‌ ಟೊಮೆಟೊ ಹಣ್ಣು ಖರೀದಿ ಕೇಂದ್ರದ ಗೋದಾಮಿನಲ್ಲಿ ಕೆಟ್ಟು ದುರ್ವಾಸನೆ ಸೂಸಲು ಆರಂಭಿಸಿದೆ. ಹೀಗಾಗಿ ಶುಕ್ರವಾರದಿಂದಲೇ  ಖರೀದಿಯಾದ ಹಣ್ಣನ್ನು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುರಿದು ಕೈತೊಳೆದುಕೊಳ್ಳಲು ಮುಂದಾಗಿದ್ದಾರೆ.ಖರೀದಿ ಕೇಂದ್ರದಲ್ಲಿ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಇದುವರೆಗೂ ಸುಮಾರು 104ಕ್ಕೂ ಅಧಿಕ ಟನ್‌ ಟೊಮೆಟೊ ಖರೀದಿಸಲಾಗಿದೆ. ಖರೀದಿಸಿದ ಹಣ್ಣನ್ನು ಪರ್ಯಾಯವಾಗಿ ಉಪಯೋಗಿಸದ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಕೊಳೆಯುತ್ತಿದೆ. ಜಿಲ್ಲಾಡಳಿತ ಹಾಗೂ ‘ಹಾಪ್‌ಕಾಮ್ಸ್‌’ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಹಣ ಮಣ್ಣು ಪಾಲಾಗುತ್ತಿದೆ. ಅಧಿಕಾರಿಗಳಿಗೆ ಕಿಂಚಿತ್ತಾದರೂ ವಿವೇಕ ಬೇಡವೇ ಎಂದು ಪ್ರಶ್ನಿಸುತ್ತಾರೆ ಪಟ್ಟಣದ ರೈತ ಬಸವರಾಜ.ಬೆಂಬಲ ಬೆಲೆಯಲ್ಲಿ ಖರೀದಿಸಿದ ಹಣ್ಣನ್ನು ಪ್ರಾಥಮಿಕ ಶಾಲೆಗಳ ಬಿಸಿಯೂಟ, ವಿದ್ಯಾರ್ಥಿನಿಲಯ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ಕೊಡುತ್ತೇವೆ. ಆದರೂ, ಯಾರೂ ಇತ್ತ ಕಡೆ ತಲೆ ಹಾಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಘನತ್ಯಾಜ್ಯ ಘಟಕಕ್ಕೆ ಸುರಿಯುತ್ತಿದ್ದೇವೆ ಎಂದು ಬೇಸರಿಸುತ್ತಾರೆ ‘ಹಾಪ್‌ಕಾಮ್ಸ್‌’ ಸಂಸ್ಥೆಯ ಅಧಿಕಾರಿ ಶಿವಮೂರ್ತಪ್ಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.