ಭಾನುವಾರ, ಜೂನ್ 13, 2021
24 °C

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಸಮೀಪದ ಇಡುವಾಣಿ ಗ್ರಾಮದಲ್ಲಿ ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸ್ಥಳೀಯರು ಗುರುವಾರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಪ್ರದೇಶದ ಕಸ ತ್ಯಾಜ್ಯ ವಿಲೇವಾರಿಗಾಗಿ ಪಕ್ಕದ 4 ಕಿ.ಮೀ. ದೂರದ ಇಡುವಾಣಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಸ್ಥಳ ಗುರುತಿಸಿ 5 ಎಕರೆ ಪ್ರದೇಶವನ್ನು ಇಡುವಾಣಿ ಗ್ರಾಮ ಸ.ನಂ. 28ರಲ್ಲಿ  ನಿಗದಿ ಪಡಿಸಿಕೊಡಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮೂಲಗಳು ತಿಳಿಸಿದೆ.ಸದರಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರಸ್ತೆ ವಗೈರೆಗಳನ್ನು ಕಾರ್ಗಲ್ ಪಟ್ಟಣ ಪಂಚಾಯ್ತಿ ವತಿಯಿಂದ  ಕಾಮಗಾರಿ ಟೆಂಡರ್ ಕರೆದು ಕೆಲಸ ಪೂರ್ಣಗೊಳಿಸಲಾಗಿದೆ. ಹಾಲಿ ಈಗ ಉದ್ದೇಶಿತ ಘಟಕಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಆರಂಭಿಸಲು ಗುರುವಾರ ಜೆಸಿಬಿ ಯಂತ್ರಗಳ ಮುಖಾಂತರ ಕೆಲಸ ಆರಂಭಿಸಲಾಗಿತ್ತು.ದಿಢೀರ್ ಕಾಮಗಾರಿ ಆರಂಭಿಸಿದ ಕಾರಣ ತಲವಾಟ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಡಿ. ಪ್ರಸನ್ನ ನೇತೃತ್ವದಲ್ಲಿ ಹಲವಾರು ಜನರು ಸ್ಥಳಕ್ಕಾಗಮಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉದ್ದೇಶಿತ ಘಟಕ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಕೂಡಲೇ, ಕಾರ್ಗಲ್ ಪೊಲೀಸರು ಪ್ರತಿಭಟನಾ ನಿರತರನ್ನು ಬಂಧಿಸಿ ಕಾಮಗಾರಿ ಮುನ್ನಡೆಯಲು ಸಹಕರಿಸಿದರೆಂದು ಉಪಾಧ್ಯಕ್ಷ ಡಿ. ಪ್ರಸನ್ನ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಇಡುವಾಣಿ ಗ್ರಾಮದಲ್ಲಿ 1,135 ಎಕರೆ ಒಟ್ಟು ಜಮೀನು ಇದ್ದು, ಅದರಲ್ಲಿ 900 ಎಕರೆ ಅರಣ್ಯ ಜಮೀನಿದ್ದು, 40 ಎಕರೆ ಕೆಪಿಸಿಗೆ ಮಂಜೂರಾಗಿದ್ದು ಉಳಿದ ಕಂದಾಯ ಜಾಗವನ್ನು ಸಂಬಂಧ ಪಟ್ಟ ಇಲಾಖೆಗಳು ಗುರುತಿಸಿಕೊಟ್ಟು ಕಾಮಗಾರಿ ಆರಂಭಿಸಲಿ ಎಂದು ತಲವಾಟ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಡಿ. ಪ್ರಸನ್ನ ತಿಳಿಸಿದರು.   ಪ್ರತಿಭಟನಾಕಾರರ ಬಂಧನದ ನಂತರ ಕಾಮಗಾರಿಯನ್ನು ಜೆಸಿಬಿ ಯಂತ್ರಗಳ ಮುಖಾಂತರ ಮತ್ತೇ ಆರಂಭಿಸಲು ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಮುಂದಾದಾಗ ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್, ತಲವಾಟ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ್, ತಾಲ್ಲೂಕು ಕಾಂಗ್ರೆಸ್ ಉಪಾದ್ಯಕ್ಷ ಬಿ.ಸಿ. ಲಕ್ಷ್ಮೀನಾರಾಯಣ ಭಟ್, ಲಕ್ಷ್ಮೀನಾರಾಯಣ ಕೆಪ್ಪಿಗೆ, ಇನ್ನಿತರ ಮುಖಂಡರು ಸ್ಥಳಕ್ಕಾಗಮಿಸಿ ಕಾಮಗಾರಿ ಆರಂಭಿಸದಂತೆ ಪ್ರತಿಭಟನೆ ನಡೆಸಿ  ಕೆಲಸ ನಿಲ್ಲಿಸುವಲ್ಲಿ ಸಫಲರಾದರು.ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾನೂನಿನ ಪ್ರಕಾರ ಇರುವ ಆದೇಶ ಪತ್ರಗಳನ್ನು ಗ್ರಾಮಸ್ಥರ ಗಮನಕ್ಕೆ ತಂದು ಮೊದಲು ಗ್ರಾಮಸ್ಥರ ವಿಶ್ವಾಸ ಪಡೆಯಿರಿ.  ರೆವೆನ್ಯೂ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಸಹಕಾರದೊಂದಿಗೆ ಸ್ಥಳ ಗುರುತಿಸಿ ನಂತರ ಕಾಮಗಾರಿಯನ್ನು ಆರಂಭಿಸಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.