ಬುಧವಾರ, ಜುಲೈ 28, 2021
28 °C

ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಿಗದ ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಿಗದ ಮುಕ್ತಿ

ತುಮಕೂರು: ನಗರದ ಘನತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ.ಘನತ್ಯಾಜ್ಯ ಘಟಕ ಸ್ಥಾಪನೆ ಯೋಜನೆ 4ನೇ ಬಾರಿಗೆ ಎತ್ತಂಗಡಿ ಆಗುವ ಸಾಧ್ಯತೆಯೇ ಹೆಚ್ಚು. ಈಗ ಯೋಜನೆಗೆ ರಾಜಕೀಯ ಬಣ್ಣ ಬಂದಿದ್ದು, ವಿವಾದ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಾಡಾಗಿದೆ.ಘನತ್ಯಾಜ್ಯ ಸಂಸ್ಕರಣ ಘಟಕ ಯೋಜನೆ   ಈಗಾಗಲೇ ಮೂರು ಸ್ಥಳದಿಂದ ಎತ್ತಂಗಡಿ ಆಗಿದೆ. ಕಳೆದ 7 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಭೂವಶ ಪ್ರಕ್ರಿಯೆ ವಿವಾದ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು ಹೋರಾಟಕ್ಕೆ     ಸಜ್ಜಾಗಿದ್ದಾರೆ. ಅಲ್ಲದೆ ರೈತರ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸೇರಿದಂತೆ ವಿರೋಧ ಪಕ್ಷದ ಶಾಸಕರು ಕೈಜೋಡಿಸಿದ್ದಾರೆ.ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಿಂಭಾಗದಲ್ಲಿ ಅಡ್ಡಾದಿಡ್ಡಿ ಸುರಿಯಲಾಗುತ್ತಿತ್ತು. ಕಳೆದ  ದಶಕದಿಂದಲೂ ಸಂಸ್ಕರಣ ಘಟಕ ಸ್ಥಾಪನೆಗೆ ಸರಿಯಾದ ಭೂಮಿ ಗುರುತಿಸುವಲ್ಲಿ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ನಗರ ಸಮೀಪದ ಹಾಲನೂರು ಬಳಿ ಘಟಕ ಸ್ಥಾಪಿಸಲು ಮೊದಲಿಗೆ ಯೋಜಿಸಲಾಗಿತ್ತು. ಆದರೆ ಈ ಸ್ಥಳ ನಗರಕ್ಕೆ ಸಮೀಪ ಎಂಬ ಕಾರಣಕ್ಕೆ ಯೋಜನೆಯನ್ನು         ಕೈಬಿಡಲಾಯಿತು.ನಂತರ ಕೊರಟಗೆರೆ ರಸ್ತೆ ಅಮಲಾಪುರದ ಬೆಟ್ಟದ ತಪ್ಪಲಿನಲ್ಲಿ ಘಟಕ ಸ್ಥಾಪಿಸಲು ಯೋಜಿಸಲಾಗಿತ್ತು. ಇದು ಸರ್ಕಾರಿ ಭೂಮಿಯಾಗಿದ್ದರಿಂದ ಸಮಸ್ಯೆ ಇರಲಿಲ್ಲ. ಅಲ್ಲದೆ ರೂ. 28 ಲಕ್ಷ ವೆಚ್ಚ ಮಾಡಿ ಭೂಮಿಯ ಸುತ್ತ ಕಾಂಪೌಂಡ್‌ ಸಹ ನಿರ್ಮಿಸಲಾಗಿತ್ತು. ಪರಿಸರವಾದಿಗಳು ಇದಕ್ಕೆ ಅವಕಾಶ ನೀಡಲಿಲ್ಲ.ಕುಣಿಗಲ್‌ ತಾಲ್ಲೂಕು ಮಾರ್ಕೋನಹಳ್ಳಿ ಕೆರೆಗೆ ಅಮಲಾಪುರ ಬೆಟ್ಟಗುಡ್ಡದ ನೀರು ಹರಿದು ಹೋಗುವುದರಿಂದ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಿದರೆ ಕಲುಷಿತ ನೀರು ಸೇರುತ್ತದೆ ಎಂಬ ಕಾರಣಕ್ಕೆ ಯೋಜನೆ ನೆನೆಗುದಿಗೆ ಬಿತ್ತು. ನಂತರ ಇದೇ ಜಾಗವನ್ನು ಕೇಂದ್ರೀಯ ವಿದ್ಯಾಲಯ    ಸ್ಥಾಪಿಸಲು ಬಳಕೆ ಮಾಡಲಾಯಿತು. ಈಗ ಅಲ್ಲಿ ಸುಸಜ್ಜಿತ ವಿದ್ಯಾಲಯ ಬೆಳೆದು ನಿಂತಿದೆ.ಮತ್ತೆ ಯೋಜನೆ ಬೆಳಗುಂಬ ರಸ್ತೆ ವಡ್ಡರಹಳ್ಳಿ ಸಮೀಪಕ್ಕೆ ಬಂತು. ಇಲ್ಲೂ ಸಹ ಸುತ್ತಮುತ್ತ ಬೆಟ್ಟಗುಡ್ಡ ಇದೆ. ಪರಿಸರ ನಾಶವಾಗುತ್ತದೆ ಎಂದು ಅವಕಾಶ ನೀಡಲಿಲ್ಲ. ಅಲ್ಲದೆ ಭೂಮಿಗೆ ಬೆಲೆ ಬಂದಿದ್ದರಿಂದ ಸರ್ಕಾರಿ ಬೆಲೆಗೆ ಭೂಮಿ  ಬಿಟ್ಟುಕೊಡಲು ರೈತರು ಸಿದ್ಧರಾಗಿರಲಿಲ್ಲ. ಕೊನೆಗೆ ಯೋಜನೆ ಬಂದಿದ್ದು, ಅಜ್ಜಗೊಂಡನಹಳ್ಳಿ   ಸಮೀಪಕ್ಕೆ.ಅಲ್ಲದೆ ಮಜ್ಜಿಗೆಕೆಂಚನಹಳ್ಳಿ ಸಮೀಪದಲ್ಲಿ ಸರ್ಕಾರಿ ಭೂಮಿ ಇದೆ. ಆದರೆ ಇಲ್ಲಿ ಜಿಲ್ಲೆಯ ಶಾಸಕರೊಬ್ಬರ ಸಂಬಂಧಿಕರ ಪೌಲ್ಟ್ರಿಫಾರಂ ಇದೆ ಎನ್ನಲಾಗಿದೆ. ಇದರಿಂದ ಇಲ್ಲಿ ಯೋಜನೆ  ಕೈಗೆತ್ತಿಕೊಂಡಿಲ್ಲ. ಅಜ್ಜಗೊಂಡನಹಳ್ಳಿ ಸಮೀಪದಲ್ಲಿಯೂ ಸರ್ಕಾರಿ ಭೂಮಿ ಇದೆ. ಇಲ್ಲೂ ಘಟಕ ಸ್ಥಾಪನೆ ಪ್ರಸ್ತಾಪವಾಗಿಲ್ಲ.ಅಜ್ಜಗೊಂಡನಹಳ್ಳಿ ಸಮೀಪದಲ್ಲೇ ಹೆಬ್ಬಾಕ ಕೆರೆ ಇದೆ. ಈಗ ಕೆರೆಗೆ ಹೇಮಾವತಿ ನೀರು ಹರಿಸಲು ಸಿದ್ಧತೆ ನಡೆದಿದೆ. ಇಲ್ಲಿಂದ ಬುಗಡನಹಳ್ಳಿ ಕೆರೆಗೆ ನೀರು ಹರಿಯಲಿದೆ. ಅಲ್ಲದೆ ಬುಗಡನಹಳ್ಳಿ ಕೆರೆ ನೀರನ್ನು ನಗರದ ಕುಡಿಯುವ ನೀರು ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತವಾಗಿ, ನಗರದ ಕುಡಿಯುವ ನೀರು   ಮಲಿನಗೊಳ್ಳುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಸಮೀಪದ ವಸಂತನರಸಾಪುರದಲ್ಲಿ ಕೈಗಾರಿಕಾ ಉದ್ದೇಶಕ್ಕೆ 5 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯೇ ಯೋಜನೆಗೆ 40 ಎಕರೆ ಭೂಮಿ ಕೊಡಲಿ. ಇಲ್ಲಿ ಸಂಸ್ಕರಣ ಘಟಕ ಸ್ಥಾಪಿಸುವುದರಿಂದ ಉತ್ಪಾದನೆಯಾಗುವ ಬಯೋಗ್ಯಾಸ್‌ ಮತ್ತು ವಿದ್ಯುತ್‌ನ್ನು  ಕೈಗಾರಿಕೆಗಳಿಗೆ ಬಳಕೆ ಮಾಡಬಹುದು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.