ಸೋಮವಾರ, ಜೂನ್ 21, 2021
20 °C

ತ್ರಿಕೋನಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲ್ ಪಂದ್ಯ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಕೋನಏಕದಿನ ಕ್ರಿಕೆಟ್ ಸರಣಿಯ ಮೊದಲ ಫೈನಲ್ ಪಂದ್ಯ ಇಂದು

 ಬ್ರಿಸ್ಬೇನ್ (ಪಿಟಿಐ/ಐಎಎನ್‌ಎಸ್): ಲೀಗ್ ಹಂತದ ಹೋರಾಟದಲ್ಲಿ ಯಶಸ್ಸು ಕಂಡಿರುವ ಶ್ರೀಲಂಕಾ ತಂಡಕ್ಕೆ ಈಗ ಮತ್ತೊಂದು ಅಗ್ನಿ ಪರೀಕ್ಷೆ. ಇನ್ನು ಉಳಿದಿರುವುದು ಕೇವಲ ಮೂರು ಫೈನಲ್ ಪಂದ್ಯ. ಈ ಮೂರರಲ್ಲಿ ಎರಡು ಸಲ ಗೆಲುವು ದಕ್ಕಿದರೆ ಸಾಕು ಚಾಂಪಿಯನ್ನರಾಗುವ ಅವಕಾಶ ಸಿಂಹಳೀಯರದ್ದಾಗಲಿದೆ.ಹೌದು; ಸರಣಿ ಕೈವಶ ಮಾಡಿಕೊಳ್ಳುವ ಮೊದಲ ಹೆಜ್ಜೆಯಲ್ಲಿಯೇ ಸಕಾರಾತ್ಮಕ ಫಲಿತಾಂಶ ಪಡೆಯಬೇಕು ಎನ್ನುವ ಲೆಕ್ಕಾಚಾರ ಲಂಕಾ ಪಡೆಯದ್ದು. ಆದರೆ, ತವರು ನೆಲದಲ್ಲಿಯೇ ಸರಣಿ ಸೋಲಬಾರದು ಎನ್ನುವ ಕನಸು ಆಸ್ಟ್ರೇಲಿಯಾ ತಂಡದ್ದು. ಆದ್ದರಿಂದ ಭಾನುವಾರ ನಡೆಯುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೂರು ಪಂದ್ಯಗಳ ಫೈನಲ್‌ನ (ಬೆಸ್ಟ್ ಆಫ್ ತ್ರಿ) ಮೊದಲ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಇಂದಿನ ಪಂದ್ಯದಲ್ಲಿ ಪ್ರವಾಸಿ ತಂಡವೇ ಗೆಲುವಿನ  ಫೇವರೆಟ್. ಏಕೆಂದರೆ, ಹಿಂದಿನ ಮೂರು ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಸೋಲು ಕಂಡಿದೆ. ಅಷ್ಟೇ ಅಲ್ಲ. ಲೀಗ್‌ನ ಹಂತದಲ್ಲಿ ಎರಡೂ ತಂಡದವರು ಮೂರು ಸಲ ಮುಖಾಮುಖಿಯಾಗಿದ್ದಾರೆ. ಮೂರೂ ಬಾರಿ ವಿಜಯದ ಸಂಭ್ರಮ ಪಡೆದಿದ್ದು ಮಾಹೇಲ ಜಯವರ್ಧನೆ ಪಡೆ.ಆಸೀಸ್ ಎದುರಿನ ಗೆಲುವಿನ ಓಟ ಮುಂದುವರಿಸಬೇಕು ಎನ್ನುವ ನಿರೀಕ್ಷೆ ಲಂಕಾ ಪಡೆಯದ್ದಾದರೆ, ಅನುಭವಿಸಿದ ಸೋಲಿಗೆ ತಿರುಗೇಟು ನೀಡಬೇಕು ಎನ್ನುವುದು ಮೈಕಲ್ ಕ್ಲಾರ್ಕ್ ಪಡೆಯ ಆಸೆ. ಈ ಕ್ರೀಡಾಂಗಣದಲ್ಲಿ ಈ ಹಿಂದೆ ಕ್ಲಾರ್ಕ್ ಬಳಗದ ಎದುರು ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಲಭಿಸಿದ್ದು ಲಂಕಾಕ್ಕೆ. ಆದ್ದರಿಂದ ಇಂದೂ ಸಹ ಪ್ರವಾಸಿ ತಂಡಕ್ಕೆ ಫೇವರಿಟ್ ಪಟ್ಟ!ಲಂಕಾದ ಈ ಗೆಲುವಿನ ಓಟಕ್ಕೆ ತಡೆಗೋಡೆಯಾಗಲು ಆಸೀಸ್ ಸಹ ಸಜ್ಜುಗೊಂಡಿದೆ.  ಸರಣಿಯಲ್ಲಿ ಹೆಚ್ಚು ವಿಕೆಟ್ ಪಡೆದಿರುವ ವೇಗಿ ಲಸಿತ್ ಮಾಲಿಂಗ ಕಳೆದ ಪಂದ್ಯದಲ್ಲಿ (49ಕ್ಕೆ4) ಅಸೀಸ್ ಗೆಲುವಿಗೆ ಅಡ್ಡಿಯಾಗಿದ್ದರು.  ಅಷ್ಟೇ ಅಲ್ಲ ಫೈನಲ್ ಕನಸು ಕಂಡಿದ್ದ ಭಾರತವು ನಿರಾಸೆಗೊಳ್ಳುವಂತೆ ಮಾಡಿದ್ದರು. ಲಂಕಾ ತಂಡದ ತಿಸ್ಸಾರ ಪೆರೇರಾ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಆ್ಯಂಜೆಲೊ ಮ್ಯಾಥ್ಯೂಸ್ ಅವರಿಗೂ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಈ ಸಂಕಷ್ಟದ ಮಧ್ಯೆಯೂ ಪ್ರವಾಸಿ ತಂಡ ಮೊದಲ ಯಶಸ್ಸಿನ ಹೆಜ್ಜೆ ಇಡಬೇಕು.ತಂಡಗಳು: ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ತಿಲಕರತ್ನೆ ದಿಲ್ಯಾನ್, ಕುಮಾರ ಸಂಗಕ್ಕಾರ, ಉಪುಲ್ ತರಂಗ, ದಿನೇಶ್ ಚಂಡಿಮಾಲ್, ಸಚಿತ್ರ ಸೇನನಾಯಕೆ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ತಿಸ್ಸಾರ ಪೆರೇರಾ, ಧಮ್ಮಿಕಾ ಪ್ರಸಾದ್ ಮತ್ತು ಲಹಿರು ತಿರಿಮಾನೆ.ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಶೇನ್ ವ್ಯಾಟ್ಸನ್, ಡೇನ್ ಕ್ರಿಸ್ಟಿಯನ್, ಕ್ಸೇವಿಯರ್ ಡೋಹರ್ತಿ, ಪೀಟರ್ ಫಾರೆಸ್ಟ್, ಬೆನ್ ಹಿಲ್ಫೆನ್ಹಾಸ್, ಡೇವಿಡ್ ಹಸ್ಸಿ, ಮೈಕ್ ಹಸ್ಸಿ, ಬ್ರೆಟ್ ಲೀ, ಕ್ಲಿಂಟ್ ಮೆಕ್‌ಕೇ, ಜೇಮ್ಸ ಪ್ಯಾಟಿನ್ಸನ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) ಹಾಗೂ ಡೇವಿಡ್ ವಾರ್ನರ್.ಅಂಪೈರ್‌ಗಳು:

ಅಸದ್ ರವೂಫ್ (ಪಾಕಿಸ್ತಾನ),

ಪಾಲ್ ರಿಫೆಲ್ (ಆಸ್ಟ್ರೇಲಿಯಾ).ಮೂರನೇ ಅಂಪೈರ್:

ಬ್ರೌನ್ಸ್ ಆಕ್ಸೆನ್‌ಫೋರ್ಡ್ (ಆಸ್ಟ್ರೇಲಿಯಾ)ಮ್ಯಾಚ್ ರೆಫರಿ:

ಕ್ರಿಸ್ ಬ್ರಾಡ್ (ಇಂಗ್ಲೆಂಡ್).

ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.