ಗುರುವಾರ , ನವೆಂಬರ್ 21, 2019
24 °C
ತುರುವೇಕೆರೆ ಕ್ಷೇತ್ರ ಪರಿಚಯ

ತ್ರಿಕೋನ ಕಣ: ಹೊಸಬರಿಗೆ ಹುಡುಕಾಟ

Published:
Updated:

ತುಮಕೂರು: ತುರುವೇಕೆರೆ ತಾಲ್ಲೂಕಿಗೆ ಹೇಮಾವತಿ ನಾಲೆ ಬಂದರೂ ಈ ಬಾರಿ ಸರಿಯಾಗಿ ನೀರು ಹರಿದಿಲ್ಲ. ಅಂತರ್ಜಲ ತೀವ್ರವಾಗಿ ಕುಸಿದಿದೆ. ಕೊಳವೆ ಬಾವಿಗಳು ಬೇಸಿಗೆ ಹೆಚ್ಚಿದಂತೆ ಬರಿದಾಗುತ್ತಿದ್ದು, ಇರುವ ಅಲ್ಪ ಸ್ವಲ್ಪ ನೀರು ಹಾಯಿಸಲು ವಿದ್ಯುತ್ ಇಲ್ಲವಾಗಿದೆ. ತೆಂಗಿನ ಮರಗಳ ಸುಳಿಗಳು ಒಣಗಿ ನಿಂತಿವೆ. ಮರದಲ್ಲಿ ಕಟ್ಟಿದ್ದ ನಾಲ್ಕು ಕಾಯಿ ಉದುರಿವೆ, ಹೊಸದಾಗಿ ಕಾಯಿ ಕಟ್ಟುತ್ತಿಲ್ಲ, ಕೊನೆಗೆ ತೆಂಗಿನ ಮರ ಉಳಿದರೆ ಸಾಕು ಎಂಬಂತಹ ಪರಿಸ್ಥಿತಿ ಕಾಡುತ್ತಿದೆ.ಪ್ರತಿ ಗಳಿಗೆಯೂ ರೈತರು ಮುಗಿಲು ನೋಡುತ್ತಿದ್ದಾರೆ. ಮೋಡ ಕಪ್ಪಿಟ್ಟರೆ ಒಳಗೊಳಗೆ ಖುಷಿ, ಮೋಡದ ಹನಿ ನೆಲ ಕಾಣದೆ ಮನಸ್ಸಿನಲ್ಲಿ ಮೂಡಿದ ಆಸೆಯೂ ಕಮರುತ್ತಿದೆ. ಬಿಸಿಲ ಝಳ ನೆತ್ತಿ ಸುಡುತ್ತಿದೆ. ಹಳ್ಳಿಯ ಜನತೆ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಿದೆ. ಇಂತಹ ಸಮಯದಲ್ಲೇ ವಿಧಾನಸಭೆ ಚುನಾವಣೆ ಎದುರಾಗಿದೆ. ಪೇಟೆಯ ಜನರಿಗೆ ಬರದ ಬಿಸಿ ಅಷ್ಟಾಗಿ ತಟ್ಟದಿದ್ದರೂ ಹಳ್ಳಿಯ ಜನತೆ ತತ್ತರಿಸಿದ್ದಾರೆ. ನಮಗೆ ಚುನಾವಣೆಯೂ ಬೇಡ, ರಾಜಕಾರಣಿಯೂ ಬೇಡ. ಹೊಲಕ್ಕೆ ನಾಲ್ಕು ಮಳೆ ಹನಿ ಬಿದ್ದರೆ ಸಾಕು ಎಂಬ ವಾತಾವರಣ ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುತ್ತದೆ.ಕಾಯಿ ಸೀಮೆ ತುರುವೇಕೆರೆ ತಾಲ್ಲೂಕಿನಲ್ಲಿ ಒಬ್ಬರನ್ನು ಒಮ್ಮೆ ಆಯ್ಕೆ ಮಾಡಿದರೆ ಮತ್ತೊಮ್ಮೆ ಆರಿಸಲು ಯೋಚಿಸುವ ಸ್ಥಿತಿ ಇರುವುದು ಹಿಂದಿನ ಫಲಿತಾಂಶದ ಮೇಲೆ ಕಣ್ಣಾಡಿಸಿದರೆ ತಿಳಿಯುತ್ತದೆ. `ಆಪರೇಷನ್ ಕಮಲ'ದಿಂದಾಗಿ ಕ್ಷೇತ್ರದ ಜನತೆ ಕಳೆದ ಐದು ವರ್ಷದಲ್ಲಿ ಎರಡು ಚುನಾವಣೆ ಕಾಣಬೇಕಾಯಿತು. `ಥಳಕು ಬಳುಕಿನ ಜನಕ್ಕಿಂತ ನಮ್ಮವರೇ ಇದ್ದರೆ ಚೆನ್ನ' ಎಂಬ ಭಾವನೆ ಮೂಡುತ್ತಿದೆ.ಕಳೆದ ಆರು ಚುನಾವಣೆಯಲ್ಲಿ (2008ರ ಉಪ ಚುನಾವಣೆ ಸೇರಿ) ಎಂ.ಟಿ.ಕೃಷ್ಣಪ್ಪ ಮಾತ್ರ ಎರಡು ಬಾರಿ ಆಯ್ಕೆ ಆಗ್ದ್ದಿದಾರೆ. ಉಳಿದಂತೆ ಯಾರೊಬ್ಬರೂ ಎರಡನೇ ಬಾರಿಗೆ ಕ್ಷೇತ್ರ ಪ್ರತಿನಿಧಿಸಲು ಸಾಧ್ಯವಾಗಿಲ್ಲ. ಹಿಂದಿನ ಫಲಿತಾಂಶವನ್ನು ಗಮನಿಸಿದರೆ ಕ್ಷೇತ್ರದ ಜನತೆ ಪ್ರತಿ ಚುನಾವಣೆಯಲ್ಲೂ ಹೊಸಬರನ್ನು ಬಯಸಿದ್ದಾರೆ. ಅದನ್ನು ಕಾರ್ಯ ರೂಪಕ್ಕೂ ತಂದಿದ್ದಾರೆ. ಉಪ ಚುನಾವಣೆ ನಂತರ ಮತದಾರರ ಅಭಿಪ್ರಾಯದಲ್ಲೂ ಕೊಂಚ ಬದಲಾವಣೆ ಕಾಣುತ್ತಿದ್ದು, ಅದರ ಪರಿಣಾಮ ಈಗಿನ ಚುನಾವಣೆಯಲ್ಲಿ ಕಾಣಬಹುದು ಎಂದು ಹೇಳಲಾಗುತ್ತದೆ.ಅತ್ತು ಕರೆದು ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಚಿತ್ರನಟ ಜಗ್ಗೇಶ್ ಅವರನ್ನು 2008ರ ಸಾಮಾನ್ಯ ಚುನಾವಣೆಯಲ್ಲಿ ಜನತೆ ಆಯ್ಕೆ ಮಾಡಿದರು. ಶಾಸಕರಾದ ಕೆಲವೇ ತಿಂಗಳಲ್ಲಿ `ಆಪರೇಷನ್ ಕಮಲ'ಕ್ಕೆ ತುತ್ತಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2008 ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಪಕ್ಷೇತರರಾಗಿ ಹಾಗೂ ಎರಡು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೃಷ್ಣಪ್ಪ ಎರಡು ಅವಧಿಗೆ ಶಾಸಕರಾಗಿದ್ದರು. 1994ರಿಂದ ಸತತವಾಗಿ ಐದು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ.ಡಿ.ಲಕ್ಷ್ಮೀನಾರಾಯಣ್ ನಾಲ್ಕು ಬಾರಿ ಸೋಲುಂಡು, ಒಮ್ಮೆ 1999ರಲ್ಲಿ ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದರು.1989ರಲ್ಲಿ ಎಸ್.ರುದ್ರಪ್ಪ ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದನ್ನು ಹೊರತುಪಡಿಸಿದರೆ, ನಂತರದ ಮೂರು ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ದೂರವಿಟ್ಟಿದ್ದರು. 2008ರಲ್ಲಿ ಜಗ್ಗೇಶ್ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮರುಜೀವ ನೀಡಿದರು. ನಂತರದ ಉಪ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ಸನ್ನು ಸೋಲಿಸಿ ಜೆಡಿಎಸ್ ಆಯ್ಕೆ ಮಾಡಿಕೊಂಡರು. ಕಳೆದ ಆರು ಚುನಾವಣೆ ಫಲಿತಾಂಶ ಗಮನಿಸಿದರೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಡುವಿನ ಹೋರಾಟದ ಹೆಜ್ಜೆ ಗುರುತುಗಳಿವೆ.ಲೆಕ್ಕಾಚಾರ: 2008ರ ಉಪಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪ 3301 ಮತಗಳ ಅಂತರದಿಂದ ಜಯಗಳಿಸಿರುವುದನ್ನು ಹೊರತುಪಡಿಸಿದರೆ ಉಳಿದಂತೆ ಗೆಲುವಿನ ಅಂತರ 9 ಸಾವಿರಕ್ಕೂ ಹೆಚ್ಚಾಗಿದೆ. ಕಳೆದ ಆರು ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್.ರುದ್ರಪ್ಪ 28 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದೇ ಸಾಧನೆ. ಗೆದ್ದ ಅಭ್ಯರ್ಥಿಗಳು 38 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ.ಪ್ರಸ್ತುತ ಸ್ಥಿತಿ: ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಜೆಪಿಯಿಂದ ಮಸಾಲೆ ಜಯರಾಂ, ಜೆಡಿಎಸ್‌ನಿಂದ ಎಂ.ಟಿ.ಕೃಷ್ಣಪ್ಪ ಹೆಸರು ಮಾತ್ರ ಅಧಿಕೃತವಾಗಿದೆ. ಉಳಿದಂತೆ ಇತರ ಪಕ್ಷಗಳಿಂದ ಪಟ್ಟಿ ಪ್ರಕಟವಾಗಿಲ್ಲ.ಕಾಂಗ್ರೆಸ್‌ನಲ್ಲಿ ಗೊಂದಲ ಮುಂದುವರಿದಿದ್ದು, ಯಾರಿಗೆ ಟಿಕೆಟ್ ಎಂಬುದು ಖಚಿತವಾಗಿಲ್ಲ. ಧರಣಿ, ಪ್ರತಿ ಧರಣಿ, ಮುಖಂಡರ ವಿರುದ್ಧ ವಾಗ್ದಾಳಿ, ಆಕ್ರೋಶ, ಆತ್ಮಾರ್ಪಣೆಯ ಮಾತುಗಳು ಪಕ್ಷದ ಮುಖಂಡರಿಂದ ಕೇಳಿಬರುತ್ತಿದೆ. ಚಿತ್ರ ನಿರ್ಮಾಪಕ ಕೆ.ಮಂಜು, ಗೀತಾ ರಾಜಣ್ಣ, ಚೌದ್ರಿರಂಗಪ್ಪ, ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಹೆಸರು ಶಿಫಾರಸು ಆಗಿದೆ. ಆದರೆ ಯಾರಿಗೂ ಟಿಕೆಟ್ ಖಚಿತವಾಗಿಲ್ಲ.ಕೆ.ಮಂಜು ತಮ್ಮ ಹೆಸರು ಅಂತಿಮವಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೆಸರು ಬಹಿರಂಗ ಆಗುವವರೆಗೂ ಕಾಂಗ್ರೆಸ್‌ನಲ್ಲಿ ಏನು ಹೇಳುವುದೂ ಕಷ್ಟವಾಗುತ್ತದೆ.ಬಿಜೆಪಿಯಲ್ಲಿ ಮೂವರ ಹೆಸರು ಕೇಳಿಬರುತ್ತಿದೆ. ಎಂಎಸ್‌ಐಎಲ್ ಅಧ್ಯಕ್ಷ ಎಂ.ಬಿ.ನಂದಿಶ್, ಟಿ.ಎಸ್.ಬೋರೇಗೌಡ, ಪಂಚಾಕ್ಷರಿ ಹೆಸರು ಚಾಲ್ತಿಯಲ್ಲಿದೆ. ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಎಚ್.ಆರ್.ರಾಮೇಗೌಡ ಮುಂದಾಗಿದ್ದಾರೆ.ಪ್ರತಿಕ್ರಿಯಿಸಿ (+)