ಶುಕ್ರವಾರ, ಜೂನ್ 18, 2021
24 °C
ರಾಬರ್ಟಸನ್‌ಪೇಟೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ 11ರಂದು ಚುನಾವಣೆ

ತ್ರಿಕೋನ ಪೈಪೋಟಿ; ಬಹುಮತದ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರ­ಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇದೇ 11ರಂದು ಚುನಾವಣೆ  ನಡೆಯ­ಲಿದ್ದು, ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೀವ್ರ ಪೈಪೋಟಿ ನಡೆಸಿವೆ.35 ಸದಸ್ಯ ಬಲದ ನಗರಸಭೆಯಲ್ಲಿ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಗಳಿಸಿಲ್ಲ. ಆದ್ದರಿಂದ ಪಕ್ಷೇತರರು ನಿರ್ಣಾಯಕರಾಗಿದ್ದಾರೆ. ಆದರೆ ಅವರಲ್ಲಿ ಒಗ್ಗಟ್ಟಿನ ಕೊರತೆ­ಯಿಂದಾಗಿ ರಾಜಕೀಯ ಪಕ್ಷಗಳ ಮುಖಂಡರು ಅವರನ್ನು ಒಲಿಸಿ­ಕೊಳ್ಳುವ ಯತ್ನ ನಡೆಸಿದ್ದಾರೆ.ಗೆದ್ದಿರುವವರಲ್ಲಿ ಬಿಜೆಪಿ 6, ಕಾಂಗ್ರೆಸ್‌ 5, ಜೆಡಿಎಸ್‌ 6, ಆರ್‌ಪಿಐ 3, ಕೆಜೆಪಿ 2, ಸಿಪಿಎಂ 1 ಮತ್ತು ಪಕ್ಷೇ­ತರರು 12 ಮಂದಿ ಇದ್ದಾರೆ.

ಈ ಬಾರಿ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸ­ಲಾಗಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಸಿಕ್ಕಲಿದೆ. ಈಗಾ­ಗಲೇ ಐದು ಬಾರಿ ನಗರಸಭೆ ಅಧ್ಯಕ್ಷ­ರಾಗಿದ್ದ ಜೆಡಿಎಸ್‌ನ ಮಾಜಿ ಶಾಸಕ ಎಂ.ಭಕ್ತವತ್ಸಲಂ ಆರನೇ ಬಾರಿಗೆ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ.ನ್ಯಾಯಾಲಯದಲ್ಲಿ ಚುನಾವಣೆ ನಡೆಸಬೇಕೆಂಬ ಆದೇಶ ಬರುತ್ತಿ­ದ್ದಂತೆಯೇ ಹಲವಾರು ಬೆಂಬಲಿಗರನ್ನು ಕ್ಯಾಂಪ್‌ಗೆ ಕರೆದುಕೊಂಡು ಹೋಗಿ­ದ್ದಾರೆ. ಎರಡು ತಂಡದಲ್ಲಿರುವ ಅವರ ಬೆಂಬಲಿಗ ಸದಸ್ಯರು ಅಜ್ಞಾತ ಸ್ಥಳದಲ್ಲಿ ಚುನಾವಣೆ ದಿನಕ್ಕಾಗಿ ಎದುರು ನೋಡು­ತ್ತಿದ್ದಾರೆ.ಅವರಿಗೆ ಮೂವರು ಸದಸ್ಯರಿರುವ ಆರ್‌ಪಿಐ ಸಹ ಬೆಂಬಲ ಘೋಷಿಸಿದೆ. ಹಾವು– ಮುಂಗುಸಿಯಂತಿದ್ದ ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಮತ್ತು ಎಂ.ಭಕ್ತವತ್ಸಲಂ, ಮಾಜಿ ಶಾಸಕ ವೈ.ಸಂಪಂಗಿ ಅವರನ್ನು ಹಣಿ­ಯಲು ಒಂದಾಗಿರುವುದು ಈಗಿನ ವಿಶೇಷ.ಬಿಜೆಪಿ ಟಿಕೆಟ್‌ ಸಿಗದ ಕಾರಣ, ತಮ್ಮ ತಾಯಿಯನ್ನು ಕ್ಷೇತ್ರದಲ್ಲಿ ಗೆಲ್ಲಿ­ಸಿದ ಮಾಜಿ ಶಾಸಕ ವೈ.ಸಂಪಂಗಿ ತನ್ನ ಬೆಂಬಲಿಗರು ಈ ಬಾರಿ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂಬ ವಿಶ್ವಾಸ­ದಲ್ಲಿದ್ದಾರೆ. ಬಿಜೆಪಿ ಕೇವಲ ಆರು ಸದಸ್ಯರನ್ನು ಹೊಂದಿರುವುದರಿಂದ ಯಾವು­ದಾದರೂ ರಾಜಕೀಯ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯವಾದ ಸ್ಥಿತಿಯಲ್ಲಿದೆ.ಕಳೆದ ನಗರಸಭೆ ಅವಧಿಯಲ್ಲಿ ಸಂಪಂಗಿ ಕಾಂಗ್ರೆಸ್‌ ಜೊತೆ ಮಾಡಿ­ಕೊಂಡಿದ್ದ ಒಪ್ಪಂದ ಫಲ ನೀಡಿತ್ತು. ಸಂಪಂಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿ­ದ್ದರಿಂದ ಆ ಪಕ್ಷದ ರಶೀದ್‌ಖಾನ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ಸುಮಾನಾಗರಾಜ್‌ ಉಪಾ­ಧ್ಯಕ್ಷರಾಗಿ ಚುನಾಯಿತರಾಗಿದ್ದರು. ಈ ಬಾರಿಯೂ ಅದೇ ರೀತಿಯ ಹೊಂದಾ­ಣಿಕೆ ಮಾಡಿಕೊಳ್ಳಲು ಇಲ್ಲವೆ ಕೊಂಚ ಮಾರ್ಪಾಟು ಇರುವ ಸ್ಥಿತಿಯಲ್ಲಿ ಹೊಂದಾ­ಣಿಕೆ ಮಾಡಿಕೊಳ್ಳಲು ಸಂಪಂಗಿ ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಎರಡು ರಾಜಕೀಯ ಪಕ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಕಾಂಗ್ರೆಸ್‌ ಗೊಂದಲದಲ್ಲಿದೆ. ಈಗ ಅಧಿಕಾರದಲ್ಲಿ­ರುವ ರಾಜ್ಯ ಸರ್ಕಾರದ ವರ್ಚಿಸ್ಸಿಗೆ ಕುಂದು ಬರದೆ ಇರುವಂತೆ ಮತ್ತು ಮುಂಬರುವ ಲೋಕಸಭಾ ಚುನಾವಣೆ­ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.­ಮುನಿಯಪ್ಪ ಅವರಿಗೆ ಅನುಕೂಲ­ವಾಗುವ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ ಪಕ್ಷ ಇದೆ. ಕಳೆದ ಬಾರಿ ಬಿಜೆಪಿ ಜೊತೆ ಕೈ ಜೋಡಿಸಿದ ರೀತಿಯಲ್ಲಿಯೇ ಈ ಬಾರಿಯೂ ಮಾಡುತ್ತದೆಯೇ ಅಥವಾ ಹೊಸ ಮಾರ್ಗ ಹುಡುಕಿ­ಕೊಳ್ಳು­ತ್ತದೆಯೇ ಎಂಬುದು ಕುತೂ­ಹಲ­ಕಾರಿ.ಜೆಡಿಎಸ್‌ ಈಗಾಗಲೇ ಅಧ್ಯಕ್ಷ ಗಾದಿಗೆ ಅಭ್ಯರ್ಥಿ ಭಕ್ತವತ್ಸಲಂ ಎಂದು ಘೋಷಿಸಿದ್ದರೂ ಕಾಂಗ್ರೆಸ್‌, ಬಿಜೆಪಿ ಇನ್ನೂ ಸಂದಿಗ್ಧ ಪರಿಸ್ಥಿತಿ­ಯಲ್ಲಿವೆ.ಈ ಮಧ್ಯೆ ರಾಜಕೀಯ ಪೈಪೋಟಿ­ಯಿಂದಾಗಿ ಹಲವಾರು ನಗರಸಭೆ ಸದಸ್ಯರ ಜಾತಿ ಬಣ್ಣ ಬಯಲಾಗುವ ನಿರೀಕ್ಷೆ ಇದೆ. ಮೂವರು ನಗರಸಭೆ ಸದಸ್ಯರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ­ದ್ದಾರೆ ಎಂಬ ದೂರುಗಳನ್ನು ಕಂದಾಯ ಇಲಾಖೆಗೆ ನೀಡಲಾಗಿದೆ. ಇದರ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ತನಿಖೆಯನ್ನು ಸಹ ನಡೆಸುತ್ತಿದ್ದಾರೆ.ಯಾವುದೇ ರಾಜಕೀಯ ಪಕ್ಷ ಅಧಿ­ಕಾರಕ್ಕೆ ಬಂದರೂ ಮುಂದಿನ ದಿನಗಳಲ್ಲಿ ಅದಕ್ಕೆ ಸಹಕಾರ ನೀಡಿದ ಸದಸ್ಯರ ಜಾತಿ ಪ್ರಮಾಣ ಪತ್ರದ ಸತ್ಯಾಸತ್ಯತೆ ಬಗ್ಗೆ ಕಾನೂನು ಹೋರಾಟ ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಈಗಾಗಲೇ ಈ ಹೋರಾಟ ನಾಗರಿಕ ಹಕ್ಕು ಜಾರಿ ದಳ ಮತ್ತು ನ್ಯಾಯಾಲಯದ ಮೆಟ್ಟಿ­ಲನ್ನು ಸಹ ಹತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.