ಭಾನುವಾರ, ನವೆಂಬರ್ 17, 2019
21 °C

ತ್ರಿಕೋನ ಸ್ಪರ್ಧೆಗೆ ಕುಂದಾಪುರ ಕ್ಷೇತ್ರ ಸಜ್ಜು

Published:
Updated:

ಕುಂದಾಪುರ: ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ಶಿವರಾಮ ಕಾರಂತರ ಹುಟ್ಟೂರು, ಜಿಲ್ಲೆಯಲ್ಲಿಯೇ ಏಕೈಕ ಕಂದಾಯ ಉಪವಿಭಾಗ ಕೇಂದ್ರ, ವರಾಹಿ ಜಲ ವಿದ್ಯುತ್ ಸ್ಥಾವರ, ಪುರಾಣ ಪ್ರಸಿದ್ದ ಸಪ್ತ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳು, ಕುಂಭಾಸಿಯ ಆನೆಗುಡ್ಡೆ ದೇವಸ್ಥಾನ ಹಾಗೂ ಮಾವೋವಾದಿ ನಕ್ಸಲ್ ಚಟುವಟಿಕೆ ಸೇರಿದಂತೆ ಹಲವು ಕಾರಣಗಳಿಂದ ನಾಡಿಗೆ ಪರಿಚಿತವಾಗಿರುವ ಕುಂದಾಪುರ ವಿಧಾನಸಭಾ ಕ್ಷೇತ್ರ ಈ ಬಾರಿ ಪಕ್ಷೇತರ, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಹಣಾಹಣಿಗೆ ವೇದಿಕೆಯಾಗಲಿದೆ.2008ರ ಚುನಾವಣೆಯ ಪೂರ್ವದಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಕುಂದಾಪುರದಲ್ಲಿನ 26 ಗ್ರಾಮಗಳು ಬೈಂದೂರಿಗೆ ಹಾಗೂ ಹಿಂದೆ ವಿಧಾನಸಭಾ ಕ್ಷೇತ್ರವಾಗಿದ್ದ ಬ್ರಹ್ಮಾವರದ 31 ಗ್ರಾಮಗಳು ಕುಂದಾಪುರಕ್ಕೆ ಸೇರ್ಪಡೆಯಾಗಿದ್ದವು. ಒಂದು ಪುರಸಭೆ, ಒಂದು ಪಟ್ಟಣ ಪಂಚಾಯಿತಿ, ಕೋಟ ಹಾಗೂ ಕುಂದಾಪುರ ಹೋಬಳಿಯ 77 ಗ್ರಾಮಗಳು ಕ್ಷೇತ್ರ ವ್ಯಾಪ್ತಿಯಲ್ಲಿವೆ. ಹೊಸ ಸೇರ್ಪಡೆಯನ್ನು ಹೊರತುಪಡಿಸಿ 1,77,710 ಮತದಾರರು ಇದ್ದಾರೆ. ಅವರಲ್ಲಿ 83,871 ಮಹಿಳೆಯರು ಹಾಗೂ 83,839 ಪುರುಷ ಮತದಾರರಿದ್ದಾರೆ.1983 ರಿಂದ 2013 ರವರೆಗಿನ 30 ವರ್ಷಗಳ ಕಾಲ ಕ್ಷೇತ್ರದ ಸರದಾರರಾಗಿದ್ದವರು ಇಬ್ಬರೇ ಶಾಸಕರು. ಕಾಂಗ್ರೆಸ್‌ನ ಕೆ.ಪ್ರತಾಪ್‌ಚಂದ್ರ ಶೆಟ್ಟಿ 4 ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೆ, ಅವರ ಒಂದು ಕಾಲದ ಆತ್ಮೀಯ ಒಡನಾಡಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಮೂರು ಬಾರಿ ಬಿಜೆಪಿ ಶಾಸಕರಾಗಿದ್ದರು. 1967 ರಿಂದ ಈವರೆಗೂ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರನ್ನು ಹೊರತು ಪಡಿಸಿದರೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು ಬಂಟ ಸಮುದಾಯದವರು ಎನ್ನುವುದು ವಿಶೇಷ. ಕೋಟ ಹಾಗೂ ಕುಂದಾಪುರ ಹೋಬಳಿ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದ ರಾಜಕೀಯ ಶಕ್ತಿ ಕೇಂದ್ರವಿರುವುದು ಹಾಲಾಡಿಯ ಪರಿಸರದಲ್ಲಿಯೇ ಎನ್ನುವುದು ನಿರ್ವಿವಾದ.ತಾಲ್ಲೂಕಿನ ಚುನಾವಣೆಯಲ್ಲಿ ಒಂದೊಮ್ಮೆ ಅವಿರೋಧವಾಗಿ ಶಾಸಕರಾಗಿ ಆಯ್ಕೆಯಾಗಿದ್ದ ದಿ.ಯಡ್ತರೆ ಮಂಜಯ್ಯ ಶೆಟ್ಟಿ, ವಿರೋಧ ಪಕ್ಷದ ನಾಯಕರಾಗಿದ್ದ ವಕ್ವಾಡಿ ಶ್ರೀನಿವಾಸ ಶೆಟ್ಟಿ, ಪ್ರಸಿದ್ಧ ವಕೀಲ ಎಸ್.ಎಸ್ ಕೊಳ್ಕೆಬೈಲ್, ವಿನ್ನಿಫ್ರೆಡ್ ಫೆರ್ನಾಂಡಿಸ್, ಕಾಪು ಸಂಜೀವ ಶೆಟ್ಟಿಯವರಂತಹ ಮುತ್ಸದ್ದಿಗಳನ್ನು ಆರಿಸಿ ಕಳುಹಿಸಿದ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಯಾವುದೇ ಶಾಸಕರಿಗೂ ಈ ವರೆಗೂ ಸಚಿವ ಸ್ಥಾನ ದೊರೆಕಿಲ್ಲ. ಬಂಗಾರಪ್ಪನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇನ್ನೇನು ಪ್ರತಾಪ್‌ಚಂದ್ರ ಶೆಟ್ಟಿಯವರು ಸಚಿರಾಗಿಯೇ ಬಿಟ್ಟರು ಎನ್ನುವ ವೇಳೆಯಲ್ಲಿ ಸರ್ಕಾರದ ನೇತೃತ್ವ ಬದಲಾಗಿತ್ತು. ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಹಾಲಾಡಿ ಸಚಿವರಾಗುತ್ತಾರೆ ಎನ್ನುವ ನಿರೀಕ್ಷೆಗಳು ಹುಸಿಯಾಗಿ ಅವರು ಶಾಸಕತ್ವ ಹಾಗೂ ಪಕ್ಷ ಬಿಡುವ ಸನ್ನಿವೇಶ ನಿರ್ಮಾಣವಾಯ್ತು.ಶಾಸಕರಾಗಿದ್ದವರು:1952 ರಲ್ಲಿ ಅವಿಭಜಿತ ಕ್ಷೇತ್ರವಾಗಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕರಾಗಿ ಆಯ್ಕೆಯಾದವರು ಯಡ್ತರೆ ಮಂಜಯ್ಯ ಶೆಟ್ಟಿ. 1957 ರಲ್ಲಿ ಪಿಎಸ್‌ಪಿ ಯಿಂದ ಆಯ್ಕೆಯಾಗಿದ್ದ ವಕ್ವಾಡಿ ಶ್ರೀನಿವಾಸ ಶೆಟ್ಟಿ ವಿರೋಧ ಪಕ್ಷದ ನಾಯಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನಿಂದ ಎಸ್.ಎಸ್ ಕೊಳ್ಕೆಬೈಲ್, 1967 ರಲ್ಲಿ ಪಿಎಸ್‌ಪಿ ಯಿಂದ ವಿನ್ನಿಫ್ರೆಡ್ ಫೆರ್ನಾಂಡಿಸ್,  1972 ರಲ್ಲಿ ಕಾಂಗ್ರೆಸ್‌ನಿಂದ ವಿನ್ನಿಫ್ರೆಡ್ ಫೆರ್ನಾಂಡಿಸ್, 1978ರಲ್ಲಿ  ಜನತಾ ಪಕ್ಷದಿಂದ ಕಾಪು ಸಂಜೀವ ಶೆಟ್ಟಿ, 1983 ರಿಂದ 1999 ರ ವರೆಗಿನ 4 ಅವಧಿಗೆ ಕಾಂಗ್ರೆಸ್‌ನಿಂದ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ 1999 ರಿಂದ 2013 ರವರೆಗೆ  ಬಿಜೆಪಿ ಯಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗಿದ್ದಾರೆ.ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿ ಪರಿಗಣಿತವಾಗಿದ್ದ ಈ ಕ್ಷೇತ್ರ 1994 ರಲ್ಲಿ ನಡೆದ ರಾಜಕೀಯ ಧ್ರುವೀಕರಣದ ಕಾರಣದಿಂದಾಗಿ ಬಿಜೆಪಿಗೆ ಒಲಿದಿತ್ತು. ಶಾಸಕತ್ವಕ್ಕೆ ನೀಡಿದ ರಾಜೀನಾಮೆಯಿಂದಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಕುಂದಾಪುರ ಕ್ಷೇತ್ರದಲ್ಲಿ ಇದೀಗ ಮತ್ತೊಂದು ರಾಜಕೀಯ ಕವಲೊಡೆದಿದೆ. ಬಿಜೆಪಿ ಯ ಶಾಸಕರಾಗಿದ್ದ ಹಾಲಾಡಿ ಬಿಜೆಪಿ ಗೆ ಗುಡ್‌ಬೈ ಹೇಳಿ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ರಣರಂಗಕ್ಕೆ ಧುಮುಕಿದ್ದಾರೆ.ಈ ಬಾರಿ ಯಾರು ?

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಮೂರು ಅಭ್ಯರ್ಥಿಗಳು ಈಗಾಗಲೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಪ್ರಚಾರ ಕಾರ್ಯ ಹಾಗೂ ಮತದಾರರ ಭೇಟಿ ಕಾರ್ಯಕ್ರಮಗಳೊಂದಿಗೆ ಚುನಾವಣೆ ಸಿದ್ದತೆ ದಿನದಿಂದ ದಿನಕ್ಕೆ ರಂಗೇರುತ್ತಿದೆ.ವೈಯಕ್ತಿಕ ವರ್ಚಸ್ಸಿನ ಮೇಲೆ ಸ್ವತಂತ್ರ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಹಾಲಾಡಿಯವರ ಜೊತೆಯಲ್ಲಿ ಬಿಜೆಪಿ ಯಿಂದ ಆಯ್ಕೆಯಾಗಿದ್ದ ಬಹುತೇಕ ಜಿ.ಪಂ, ತಾ.ಪಂ ಹಾಗೂ ಪುರಸಭಾ ಸದಸ್ಯರುಗಳಿದ್ದಾರೆ. ಪಕ್ಷದ ಚೌಕಟ್ಟಿನ ಬಂಧನವಿಲ್ಲದ ಹಾಲಾಡಿಯವರಿಗೆ ಪಕ್ಷ-ಭೇದ ಮರೆತು ಕ್ಷೇತ್ರದ ಜನ ಮತ ನೀಡುತ್ತಾರೆ ಎನ್ನುವ ವಿಶ್ವಾಸ ಅವರ ಪಾಳಯದಲ್ಲಿದೆ.ಹಿಂದೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿದ್ದ ಕುಂದಾಪುರ ಕ್ಷೇತ್ರವನ್ನು ಹೇಗಾದರೂ ಮಾಡಿ ಈ ಬಾರಿ ಉಳಿಸಿಕೊಳ್ಳಲೆ ಬೇಕು ಎನ್ನುವ ದಿಸೆಯಲ್ಲಿ ಎಂಎಲ್‌ಸಿ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರೇ ಚುನಾವಣೆಯ ಮೇಲುಸ್ತುವಾರಿ ವಹಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೊರೆಕಿದ ಹೆಚ್ಚುವರಿ ಮತ ಹಾಗೂ ಬಿಜೆಪಿ ಪಾಳಯದಲ್ಲಾದ ಒಡಕಿನ ಫಲ ಪಡೆಯಬೇಕು ಎನ್ನುವ ಉತ್ಸಾಹ ಕಾಂಗ್ರೆಸ್‌ನಲ್ಲಿದೆ.ಹೊರಗಿನಿಂದ ಬಂದವರು ಹೊರಗೆ ಹೋಗಿದ್ದಾರೆ ಬಿಜೆಪಿಯ ಪಾರಂಪರಿಕ ಕಾರ್ಯಕರ್ತರು ನಮ್ಮಡನೆ ಇದ್ದಾರೆ. ಮೂರು ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ ಕ್ಷೇತ್ರ. ಹಾಗಾಗಿ ಪಕ್ಷಕ್ಕೆ ಇಲ್ಲಿ ಬಲವಾದ ಬೇರಿದೆ ಎನ್ನುವ ನೆಲೆಯಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿರುವ ಬಿಜೆಪಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೇ ಸಾರಥಿ.ಹಲವು ರಾಜಕೀಯ ಗೊಂದಲ, ಧ್ರುವೀಕರಣಗಳ ಜೊತೆ ಜಾತಿಯ ಸಮೀಕರಣವನ್ನು ಮೀರಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ಮತದಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವ ಚಿದಂಬರ ರಹಸ್ಯ ಮೇ. 8 ರಂದು ಬಯಲಾಗಲಿದೆ.

 

ಪ್ರತಿಕ್ರಿಯಿಸಿ (+)