ತ್ರಿಪುರಾಸುರಕ್ಕೆ ಸಂಹಾರಕ್ಕೆ ಸಿದ್ದರಾಗಿ:ವಿಶ್ವೇಶ್ವರ ತೀರ್ಥ

7

ತ್ರಿಪುರಾಸುರಕ್ಕೆ ಸಂಹಾರಕ್ಕೆ ಸಿದ್ದರಾಗಿ:ವಿಶ್ವೇಶ್ವರ ತೀರ್ಥ

Published:
Updated:

ಮಡಿಕೇರಿ: ‘ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಮತಾಂತರ ಎಂಬ ಹೊಸ ತ್ರಿಪುರಾಸುರರು ನಮ್ಮ ಮೇಲೆ ಆಕ್ರಮಣ ನಡೆಸುತ್ತಿದ್ದು, ಈ ತ್ರಿಪುರಾಸುರರ ಸಂಹಾರಕ್ಕೆ ಇಡೀ ಸಮಾಜ ಭೇದ-ಭಾವ ಮರೆತು ಎದ್ದು ನಿಲ್ಲಬೇಕು’ ಎಂದು ಉಡುಪಿ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಗುರುವಾರ ಇಲ್ಲಿ ಕರೆ ನೀಡಿದರು.ಶ್ರೀ ಹನುಮದ್ ಶಕ್ತಿ ಜಾಗರಣ ಅಭಿಯಾನ ಸಮಿತಿ ವತಿಯಿಂದ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮಾಜೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಶಿವನು ವಿಷ್ಣುವಿನ ಜತೆ ಸೇರಿ ತ್ರಿಪುರಾಸುರರನ್ನು ವಧಿಸಿದಂತೆ ಇಡೀ ಸಮಾಜ ಸಂಘಟಿತವಾಗಿ ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಮತಾಂತರ ಎಂಬ ತ್ರಿಪುಸಾರರನ್ನು ಸಂಹಾರ ಮಾಡಲು ಸೆಟೆದು ನಿಲ್ಲಲು ಕಟಿ ಬದ್ಧವಾಗಬೇಕು’ ಎಂದು ಮನವಿ ಮಾಡಿದರು.‘ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಮತಾಂತರ ನಮ್ಮ ಧರ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ. ಇದಕ್ಕಾಗಿ ಎಲ್ಲ ಹಿಂದೂಗಳು ಒಂದಾಗಬೇಕು. ಹಿಂದೂ ಧರ್ಮದಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಸನಾತನ ಹಿಂದೂ ಧರ್ಮ ಅತ್ಯಂತ ಪವಿತ್ರವಾದುದು. ಆದರೆ, ನಮ್ಮವರೇ ಆದವರನ್ನು ಅಸ್ಪೃಶ್ಯರಂತೆ ಕಾಣುವುದು ಸರಿಯಲ್ಲ’ ಎಂದು ಸಲಹೆ ಮಾಡಿದರು.‘ನಾವು ನಮ್ಮವರನ್ನೇ ಅಸ್ಪೃಶ್ಯರಂತೆ ಕಂಡರೆ ಅದು ಹಿಂದೂ ಧರ್ಮಕ್ಕೆ ಅಪಮಾನ. ನಮ್ಮ ದೇವರನ್ನೇ ಪೂಜಿಸುವ ಹಿಂದೂ ಸಮಾಜದ ಬಂಧು-ಬಳಗದವರನ್ನೇ ಅಸ್ಪೃಶ್ಯರಂತೆ ಕಾಣುವುದು ದೊಡ್ಡ ಅಪರಾಧ. ಹಿಂದೂ ಧರ್ಮವನ್ನು ಬಲಪಡಿಸುವ ಉದ್ದೇಶದಿಂದ ಎಲ್ಲರೂ ಒಂದಾಗಬೇಕು’ ಎಂದು ಮನವಿ ಮಾಡಿದರು.‘ಗಂಗಾ ನದಿ ಪವಿತ್ರವಾದರೂ ಕೊಳಕು ನೀರು ಸೇರಿಸಿ ಕಲುಷಿತಗೊಳಿಸುತ್ತಿದ್ದೇವೆ. ಪವಿತ್ರ ಗಂಗಾನದಿಯ ನೀರನ್ನು ನಿರ್ಮಲೀಕರಣಗೊಳಿಸುವ ಪ್ರಯತ್ನ ನಡೆಸಿದಂತೆ ನಮ್ಮ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರಯತ್ನಿಸಬೇಕು. ಕ್ರೈಸ್ತರು ಅಥವಾ ಮುಸಲ್ಮಾನರು ಅಸ್ಪೃಶ್ಯರಲ್ಲ. ಆದರೆ, ನಮ್ಮ ಮನೆಯ ಮಗುವನ್ನು ಹೊರಗೆ ಬಿಟ್ಟರೆ ಹುಲಿ ಎತ್ತಿಕೊಂಡು ಹೋಗಿ ತಿಂದು ಬಿಡುತ್ತದೆ. ಅದೇ ರೀತಿ, ನಮ್ಮವರನ್ನೇ ನಾವು ಹೊರಗಿಟ್ಟರೆ ಮತಾಂತರಕ್ಕೆ ಎಳೆಯುವ ಸಂಭವ ಒದಗಲಿದೆ. ಹೀಗಾಗಿ, ಹಿಂದೂ ಸಮಾಜ ಯಾರನ್ನೂ ಅಸ್ಪೃಶ್ಯರೆಂದು ಪರಿಗಣಿಸಬಾರದು’ ಎಂದು ಎಚ್ಚರಿಸಿದರು.‘ಸಂಘಟನೆ ದೃಷ್ಟಿಯಿಂದ ಎಲ್ಲ ಹಿಂದೂಗಳು ಒಂದಾಗಬೇಕು. ಆ ಮೂಲಕ ಸಂಘಟನಾ ಶಕ್ತಿ ಬಲಪಡಿಸಬೇಕು. ಐದು ಬೆರಳು ಒಂದಾದರೆ ಮುಷ್ಠಿ ಬರುತ್ತದೆ. ಆದರೆ, ಆ ಮುಷ್ಠಿಯನ್ನು ಇನ್ನೊಬ್ಬರನ್ನು ಹೊಡೆಯಲು ಅಥವಾ ಪ್ರಹಾರ ಮಾಡಲು ಬಳಸಬಾರದು. ಮುಷ್ಠಿ ಉತ್ತಮವಾದ ಆಭರಣ ಹಿಡಿದುಕೊಂಡಂತೆ, ಅಮೂಲ್ಯವಾದ ಭಾರತೀಯ ಸಂಸ್ಕೃತಿಯ ರತ್ನವನ್ನು ಹಿಡಿದುಕೊಟ್ಟುಕೊಳ್ಳುವ ಮೂಲಕ ನಮ್ಮ ಪರಂಪರೆ ಉಳಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.‘ನಮ್ಮ ಸಂಘಟನೆಯ ಉದ್ದೇಶ ಪ್ರಾಚೀನ ಪರಂಪರೆಯನ್ನು ಉಳಿಸುವ ದೃಷ್ಟಿಯಿಂದಾಗಬೇಕು. ದೇಶ ಅಥವಾ ಧರ್ಮಕ್ಕೆ ಆಘಾತ ಎದುರಾದಾಗ ಮಾತ್ರ ಸಂಘಟನೆ ಸುಮ್ಮನಿರಲು ಸಾಧ್ಯವಿಲ್ಲ. ಯಾರೇ ಬಂದರೂ ಎದುರಿಸುವ ದೃಢತೆ ನಮ್ಮಲ್ಲಿರಬೇಕು. ನಮ್ಮಲ್ಲಿ ಎಲ್ಲ ಧರ್ಮೀಯರಿಗೂ ಮುಕ್ತ ಅವಕಾಶವಿದೆ. ಕ್ರೈಸ್ತರು-ಮುಸಲ್ಮಾನರು ನಮ್ಮ ಜತೆ ಬದುಕುವುದು ಅಪರಾಧವಲ್ಲ. ನಮ್ಮ ಅಂಗಳಕ್ಕೆ ಎಲ್ಲ ಕಡೆಗಳಿಂದಲೂ ಶುದ್ಧ ಗಾಳಿ ಬರಲಿ. ಮಂದ ಮಾರುತಗಳು ಬೀಸಿದರೆ ಸಂತಸಪಡೋಣ. ಆದರೆ, ಅವು ಬಿರುಗಾಳಿ ರೂಪ ಪಡೆದು ನಮ್ಮ ಮನೆ-ಮಠಗಳನ್ನೇ ಎಳೆದು ಹಾಕಿದರೆ ಅದನ್ನು ತಡೆಯಲು ಪ್ರಯತ್ನಿಸಬೇಕಾಗುತ್ತದೆ’ ಎಂದರು.‘ಅಸ್ಪೃಶ್ಯಮುಕ್ತ, ಬಲಿಷ್ಠ, ಶೀಲಯುಕ್ತ, ಮದ್ಯವ್ಯಸನ ಮುಕ್ತ, ರಾಷ್ಟ್ರಭಕ್ತ ಸಮಾಜ ನಿರ್ಮಾಣ ಗುರಿ ನಮ್ಮದಾಗಬೇಕು. ದ್ರೌಪದಿಯ ವಸ್ತ್ರಾಹರಣ ಸಂದರ್ಭದಲ್ಲಿ ಶ್ರೀಕೃಷ್ಣ ದ್ರೌಪದಿಯ ಮಾನ ರಕ್ಷಣೆ ಮಾಡಿದ. ಆದರೆ, ದ್ರೌಪದಿಯ ಸ್ಥಿತಿ ಇಂದು ಭಾರತಾಂಬೆಗೆ ಒದಗಿ ಬಂದಿದೆ. ಭಯೋತ್ಪಾದನೆ, ಮತಾಂತರ ದುರ್ಯೋಧನ- ದುಶ್ಯಾಸನ ರೀತಿಯಲ್ಲಿ ಭಾರತಾಂಬೆಯ ಮಾನಹರಣ ಮಾಡುತ್ತಿವೆ. ಪ್ರತಿಯೊಬ್ಬರ ಅಂತರಂಗದಲ್ಲಿ ಶ್ರೀಕೃಷ್ಣನಿದ್ದಾನೆ. ಪ್ರತಿಯೊಬ್ಬರ ಹೃದಯದಲ್ಲಿರುವ ಸಾವಿರ ಸಾವಿರ ಕೃಷ್ಣ, ವಸ್ತ್ರ ನೀಡುವ ಬದಲು ಭಾರತಾಂಬೆಯನ್ನು ರಕ್ಷಿಸುವ ಶಕ್ತಿ ಕೊಡಲಿ’ ಎಂದು ಹೇಳಿದರು.ಪ್ರಧಾನ ಭಾಷಣ ಮಾಡಿದ ಬಜರಂಗದಳದ ರಾಷ್ಟ್ರೀಯ ಸಂಚಾಲಕ ಸುಭಾಷ್ ಚೌಹಾಣ್, ಕೇವಲ ರಾಮಮಂದಿರ ನಿರ್ಮಾಣದ ಏಕೈಕ ದೃಷ್ಟಿಯಿಂದ ದೇಶಾದ್ಯಂತ ಈ ಆಂದೋಲನ ನಡೆಸುತ್ತಿಲ್ಲ. ಬದಲಿಗೆ ರಾಮ ರಾಜ್ಯದ ನಿರ್ಮಾಣದ ಕನಸು ಕೂಡ ಇದರಲ್ಲಿ ಅಡಗಿದೆ ಎಂದರು.ಪ್ರಾಸ್ತಾವಿಕ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಹಿಂದೂ ಸಂಘಟನೆಗಳ ಬಗ್ಗೆ ಅಪಪ್ರಚಾರ ನಡೆಯುವ ಷಡ್ಯಂತ್ರವನ್ನು ವಿಫಲಗೊಳಿಸಲು ಎಲ್ಲರೂ ಒಂದಾಗಬೇಕು ಎಂದರು.ಶ್ರೀ ಹನುಮದ್ ಶಕ್ತಿ ಜಾಗರಣ ಅಭಿಯಾನ ಸಮಿತಿ ಅಧ್ಯಕ್ಷ ಬಿ.ಜೆ. ಚಿಣ್ಣಪ್ಪ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಆರ್‌ಎಸ್‌ಎಸ್‌ನ ಜಿಲ್ಲಾ ಸಂಘ ಚಾಲಕ ಮಣಿ ಕಾರ್ಯಪ್ಪ, ಬಜರಂಗದಳದ ಕರ್ನಾಟಕ ಪ್ರಾಂತ್ಯ ಸಂಚಾಲಕ ಸೂರ್ಯನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು. ಚಿ.ನಾ. ಸೋಮೇಶ್ ಸ್ವಾಗತಿಸಿದರು. ಹನುಮದ್ ಶಕ್ತಿ ಜಾಗರಣ ಅಭಿಯಾನ ಸಮಿತಿ ಖಜಾಂಚಿ ಶಿವಾಜಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry