ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಂಭ್ರಮ

7

ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಂಭ್ರಮ

Published:
Updated:
ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಸಂಭ್ರಮ

ಕೃಷ್ಣರಾಜಪೇಟೆ: ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪೂರ್ಣ ಕುಂಭಮೇಳ ಪ್ರತಿ ವರ್ಷವೂ  ನಡೆಯುವಂತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.ತಾಲ್ಲೂಕಿನ ಅಂಬಿಗರಹಳ್ಳಿ – ಸಂಗಾಪುರ – ಪುರ ಗ್ರಾಮಗಳ ಬಳಿಯ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಲೆ ಮಹದೇಶ್ವರ ಜಯಂತಿ ಮತ್ತು ಪೂರ್ಣ ಕುಂಭಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು.ದೇವಾಲಯಗಳು ಮತ್ತು ಪುಣ್ಯಕ್ಷೇತ್ರಗಳು ನಮ್ಮ ದೇಶದ ಸಂಸ್ಕೃತಿಯ ಪ್ರತೀಕಗಳಾಗಿವೆ. ಜನರ ಭಾವನೆಗಳಿಗೆ ಪೂರಕವಾಗಿ ಇವುಗಳನ್ನು ಅಭಿವೃದ್ಧಿಪಡಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಸಂಗಮಗೊಳ್ಳುವ ತಾಲ್ಲೂಕಿನ ಪವಿತ್ರ ಸ್ಥಳವಾದ ಸಂಗಮ ಕ್ಷೇತ್ರದಲ್ಲಿ ಈ ಮೊದಲೇ ಕುಂಭಮೇಳ ನಡೆಯದಿರುವುದು ವಿಷಾದಕರ. ಈಗ ಆರಂಭಗೊಂಡಿರುವ ಈ ಕಾರ್ಯಕ್ರಮವನ್ನು ಮುಂದೆ ಇನ್ನೂ ಉತ್ತಮ ರೀತಿಯಲ್ಲಿ ಎಲ್ಲ ಮುಖಂಡರೂ ಸೇರಿ ಮುಂದುವರಿಸಿಕೊಂಡು ಹೋಗಬೇಕು. ಮುಖ್ಯಮಂತ್ರಿ ಸೇರಿದಂತೆ ಎಲ್ಲ ರಾಜಕೀಯ ನಾಯಕರು ತ್ರಿವೇಣಿ ಸಂಗಮದ ಅಭಿವೃದ್ಧಿಗೆ ನೆರವಾಗಬೇಕು ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಇಲ್ಲಿನ ತ್ರಿವೇಣಿ ಸಂಗಮ ಅಪರೂಪದ ಕ್ಷೇತ್ರವಾಗಿದೆ. ಈ ಸ್ಥಳದಲ್ಲಿ ಮಲೆ ಮಹದೇಶ್ವರರ ಜಯಂತಿ ಜತೆಗೆ ಕುಂಭಮೇಳ ನಡೆಯುತ್ತಿರುವುದು ಸಂತಸದ ವಿಷಯ. ಮಲೆ ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ನೀಡಿದ ಅನುದಾನ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿದೆ. ಇದೇ ರೀತಿ, ಇಲ್ಲಿನ ತ್ರಿವೇಣಿ ಸಂಗಮದ ಸಮಗ್ರ ಅಭಿವೃದ್ಧಿಗೂ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ದೊರೆಯಲಿ ಎಂದು ಹೇಳಿದರು.ಸುತ್ತೂರು ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಪೀಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕನಕ ಪೀಠದ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಸ್ವಾಮೀಜಿ, ಗವಿಮಠದ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ತೆಂಡೆಕೆರೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ,  ಸೇರಿದಂತೆ ವಿವಿಧ ಮಠಾಧೀಶರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.ಶಾಸಕ ಕೆ.ಸಿ. ನಾರಾಯಣಗೌಡ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್‌, ಬಿ. ಪ್ರಕಾಶ್‌, ಮಾಜಿ ಸಚಿವ ವಿ. ಸೋಮಣ್ಣ, ಉದ್ಯಮಿ ಮೋಹನ್‌ಗೌಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್‌. ಪ್ರಭಾಕರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಮಲೆ ಮಹದೇಶ್ವರ ಜಯಂತಿ ಸಮಿತಿ ಅಧ್ಯಕ್ಷ ಗಂಗಾಧರನ್‌, ಕಾರ್ಯಾಧ್ಯಕ್ಷ ಡಿ. ಮಾದೇಗೌಡ, ಕಾರ್ಯದರ್ಶಿ ಅಂ.ಚಿ. ಸಣ್ಣಸ್ವಾಮಿಗೌಡ, ಜಿಲ್ಲಾಧಿಕಾರಿ ಬಿ.ಎನ್‌. ಕೃಷ್ಣಯ್ಯ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry