ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು

7

ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು

Published:
Updated:
ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು

ತಿ.ನರಸೀಪುರ:  ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಾವೇರಿ, ಕಪಿಲಾ ಹಾಗೂ ಅಗಸ್ತೇಶ್ವರ ಲಿಂಗದಲ್ಲಿ ಉದ್ಭವವಾದ ಸ್ಫಟಿಕ ಸರೋವರದ ತ್ರಿವೇಣಿ ಸಂಗಮದಲ್ಲಿ ಸೋಮವಾರ ನಡೆದ 9ನೇ ಮಹಾ ಕುಂಭಮೇಳದಲ್ಲಿ ಸಾವಿರಾರು ಭಕ್ತರು `ಮಹೋದಯ ಪುಣ್ಯಸ್ನಾನ' ಮಾಡಿದರು.ಮೂರು ದಿನಗಳಿಂದ ನಡೆದ ಕುಂಭಮೇಳದ ಕಡೆಯ ದಿನ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಪುಣ್ಯಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದರು. ಮೊದಲಿಗೆ ಜನಸಂದಣಿ ಕಾಣದಿದ್ದರೂ ಬಿಸಿಲೇರುತ್ತಿದ್ದಂತೆ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶಗಳಿಂದ ಸಹಸ್ರಾರು ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.ಫೆ. 23ರ ಶನಿವಾರ ಮಾಘ ಶುದ್ಧ ತ್ರಯೋದಶಿ, ಪುಷ್ಯ ನಕ್ಷತ್ರ, ಶ್ರೀ ಅಗಸ್ತೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಳಸ ಸ್ಥಾಪನೆ, ಗಣಹೋಮ ಅಭಿಷೇಕ, ದೇವತಾರಾಧನೆ ಹಾಗೂ ರಾಷ್ಟ್ರಾಶೀರ್ವಾದ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡ ಉತ್ಸವದಲ್ಲಿ, ಕಡೆಯ ದಿನದ ಮಾಘ ಶುದ್ಧ ವ್ಯಾಸ ಪೂರ್ಣಿಮಾ, ಪುಣ್ಯಾಹ, ಸಪ್ತನದಿ ತೀರ್ಥ, ಕುಂಭಲಗ್ನ ಪ್ರಾತಃ 5.53 ಗಂಟೆಗೆ ಕಲಶ ಪೂಜೆ ಮಾಡಿ, ತ್ರಿವೇಣಿ ಸಂಗಮದಲ್ಲಿ ಕಲಶ ತೀರ್ಥ ಸಂಯೋಜನೆ ಮಾಡಲಾಯಿತು.ತಿರುಚ್ಚಿ ಮಹಾ ಸಂಸ್ಥಾನದ ಜಯೇಂದ್ರಪುರಿ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ವಾಟಾಳು ಸ್ವಾಮೀಜಿ ಸೇರಿದಂತೆ ಪ್ರಮುಖ ಸ್ವಾಮೀಜಿಗಳು ಲೋಕ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ಕುಂಭ ಸ್ನಾನ ಮಾಡುವ ಮೂಲಕ ಆಸ್ತಿಕರಿಗೆ ಮಹೋದಯ ಪುಣ್ಯ ಸ್ನಾನಕ್ಕೆ ಅನುಮತಿ ನೀಡಿದರು.ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ಜನರು ಮುಂಜಾನೆಯಿಂದಲೇ ಕುಂಭ ಸ್ನಾನ ಮಾಡಿ ನಂತರ ಅಗಸ್ತೇಶ್ವರ, ಗುಂಜಾನರಸಿಂಹಸ್ವಾಮಿ ದೇವಸ್ಥಾನ, ನಂದಿ ಮೂರ್ತಿಯ ದರ್ಶನ ಪಡೆದರು. ವಿದೇಶಿಯರು, ಟಿಬೇಟಿಯನ್ನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಕಲ್ಪಿಸಿತ್ತು. ವಾಹನ ಸಂಚಾರದಿಂದ ಜನಸಂದಣಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣದಿಂದ 2 ಕಿ.ಮೀ. ಅಂತರದಲ್ಲಿ ವಾಹನಗಳಿಗೆ ನಿಲ್ದಾಣ ವ್ಯವಸ್ಥೆ ಮಾಡಲಾಗಿತ್ತು.ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಬೆಂಗಳೂರಿನ ಕೈಲಾಸ ಆಶ್ರಮದ ಪೀಠ ನೆರವೇರಿಸಿತು. ಭಕ್ತಾದಿಗಳಿಗೆ ಆದಿಚುಂಚನಗಿರಿ ಹಾಗೂ ಸುತ್ತೂರು ಶ್ರೀಕ್ಷೇತ್ರ ಮಠಗಳಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಾಹನ ಸಂಚಾರ, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೆ, ಇದೇ ಮೊದಲ ಬಾರಿಗೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry