ಭಾನುವಾರ, ಜೂನ್ 13, 2021
26 °C

ತ್ರಿವೇದಿ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿವೇದಿ ತಿರುಗೇಟು

ನವದೆಹಲಿ (ಪಿಟಿಐ): ಬಜೆಟ್‌ನಲ್ಲಿ ರೈಲು ಪ್ರಯಾಣ ದರ ಏರಿಸಿದ ಕಾರಣ ತಮ್ಮ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ದಿನೇಶ್ ತ್ರಿವೇದಿ, ತಮ್ಮ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೇ ತಿರುಗೇಟು ನೀಡಿದ್ದಾರೆ. ರಾಜೀನಾಮೆ ನೀಡಬೇಕು ಎಂಬ ಸೂಚನೆಯನ್ನು ಲಿಖಿತವಾಗಿ ನೀಡಲಿ ಎಂದು ಪಟ್ಟು ಹಿಡಿದಿದ್ದಾರೆ.ಕೋಲ್ಕತ್ತದಲ್ಲಿ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ; `ನಾನು ಏನು ಹೇಳಬೇಕಿತ್ತೋ ಅದನ್ನು ಪ್ರಧಾನಿ ಅವರಿಗೆ ಈಗಾಗಲೇ ಪತ್ರ ಬರೆದು ತಿಳಿಸಿದ್ದೇನೆ. ರೈಲ್ವೆ ಸಚಿವ ಸ್ಥಾನಕ್ಕೆ ಮುಕುಲ್ ರಾಯ್ ಅವರ ಹೆಸರನ್ನೂ ಸೂಚಿಸಿದ್ದೇನೆ. ಈಗ ನಿರ್ಧಾರ ಕೈಗೊಳ್ಳಬೇಕಿರುವುದು ಕೇಂದ್ರ ಸರ್ಕಾರ~ ಎಂದು ತಮ್ಮ ಬಿಗಿ ನಿಲುವಿಗೆ (ತ್ರಿವೇದಿ ವಜಾ) ಅಂಟಿಕೊಂಡಿದ್ದಾರೆ.ಲೋಕಸಭೆಯಲ್ಲಿ ಟಿಎಂಸಿ ಮುಖ್ಯ ಸಚೇತಕರಾದ ಕಲ್ಯಾಣ್ ಬ್ಯಾನರ್ಜಿ ಅವರು ತಮ್ಮನ್ನು ಶನಿವಾರ ದೂರವಾಣಿ ಮೂಲಕ ಸಂಪರ್ಕಿಸಿ, `ಮಮತಾ ಬ್ಯಾನರ್ಜಿ ಅವರು ನಿಮ್ಮ ರಾಜೀನಾಮೆ ಬಯಸಿದ್ದಾರೆ. ಪದತ್ಯಾಗ ಮಾಡಿ, ಗೌರವದಿಂದ ನಿರ್ಗಮಿಸಿ ಇಲ್ಲವೇ ತೆಗೆದುಹಾಕಲಾಗುವುದು~ ಎಂಬ ಎಚ್ಚರಿಕೆ ನೀಡಿದರು ಎಂದು ತ್ರಿವೇದಿ ತಿಳಿಸಿದ್ದಾರೆ.`ಆದರೆ, ಟಿಎಂಸಿ ಸಂಸದೀಯ ಪಕ್ಷದ ನಾಯಕರಾದ ಸಚಿವ ಸುದೀಪ್ ಬಂದೋಪಾಧ್ಯಾಯ;  `ಪಕ್ಷವು ರಾಜೀನಾಮೆ ನೀಡುವಂತೆ ಸೂಚಿಸಿಲ್ಲ~ ಎಂಬ ಮಾತನ್ನು ಸದನದಲ್ಲಿ ಆಡಿದ್ದಾರೆ. ಹಾಗಾಗಿ ಯಾವುದು ನಿಜ ಎಂಬುದು ತಿಳಿಯುತ್ತಿಲ್ಲ. ಪಕ್ಷದ ಮುಖ್ಯಸ್ಥರು ನನ್ನ ರಾಜೀನಾಮೆ ಬಯಸಿದ್ದರೆ ಅದನ್ನು ಬರವಣಿಗೆಯಲ್ಲಿ ನೀಡಲಿ. ನಾನು ಅದನ್ನು ಶಿರಸಾವಹಿಸಿ ಪಾಲಿಸುವೆ~ ಎಂದು ತ್ರಿವೇದಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ಕೂಡ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದು, `ದಿನೇಶ್ ತ್ರಿವೇದಿ ಅವರು ಪಕ್ಷದ ಅಧ್ಯಕ್ಷರೇ ರಾಜೀನಾಮೆಗೆ ಲಿಖಿತವಾಗಿ ಸೂಚಿಸಲಿ ಎಂದು ನನ್ನೊಂದಿಗೆ ನುಡಿದಿದ್ದಾರೆ~ ಎಂದು ಹೇಳಿದ್ದಾರೆ.`ಆದರೆ, ಸೂಚನೆಯನ್ನು ಬರವಣಿಗೆಯಲ್ಲಿ ನೀಡಲಿ ಎಂದು ಪಟ್ಟು ಹಿಡಿಯುವುದು ತ್ರಿವೇದಿ ಅವರ ಘನತೆಗೆ ತಕ್ಕುದಲ್ಲ. ಪಕ್ಷದ ಮುಖ್ಯಸ್ಥರಿಂದ ಪತ್ರವನ್ನು ಪಡೆದೇ ಅವರು ಸಚಿವರಾದರೆ~ ಎಂದು ಪ್ರಶ್ನಿಸಿದ್ದಾರೆ.`ಆಗ ಪಕ್ಷವು ಅವರು ಸಚಿವರಾಗಲಿ ಎಂದು ಬಯಸಿತ್ತು. ಈಗ ಅವರು ಆ ಸ್ಥಾನದಲ್ಲಿ ಮುಂದುವರಿಯುವುದು ಬೇಡ ಎಂದು ಹೇಳಿದೆ. ಹಾಗಾಗಿ ಪಕ್ಷದ ಸೂಚನೆಯನ್ನು ತ್ರಿವೇದಿ ಪಾಲಿಸಬೇಕು~ ಎಂದಿದ್ದಾರೆ.ರೈಲು ಪ್ರಯಾಣ ದರ ಏರಿಕೆಯಿಂದ ಕೆಂಡಾಮಂಡಲವಾದ ಮಮತಾ ಬ್ಯಾನರ್ಜಿ, ಬುಧವಾರ ರಾತ್ರಿಯೇ ಪ್ರಧಾನಿ ಅವರಿಗೆ ಪತ್ರ ಬರೆದು ತ್ರಿವೇದಿಯವರನ್ನು ಸಂಪುಟದಿಂದ ಕೈಬಿಡುವಂತೆ ಕೋರಿದ್ದರು.ಈ ಕುರಿತು ಮಮತಾ ಅವರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಚರ್ಚಿಸಿದ್ದಾರೆ ಎನ್ನಲಾಗಿದ್ದು, ಕೇಂದ್ರದ ಸಾಮಾನ್ಯ ಬಜೆಟ್ ಮಂಡನೆಯಾದ ನಂತರ (ಶುಕ್ರವಾರ) ತ್ರಿವೇದಿ ಅವರನ್ನು ಸಂಪುಟದಿಂದ ಕೈಬಿಡುವುದಾಗಿ ಭರವಸೆ ನೀಡಿದ್ದರು ಎಂದು ತಿಳಿದುಬಂದಿದೆ.ಸರ್ಕಾರ ತ್ರಿವೇದಿ ಅವರ ಬೆಂಬಲಕ್ಕೆ ನಿಂತರೆ, ಟಿಎಂಸಿ ಬೆಂಬಲ ವಾಪಸು ಪಡೆಯುವ ಬೆದರಿಕೆ ಒಡ್ಡುವ ಸಾಧ್ಯತೆಯೂ ಇದೆ. ತ್ರಿವೇದಿ ಮತ್ತು ಅವರ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನಡುವಿನ ಕಿತ್ತಾಟದಿಂದ ಕಾಂಗ್ರೆಸ್ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.

ವಾಕ್ಸಮರ...

ಬಜೆಟ್ ಮಂಡಿಸಿರುವ ತಮಗೆ ಅದರ ಮೇಲೆ ನಡೆಯುವಂತಹ ಚರ್ಚೆಗೆ ಉತ್ತರಿಸುವ ಸಾಂವಿಧಾನಿಕ ಜವಾಬ್ದಾರಿಯೂ ಇದೆ ಎಂದು ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.ಆದರೆ, ಈ ಕಾರಣವನ್ನು ಟಿಎಂಸಿ ಮುಖಂಡರೂ ಆದ ಸಚಿವ ಸುದೀಪ್ ಬಂದೋಪಾಧ್ಯಾಯ ತಳ್ಳಿಹಾಕಿದ್ದಾರೆ.

`ಬಜೆಟ್ ಮಂಡಿಸಿದ ಸಚಿವರೇ ಚರ್ಚೆ ವೇಳೆ ಉತ್ತರಿಸಬೇಕು ಎಂದೇನೂ ಇಲ್ಲ. ಇದಕ್ಕೆ ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರ ಒಂದು ಪ್ರಕರಣ ಉದಾಹರಣೆಯಾಗಿದೆ. ಎನ್‌ಡಿಎ ಆಡಳಿತವಿದ್ದಾಗ (2001ರಲ್ಲಿ) ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದರು. ಬಜೆಟ್ ಮಂಡನೆಯ ಬಳಿಕ ಅವರು ರಾಜೀನಾಮೆ ಕೊಟ್ಟಿದ್ದರು. ಬಜೆಟ್ ಮೇಲಿನ ಚರ್ಚೆ ನಡೆಯುವ ವೇಳೆಗೆ ಆ ಸ್ಥಾನಕ್ಕೆ ಬಂದ ನಿತೀಶ್ ಕುಮಾರ್ ಅಧಿವೇಶನದಲ್ಲಿ ಉತ್ತರಿಸಿದ್ದರು~ಎಂದಿದ್ದಾರೆ.ರಾಜೀನಾಮೆಗೆ ಲಿಖಿತವಾಗಿ ಸೂಚನೆ ನೀಡಬೇಕು ಎಂಬ ತ್ರಿವೇದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಂದೋಪಾಧ್ಯಾಯ, `ಅವರಿಗೆ ಲಿಖಿತವಾಗಿ ಏನನ್ನೂ ನೀಡುವುದಿಲ್ಲ~ ಎಂದು ಖಾರವಾಗಿ ನುಡಿದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.