ತ್ರಿಶಂಕು ಸ್ಥಿತಿಯಲ್ಲಿ ಪೌರ ಕಾರ್ಮಿಕರು

7

ತ್ರಿಶಂಕು ಸ್ಥಿತಿಯಲ್ಲಿ ಪೌರ ಕಾರ್ಮಿಕರು

Published:
Updated:

ಗಜೇಂದ್ರಗಡ: ಇವರು ಎಲ್ಲ ಕಾರ್ಮಿಕರಂತಲ್ಲ. ನಾಗರಿಕರು ನೋಡಲು ಇಷ್ಟಪಡದೆ, ಮೂಗು ಮುಚ್ಚಿಕೊಂಡು ಸಾಗುವಂತಹ ದುರ್ನಾತ ಬೀರುವ ಮಲಿನ ತ್ಯಾಜ್ಯ, ಹೂಳನ್ನು ನಿಸ್ಸಂಕೋಚದಿಂದ ತೆರವುಗೊಳಿಸಿ ಪೌರರ ಹಿತಕ್ಕಾಗಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡಿಯುವ ಶ್ರಮಜೀವಿಗಳು.ಹೌದು, ಇವರೇ ಪೌರ ಕಾರ್ಮಿಕರು. ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಸುಂದರ ಹಾಗೂ ಸ್ವಚ್ಛ ಇರಿಸಲು ಗಟಾರು, ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳು ಮತ್ತು ರಸ್ತೆ ಮೇಲೆ ಹಾಗೂ ರಸ್ತೆಗಳ ಎಡ–ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಬೇಕಾಬಿಟ್ಟಿಯಾಗಿ ಬಿಸಾಡುವ ನಿರುಪಯುಕ್ತ ಘನ ತ್ಯಾಜ್ಯವನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಶುದ್ಧ, ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದಾಗಿದೆ. ಆದರೆ, ಇವರ ಬದುಕು ಮಾತ್ರ ಶೋಚನೀಯ.ಬದುಕು ನಿರ್ವಹಣೆಗಾಗಿ ಪುರಸಭೆ, ಪಟ್ಟಣ ಪಂಚಾಯ್ತಿಗಳು ನೀಡುವ ಅಲ್ಪ ಮೊತ್ತದ ದಿನಗೂಲಿಗಾಗಿ ಪೌರ ಕಾರ್ಮಿಕ ಸೇವೆ ಆರಂಭಿಸುವ ಪೌರ ಕಾರ್ಮಿಕರೆಲ್ಲ ಹಿಂದುಳಿದ ವರ್ಗದವರೇ ಆಗಿದ್ದಾರೆ. ತಮ್ಮ ಸೇವೆ ಕಾಯಂಗೊಳ್ಳುತ್ತದೆ ಎಂಬ ಆಶಾವಾದದಿಂದ ಕೆಲಸ ಮಾಡುತ್ತಿರುವ ಈ ದಿನಗೂಲಿ ನೌಕರರನ್ನು ಕಾಯಂಗೊಳಿಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಸ್ಥಳೀಯ ಪೌರ ಸಂಸ್ಥೆಗಳು ನೀಡುವ ಪುಡಿ ಗಾಸಿಗಾಗಿಯೇ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆ ಪೌರ ಕಾರ್ಮಿಕರದ್ದು.ಗದಗ ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕು ಎಂಬ ಹೆಗ್ಗಳಿಕೆ ಹೊಂದಿರುವ ರೋಣ ತಾಲ್ಲೂಕಿನಲ್ಲಿ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯ್ತಿಗಳಿವೆ. ಈ ಮೂರು ಪುರಸಭೆಗಳಲ್ಲಿ 135 ಪೌರ ಕಾರ್ಮಿಕರಿದ್ದಾರೆ. ಗಜೇಂದ್ರಗಡ ಪುರಸಭೆಯಲ್ಲಿ 60 ಪೌರ ಕಾರ್ಮಿಕರಿದ್ದಾರೆ. ಇದರಲ್ಲಿ 43 ದಿನಗೂಲಿ ಪೌರ ಕಾರ್ಮಿಕರು, 12 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಈ ಪೌರ ಕಾರ್ಮಿಕರು ನಿತ್ಯ 12 ಗಂಟೆ ಕಾಲ ಸೇವೆ ಸಲ್ಲಿಸುತ್ತಿದ್ದಾರೆ.ಬೆಳಿಗ್ಗೆ ಬೀದಿ, ಸಾರ್ವಜನಿಕ ಸ್ಥಳಗಳಲ್ಲಿನ ಕಸ ಗುಡಿಸುವುದರಿಂದ ಆರಂಭಗೊಳ್ಳುವ ಈ ಪೌರ ಕಾರ್ಮಿಕರ ಸೇವೆ ಗಟಾರು, ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆರವುಗೊಳಿಸಿ, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಆ ಎಲ್ಲ ಮಲಿನವನ್ನು ಸಾಗಿಸುವವರೆಗೂ ನಿರಂತರವಾಗಿರುತ್ತದೆ. ಪೌರ ಕಾರ್ಮಿಕರ ಪರಿಶ್ರಮದ ಬದುಕಿಗೆ ದೊರಕುವ ಸಂಬಳ ತಿಂಗಳಿಗೆ ಕೇವಲ 4,470 ರೂ. ಮಾತ್ರ. ಇದಕ್ಕೆ ನರೇಗಲ್‌ ಮತ್ತು ರೋಣ ಪುರಸಭೆಗಳ ಪೌರ ಕಾರ್ಮಿಕರು ಹೊರತಾಗಿಲ್ಲ.ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಅವರಿಗೆ ಉಡುಪು ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಪುರಸಭೆ ಮುಂದಾಗುತ್ತಿಲ್ಲ. ಹೀಗಾಗಿ ಬಹುತೇಕ ಪೌರ ಕಾರ್ಮಿಕರು, ಶ್ವಾಸಕೋಶ ತೊಂದರೆ, ಕ್ಯಾನ್ಸರ್‌, ಕ್ಷಯ ರೋಗ, ಕಾಮಣಿ (ಕಾಮಾಲೆ ರೋಗ), ಕರಳು ಬೇನೆ ಇತ್ಯಾದಿ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಹೀಗಾಗಿ ಇತ್ತ ಕಡೆ ಗಮನ ಹರಿಸಿ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಪುರಸಭೆ ಮುಂದಾಗಬೇಕಿದೆ.ಪೌರ ಕಾರ್ಮಿಕರ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಬೇಕು. ಕಾರ್ಮಿಕರ ಆರೋಗ್ಯಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಅವಶ್ಯ. ಪೌರ ಕಾರ್ಮಿಕರಿಗೆ ಸಕಲ ಸೌಕರ್ಯ ಒದಗಿಸಬೇಕು.

- ಮರಿಯಪ್ಪ ಅರಳಿಗಿಡದ,ಪೌರ ಕಾರ್ಮಿಕ ಮುಖಂಡಪೌರ ಕಾರ್ಮಿಕರ ಆರೋಗ್ಯಕ್ಕೆ ಪೂರಕ ವಾದ ಸಲಕರಣೆಗಳನ್ನು ಪೊರೈಸಲಾಗುತ್ತಿದೆ. ಆದರೆ, ಪೌರ ಕಾರ್ಮಿಕರು ಅವುಗಳನ್ನು ಬಳಸಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಆರೋಗ್ಯಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆಗಳು ಹೆಚ್ಚು.

ರಮೇಶ ದೇಸಾಯಿ

ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry