ಬುಧವಾರ, ನವೆಂಬರ್ 20, 2019
20 °C

`ತ್ರಿಶಂಕು ಸ್ಥಿತಿ'ಯಲ್ಲಿ ಸಂಸದ ರಾಘವೇಂದ್ರ

Published:
Updated:

ಶಿವಮೊಗ್ಗ: ಬಿಜೆಪಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರ ಸ್ಥಿತಿ ಈಗ `ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ' ಎಂಬಂತಾಗಿದೆ. ಅಪ್ಪನಿಲ್ಲದ ಪಕ್ಷದಲ್ಲಿ ಇರಲಾರದೆ, ಅಪ್ಪ ಕಟ್ಟಿದ ಪಕ್ಷಕ್ಕೂ ಹೋಗಲಾರದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಆದರೆ, ನೇಪಥ್ಯ ಕಾರ್ಯಾಚರಣೆಯಲ್ಲಿ ಅವರು ಈಗ ಸಕ್ರಿಯರು.ಜಿಲ್ಲೆಯಲ್ಲಿ ಬಿಜೆಪಿಯ ಯಾವುದೇ ಕಾರ್ಯಕ್ರಮಕ್ಕೂ ಅವರಿಗೆ ಆಹ್ವಾನ ಇಲ್ಲ. ಪೋಸ್ಟರ್, ಬ್ಯಾನರ್ ಎಲ್ಲಿಯೂ ಅವರ ಚಿತ್ರ, ಹೆಸರು ಇಲ್ಲ. ಇಷ್ಟದಾರೂ ಅವರು ಬಿಜೆಪಿ ಸಂಸತ್ ಸದಸ್ಯ. ಇನ್ನು ಕೆಜೆಪಿಯಲ್ಲಿ ಸಭೆ, ಸಮಾವೇಶಗಳ ಸುತ್ತಮುತ್ತ ಸುಳಿದಾಡುವ ರಾಘವೇಂದ್ರ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ.ಶಿಕಾರಿಪುರದಲ್ಲಿ ಸಂಸತ್ ಸದಸ್ಯರ ಮನೆಯೇ ಸದ್ಯಕ್ಕೆ ಕೆಜೆಪಿ ಕಚೇರಿಯಾಗಿದ್ದು, ಹೊಸ ಕಚೇರಿ ಮನೆ ಪಕ್ಕದಲ್ಲಿ ಎದ್ದೇಳುತ್ತಿದೆ. ಅಲ್ಲದೇ ಅಪ್ಪನ ಜತೆ ಚುನಾವಣಾ ಪ್ರಚಾರಕ್ಕೆ ಒಂದೇ ಕಾರಿನಲ್ಲಿ ಶಿಕಾರಿಪುರದ ಹಳ್ಳಿ-ಹಳ್ಳಿಗೆ ತೆರಳುವ ರಾಘವೇಂದ್ರ, ವೇದಿಕೆ ಹಂಚಿಕೊಳ್ಳುತ್ತಿಲ್ಲ. ಕಾರಿನಲ್ಲೇ ಕುಳಿತು ಕಾರ್ಯತಂತ್ರ ರೂಪಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಶಿಕಾರಿಪುರದ ಗ್ರಾಮಾಂತರ ಪ್ರದೇಶಗಳಲ್ಲಿ ಬಿರುಸಿನ ಓಡಾಟ ನಡೆಸಿರುವ ರಾಘವೇಂದ್ರ ಸದ್ದಿಲ್ಲದೆ ಕೆಜೆಪಿ ಸಂಘಟನೆಯಲ್ಲಿ ತೊಡಗಿದ್ದಾರೆ.ಏಟು-ತಿರುಗೇಟು: ರಾಘವೇಂದ್ರ ಬಿಜೆಪಿಯಲ್ಲಿದ್ದೂ ಕೆಜೆಪಿ ಸಂಘಟನೆ ಮಾಡುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಕೆಜೆಪಿ ಸೇರ್ಪಡೆಯಾಗಲಿ ಎಂದು ರಾಜ್ಯಸಭಾ ಸದಸ್ಯ ಆಯನೂರು ಸೇರಿದಂತೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಮತ್ತಿತರರು ಸವಾಲು ಹಾಕುತ್ತಲೇ ಬಂದಿದ್ದಾರೆ. ಆದರೆ, ಇದಕ್ಕೆಲ್ಲ ರಾಘವೇಂದ್ರ ಅವರದ್ದು ಒಂದೇ ಮಾತು, `ನೀವೆಲ್ಲ ಗೆದ್ದಿರುವುದು ಯಡಿಯೂರಪ್ಪ ಅವರಿಂದ. ನೈತಿಕತೆ ಇದ್ದರೆ ಮೊದಲು ನೀವು ರಾಜೀನಾಮೆ ನೀಡಿ, ಮತ್ತೆ ಚುನಾವಣೆಯಲ್ಲಿ ಗೆದ್ದು ನಿಮ್ಮ ತಾಕತ್ತು ತೋರಿಸಿ' ಎಂದು ಪ್ರತಿ ಸವಾಲು ಹಾಕುತ್ತಿದ್ದಾರೆ.

ಈ ಮಧ್ಯೆ ಕೆ.ಎಸ್. ಈಶ್ವರಪ್ಪ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ರಾಘವೇಂದ್ರ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಆದರೆ, ಪತ್ರಕ್ಕೆ ಉತ್ತರ ಇನ್ನೂ ಬಂದಿಲ್ಲ.ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಘವೇಂದ್ರ ಬಿಜೆಪಿ ಪರವಾಗಿ ಯಾವುದೇ ಪ್ರಚಾರ ಕೈಗೊಳ್ಳಲಿಲ್ಲ. ಇದಕ್ಕೆ ಪ್ರತಿತಂತ್ರ ರೂಪಿಸಿದ ಬಿಜೆಪಿ, ರಾಘವೇಂದ್ರ ಇನ್ನೂ ಬಿಜೆಪಿಯಲ್ಲಿ ಇದ್ದಾರೆ. ಅವರ ಪರವಾಗಿ ಮತ ನೀಡಿ ಎಂದು ಪೋಸ್ಟರ್‌ನಲ್ಲಿ ರಾಘವೇಂದ್ರ ಅವರ ಹೆಸರು ಹಾಕಿ ಪ್ರಚಾರ ಕಾರ್ಯ ಕೈಗೊಂಡಿತು.ಆದರೂ, ಶಿಕಾರಿಪುರದಲ್ಲಿ ಒಟ್ಟು 23ರಲ್ಲಿ ಕೆಜೆಪಿ 15 ಸ್ಥಾನ ಪಡೆದರೆ, ಬಿಜೆಪಿ ಹೇಳ ಹೆಸರಿಲ್ಲದಂತೆ ಆಗಿದೆ. ಹಾಲಿ ವಿಧಾನಸಭಾ ಚುನಾವಣೆಯಲ್ಲಿ ರಾಘವೇಂದ್ರ ಅವರ ನಡೆ, ಬಿಜೆಪಿ ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಿಂತಿದೆ. ಹಾಗಾಗಿ, ರಾಜಕೀಯ ಶಕ್ತಿಕೇಂದ್ರದಲ್ಲಿ ಲೆಕ್ಕಾಚಾರಗಳು ಇನ್ನಷ್ಟು ಗರಿಗೆದರಿವೆ.

ಪ್ರತಿಕ್ರಿಯಿಸಿ (+)