ಗುರುವಾರ , ಮೇ 19, 2022
20 °C

ತ್ರೈಮಾಸಿಕ ರಫ್ತು ನಿರಾಶಾದಾಯಕ: ಚಿದಂಬರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿನ `ರಫ್ತು ಚಟುವಟಿಕೆ' ಅಷ್ಟೇನೂ ತೃಪ್ತಿಕರವಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ಅವರ ಜತೆ ಸೋಮವಾರ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಚಿದಂಬರಂ, ರಫ್ತು ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಾದ ಅಗತ್ಯವಿದೆ. ರಫ್ತು ಪ್ರಮಾಣ ಕುಸಿತವನ್ನು ತಡೆದು ಪ್ರಗತಿ ದಾಖಲಿಸಲು ಶೀಘ್ರದಲ್ಲಿಯೇ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದರು.ಆಮದು ಹೆಚ್ಚಳ-ರಫ್ತು ಕುಸಿತದಿಂದಾಗಿ `ಚಾಲ್ತಿ ಖಾತೆ ಕೊರತೆ'(ಕರೆಂಟ್ ಅಕೌಂಟ್ ಡಿಫಿಸಿಟ್-ಸಿಎಡಿ) ವಿಸ್ತರಿಸುತ್ತಲೇ ಇದೆ. ಇದಕೆ ಪರಿಹಾರ ಕಂಡುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಈ ಸಮಸ್ಯೆಯ ತೀವ್ರತೆಯೂ ಹೆಚ್ಚುತ್ತಿದೆ. ರಫ್ತು ಚಟುವಟಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುವುದೊಂದೇ ಇದಕ್ಕಿರುವ ದೀರ್ಘಾವಧಿ ಪರಿಹಾರ ಎಂದು ಅಭಿಪ್ರಾಯಪಟ್ಟರು.ಇನ್ನೊಂದೆಡೆಯಿಂದ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ತೊಡಗಿಸುವಿಕೆ ಪ್ರಮಾಣವೂ ಹೆಚ್ಚಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಕಳೆದ ವರ್ಷ ಹಲವು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿತ್ತು. ಈ ವರ್ಷ `ನೇರ ವಿದೇಶಿ ಹೂಡಿಕೆ' ಮಿತಿ ಹಿಗ್ಗಿಸುವುದೂ ಸೇರಿದಂತೆ ವಿವಿಧ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆದಿದೆ ಎಂದರು.

ರೂಪಾಯಿ ಅಲ್ಪ ಕುಸಿತ

ಸೋಮವಾರ ಡಾಲರ್ ವಿರುದ್ಧ ರೂಪಾಯಿ, 13 ಪೈಸೆ ಬೆಲೆ ಕಳೆದುಕೊಂಡು ್ಙ59.52ರಲ್ಲಿ ವಿನಿಮಯಗೊಂಡಿತು. ಈ ಕುರಿತು ಪ್ರತಿಕ್ರಿಯಿಸಿದ ಚಿದಂಬರಂ, ಒಮ್ಮೆ ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಸಮಸ್ಯೆ ಬಗೆಹರಿದರೆ ವಿದೇಶಿ ಹೂಡಿಕೆದಾರರಿಗೆ ಇಲ್ಲಿನ ಹಣಕಾಸು ಮಾರುಕಟ್ಟೆ ಬಗ್ಗೆ ಮತ್ತೆ ವಿಶ್ವಾಸ ಮೂಡಲಿದೆ. ಆಗ ಅವರು ಹೂಡಿಕೆ ಪ್ರಮಾಣ ಹೆಚ್ಚಿಸುತ್ತಾರೆ. ನಂತರದಲ್ಲಿ ರೂಪಾಯಿ ಮೌಲ್ಯ ತಾನಾಗಿಯೇ ಏರಿಕೆ ಕಾಣಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.