ತ್ವರಿತವಾಗಿ ಇತ್ಯರ್ಥವಾಗಲಿ

7

ತ್ವರಿತವಾಗಿ ಇತ್ಯರ್ಥವಾಗಲಿ

Published:
Updated:

ರಾಜಧಾನಿ ದೆಹಲಿಯಲ್ಲಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಚಲಿಸುವ ಬಸ್‌ನಲ್ಲೇ ಬರ್ಬರ ರೀತಿಯಲ್ಲಿ ನಡೆದಂತಹ ಸಾಮೂಹಿಕ ಅತ್ಯಾಚಾರದ ವಿರುದ್ಧ ಸಂಸತ್‌ನ ಎರಡೂ ಸದನಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಕ್ಷಭೇದ ಮರೆತು ಭಾವನಾತ್ಮಕವಾಗಿ, ತೀವ್ರತೆಯಿಂದ ಈ ಹೇಯ ಕೃತ್ಯವನ್ನು ಸಂಸತ್ ಸದಸ್ಯರು ಖಂಡಿಸಿದ್ದಾರೆ. ರಾಷ್ಟ್ರದಾದ್ಯಂತ ಪ್ರತಿಭಟನೆಯ ಅಲೆಯೂ ಉಕ್ಕಿದೆ.`ಕಾನೂನು ವ್ಯವಸ್ಥೆಯ ಜೊತೆಗೆ ಇಷ್ಟ ಬಂದ ರೀತಿಯಲ್ಲಿ ಆಟವಾಡಬಹುದು ಎಂದು ಭಾವಿಸಿದ ಕೆಲವು ವ್ಯಕ್ತಿಗಳ ನಿರ್ಲಜ್ಜ ಕೃತ್ಯ ಇದು' ಎಂದು ದೆಹಲಿ ಹೈಕೋರ್ಟ್ ಕೂಡ ಬಣ್ಣಿಸಿದೆ. ಆದರೆ ದಿನಗಳುರುಳಿದಂತೆ ಇಂತಹ ಪ್ರಕರಣಗಳ ಕುರಿತಾದ ಕಾವು ಕಡಿಮೆ ಆಗುವುದು ಮಾಮೂಲು. ರಾಷ್ಟ್ರದ ವಿವಿಧೆಡೆಗಳಿಂದ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಆ ಪಟ್ಟಿಗೆ ಇದೊಂದು ಹೊಸ ಸೇರ್ಪಡೆಯಾಗಷ್ಟೇ ಉಳಿಯದಂತೆ ತೀವ್ರತರ ಕ್ರಮಗಳನ್ನು ಕೈಗೊಳ್ಳಲು ಈ ಹೇಯ ಪ್ರಕರಣ ಪ್ರೇರಕವಾಗಬೇಕಿದೆ.ಮೊದಲಿಗೆ ಅತ್ಯಾಚಾರದಂತಹ ಪ್ರಕರಣಗಳಿಗೆ ಪೊಲೀಸರು ಸ್ಪಂದಿಸುವ ರೀತಿಯ್ಲ್ಲಲೇ ಸುಧಾರಣೆಯಾಗಬೇಕು. ಪ್ರಕರಣ ದಾಖಲು ಮಾಡಿಕೊಳ್ಳು ವುದು ಹಾಗೂ ಅತ್ಯಾಚಾರಕ್ಕೊಳಗಾದ ವ್ಯಕ್ತಿಯನ್ನು ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಲು ತೆಗೆದುಕೊಳ್ಳುವಂತಹ ಸಮಯದಲ್ಲಿ ಯಾವುದೇ ವಿಳಂಬ ಇರಬಾರದು ಎಂಬುದು ಪೊಲೀಸ್ ವ್ಯವಸ್ಥೆಗೆ ಮನವರಿಕೆ ಆಗಬೇಕು. ಇದಕ್ಕಾಗಿ, ಇಂತಹ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ತರಬೇತಿ ಪಡೆದ ಸಂವೇದನಾಶೀಲ ಸಿಬ್ಬಂದಿಯ ನಿಯೋಜನೆ ಅತ್ಯಗತ್ಯ.ಮಹಿಳಾ ಪೊಲೀಸರ ಸಂಖ್ಯೆಯೂ ಹೆಚ್ಚಬೇಕು. ತ್ವರಿತ ಗತಿಯ ತನಿಖೆಗೆ ಸಹಕಾರಿಯಾಗಲು ಈಗಿರುವ ವಿಧಿವಿಜ್ಞಾನ ಪ್ರಯೋಗಾಲಯಗಳು ಏನೇನೂ ಸಾಲದು. ತ್ವರಿತವಾಗಿ ಅಪರಾಧಿಗೆ ಶಿಕ್ಷೆಯಾಗುತ್ತದೆ ಎಂಬಂಥ ಖಚಿತತೆ, ಈ ಹೇಯ ಅಪರಾಧಕ್ಕೆ ಮುಂದಾಗುವವರಲ್ಲಿ ಭೀತಿ ಹುಟ್ಟಿಸುವುದು ಸಾಧ್ಯ. ಮರಣದಂಡನೆಯಂತಹ ಉಗ್ರ ಶಿಕ್ಷೆಗಿಂತಲೂ ಇದು ಹೆಚ್ಚು ಪರಿ ಣಾಮ ಕಾರಿ. ಎಂದರೆ, ಅತ್ಯಾಚಾರ ಪ್ರಕರಣಗಳು  ತ್ವರಿತವಾಗಿ ಇತ್ಯರ್ಥ ಗೊಳ್ಳ ಬೇಕು. ಇದಕ್ಕಾಗಿ, ತ್ವರಿತ ನ್ಯಾಯಾಲಯಗಳ (ಫಾಸ್ಟ್ -ಟ್ರ್ಯಾಕ್ ಕೋರ್ಟ್) ಸ್ಥಾಪನೆಗೆ ಸರ್ಕಾರ ಆದ್ಯತೆ ನೀಡಬೇಕು.


`ದೆಹಲಿಯ ಈ ಸಾಮೂಹಿಕ ಅತ್ಯಾಚಾರದ ಪ್ರಕರಣ, ತ್ವರಿತ ನ್ಯಾಯಾ ಲಯದ್ಲ್ಲಲೇ ವಿಚಾರಣೆಗೆ ಒಳಪಡಲಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಕ್ರಿಯೆಯನ್ನು ತ್ವರಿತಗೊಳಿಸಲು ದಿನನಿತ್ಯ ಈ ಪ್ರಕರಣದ ವಿಚಾರಣೆ ನಡೆಯುವುದು' ಎಂಬ ಆಶ್ವಾಸನೆಯನ್ನೇನೊ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ನೀಡಿದ್ದಾರೆ. ದೆಹಲಿ ಮಹಿಳೆಯರ ಸುರಕ್ಷತೆ ವಿಚಾರದ ಪರಿಶೀಲನೆಗಾಗಿ ಕೇಂದ್ರ ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಿರುವುದಾಗಿಯೂ ಶಿಂಧೆ ಪ್ರಕಟಿಸಿದ್ದಾರೆ.ಆದರೆ ವಾಗಾಡಂಬರದ ಈ ಪ್ರಕಟಣೆಗಳು ಸಾಂತ್ವನವನ್ನೇನೂ ನೀಡುವುದಿಲ್ಲ. ಏಕೆಂದರೆ ಮಹಿಳೆಯ ಪರವಾಗಿ ಈಗಿರುವ ಕಾನೂನುಗಳನ್ನೇ, ದಕ್ಷ ತನಿಖೆಗಳಿಂದ ಸಮರ್ಪಕವಾಗಿ ಜಾರಿಗೊಳಿಸುವ್ಲ್ಲಲ್ಲಿ ವ್ಯವಸ್ಥೆ ವಿಫಲವಾಗಿರುವುದು ಸೂರ್ಯ ಸ್ಪಷ್ಟ. ಮಹಿಳೆ ವಿರುದ್ಧದ ಅಪರಾಧಗಳು ನಿರ್ಭೀತಿಯಿಂದ ನಿರಂತರವಾಗಿ ನಡೆಯುತ್ತಲೇ ಇರುವುದು ಇದಕ್ಕೆ ದ್ಯೋತಕ. ಅತ್ಯಾಚಾರಕ್ಕೊಳಗಾದ ಮಹಿಳೆಯಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬುವುದಕ್ಕಾಗಿ ಪುನರ್ವಸತಿ ಕೇಂದ್ರಗಳ ಸ್ಥಾಪನೆ ಕುರಿತೂ ಗಮನ ಹರಿಸುವುದು ಸದ್ಯದ ತುರ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry