ಸೋಮವಾರ, ಮೇ 10, 2021
21 °C

ತ್ವರಿತ ಭೂಸ್ವಾಧೀನಕ್ಕೆ ಗ್ರಾಮಸ್ಥರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬದನಗುಪ್ಪೆ ಹಾಗೂ ಕೆಲ್ಲಂಬಳ್ಳಿ ಗ್ರಾಮದ ವ್ಯಾಪ್ತಿ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ಭಾಗದಲ್ಲಿ ಕೈಗಾರಿಕೆಗಳ  ಸ್ಥಾಪನೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿ ಬದನಗುಪ್ಪೆ ಗ್ರಾಮಸ್ಥರು ಭಾನುವಾರ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್‌ಗೆ ಮನವಿ ಸಲ್ಲಿಸಿದರು.ಸಚಿವರಾದ ಬಳಿಕ ಪ್ರಥಮ ಬಾರಿಗೆ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲು ಆಗಮಿಸಿದ್ದ ಅವರನ್ನು ಬದನಗುಪ್ಪೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿ ಮನವಿ ಸಲ್ಲಿಸಿದರು.2009ರಲ್ಲಿ ಕೆಐಎಡಿಬಿಯಿಂದ ಜಮೀನು ಸ್ವಾಧೀನಪಡಿಸಿಕೊಳ್ಳುವ ಸಂಬಂಧ ನೋಟಿಸ್ ಜಾರಿಗೊಳಿಸಲಾಯಿತು. ಒಟ್ಟು 1,362 ಎಕರೆ ಪ್ರದೇಶದಲ್ಲಿ ಸುವರ್ಣ ಕಾರಿಡಾರ್ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಮೂರು ವರ್ಷಗಳಿಂದ ವಿವಿಧ ಹಂತದಲ್ಲಿ ಪರಿಶೀಲನೆ ನಡೆದಿದೆ. ಸಮೀಕ್ಷೆ ಕಾರ್ಯ ಪೂರ್ಣಗೊಂಡು ಕಂದಾಯ ಇಲಾಖೆಯಿಂದ ಕೆಐಎಡಿಬಿಗೆ ಭೂಸ್ವಾಧೀನದ ಕಡತಗಳು ಸಲ್ಲಿಕೆಯಾಗಿವೆ ಎಂದು ಗ್ರಾಮಸ್ಥರು ವಿವರಿಸಿದರು.ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ರೈತರು ಉತ್ತಮ ಬೆಲೆ ನಿಗದಿಪಡಿಸಿದರೆ ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ದೂರಿದರು.ಕಳೆದ ಮೂರುವರೆ ವರ್ಷಗಳಿಂದ ಬ್ಯಾಂಕ್‌ಗಳಲ್ಲಿ ಸಾಲ ದೊರೆಯುತ್ತಿಲ್ಲ. ಜಮೀನು ಭೋಗ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ, ಜಮೀನುಗಳಿಗೆ ಸೂಕ್ತ ದರ ನಿಗದಿಪಡಿಸಿ  ಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.ಕೈಗಾರಿಕೆಗಳು ಸ್ಥಾಪನೆಗೂ ಮೊದಲು ಮೂಲ ಸೌಲಭ್ಯ ಕಲ್ಪಿಸಬೇಕು. ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.ಸಂಸದ ಆರ್. ಧ್ರುವನಾರಾಯಣ, ಮುಖಂಡರಾದ ಎಸ್. ಪುಟ್ಟಸ್ವಾಮಪ್ಪ, ಬಿ.ಪಿ. ನಾಗರಾಜಮೂರ್ತಿ, ಜಿ. ನಂಜುಂಡಸ್ವಾಮಿ, ಶ್ರೀಕಂಠನಾಯಕ, ಗೋಪಾಲನಾಯಕ, ಬಸವಣ್ಣ, ನಾಗರಾಜು, ಕುಮಾರ್, ಕಾಳಪ್ಪ, ಮಹದೇವಪ್ಪ, ಕಾಳಯ್ಯ, ರವೀಶ್, ಮಹದೇವಯ್ಯ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.