ತ್ವರಿತ ವಿಚಾರಣೆಗೆ `ಸುಪ್ರೀಂ' ಸೂಚನೆ

7
ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಸೇರಿ 20 ಜನರ ವಿರುದ್ಧದ ಆರೋಪ

ತ್ವರಿತ ವಿಚಾರಣೆಗೆ `ಸುಪ್ರೀಂ' ಸೂಚನೆ

Published:
Updated:

ನವದೆಹಲಿ (ಪಿಟಿಐ): ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡರು ಸೇರಿದಂತೆ ಇತರ 19 ಜನರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟ್ ಗುರುವಾರ ರಾಯ್‌ಬರೇಲಿ ಕೋರ್ಟ್‌ಗೆ ನಿರ್ದೇಶನ ನೀಡಿದೆ. ಅಡ್ವಾಣಿ ಮತ್ತು 19 ಮಂದಿ ವಿರುದ್ಧದ ಪ್ರಕರಣವನ್ನು ವಿಚಾರಣಾ ನ್ಯಾಯಾಲಯ ಕೈಬಿಟ್ಟಿದೆ.ಸಿಬಿಐ ಪರ ವಕೀಲರು ಗೈರು ಹಾಜರಾಗಿದ್ದಕ್ಕೆ ಇದೇ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಸಿ.ಕೆ. ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇತ್ತೀಚಿಗೆ ನಿಧನರಾದ ಬಾಳ ಠಾಕ್ರೆ ಅವರ ಹೆಸರನ್ನು ಆರೋಪಿಗಳ ಪಟ್ಟಿಯಿಂದ ಸಿಬಿಐ ಕೈಬಿಡುವುದಕ್ಕೆ ನ್ಯಾಯಮೂರ್ತಿಗಳು ಅವಕಾಶ ನೀಡಿದರು. ಇದೇ ವೇಳೆ ಪ್ರಕರಣದ ವಿಚಾರಣೆಯನ್ನು 8 ವಾರ ಮುಂದೂಡಲಾಯಿತು.ಅಡ್ವಾಣಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಸತೀಶ್ ಪ್ರಧಾನ, ಸಿ.ಆರ್. ಬನ್ಸಾಲ್, ಮುರಳಿ ಮನೋಹರ್ ಜೋಶಿ, ವಿನಯ್ ಕಟಿಯಾರ್,  ಅಶೋಕ್ ಸಿಂಘಾಲ್ ಮತ್ತಿತರರ ವಿರುದ್ಧ ಮಸೀದಿ ಧ್ವಂಸಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ ಅಡಿಯಲ್ಲಿ ಅಪರಾಧ ಸಂಚಿನ ಪ್ರಕರಣ ದಾಖಲಿಸಲು ಸಿಬಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದೆ.ಹಲವು ಮುಖಂಡರ ವಿರುದ್ಧದ ಆರೋಪ ಕೈಬಿಟ್ಟಿದ್ದ ವಿಶೇಷ ನ್ಯಾಯಾಲಯದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 21ರಂದು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಕದ ತಟ್ಟಿದೆ.ವಿವಾದಿತ ಕಟ್ಟಡವನ್ನು ಧ್ವಂಸ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಮತ್ತಿತರರ ವಿರುದ್ಧದ ಇತರ ಆರೋಪಗಳ ಬಗ್ಗೆ ರಾಯ್‌ಬರೇಲಿ ಕೋರ್ಟ್‌ನಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅಲಹಾಬಾದ್ ಹೈಕೋರ್ಟ್ ಆ ವೇಳೆ ಸಿಬಿಐಗೆ ಅನುಮತಿ ನೀಡಿತ್ತು.ಕೇಂದ್ರೀಯ ತನಿಖಾ ಸಂಸ್ಥೆಯು ಅಡ್ವಾಣಿ ಮತ್ತು ಇತರ 20 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಎ (ಎರಡು ಸಮುದಾಯಗಳ ಮಧ್ಯೆ ದ್ವೇಷ ಮೂಡಿಸಿದ್ದು), 153ಬಿ (ರಾಷ್ಟ್ರೀಯ ಭಾವೈಕ್ಯಕ್ಕೆ ಧಕ್ಕೆ), 505 (ಸುಳ್ಳು ಹೇಳಿಕೆ, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದು, ಗಾಳಿ ಸುದ್ದಿ ಹರಡುವುದು ಇತ್ಯಾದಿ)  ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು.ಇದೇ ವೇಳೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ (ಅಪರಾಧ ಸಂಚು) ಅಡಿ ದಾಖಲಿಸಿದ್ದ ಪ್ರಕರಣವನ್ನು ವಿಶೇಷ ನ್ಯಾಯಾಲಯವು ರದ್ದುಪಡಿಸಿತ್ತು. ಇದನ್ನು ಅಲಹಾಬಾದ್ ಹೈಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು.ಲೋಕಸಭೆ ಕಲಾಪ ಭಂಗ

ನವದೆಹಲಿ(ಐಎಎನ್‌ಎಸ್): ಇಪ್ಪತ್ತು ವರ್ಷಗಳ ಹಿಂದೆ ಕೆಡವಿ ಹಾಕಿದ ಬಾಬ್ರಿ ಮಸೀದಿ ವಿಷಯ ಗುರುವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು. ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಎಡ, ಬಿಎಸ್‌ಪಿ ಮತ್ತು ಇತರ ಪಕ್ಷಗಳು ಗದ್ದಲ ಉಂಟು ಮಾಡಿದ್ದರಿಂದ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.ಬೆಳಿಗ್ಗೆ 11ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗದ್ದಲ ಶುರುವಾಯಿತು. ಮೊದಲಿಗೆ ಸದನವನ್ನು ಮಧ್ಯಾಹ್ನದವರೆಗೆ, ಬಳಿಕ 2 ಗಂಟೆಯವರೆಗೆ ಮುಂದೂಡಲಾಯಿತು. ಅಂತಿಮವಾಗಿ ಒಂದು ದಿನದ ಮಟ್ಟಿಗೆ ಸದನ ಮುಂದೂಡಲಾಯಿತು.ಮಜ್ಲೀಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷದ ಅಸಾವುದ್ದೀನ್ ಒವೈಸಿ, ಬಿಎಸ್‌ಪಿ ಮತ್ತು ಎಡ ಪಕ್ಷಗಳ ಸಂಸದರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ, ಶಿವಸೇನೆ ಸಂಸದರು ಎದ್ದು ನಿಂತು ಆ ಪಕ್ಷಗಳ ವಿರುದ್ಧ ಘೋಷಣೆ ಕೂಗಿದರು. ವಿಷಯದ ಕುರಿತು ಚರ್ಚೆಗೆ ಶೂನ್ಯ ವೇಳೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಪ್ರಶ್ನೋತ್ತರ ವೇಳೆ ನಡೆಯಲು ಸಹಕರಿಸಿ ಎಂದು ಸ್ಪೀಕರ್ ಮಾಡಿದ ಮನವಿಗೆ ಯಾರೊಬ್ಬರೂ ಕಿವಿಗೊಡಲಿಲ್ಲ.

ಅವಳಿ ನಗರಗಳಲ್ಲಿ ಕಟ್ಟೆಚ್ಚರ

ಲಖನೌ (ಪಿಟಿಐ): ಬಾಬ್ರಿ ಮಸೀದಿ ಧ್ವಂಸಗೊಂಡ 20ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅವಳಿ ನಗರಗಳಾದ ಅಯೋಧ್ಯೆ ಮತ್ತು ಫೈಜಾಬಾದ್‌ನಲ್ಲಿ ಗುರುವಾರ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆ ದಿನವನ್ನು ಮುಸ್ಲಿಂ ಸಂಘಟನೆಗಳು ಕಪ್ಪು ದಿನ ಮತ್ತು ಹಿಂದೂಪರ ಸಂಘಟನೆಗಳವರು ಶೌರ್ಯ ದಿನವಾಗಿ ಆಚರಿಸುತ್ತಿವೆ.

ಗುರುವಾರ ಎರಡೂ ನಗರಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಲ ಮಸೀದಿಗಳ ಮೇಲೆ ಕಪ್ಪು ಧ್ವಜ ಹಾರಾಡುತ್ತಿದ್ದುದು ಕಂಡು ಬಂತು. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಸಂಘಟನೆಗಳು ಕರಸೇವಕಪುರದಲ್ಲಿ `ಹನುಮಾನ ಚಾಲೀಸಾ'  ಪಠಣ ಆಯೋಜಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry