ಥಂಡರ್‌ಬರ್ಡ್ಬ ಸಿಡಿಲಿನ ಮರಿ

7

ಥಂಡರ್‌ಬರ್ಡ್ಬ ಸಿಡಿಲಿನ ಮರಿ

Published:
Updated:

ಇಂಗ್ಲೆಂಡ್‌ನ ವರ್ಸೆಸ್ಟರ್‌ಶೈರ್‌ನಲ್ಲಿ 1890 ರಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಎನ್‌ಫೀಲ್ಡ್ ಸೈಕಲ್ ಕಂಪೆನಿ ತಯಾರಿಸಿದಾಗ ಬಹುಶಃ ಭಾರತದಲ್ಲಿ ಯಾರೂ ಮೋಟಾರ್‌ಸೈಕಲ್‌ಗಳ ಕನಸನ್ನೂ ಕಂಡಿರಲಾರರು.ಮೇಡ್ ಲೈಕ್ ಎ ಗನ್ ಎನ್ನುವುದು ಈ ಬೈಕ್‌ನ ಸ್ಲೋಗನ್. ಗನ್ ಸಾಮಾನ್ಯವಾಗಿ ಅತಿ ಗಡುಸಾದ ಉಕ್ಕಿನಿಂದ ನಿರ್ಮಿಸಲ್ಪಟ್ಟಿರುತ್ತದೆ. ಏಕೆಂದರೆ ಬುಲೆಟ್ ಅನ್ನು ಚಿಮ್ಮಿಸುವ ಶಕ್ತಿ ಇದಕ್ಕೆ ಬೇಕಲ್ಲ.ಈ ಗನ್ ಮತ್ತು ಬುಲೆಟ್- ಎರಡನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ತಯಾರಿಸಿದರು. ಗನ್‌ನಷ್ಟೇ ಗಡುಸಾದ ಬೈಕ್, ಬುಲೆಟ್‌ನಷ್ಟು ಚುರುಕಾದ ವೇಗ ಈ ಬೈಕ್‌ನದು ಎಂಬುದೇ ಹೆಗ್ಗಳಿಕೆ.ಇಂಗ್ಲೆಂಡ್‌ನ ಬೈಕ್ ಆದ ಕಾರಣ, ಅದು ಭಾರತಕ್ಕೂ ಅನಿವಾರ್ಯವಾಗಿ ಕಾಲಿಟ್ಟಿತು. 1909ರಲ್ಲಿ ಮೊದಲ ಬುಲೆಟ್ ಬೈಕ್‌ಗಳು ಭಾರತಕ್ಕೆ ಕಾಲಿಟ್ಟವು. ಅವುಗಳಲ್ಲಿ ಅನೇಕವು ಬ್ರಿಟಿಷ್ ಅಧಿಕಾರಿಗಳಿಗಾದರೆ, ಮತ್ತೆ ಕೆಲವು ಸೇನೆಗೆ, ಮತ್ತೆ ಕೆಲವನ್ನು ಭಾರತದ ಶ್ರೀಮಂತರು ಆಮದು ಮಾಡಿಸಿಕೊಂಡಿದ್ದರು.ಇವೆಲ್ಲವೂ ಆರಂಭಿಕ 2-ಸ್ಟ್ರೋಕ್ ಎಂಜಿನ್ ಹೊಂದಿದ್ದ ಬೈಕ್‌ಗಳು. 2- ಸ್ಟ್ರೋಕ್ ಎಂಜಿನ್‌ಗೆ 4-ಸ್ಟ್ರೋಕ್ ಎಂಜಿನ್‌ಷ್ಟು ಹೆಚ್ಚು ಶಕ್ತಿ ಇಲ್ಲದೇ ಇದ್ದರೂ, ಆರಂಭಿಕ ಎಳೆಯುವ ಶಕ್ತಿ ಮಾತ್ರ ಅಗಾಧವಾಗಿರುತ್ತದೆ. ಹಾಗಾಗಿ ಹುಚ್ಚು ಕುದುರೆಯಂತೆ ಓಡುವ ಈ ಬೈಕ್‌ಗಳನ್ನು ನಿಯಂತ್ರಿಸುವುದೇ ಕಷ್ಟ.

 

ಅದರಲ್ಲೂ ಬುಲೆಟ್ ಬೈಕ್‌ಗಳು ಅತಿ ಹೆಚ್ಚು ಭಾರ ಇದ್ದ ಕಾರಣ, ಕಟ್ಟುಮಸ್ತಾದ ದೇಹವುಳ್ಳ ಪುರುಷರೇ ಇವನ್ನು ಓಡಿಸಬೇಕಿತ್ತು.ಆದರೆ ಕಾಲ ಕಳೆದಂತೆ ಭಾರತದಲ್ಲೇ ಎನ್‌ಫೀಲ್ಡ್ ಕಾರ್ಖಾನೆ ಆರಂಭವಾಗಿ, ಅನೇಕ ಆವೃತ್ತಿ, ಮಾದರಿಗಳ ಬೈಕ್‌ಗಳು ತಯಾರಾದ ಮೇಲೆ, ಭಾರತೀಯರಿಗೆ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಾಯಿತು.

 

ಆರಂಭದಲ್ಲಿ ಭಾರತದಲ್ಲಿ ಇದೊಂದೇ ಬೈಕ್. ಬೇಕಿದ್ದರೂ ಇದೇ, ಬೇಡದಿದ್ದರೂ ಇದೇ. ಇಂದಿನಂತೆ ಅನೇಕ ಕಂಪೆನಿಗಳು ಆಗ ಇರಲೇ ಇಲ್ಲ. ನಂತರ ಜಾವಾ ಹಾಗೂ ಯಜ್ಡಿ ಬೈಕ್‌ಗಳು ಹೊರಬಂದವಾದರೂ ಬುಲೆಟ್‌ಗೆ ಸ್ಪರ್ಧೆಯನ್ನು ನೀಡಲು ಸಾಧ್ಯವಾಗಲಿಲ್ಲ.

 

ನಂತರ ಇಂಗ್ಲೆಂಡ್‌ನಲ್ಲೇ ಎನ್‌ಫೀಲ್ಡ್ ಅನೇಕ ಕಾರಣಗಳಿಗೆ ಉತ್ಪಾದನೆ ನಿಲ್ಲಿಸಿದ ಬಳಿಕ, ಭಾರತದಲ್ಲೇ ಮುಖ್ಯ ಉತ್ಪಾದನಾ ಕೇಂದ್ರವಾಗಿದೆ. ಈಗ ಇದರ ಮಾಲೀಕತ್ವ ಐಷರ್ ಕಂಪೆನಿಯದು. ರಾಯಲ್ ಎನ್‌ಫೀಲ್ಡ್ ಈಗ 5 ವಿವಿಧ ಮಾದರಿಯ ಬೈಕ್‌ಗಳನ್ನು ತಯಾರಿಸುತ್ತದೆ.

 

ರಾಯಲ್ ಎನ್‌ಫೀಲ್ಡ್ 350 ಬುಲೆಟ್, ರಾಯಲ್ ಎನ್‌ಫೀಲ್ಡ್ 350 ಬುಲೆಟ್ ಎಲೆಕ್ಟ್ರಾ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು 500, ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್.

ಹೊಸ ಅಧ್ಯಾಯದ ಆರಂಭ:

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಬೈಕ್ ಎನ್‌ಫೀಲ್ಡ್ ಬೈಕ್‌ಗಳ ಹೊಸ ಅಧ್ಯಾಯಕ್ಕೆ ಆರಂಭ ಹಾಡಿತು ಎನ್ನಬಹುದು. ಥಂಡರ್‌ಬರ್ಡ್ ಬೈಕ್ ರಾಯಲ್ ಎನ್‌ಫೀಲ್ಡ್‌ನ ಎಲ್ಲ ಬೈಕ್‌ಗಳ ಪೈಕಿ, ಮೊಟ್ಟ ಮೊದಲಾಗಿ ಹೊಸ ತಂತ್ರಜ್ಞಾನದ ಎಂಜಿನ್ ಇಟ್ಟುಕೊಂಡು ಹೊರಬಂದ ಬೈಕ್.ರಾಯಲ್ ಎನ್‌ಫೀಲ್ಡ್‌ನ ಎಲ್ಲ ಬೈಕ್‌ಗಳಲ್ಲಿ ಎಂಜಿನ್ ಹಾಗೂ ಗಿಯರ್ ಬಾಕ್ಸ್ ಬೇರೆ ಬೇರೆಯೇ ಇದ್ದವು. ಇದರಿಂದ ಶಕ್ತಿ ಕಡಿಮೆ ಆಗುವ ಜತೆಗೆ ಮೈಲೇಜ್ ಸಹ ಕಡಿಮೆ ಆಗುತ್ತಿತ್ತು. ಅಲ್ಲದೇ ಆಧುನಿಕ ಬೈಕ್‌ಗಳಿಗೆ ಇದ್ದಂತೆ ಗಿಯರ್ ಶಿಫ್ಟರ್‌ಗಳು ಇರಲಿಲ್ಲ.ಗಿಯರ್ ಶಿಫ್ಟರ್‌ಗಳು ಆಧುನಿಕ ಬೈಕ್‌ಗಳಲ್ಲಿ ಎಡಗಾಲಿನ ಬಳಿ ಇದ್ದರೆ, ಇದರಲ್ಲಿ ಬಲಗಾಲಿನ ಬಳಿ ಇರುತ್ತಿತ್ತು. ಬ್ರೇಕ್ ಬಲ ಭಾಗದಲ್ಲಿ ಇರುತ್ತಿತ್ತು. ಇದು ಕೊಂಚ ಕಿರಿ ಕಿರಿ ಉಂಟು ಮಾಡುತ್ತಿದ್ದ ಸಂಗತಿ. ಇದನ್ನು ಮೊಟ್ಟ ಮೊದಲಿಗೆ ಬದಲಿಸಿ ಸಂಪೂರ್ಣ ಹೊಸ ಎಂಜಿನ್ ಅನ್ನು ನೀಡಿದ್ದು ಈ ಥಂಡರ್‌ಬರ್ಡ್ ಬೈಕ್‌ಗೆ.ಇದರಲ್ಲಿ ಇದ್ದದ್ದು ಹೊಸ  ಯೂನಿಟ್ ಕನ್‌ಸ್ಟ್ರಕ್ಷನ್ ಎಂಜಿನ್. ಅಂದರೆ ಎಂಜಿನ್‌ನ ಹೆಡ್‌ನ ಜತೆಗೆ, ಗಿಯರ್ ಬಾಕ್ಸ್ ಸಹ ಸೇರಿರುತ್ತದೆ. ಎಲ್ಲ ಮಾಡರ್ನ್ ಬೈಕ್‌ಗಳಲ್ಲಿ ಇದೇ ಎಂಜಿನ್ ಇರುತ್ತದೆ. ಜತೆಗೆ ಎಲ್ಲ ಬೈಕ್‌ಗಳಂತೆ ಗಿಯರ್ ಎಡಕ್ಕೂ, ಬ್ರೇಕ್ ಬಲಕ್ಕೂ ಇದರಲ್ಲಿ ಬದಲಾದವು.350 ಸಿಸಿಯ ಈ ಬೈಕ್ ಅತ್ಯದ್ಭುತ ಯಶಸ್ಸು ಪಡೆದ ಬಳಿಕ, ಎಲ್ಲ ಬೈಕ್‌ಗಳಲ್ಲೂ ಈ ಯೂನಿಟ್ ಕನ್‌ಸ್ಟ್ರಕ್ಷನ್ ಎಂಜಿನ್‌ಗಳು ಕೂರಲ್ಪಟ್ಟವು. ಇದರ ಜತೆಗೇ ಇದ್ದ ರಾಯಲ್ ಎನ್‌ಫೀಲ್ಡ್ ಮೆಕಿಸ್ಮೋ ಬೈಕ್‌ನಲ್ಲಿ ಮಾತ್ರ 500 ಸಿಸಿಯ ಬೈಕ್ ಇತ್ತು. ನಂತರ ಹೊರಬಂದ ಕ್ಲಾಸಿಕ್ ಬೈಕ್‌ನಲ್ಲೂ 500 ಸಿಸಿ ಎಂಜಿನ್ ಅಳವಡಿಸಲಾಯಿತು.ಥಂಡರ್‌ಬರ್ಡ್ ಬೈಕ್‌ಗೂ 500 ಸಿಸಿ ಎಂಜಿನ್ ಕೂರಿಸುತ್ತಾರೆ ಎನ್ನುವ ಸುದ್ದಿ ಆಗಾಗ ಬರುತ್ತಲೇ ಇತ್ತು. 500 ಸಿಸಿ ಥಂಡರ್‌ಬರ್ಡ್‌ನ ಫೋಟೊಗಳು ಅಂತರ್ಜಾಲದಲ್ಲಿ ಆಗಾಗ ಹರಿದಾಡಿ ಸಂಚಲನ ಮೂಡಿಸಿದ್ದವು. ಆದರೆ ಇದೀಗ ಹೆಚ್ಚು ಸದ್ದುಗದ್ದಲ ಇಲ್ಲದೆ ಥಂಡರ್‌ಬರ್ಡ್ ಬೈಕ್ ತಣ್ಣಗೆ ಬಿಡುಗಡೆಯೇ ಆಗಿಬಿಟ್ಟಿದೆ.ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500 ಸಿಸಿ ಬೈಕ್ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಅದ್ಭುತ ಕೊಡುಗೆ ಎನ್ನಬಹುದು. ಏಕೆಂದರೆ ಅತ್ಯದ್ಭುತ ಶಕ್ತಿ ಸಾಮರ್ಥ್ಯದ, ಅಷ್ಟೇ ಮೈಲೇಜ್ ನೀಡುವ ಬೈಕ್ ಇದು. ಲೀಟರ್ ಪೆಟ್ರೋಲ್‌ಗೆ ಸುಮಾರು 25 ಕಿಲೋಮೀಟರ್ ದೂರವನ್ನು ಇದು ಕ್ರಮಿಸಬಲ್ಲದು. 350 ಸಿಸಿಯ ಥಂಡರ್‌ಬರ್ಡ್ ಬೈಕ್ 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

 

ಆದರೆ ಥಂಡರ್‌ಬರ್ಡ್ ಬೈಕ್ ಮಾತ್ರ ಅತ್ಯದ್ಭುತ ವೈಶಿಷ್ಟ್ಯಗಳೊಂದಿಗೆ ಕಾಲಿಟ್ಟಿದೆ.

ಥಂಡರ್‌ಬರ್ಡ್ 350 ಸಿಸಿ ಬೈಕ್‌ನಲ್ಲಿ ಇರದಿದ್ದ ಫ್ಯೂಯಲ್ ಎಂಜೆಕ್ಷನ್ ಸಿಸ್ಟಂ ಇಲ್ಲಿದೆ. ಸಾಂಪ್ರದಾಯಿಕ ಕಾರ್ಬುರೇಟರ್‌ನ ಜಾಗದಲ್ಲಿ ಕಂಪ್ಯೂಟರ್ ನಿಯಂತ್ರಿಕ ಇಂಧನ ನಿಯಂತ್ರಕ ಇದೆ. ಹಾಗಾಗಿ ಅತ್ಯುತ್ತಮ ಇಂಧನ ನಿರ್ವಹಣೆ ಸಿಗಲಿದೆ.ಕೊಂಚವೂ ಏರಿಳಿತ ಇಲ್ಲದ, ನಯವಾದ ಚಾಲನೆ ಸವಾರನಿಗೆ ಸಿಗುತ್ತದೆ. ಜತೆಗೆ ತಂತ್ರಜ್ಞಾನದ ಉತ್ತಮ ಬಳಕೆ ಆಗಿದೆ. ಹೇಗೆಂದರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲೇ ಮೊಟ್ಟ ಮೊದಲ ಬಾರಿಗೆ ಎಲ್‌ಸಿಡಿ ಪರದೆ ಉಳ್ಳ ಮೀಟರ್ ಸಿಸ್ಟಂ ಅಳವಡಿಸಿಕೊಳ್ಳಲಾಗಿದೆ.ಇದರಲ್ಲಿ ಎಂಜಿನ್‌ನ ವೇಗ, ವಾಹನದ ವೇಗ, ತಾಪಮಾನಗಳು ಕಾಣುತ್ತವೆ. ಇದರ ಜತೆಗೆ, ಸಾಂಪ್ರದಾಯಿಕ ಅನಲಾಗ್ ಮೀಟರ್ ಸಹ ಇದ್ದು, ಮುಳ್ಳುಗಳು ವೇಗ ತೋರಿಸುತ್ತವೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಮೈಲ್ ಪರ್ ಹವರ್ (ಗಂಟೆಗೆ ವೇಗ ಮೈಲಿಗಳಲ್ಲಿ) ಹಾಗೂ ಕಿಲೋಮೀಟರ್ ಪರ್ ಹವರ್ ಎರಡನ್ನೂ ಸಮ್ಮಿಶ್ರಣ ಮಾಡಿ ಮೀಟರ್ ಕನ್ಸೋಲ್ ಮಾಡಲಾಗಿದೆ. ಹಾಗಾಗಿ ಎರಡೂ ಮಾನದಂಡಗಳಲ್ಲಿ ವೇಗವನ್ನು ಅಳೆಯುವ ಅವಕಾಶ ಸವಾರನಿಗೆ ಸಿಗುತ್ತದೆ.ಬೈಕ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಎಚ್‌ಐಡಿ (ಹೈ ಇಂಟೆನ್ಸಿಟಿ ಡಿಸ್‌ಚಾರ್ಜ್) ಕ್ಸೆನಾನ್ ಲೈಟ್ ಮಾದರಿಯ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ನೀಡಲಾಗಿದೆ. ನೋಡಲು ಆಚೆಯಿಂದ ಸಾಮಾನ್ಯ ದೀಪದಂತೆ ಕಂಡರೂ, ಈ ವ್ಯವಸ್ಥೆ ಅತ್ಯುತ್ತಮ ಬೆಳಕನ್ನು ನೀಡುತ್ತದೆ.ಮೊಟ್ಟ ಮೊದಲ ಬಾರಿಗೆ ಚಪ್ಪಟೆ ಮಾದರಿಯ ರೆಕ್ಟಾಂಗ್ಯುಲರ್ ಸ್ವಿಂಗ್ ಆರ್ಮ್ (ಹಿಂಬದಿಯ ಚಕ್ರ ಕೂರುವ ಸಾಧನ) ಅಳವಡಿಸಲಾಗಿದ್ದು, ಉತ್ತಮ ರಸ್ತೆ ಹಿಡಿತ ಇದರಿಂದ ಸಿಗುತ್ತದೆ. ಸ್ಪ್ಲಿಟ್ ಸೀಟ್ (ಎರಡು ಆಸನ) ಗಳಿದ್ದು, ಹಿಂಬದಿಯದನ್ನು ಬಿಚ್ಚಿ ಹಾಕಿದರೆ ಲಗ್ಗೇಜ್ ಹಾಕಿಕೊಳ್ಳಲು ಸುಲಭವಾಗುತ್ತದೆ.

 

ಗ್ಲಾಸ್ (ಹೊಳಪುಳ್ಳ) ಹಾಗೂ ಮ್ಯಾಟ್ (ಹೊಳಪಿಲ್ಲದ) ಬಣ್ಣಗಳ ಆಯ್ಕೆ ಬೈಕ್‌ಗೆ ಇದೆ. ಹಿಂಬದಿಯಲ್ಲಿ ಸಂಪೂರ್ಣ ಎಲ್‌ಇಡಿ (ಲೈಟ್ ಎಮಿಟಿಂಗ್ ಡಯಾಡ್) ದೀಪವಿದ್ದು, ಎಂಜಿನ್ ಸಂಪೂರ್ಣ ಕಪ್ಪು ಬಣ್ಣದಿಂದ ಆವೃತವಾಗಿದೆ. ಈ ಬೈಕ್‌ನ ಬೆಲೆಯೂ ಅಷ್ಟೇ ರೋಮಾಂಚನಕಾರಿಯಾಗಿದೆ. ಇದರ ಬೆಲೆ 1,82,000 ರೂಪಾಯಿಗಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry