ಬುಧವಾರ, ಅಕ್ಟೋಬರ್ 23, 2019
23 °C

ಥಣಿಸಂದ್ರ ಭೂ ಹಗರಣ: ಎಚ್‌ಡಿಕೆ ವಿರುದ್ಧ ಎಫ್‌ಐಆರ್

Published:
Updated:

ಬೆಂಗಳೂರು: ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ 3.08 ಎಕರೆ ಭೂಮಿ ಯನ್ನು ಕಾನೂನುಬಾಹಿರವಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚನ್ನಿಗಪ್ಪ ಮತ್ತು ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ಮೊಕದ್ದಮೆ ದಾಖಲಿಸಿದ್ದಾರೆ.ಬೆಂಗಳೂರಿನ ಕೆ.ಆರ್.ಪುರ ಬಳಿಯ ಥಣಿಸಂದ್ರದಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡು, ಬಡಾವಣೆ ನಿರ್ಮಿಸಿ, ನಿವೇಶನ ಹಂಚಿಕೆ ಮಾಡಿದ್ದ ಭೂಮಿಯನ್ನು ಕುಮಾರಸ್ವಾಮಿ ಅವರು ಅಕ್ರಮವಾಗಿ ಭೂಸ್ವಾಧೀನದಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯ ಮಹದೇವಸ್ವಾಮಿ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಬೆಂಗಳೂರು ನಗರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ, ದೂರಿನಲ್ಲಿರುವ ಆರೋಪಗಳ ಕುರಿತು ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.ಥಣಿಸಂದ್ರ ಗ್ರಾಮದ ಸರ್ವೆ ನಂಬರ್ `87/4-ಬಿ~ಯಲ್ಲಿನ ಭೂಮಿಯನ್ನು ಸಂಪೂರ್ಣ ವಾಗಿ ಸ್ವಾಧೀನಪಡಿಸಿಕೊಂಡ ಬಿಡಿಎ ಅಲ್ಲಿ 57 ನಿವೇಶನ ನಿರ್ಮಿಸಿತ್ತು.  38 ನಿವೇಶನಗಳ ಮಾರಾಟ ಪ್ರಕ್ರಿಯೆಯೂ ಪೂರ್ಣಗೊಂಡಿತ್ತು. ಮೂಲ ಮಾಲೀಕರು ಯಾವುದೇ ಅರ್ಜಿ ಸಲ್ಲಿಸದಿದ್ದರೂ, ಆಗಿನ ಅರಣ್ಯ ಸಚಿವ ಚನ್ನಿಗಪ್ಪ ಅವರು ಬರೆದ ಪತ್ರ ಆಧರಿಸಿ ಕುಮಾರಸ್ವಾಮಿ ಅವರು ಆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಶುಕ್ರವಾರ ಮಧ್ಯಾಹ್ನ ನ್ಯಾಯಾಲಯದ ಆದೇಶ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ಅವರ ಕೈಸೇರಿತ್ತು. ಅದನ್ನು ಅಧ್ಯಯನ ಮಾಡಿದ ಅವರು, ನ್ಯಾಯಾಲಯದ ಆದೇಶದಂತೆ ಕುಮಾರಸ್ವಾಮಿ, ಚನ್ನಿಗಪ್ಪ, ಭೂಮಿಯ ಮೂಲ ಮಾಲೀಕರಾದ ಎ.ವಿ. ರವಿಪ್ರಕಾಶ್ ಮತ್ತು ಎ.ವಿ.ಶ್ರೀರಾಂ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದರು. ಇದರೊಂದಿಗೆ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಮೊಕದ್ದಮೆಗಳ ಸಂಖ್ಯೆ ಎರಡಕ್ಕೇರಿದೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಕಲಂ 13(1)ಡಿ, 13(2), ಭಾರತೀಯ ದಂಡ ಸಂಹಿತೆಯ ಕಲಂ 120-ಬಿ, 463, 468, 471, 478, ಕರ್ನಾಟಕ ಭೂ ಪರಭಾರೆ ನಿಯಂತ್ರಣ ಕಾಯ್ದೆಯ ಕಲಂ 3 ಮತ್ತು 4ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.  ಲೋಕಾಯುಕ್ತ ಪೊಲೀಸರು ದೂರಿನಲ್ಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಫೆಬ್ರುವರಿ 6ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)