ಥಳಿಸಿ ದೌರ್ಜನ್ಯ,ಪರಿಹಾರಕ್ಕೆ ಆದೇಶ

7

ಥಳಿಸಿ ದೌರ್ಜನ್ಯ,ಪರಿಹಾರಕ್ಕೆ ಆದೇಶ

Published:
Updated:

ಬೆಂಗಳೂರು: ಬಾಲಕಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಹೆಸರಿನಲ್ಲಿ ಆರೋಪಿಯೊಬ್ಬರನ್ನು ತೀವ್ರವಾಗಿ ಥಳಿಸಿ ದೌರ್ಜನ್ಯ ಎಸಗಿದ ಆರೋಪ ಹೊತ್ತ ರಾಮಮೂರ್ತಿನಗರ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು ನಗರ ಪೊಲೀಸ್ ಕಮಿಷನರ್‌ಗೆ ಆದೇಶಿಸಿದೆ.ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೂರು ತಿಂಗಳ ಒಳಗೆ ವರದಿ ನೀಡುವಂತೆ ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ನಿರ್ದೇಶಿಸಿದ್ದಾರೆ.ದೌರ್ಜನ್ಯ ಎಸಗಿರುವ ಆರೋಪ ಹೊತ್ತ ಪಿಎಸ್‌ಐ ಬಿ.ರಾಮಮೂರ್ತಿ, ಮುಖ್ಯ ಕಾನ್‌ಸ್ಟೇಬಲ್‌ಗಳಾದ ಟಿ.ಡಿ.ಜಯರಾಮ್, ಎಸ್.ಕಂಠಿ, ಎಚ್. ರಾಮಚಂದ್ರಪ್ಪ ಮತ್ತು ವೆಂಕಟೇಶ್ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿರುವ ಆಯೋಗವು, ಈ ಹಣವನ್ನು ಪರಿಹಾರದ ರೂಪದಲ್ಲಿ ದೂರುದಾರ ವೆಂಕಟಾಚಲ ಅವರಿಗೆ ನೀಡುವಂತೆ ಆದೇಶಿಸಿದೆ.

 

ದೌರ್ಜನ್ಯದ ಕುರಿತು ವೆಂಕಟಾಚಲ ಆಯೋಗದಲ್ಲಿ ದೂರು ಸಲ್ಲಿಸಿದ್ದರು. `ಆರೋಗ್ಯರಾಜ್ ಎನ್ನುವವರು ತಮ್ಮ ಮಗಳ ನಾಪತ್ತೆ ಪ್ರಕರಣವನ್ನು ಠಾಣೆಯಲ್ಲಿ ದಾಖಲು ಮಾಡಿದ್ದರು. ಅದರ ವಿಚಾರಣೆಗೆಂದು ನನ್ನನ್ನು ಕರೆದು ಅಕ್ರಮ ಬಂಧನದಲ್ಲಿ ಇಡಲಾಗಿತ್ತು. ಅಷ್ಟೇ ಅಲ್ಲದೇ ಚೆನ್ನಾಗಿ ಥಳಿಸಿ ಹೆಬ್ಬೆರಳಿನ ಮೂಳೆ ಮುರಿಯಲಾಗಿದೆ~ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಆಯೋಗದ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ್ದ ಐಜಿಪಿಯವರು ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಇದೆ ಎಂದು ವರದಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry