ಬುಧವಾರ, ಜೂನ್ 16, 2021
23 °C

ಥಳುಕು ಬಳುಕು: ಒಂದೇ ಬಿಂದುವಿನಿಂದ ಹೊರಟ ಸಹೋದರರು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

ತಮ್ಮ ಪುಂಡ. ಅಣ್ಣ ಗಂಭೀರ. ಮುಘಲ್‌ಸರಾಯ್‌ನ ಅಜ್ಜಿ ಮನೆಗೆ ಹೋಗುವುದೆಂದರೆ ಇಬ್ಬರಿಗೂ ಸಂಭ್ರಮ. ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪ ಉತ್ತರ ಪ್ರದೇಶದಲ್ಲಿ ಊರಿಂದೂರಿಗೆ ವರ್ಗಾವಣೆಯಾಗುವುದು ಮಾಮೂಲಾಗಿತ್ತು.

 

ರಜೆಯಲ್ಲಿ ಕಾಲ ಕಳೆದು, ಆರೈಕೆ ಮಾಡಿಸಿಕೊಂಡು ಹೊರಡುವಾಗ ಅಜ್ಜಿ ಬಿಲ್ಲೆ ಕಾಸನ್ನು ಕೊಡುತ್ತಿದ್ದಳು. ಅಣ್ಣ ಅದನ್ನು ಕಿಸೆಯಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತಿದ್ದ. ತಮ್ಮ ಇನ್ನೂ ಜಾಣ. ಅಜ್ಜಿಯನ್ನು ಪುಸಲಾಯಿಸಿ ಅಣ್ಣನಿಗಿಂತ ಒಂದು ಬಿಲ್ಲೆ ಹೆಚ್ಚೇ ಗಿಟ್ಟಿಸಿಕೊಳ್ಳುತ್ತಿದ್ದ.ಅಣ್ಣನಿಗೆ ಸಿನಿಮಾ ಅಂದರೆ ಹುಚ್ಚು. ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ನಟನೆಯ ಚಿತ್ರಗಳನ್ನು ಬಿಟ್ಟರೆ ಅಪ್ಪ-ಅಮ್ಮ ಥಿಯೇಟರ್ ಕಡೆಗೆ ಮುಖ ಮಾಡುತ್ತಿರಲಿಲ್ಲ. ಮಕ್ಕಳು ಓದುವುದನ್ನು ನಿರ್ಲಕ್ಷಿಸಿಯಾವು ಎಂದುಕೊಂಡು ಮನೆಗೆ ಟೀವಿಯನ್ನು ಕೂಡ ತಂದಿರಲಿಲ್ಲ. ಪಕ್ಕದ ಮನೆಗೆ ಹೋಗಿ ಚಿತ್ರಹಾರ್ ನೋಡುವುದು ಅಣ್ಣನ ಗೀಳು. ತಮ್ಮ ಕೂಡ ಅಣ್ಣನ ಹಿಂದೆ.ಮನೆಗೆ ಬರುತ್ತಿದ್ದ ಪೇಪರ್‌ಗಳಲ್ಲಿ ಸಿನಿಮಾ ಜಾಹೀರಾತುಗಳನ್ನು ಕಂಡರೆ ಅಣ್ಣ ಕಣ್ಣರಳಿಸಿ ನೋಡುತ್ತಾ ಕೂರುತ್ತಿದ್ದ. ಎಲ್ಲಾ ಜಾಹೀರಾತು ಪೋಸ್ಟರ್‌ಗಳನ್ನು ಕತ್ತರಿಸಿ, ಅವನ್ನೆಲ್ಲಾ ತನ್ನ ಪರಿಕಲ್ಪನೆಗೆ ತಕ್ಕಂತೆ ಜೋಡಿಸಿಟ್ಟು ತಮ್ಮನಿಗೆ ಹೊಸತೇ ಸಿನಿಮಾ ಕಥೆ ಹೇಳುತ್ತಿದ್ದ. ಆ ಕಥೆಯಲ್ಲಿ ಗುರುದತ್ ಕಾಲದ ನಟ-ನಟಿಯರಿಂದ ಹಿಡಿದು ಅಮಿತಾಬ್ ಕಾಲದವರೆಗೆ ಎಲ್ಲರೂ ಇರುತ್ತಿದ್ದರು. ತಮ್ಮ ಅದು ನಿಜವಾದ ಕಥೆಯೇ ಇರಬೇಕೆಂದು ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದ.ಅಣ್ಣ- ತಮ್ಮ ಇಬ್ಬರಿಗೂ ಎರಡೇ ವರ್ಷದ ಅಂತರ. ಇಂಗ್ಲಿಷ್ ಓದಿನಲ್ಲಿ ಮುಂದಿದ್ದ ಅಣ್ಣ ಲೆಕ್ಕದಲ್ಲಿ ಅಷ್ಟಕ್ಕಷ್ಟೆ. ತಮ್ಮನಿಗೋ ಗಣಿತದಲ್ಲಿ ನೂರಕ್ಕೆ ನೂರು. ಅಂಕ ತೆಗೆಯುವಂತೆಯೇ ಲೆಕ್ಕಾಚಾರಸ್ಥನೂ ಆಗಿದ್ದ ತಮ್ಮ ಅಣ್ಣನನ್ನು ಬೇಕೆಂದೇ ಕಿಚಾಯಿಸುತ್ತಿದ್ದ. ಆಗ ಅಣ್ಣನಿಗೆ ಕೆಂಡಾಮಂಡಲ ಕೋಪ. ಐದೂವರೆ ವರ್ಷದವನಿದ್ದಾಗ ಅಣ್ಣ ಒಮ್ಮೆ ಚಾಕು ಹಿಡಿದುಕೊಂಡು ತನ್ನ ತಮ್ಮನನ್ನು ಇರಿಯಲು ಅಟ್ಟಿಸಿಕೊಂಡು ಹೋಗಿದ್ದ.

 

ಬೀದಿಯವರೆಲ್ಲಾ ಅದನ್ನು ನೋಡಿ ದಂಗುಬಡಿದುಹೋಗಿದ್ದರು. ಅಪ್ಪ-ಅಮ್ಮನಿಗೆ ಇಬ್ಬರೂ ಒಂದಿನ ಏನೋ ಮಾಡಿಕೊಳ್ಳುತ್ತಾರೆಂಬ ಆತಂಕ ಶುರುವಾಯಿತು. ಇಬ್ಬರೂ ಮಕ್ಕಳನ್ನು ಬೇರೆ ಬೇರೆ ಊರಿನ ಶಾಲೆಗಳಿಗೆ ಕಳುಹಿಸಿದರು. ಕಾಲೇಜು ಮೆಟ್ಟಿಲು ಹತ್ತುವ ಹೊತ್ತಿಗೆ ಇಬ್ಬರೂ ಒಂದೇ ರೋಡಿಗೆ ಬಂದರು.ಅಣ್ಣನ ನಾಟಕದ ಹುಚ್ಚನ್ನು ನೋಡಿ ತಮ್ಮ ಕೂಡ ಶೇಕ್ಸ್‌ಪಿಯರನ `ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್~ ಹಿಂದಿ ಅನುವಾದದ ನಾಟಕ ಆಡಲೆಂದು ಹೋದ. ಬಾಲವಲ್ಲಾಡಿಸುವ ನಾಯಿಯ ಪಾತ್ರ ಸಿಕ್ಕಿತು. ಮೂರು ದಿನ ತಾಲೀಮಿಗೆ ಹೋದದ್ದಷ್ಟೆ; ಆ ನಾಟಕಕ್ಕೆ ಎಳ್ಳುನೀರು ಬಿಟ್ಟ.ಓದಿನ ನಡುವೆಯೇ ಅಣ್ಣ ದೆಹಲಿಯಲ್ಲಿ ನಡೆಯುತ್ತಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆಂದು ಹೋದ. ತಾನು ಪೋಣಿಸಿದ್ದ ಪೋಸ್ಟರ್ ಕಥಾನಕಗಳು ಅಲ್ಲಿ ಜೀವತಳೆದಂತೆ ಕಂಡವು. ತಾನೇ ಯಾಕೆ ಒಂದು ಸಿನಿಮಾ ಮಾಡಬಾರದು ಎಂದುಕೊಂಡ. `ಪಾಂಚ್~ ಎಂಬ ಸಿನಿಮಾ ನಿರ್ದೇಶಿಸಿದನಾದರೂ ಅದು ತೆರೆಕಾಣಲೇ ಇಲ್ಲ. ಅಣ್ಣನ ಜೊತೆಯೇ ಓಡಾಡುತ್ತಿದ್ದರೂ ತಮ್ಮ ಕೂಡ ಸುಮ್ಮನಿರಲಿಲ್ಲ. ಅವನು ಧಾರಾವಾಹಿ ಲೋಕದಲ್ಲಿ ಒಂದು ಕೈನೋಡೋಣ ಎಂದು ನಿರ್ಧರಿಸಿದ.`ತ್ರಿಕಾಲ್~, `ಡರ್~, `ರಾಜ್‌ನೀತಿ~ ಧಾರಾವಾಹಿಗಳಿಗೆ ಅವನೇ ಆಕ್ಷನ್- ಕಟ್ ಹೇಳಿದ್ದು. ಅಣ್ಣನ ಮೇಲೆ ಪ್ರೀತಿ ಎಷ್ಟಿತ್ತೆಂದರೆ, ಆತ ಕೆಲಸ ಮಾಡದೇಹೋದರೂ `ಡರ್~ ಧಾರಾವಾಹಿಯ ಶೀರ್ಷಿಕೆ ಪಟ್ಟಿಯಲ್ಲಿ ಅವನ ಹೆಸರು ಬರೆಸಿದ. ಭಿನ್ನಾಭಿಪ್ರಾಯಗಳೇನೇ ಇದ್ದರೂ ಅಣ್ಣ ಗುರು ಎಂದೇ ತಮ್ಮನ ಭಾವನೆ.ಅತ್ತ ಅಣ್ಣ `ಸತ್ಯ~ ಚಿತ್ರಕ್ಕೆ ಸಂಭಾಷಣೆ ಬರೆದು ಹೆಸರು ಮಾಡಿದ. `ಬ್ಲ್ಯಾಕ್ ಫ್ರೈಡೇ~, `ದೇವ್ ಡಿ~, `ಗುಲಾಲ್~, `ದಟ್ ಗರ್ಲ್ ಇನ್ ಯೆಲ್ಲೋ ಬೂಟ್~ ಚಿತ್ರಗಳನ್ನು ನಿರ್ದೇಶಿಸಿ ಶಹಬ್ಬಾಸ್ ಎನಿಸಿಕೊಂಡ. ಹತ್ತರಲ್ಲಿ ಹನ್ನೊಂದನೆಯ ನಿರ್ದೇಶಕ ಎಂಬ ಅಗ್ಗಳಿಕೆ ಪಡೆದದ್ದು ವಿಶೇಷ.`ಇಂಥ ಅಣ್ಣನ ತಮ್ಮ~ ಎಂದು ಬಲ್ಲವರಿಂದ ಕರೆಸಿಕೊಳ್ಳತೊಡಗಿದ್ದೇ ತಮ್ಮನಿಗೆ ಬೌದ್ಧಿಕ ಸಿಟ್ಟು ಬಂತು. ತಾನೂ ಕೂತು ಒಂದು ಮಸಾಲೆ ಚಿತ್ರಕಥೆ ಬರೆದ. ಹಟ ತೊಟ್ಟು ಸಲ್ಮಾನ್ ಖಾನ್ ಡೇಟ್ಸ್ ಪಡೆದುಕೊಂಡ. ಸಿನಿಮಾ ಸೆಟ್ಟೇರಿತು. ಎಲ್ಲೆಲ್ಲೂ ಜಯಭೇರಿ.ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿ. ಮೇಲಾಗಿ ಒಂದು ರಾಷ್ಟ್ರಪ್ರಶಸ್ತಿ. ಖುದ್ದು ಅಣ್ಣನೇ ತಮ್ಮನ ಬೆಳವಣಿಗೆ ಕಂಡು ಶಹಬ್ಬಾಸ್ ಎಂದದ್ದೂ ಆಯಿತು.ಅಣ್ಣನದ್ದು ಅಂತರ್ಮುಖಿ ವ್ಯಕ್ತಿತ್ವ. ತಮ್ಮ ವಾಚಾಳಿ; ಮುಖಕ್ಕೆ ಹೊಡೆದಂತೆ ಮಾತಾಡುವವರ ಪೈಕಿ. ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸುವುದಿಲ್ಲ ಎಂಬ ಗುಲ್ಲನ್ನು ಚಿಂದಿ ಮಾಡಲೇ ಎಂಬಂತೆ ಸುದ್ದಿಮಿತ್ರರನ್ನು ಕರೆದುಕೊಂಡು ಐಷಾರಾಮಿ ಹೋಟೆಲ್‌ನಲ್ಲಿ ಒಟ್ಟಾಗಿ ಕುಡಿದು ಸುದ್ದಿ ಬರೆಯಿರಿ ಎಂದವರು.ಇಬ್ಬರ ಬದುಕೂ ಭಿನ್ನ. ಇಬ್ಬರ ಚಿತ್ರಗಳು ಒಂದರಂತೆ ಒಂದಿಲ್ಲ. ಸ್ವಭಾವವಂತೂ ತರಹೇವಾರಿ. ಒಂದೇ ದಿನ ಇಬ್ಬರೂ ಮದುವೆ ಆರಕ್ಷತೆಯನ್ನೂ ಮಾಡಿಕೊಂಡರು. ಒಂದೊಮ್ಮೆ ಒಂದೇ ಹುಡುಗಿಗೆ ಲೈನ್ ಹೊಡೆದು ಜಗಳವಾಡಿದ್ದೂ ಆಗಿತ್ತು.ಇದು ಯಾವುದೋ ಸಿನಿಮಾ ಕಥೆಯಲ್ಲ. ಬಾಲಿವುಡ್‌ನ ಇಬ್ಬರು ಪ್ರತಿಭಾವಂತ ಅಣ್ಣ-ತಮ್ಮನ ವಾಸ್ತವ ಕಥೆ. ಅಣ್ಣನ ಹೆಸರು ಅನುರಾಗ್ ಕಶ್ಯಪ್. ತಮ್ಮ ಅಭಿನವ್ ಕಶ್ಯಪ್. ಅಪ್ಪ-ಅಮ್ಮ ಈಗ ಮೆಚ್ಚಿಕೊಳ್ಳುವುದು ಚಿಕ್ಕಮಗನ ಚಿತ್ರವನ್ನು. ದೊಡ್ಡ ಮಗ `ನಿಮಗೆ ಈ ಜನ್ಮಕ್ಕೆ ಬುದ್ಧಿ ಬರೋಲ್ಲ~ ಎಂದು ಅದೇ ಅಪ್ಪ-ಅಮ್ಮನಿಗೆ ಗೇಲಿ ಮಾಡುತ್ತಾನೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.