ಸೋಮವಾರ, ಜನವರಿ 20, 2020
27 °C

ಥಳುಕು ಬಳುಕು: ಗಾಸಿಪ್ ಮೋಹದ ಬಲೆಯಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರ್ಯ ಕಣ್ಣುಬಿಟ್ಟು ಅದಾಗಲೇ ಗಂಟೆಗಳಾಗಿದ್ದವು. ವಿಶಾಲ ಮಂಚದ ಮೇಲೆ ಮಲಗಿದ್ದ ಸೋನಾಕ್ಷಿ ಸಿನ್ಹ ಕಣ್ಣು ಏಳಲೋ ಬೇಡವೋ ಎಂಬ ಉದಾಸೀನದಿಂದಲೇ ಬಲಗಡೆ ತಿರುಗಿ ಮೇಲೆದ್ದು, ಇಷ್ಟದೇವರ ನೆನೆಯುತ್ತಾ ಕಣ್ತೆರೆದರು.

 

ಟೀಪಾಯಿಯ ಮೇಲಿದ್ದ ದಿನಪತ್ರಿಕೆಯಲ್ಲಿ ತಮ್ಮದೇ ಫೋಟೋ. ಅದರಲ್ಲೊಂದು ಗಾಸಿಪ್. ಅಡುಗೆಯವರಿಗೆ ಫೋನ್ ಮಾಡಿ ಕಾಫಿ ತರಿಸಿಕೊಂಡ ಸೋನಾಕ್ಷಿ, ಅದನ್ನು ಗುಟುಕರಿಸುತ್ತಲೇ ತಮ್ಮ ಬಗ್ಗೆ ಪ್ರಕಟವಾಗಿದ್ದ ಗಾಸಿಪ್ ಓದತೊಡಗಿದರು.`ಜೋಕರ್~ ಚಿತ್ರದ ಸೆಟ್ ಹಾಕಿದ ಜಾಗವು ಕಾರ್ ಪಾರ್ಕಿಂಗ್‌ನಿಂದ ಸಾಕಷ್ಟು ದೂರ ಇತ್ತು. ಅಲ್ಲಿಂದ ಸೆಟ್‌ಗೆ ಕೊಂಡೊಯ್ಯಲೆಂದೇ ಸೋನಾಕ್ಷಿ ತಮ್ಮದೇ ಬೈಕ್ ವ್ಯವಸ್ಥೆ ಮಾಡಿಕೊಂಡಿಕೊಂಡಿದ್ದಾರೆಂಬುದು ಗಾಸಿಪ್‌ನ ತಿರುಳು.ಅದನ್ನು ಓದಿ ಸೋನಾಕ್ಷಿಗೆ ನಗು ಬಂತು. ಸ್ವಲ್ಪ ಹೊತ್ತಿಗೇ ಅಪ್ಪ ಶತ್ರುಘ್ನ ಸಿನ್ಹ ಮಗಳ ನಗು ಕಂಡು ಪ್ರಶ್ನೆ ಎತ್ತಿದರು- `ಯಾಕೆ ಮಗಳೇ; ಹಾಸಿಗೆ ಮೇಲೆ ಕೂತು ನಗುವಂಥ ಏನನ್ನು ಕಂಡೆ?~. ಅಪ್ಪ ತನ್ನನ್ನು ಕಿಚಾಯಿಸುತ್ತಿದ್ದಾರೆಂಬುದನ್ನು ಅವರ ಧ್ವನಿಯಿಂದಲೇ ಖಾತರಿಪಡಿಸಿಕೊಂಡ ಸೋನಾಕ್ಷಿ, ಗಾಸಿಪ್ ತೋರಿಸಿ ಮತ್ತೆ ಜೋರಾಗಿ ನಕ್ಕರು. ಅದರಲ್ಲಿ ನಗುವಂಥದ್ದೇನಿದೆ ಎಂದು ಅಪ್ಪ ಮತ್ತೊಮ್ಮೆ ಕೇಳಲಾಗಿ, `ಅಕ್ಷಯ್‌ಕುಮಾರ್ ಆ ಬೈಕ್ ಓಡಿಸುತ್ತಾರೆ.ಹಿಂದೆ ನಾನು ಕೂತಿರುತ್ತೇನೆ ಎಂದು ಬರೆದಿದ್ದರೆ ಗಾಸಿಪ್ ಪರಿಪೂರ್ಣವಾಗುತ್ತಿತ್ತು. ಈ ಜನರಿಗೆ ಸರಿಯಾಗಿ ಒಂದು ಗಾಸಿಪ್ ಕೂಡ ಬರೆಯೋಕೆ ಬರೊಲ್ಲ~. ಸೋನಾಕ್ಷಿ ಪ್ರತಿಕ್ರಿಯೆ ಕಂಡು ಶತ್ರುಘ್ನ ಸಿನ್ಹ ನಗದೇ ಇರಲು ಆಗಲಿಲ್ಲ.ಸೋನಾಕ್ಷಿ ಗಾಸಿಪ್ಪನ್ನು ಈ ಪರಿಯಾಗಿ ಇಷ್ಟಪಟ್ಟದ್ದು ಕಳೆದ ವರ್ಷ ಅವರ ಒಂದೂ ಚಿತ್ರ ತೆರೆಕಾಣಲಿಲ್ಲ ಎಂದಲ್ಲ; ಚಾಲ್ತಿಯಲ್ಲಿರಲು ಚಾಲಾಕಿತನವೂ ಬೇಕೆಂಬ ಸತ್ಯದ ಅರಿವಿನಿಂದ.ಬದುಕು ತನ್ನಿಷ್ಟದಂತೆ ಸಾಗಲಿ ಎಂದು ಬಿಟ್ಟುಕೊಡುತ್ತಲೇ ಸಿಗುವ ಅವಕಾಶವನ್ನು ಗಕ್ಕನೆ ಹಿಡಿದುಕೊಳ್ಳುತ್ತಿರುವ ಸೋನಾಕ್ಷಿ ಅಪ್ಪನಂತಲ್ಲ. ಬರಬರುತ್ತಾ ಸಣ್ಣಗಾಗಿರುವ ಅವರು `ದಬಂಗ್~ ತೆರೆಕಂಡ ನಂತರ ಖಾಲಿ ಕೂತ ದಿನವೇ ಇಲ್ಲ.`ದಬಂಗ್~ ತೆರೆಕಾಣುವವರೆಗೆ ಬೇರೆ ಯಾವ ಚಿತ್ರಕ್ಕೂ ಸಹಿ ಹಾಕಕೂಡದೆಂಬ ಕರಾರಿಗೆ ಸೋನಾಕ್ಷಿ ಒಳಪಟ್ಟಿದ್ದರು. ಆಮೇಲೆ `ಕಿಕ್~, `ರೌಡಿ ರಾಥೋಡ್~ ಹಾಗೂ `ರೇಸ್ 2~ ಚಿತ್ರದ ಆಫರ್‌ಗಳು ಬಂದವು. ಡೇಟ್ಸ್ ಹೊಂದಿಸುವ ಕಷ್ಟದಿಂದಾಗಿ `ರೇಸ್ 2~ ಗಿಟ್ಟಲಿಲ್ಲ.

 

ಈಗ `ಜೋಕರ್~ ಚಿತ್ರೀಕರಣ ಮುಗಿಸಿ `ಸನ್ ಆಫ್ ಸರ್ದಾರ್~ ಎಂಬ ಇನ್ನೊಂದು ವಿಚಿತ್ರ ಹೆಸರಿನ ಸಿನಿಮಾದಲ್ಲಿ ನಟಿಸಲು ಬಣ್ಣಹಚ್ಚುತ್ತಿದ್ದಾರೆ. `ಜೋಕರ್~ನಲ್ಲಿ ಅನಿವಾಸಿ ಭಾರತೀಯ ಪಾತ್ರ. `ರೌಡಿ ರಾಥೋಡ್~ನಲ್ಲಿ ಪಾಟ್ನಾ ಹುಡುಗಿ, `ಸನ್ ಆಫ್ ಸರ್ದಾರ್~ನಲ್ಲಿ ಪಂಜಾಬಿ ಲಲನೆ. ಏಕಕಾಲದಲ್ಲಿ ಹೀಗೆ ಮೂರು ಪಾತ್ರಗಳಿಗೆ ಬಣ್ಣಹಾಕಿದ ಅನುಭವ ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಕ್ಕಿದ್ದು ತಮ್ಮ ಅದೃಷ್ಟ ಎಂದೇ ಸೋನಾಕ್ಷಿ ಭಾವಿಸಿದ್ದಾರೆ.ವ್ಯಾಯಾಮ, ಡಯಟ್ ಎರಡನ್ನೂ ನಿತ್ಯ ಬದುಕಾಗಿಸಿಕೊಂಡ ಸೋನಾಕ್ಷಿ ಪಾರ್ಟಿಗಳಿಗೆ ಕರೆದರೆ ಹೋಗಲು ಸಂಭಾವನೆ ಪಡೆಯುವ ಮಟ್ಟಕ್ಕೂ ಬೆಳೆದಿದ್ದಾರೆ. ಹೊಸ ಚಿತ್ರ `ಲೂಟೇರಾ~ ಚಿತ್ರೀಕರಣಕ್ಕೆ ಇತ್ತೀಚೆಗಷ್ಟೇ ಚಾಲನೆ ಸಿಕ್ಕಿದ್ದು, ರಣವೀರ್ ಸಿಂಗ್ ಜೋಡಿಯಾಗುವ ಅವಕಾಶ ಅವರಿಗೆ ಸಿಕ್ಕಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಇಬ್ಬರನ್ನೂ ರಣವೀರ್ ಸಿಂಗ್ ಅನುಕರಿಸಿದ್ದನ್ನು ನೆನೆಯುತ್ತಾ ಗೊಳ್ಳನೆ ನಗುವ ಸೋನಾಕ್ಷಿ, ಅಂಥ ಪ್ರತಿಭೆ ತನಗಿಲ್ಲವಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಾರೆ.ಹಿಂದಿ ಚಿತ್ರದಲ್ಲಿರುವ ನಟಿಯರಲ್ಲಿ ಸದ್ಯಕ್ಕೆ ವಿದ್ಯಾ ಬಾಲನ್ ಒಬ್ಬರಿಗಷ್ಟೇ `ಹೀರೋ~ ಪಟ್ಟ. ನಾಯಕರನ್ನೂ ಚಿತ್ ಮಾಡಿ ಅವರು `ಡರ್ಟಿ ಪಿಕ್ಚರ್~ ಗೆಲ್ಲಿಸಿದ್ದಾರೆನ್ನುವ ಸೋನಾಕ್ಷಿ ಮೊದಲಿನಿಂದಲೂ ವಿದ್ಯಾ ಅವರನ್ನು ಮೆಚ್ಚಿಕೊಂಡವರು. ಆದರೆ, ತಮ್ಮಿಂದ ಕೂಡ ಅಂಥ ಪಾತ್ರ ನಿಭಾಯಿಸಲು ಸಾಧ್ಯವಿರಲಿಲ್ಲ ಎಂದೂ ಅವರು ವಿನಯದಿಂದಲೇ ಹೇಳುತ್ತಾರೆ.ನಿಯತಕಾಲಿಕೆ, ಪತ್ರಿಕೆಗಳನ್ನು ತಿರುವಿಹಾಕುತ್ತಾ ತಮ್ಮ ಬಗ್ಗೆ ಸಣ್ಣ ಗಾಸಿಪ್ಪಾದರೂ ಬಂದಿದೆಯೇ ಎಂದು ನೋಡುವುದು ಸೋನಾಕ್ಷಿ ಹವ್ಯಾಸ. ತಮ್ಮ ಬಗ್ಗೆ ತಿಂಗಳಿಗೊಂದು ಸುದ್ದಿ ಅಥವಾ ಗಾಸಿಪ್ ಕಾಣದೇ ಹೋದಲ್ಲಿ ಅವರಿಗೆ ಆತಂಕ ಶುರುವಾಗುತ್ತದಂತೆ!

ಪ್ರತಿಕ್ರಿಯಿಸಿ (+)