ಶನಿವಾರ, ಜನವರಿ 28, 2023
24 °C

ಥಳುಕು ಬಳುಕು: ಸುಷ್ಮಿತಾ ಪುತ್ರಿ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥಳುಕು ಬಳುಕು: ಸುಷ್ಮಿತಾ ಪುತ್ರಿ ಪ್ರೀತಿ

ಸುಷ್ಮಿತಾ ಸೇನ್ ಹೊಸ ವರ್ಷದಲ್ಲಿ ಏನು ಮಾಡಬೇಕು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿಕೊಂಡುಬಿಟ್ಟಿದ್ದಾರೆ. 2010ರ ಜನವರಿಯಲ್ಲಿ ಅವರು ಮೂರು ತಿಂಗಳ ಹೆಣ್ಣುಮಗುವನ್ನು ದತ್ತು ತೆಗೆದುಕೊಂಡಿದ್ದರು. ಇದು ಅವರು ದತ್ತು ತೆಗೆದುಕೊಂಡ ಎರಡನೇ ಮಗು. ಈ ವರ್ಷ ಜನವರಿಯಲ್ಲಿ ಅವರು ತಮ್ಮ ದೊಡ್ಡ ಮಗಳು- ಅರ್ಥಾತ್ ಮೊದಲನೇ ದತ್ತು ಪುತ್ರಿ- ರೆನಿ ಬಯಕೆಯನ್ನು ಈಡೇರಿಸಲು ಮುಂದಾಗಿದ್ದಾರೆ.ರೆನಿಗೆ ಅನಿಮೇಟೆಡ್ ಚಿತ್ರಗಳೆಂದರೆ ಪಂಚಪ್ರಾಣ. ಆದರೆ, ನಮ್ಮ ದೇಶದಲ್ಲಿ ಅನಿಮೇಟೆಡ್ ಚಿತ್ರಗಳು ಹೆಚ್ಚಾಗಿ ಬರುತ್ತಿಲ್ಲ. ಈ ಕೊರತೆಯನ್ನು ತುಂಬಿಕೊಡುವುದು ಸುಷ್ಮಿತಾ ಉದ್ದೇಶ. ಅದಕ್ಕೇ ಅವರು 2011ರಲ್ಲಿ ಒಂದಷ್ಟು ಅನಿಮೇಟೆಡ್ ಚಿತ್ರಗಳನ್ನು ನಿರ್ಮಿಸಲು ಗಂಭೀರವಾಗಿ ಯೋಚಿಸಿದ್ದಾರೆ.‘ನಾವು, ಅದರಲ್ಲೂ ಬಾಲಿವುಡ್‌ನವರು ಮಕ್ಕಳ ಬಗ್ಗೆ ಯೋಚಿಸೋದೇ ಇಲ್ಲ. ನಮ್ಮಷ್ಟಕ್ಕೆ ನಾವು ಮನರಂಜನೆಯ ನೆಪದಲ್ಲಿ ದೊಡ್ಡವರನ್ನು ಥಿಯೇಟರ್‌ಗೆ ಸೆಳೆಯುವುದರಲ್ಲೇ ಬ್ಯುಸಿಯಾಗಿಬಿಡುತ್ತೇವೆ. ನನ್ನ ಮಗಳು ಈಗ ಕಣ್ಣು ತೆರೆಸಿದಳು. ಅವಳಂತೆಯೇ ಅನೇಕ ಮಕ್ಕಳು ಅನಿಮೇಟೆಡ್ ಚಿತ್ರಗಳ ಕುರಿತು ಉತ್ಸುಕರಾಗಿದ್ದಾರೆ. ನಾನು ನನ್ನ ಕೈಲಾದಷ್ಟು ಚಿತ್ರಗಳನ್ನು ನಿರ್ಮಿಸಬೇಕೆಂದಿದ್ದೇನೆ’ ಅಂತಾರೆ ಸುಷ್ಮಿತಾ.ರೆನಿ ಈಗಾಗಲೇ ಅಮ್ಮನೊಟ್ಟಿಗೆ ರ್ಯಾಂಪ್ ಹತ್ತಿದ ಅನುಭವವನ್ನೂ ಪಡೆದುಕೊಂಡಿದ್ದಾಳೆ. ಎರಡೂ ಮಕ್ಕಳ ಲಾಲನೆ-ಪಾಲನೆಯ ನಡುವೆಯೇ ಬಿಡುವು ಮಾಡಿಕೊಂಡು ಸುಷ್ಮಿತಾ ‘ದುಲ್ಹಾ ಮಿಲ್ ಗಯಾ’ ಎಂಬ ಚಿತ್ರ ನಿರ್ಮಿಸಿದ್ದರು. ಈಗ ಅನಿಮೇಟೆಡ್ ಚಿತ್ರಗಳತ್ತ ಅವರ ಚಿತ್ತ ಹರಿದಿರುವುದರಿಂದ ನಿರ್ಮಾಣದ ಯೋಚನೆ ಇನ್ನಷ್ಟು ವಿಸ್ತೃತವಾದಂತಾಗಿದೆ. ಸೌಂದರ್ಯ ರಾಣಿ, ನಟಿಯಾಗಿ ಮೆರೆದ ಸುಷ್ಮಿತಾ ಈಗ ಮಕ್ಕಳ ಮೆಚ್ಚಿನ ಅಮ್ಮನೂ ಆಗಿರುವುದು ಅವರ ಬದುಕಿನ ಮಹತ್ವದ ತಿರುವೇ ಸರಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.