ಶುಕ್ರವಾರ, ನವೆಂಬರ್ 22, 2019
23 °C

`ಥಾಟುಲಿಂಗು'ಗೆ ಭರ್ಜರಿ ಬೇಡಿಕೆ

Published:
Updated:

ದಿನದಿಂದ ದಿನಕ್ಕೆ ತಾಪಮಾನ ಏರುತ್ತಿರುವ ಬೇಸಿಗೆಗಾಲದಲ್ಲಿ ಜನರು ಎಳೆನೀರು, ಕಲ್ಲಂಗಡಿ ಹಣ್ಣು, ಕಬ್ಬಿನಹಾಲು ಮುಂತಾದವುಗಳಿಗಷ್ಟೇ ಮೊರೆ ಹೋಗುತ್ತಿಲ್ಲ. `ಥಾಟುಲಿಂಗು' ಕಾಯಿಗಳನ್ನು ಸವಿಯಲು ಸಹ ಇಷ್ಟಪಡುತ್ತಿದ್ದಾರೆ. ಕಲ್ಲಂಗಡಿ ಹಣ್ಣಿನಷ್ಟೇ ತಂಪಾದ ಅನುಭವ ನೀಡುವ ರುಚಿಕಟ್ಟಾದ ಥಾಟುಲಿಂಗು ಕಾಯಿಯನ್ನು ಮಕ್ಕಳು, ಯುವಜನರು ಅಲ್ಲದೇ ಹಿರಿಯರು ಕೂಡ ಸವಿಯುತ್ತಾರೆ. ಜಿಲ್ಲೆಯಲ್ಲಿ ಈ ಕಾಯಿಗಳನ್ನು ಹೆಚ್ಚು ಬೆಳೆಯುವುದಿಲ್ಲ. ಆದರೆ ಅವುಗಳಿಗೆ ಬೇಡಿಕೆ ಮಾತ್ರ ದುಪ್ಪಟ್ಟಾಗಿದೆ.ಚಿಕ್ಕಬಳ್ಳಾಪುರದ ಎಂ.ಜಿ ರಸ್ತೆ ಮತ್ತು ಬಿ.ಬಿ ರಸ್ತೆಗಳ ಬದಿಗಳಲ್ಲಿ ತಳ್ಳುಗಾಡಿಗಳಲ್ಲಿ `ಥಾಟುಲಿಂಗು' ಕಾಯಿಗಳನ್ನು ಮಾರಲಾಗುತ್ತಿದೆ. ಕೆಲವರು ಅಲ್ಲಿಯೇ ಅವುಗಳ ಸವಿಯುಂಡರೆ, ಇನ್ನೂ ಕೆಲವರು ತಮ್ಮ ಕುಟುಂಬ ಸದಸ್ಯರಿಗೆಂದೇ 5 ರಿಂದ 10 ಕಾಯಿಗಳನ್ನು ಮನೆಗೆ ಒಯ್ದು ಸವಿಯುತ್ತಾರೆ. ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಈ ವಿಶಿಷ್ಟ ಹೆಸರಿನ ಕಾಯಿಗಳನ್ನು ಕಡಿಮೆ ಬೆಳೆಯುವುದರಿಂದ, ಅವುಗಳನ್ನು ತಮಿಳನಾಡಿನ ವೆಲ್ಲೂರು ಮತ್ತು ಇತರ ಊರುಗಳಿಂದ ತಂದು ಇಲ್ಲಿ ಮಾರಲಾಗುತ್ತದೆ.ಚಿಕ್ಕಬಳ್ಳಾಪುರದಲ್ಲಿ `ಥಾಟುಲಿಂಗು' ಕಾಯಿಗಳನ್ನು ಮಾರಾಟ ಮಾಡುವ ಕೆ.ನವೀನ್ ಸಾಮಾನ್ಯ ವ್ಯಕ್ತಿಯೇನಲ್ಲ. ವೆಲ್ಲೂರಿನ ನಿವಾಸಿಯಾದ ಕೆ.ನವೀನ್ ಬಿ.ಇ ಮೆಕಾನಿಕಲ್ ವಿದ್ಯಾರ್ಥಿ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬವನ್ನು ಸಹಾಯ ಮಾಡಬೇಕು ಎಂಬ ಏಕಮೇವ ಉದ್ದೇಶದಿಂದ ಕಾಯಿಗಳನ್ನು ಮಾರಾಟ ಮಾಡುವ ಕಾಯಕದಲ್ಲಿ ತೊಡಗಿರುವ ಆತ, `ಹಗಲು ಹೊತ್ತಿನಲ್ಲಿ ಕಾಯಿಗಳನ್ನು ಮಾರಾಟ ಮಾಡಿ, ಕುಟುಂಬಕ್ಕೆ ಹಣ ಸಂಪಾದಿಸುತ್ತೇನೆ. ರಾತ್ರಿ ವೇಳೆ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತೇನೆ' ಎನ್ನುತ್ತಾನೆ.`ಮಳೆಗಾಲ ಅಥವಾ ಚಳಿಗಾಲದಲ್ಲಿ ಈ ಕಾಯಿಗಳಿಗೆ ಹೆಚ್ಚು ಬೇಡಿಕೆ ಇರುವುದಿಲ್ಲ. ಆದರೆ ಬೇಸಿಗೆಗಾಲದಲ್ಲಿ ಮಾತ್ರ ಮಕ್ಕಳು ಈ ಕಾಯಿಗಳನ್ನು ಸವಿಯಲು ತುಂಬ ಇಷ್ಟಪಡುತ್ತಾರೆ. ಕಾಯಿಯೊಳಗಿನ ಕೊಬ್ಬರಿ ಮತ್ತು ನೀರು ತಂಪಾಗಿರುತ್ತದೆ. ಒಮ್ಮೆ ಅದನ್ನು ಸವಿದುಬಿಟ್ಟರೆ, ತಂಪಾದ ಅನುಭವವಾಗುತ್ತದೆ. ಬೇಡಿಕೆ ಹೆಚ್ಚಿದೆ ಅಂತ ಕಾಯಿಗಳ ಬೆಲೆ ಏರಿಕೆ ಮಾಡಿಲ್ಲ. ಒಂದು ಕಾಯಿಗೆ 10 ರೂಪಾಯಿಯಂತೆ ಮಾರಾಟ ಮಾಡುತ್ತೇನೆ. ನನಗೆ ದುರಾಸೆ ಇಲ್ಲ. ಕೆಲವು ದಿನಗಳನ್ನು ನೆಮ್ಮದಿಯಾಗಿ ದೂಡಲು ಸ್ವಲ್ಪ ಹಣಕಾಸಿನ ವ್ಯವಸ್ಥೆಯಾದರೆ ಅಷ್ಟೇ ಸಾಕು' ಎಂದು ಕೆ.ನವೀನ್ ಹೇಳುತ್ತಾನೆ.`ಬೇಸಿಗಾಲದಲ್ಲಿ `ಥಾಟುಲಿಂಗು' ಕಾಯಿಗಳಿಗೆ ಕಾಯುತ್ತೇವೆ. ಅವುಗಳ ಮಾರಾಟ ಆರಂಭವಾದ ಕೂಡಲೇ ಅವುಗಳನ್ನು ಖರೀದಿಸಿ, ಮನೆಗೆ ಒಯ್ಯುತ್ತೇನೆ. ಹೊರಗಡೆ ಸುತ್ತಾಡಿ ಸುಮ್ಮನೆ ದುಂದುವೆಚ್ಚ ಮಾಡುವುದರ ಬದಲು ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಕೂತು ಕಾಯಿ ಸವಿದಾಗ ಸಿಗೋ ಖುಷಿಯೇ ಬೇರೆ' ಎಂದು ನಗರದ ನಿವಾಸಿ ಲಕ್ಷ್ಮಿನಾರಾಯಣ ತಿಳಿಸಿದರು.

ಪ್ರತಿಕ್ರಿಯಿಸಿ (+)