ಥಾಮಸ್ ತ್ರಾನ್ಸ್ ತ್ರೋಮರ್ ಕವಿತೆಗಳು

7

ಥಾಮಸ್ ತ್ರಾನ್ಸ್ ತ್ರೋಮರ್ ಕವಿತೆಗಳು

Published:
Updated:

ಏಪ್ರಿಲ್ ಮೌನವಸಂತಮಾಸ ಖಾಲಿಹೊಡೆಯುತ್ತಿದೆ

ಕಪ್ಪುಮಖಮಲ್ ಹಳ್ಳ

ತೆವಳುತ್ತಿದೆ ನನ್ನ ಪಕ್ಕ

ಬಿಂಬಗಳಿಲ್ಲದೆ

ಹೊಳೆಯುವುವು ಹಳದಿ ಹೂಗಳು ಮಾತ್ರ

ಯಾರೋ ನನ್ನನ್ನು ಕೊಂಡೊಯ್ಯುತ್ತಾರೆ

ನನ್ನ ನೆರಳೊಳಗಿರಿಸಿಕೊಂಡು

ಒಯ್ಯುವ ಹಾಗೆ ಪಿಟೀಲನ್ನು

ಅದರ ಕಪ್ಪು ಪೆಟ್ಟಿಗೆಯಲ್ಲಿರಿಸಿ

ನನ್ನ ಕೈಯೆಟುಕಿನಾಚೆ

ಮಿಣಕಮಿಣಕ

ನಾನು ಹೇಳಬೇಕಾದ್ದೆಲ್ಲಾ

ಗಿರವಿಯಂಡಿಯ ಬೆಳ್ಳಿ ಹಾಗೆ

(2010)

ಕೊನೆಯಿಲ್ಲ ಒಳಬಾಗಿಲುಗಳಿಗೆ

1924ರ ವಸಂತ. ಬೀಟ್‌ಹೊವೆನ್ ತೇಲಿಹೋಗುತ್ತಾನೆ

ತನ್ನ ಮೃತ್ಯುವಿನ ಮುಖವಾಡದ ಹಾಯಿಕಟ್ಟಿಕೊಂಡು

ರುಬ್ಬುಗಲ್ಲು ತಿರುಗಿವೆ ಯೂರೋಪಿನ ವಿಂಡ್‌ಮಿಲ್ಲುಗಳಲ್ಲಿ

ಕಾಡುಕೊಕ್ಕರೆ ಗುಂಪು ಹಾರಿವೆ ಉತ್ತರದ ಕಡೆಗೆ

ಇಗೋ ಇಲ್ಲಿ ಉತ್ತರ ಇಗೋ ಇಲ್ಲಿ ಸ್ಟಾಕ್‌ಹೋಂ

ಈಜುತ್ತಿವೆ ಅರಮನೆಗಳು, ಬಡಮನೆಗಳು

ಅರಮನೆಯ ಅಗ್ಗಿಷ್ಟಿಗೆಯ ಬೆಂಕಿ

`ಅಟೆನಷನ್~ನಿಂದ `ಅಟ್ ಈಸ್~ಗೆ ಬಂದಿದೆ

ಎಲ್ಲೆಲ್ಲೂ ಇವೆ ಶಾಂತಿ, ವ್ಯಾಕ್ಸಿನ್ನು, ಉಳ್ಳಾಗಡ್ಡೆ..

ಆದರೂ ನಗರ ಏದುಸುರಿಕ್ಕುತ್ತಿದೆ

ರಾಜಕಡಾಯಿಗೆ ಬರುತ್ತಿವೆ ಪಲ್ಲಕ್ಕಿಯಲ್ಲಿ ಬಾದಶಾ ಹಾಗೆ

ರಾತ್ರಿ ಹೆಗಲಿನ ಮೇಲೆ ಉತ್ತರಸೇತುವೆಯಾಸಿ

ತಟ್ಟಾಡುತ್ತಿದ್ದಾರೆ ರಸ್ತೆ ಕಲ್ಲಿನ ಮೇಲೆ

ರಮಣಿಯರು, ರಮಣರು, ಲೋಫರ್‌ಗಳು

ಎಷ್ಟು ದ್ವೀಪಗಳು ಎಷ್ಟು ಹಡಗುಹುಟ್ಟುಗಳು

ಅದೃಶ್ಯವಾಗಿ ಹರಿವನೀರಿನ ಮೇಲೆ

ಚಾನಲ್ ತೆರೆದಿವೆ: ಏಪ್ರಿಲ್, ಮೇ

ಜೇನೊಸರುವ ಜೂನ್ಕಾವು ಹರಡುತ್ತಿದೆ. ಹಳ್ಳಿ ಬಾಗಿಲೂ

ತೆಗೆಯುತ್ತಿವೆ ಒಂದನ್ನು ಬಿಟ್ಟು

ಹಾವುಗಡಿಯಾರಮುಳ್ಳು ಮೌನ ನೆಕ್ಕುತ್ತಿದೆ;

ಬಂಡೆ ಇಳಿಜಾರಲ್ಲಿ ಭೂಗರ್ಭ ಮೌನ

ಅದು ನಡೆದದ್ದು ಹೀಗೆ. ಹಾಗಾಗದಿದ್ದರೆ

ಇದೊಂದು ಕುಟುಂಬದ ಕತೆಯಾಗಿರುತ್ತಿತ್ತು, ಅಷ್ಟೆ

ಎಲ್ಕ್‌ನ ಕತೆ: ಶಾಪಗ್ರಸ್ತನಾಗಿದ್ದ, ಎದೆ ಸೀಳಿದ್ದ

ಬುಲೆಟ್ಟಿನಿಂದ ಹೈರಾಣಾಗಿದ್ದ

ನಗರಕ್ಕೆ ಹೋದ, ವೈರಿಯ ಕಂಡ. ನೆರೆತು,

ರೋಗಿಷ್ಟನಾಗಿ ಮನೆಗೆ ಹಿಂತಿರುಗಿದ

ಹಾಸಿಗೆ ಮೇಲೆ ಬಿದ್ದುಕೊಂಡಿದ್ದ ಇಡೀ ಬೇಸಿಗೆ.

ಗೋಡೆಮೇಲೆ ಶೋಕಿಸುತ್ತಿದ್ದವು ನೇಗಿಲು ಇತ್ಯಾದಿ.

ಸದಾ ಎಚ್ಚರಾಗಿ ಕೇಳಿಸಿಕೊಳ್ಳುತ್ತಿದ್ದ

ಚಂದ್ರನ ಸಂಗಡಿಗ ಗೀಜಗನ ನಾದ

ತಾಕತ್ತು ಬಸಿದುಹೋಗಿ, ವಿನಾಕಾರಣ

ನುಗುತ್ತಿದ್ದಾನೆ ಕಬ್ಬಿಣದ ನಾಳೆಕಡೆ

ಆಳದಲ್ಲಿ ರೋದಿಸುತ್ತಿದ್ದಾನೆ ಆಳದ ದೇವರು

ಬಿಡಿಸೋ ಬಿಡಿಸು ಇದರಿಂದ

ಹೊರಗಣ ಕಾರ್ಯ ಒಳಮುಖವಾಯ್ತು

ಅವನ ಮೈಯ ಬಿಡಿಸಿ ಕೂಡಿಸಿಯಾಯ್ತು

ಗಾಳಿಯೆದ್ದು, ಕಾಡುಗುಲಾಬಿ ಪೊದೆ

ಓಡುಬೆಳಕನ್ನು ಕಂಡಿದ್ದಾಯ್ತು

ಭವಿಷ್ಯ ತೆರೆಯಿತು. ಅವನ ಕಣ್ಣಲ್ಲಿ

ರಂಗುರಂಗಿನ ವರ್ತುಲ ವರ್ತುಲ

ಅಸ್ಪಷ್ಟ ಮುಖಗಳು! ಅಲುಗುಮುಖಗಳು!

ಇನ್ನೂ ಹುಟ್ಟದ ನಂಟರ ಮುಖಗಳು

ಅಪ್ಪಿ ತಪ್ಪಿ ನನ್ನ ಮುಟ್ಟಿತು ಆತನ ನೋಟ

ವಾಷಿಂಗ್‌ಟನ್ನಲಿ ನಾನು ಅಡ್ಡಾಡುತಿದ್ದಾಗ

ಡಢೂತಿ ಮನೆಕಟ್ಟಡಗಳ ನಡುವೆ ಅಲ್ಲಿ

ಕಂಭ ಮಾತ್ರ ಭಾರ ಹೊತ್ತಿವೆ

ಶವಾಗಾರ ಶೈಲಿಯ ಶ್ವೇತಭವನಗಳು

ಬಡವರ ಕನಸಿನ ಬೂದಿಯಾಗಿವೆ

ಆಳವಾಗಿ ಇಳಿಜಾರಿನ ಹಾದಿ

ಹೇಳಕೇಳದೆ ಪಾತಾಳವಾಗಿದೆ.

(1997)

ಜೋಡಿ

ಅವರು ಲೈಟಾರಿಸುತ್ತಾರೆ. ಅದರ ಬಿಳೀ ಗೋಳ ಝಗಝಗಿಸಿ

ಕ್ಷಣಮಾತ್ರ, ಕರಗಿಹೋಗುತ್ತದೆ ಕತ್ತಲುಗಾಜ ಮೇಲೆ ಹೊಯ್ದ

ಶಾಸನದ ಹಾಗೆ. ಆ ಬಳಿಕ ಒಂದು ಉತ್ಥಾನ-

ಹೋಟಲುಗೋಡೆಗಳು ಜಿಗಿಯುತ್ತವೆ ಆಕಾಶಗತ್ತಲಿನೊಳಗೆ

 

ಮಿದುವಾಗಿವೆ ಅವರ ಮೈಚಲನೆಗಳು. ನಿದ್ದೆಹೋಗಿದ್ದಾರೆ

ಆದರೂ ಭೆಟ್ಟಿಯಾಗುತ್ತಿವೆ ಅವರ ಅತ್ಯಂತ ನಿಗೂಢ

ಆಲೋಚನೆಗಳು, ಎರಡು ಬಣ್ಣಗಳು ಕೂಡಿ ಓಡುವ ಹಾಗೆ

ಸ್ಕೂಲುಹುಡುಗನ ಒದ್ದೆ ಕಾಗದದ ಚಿತ್ರದ ಮೇಲೆ

ಕತ್ತಲು, ಮೌನ. ಆದರೂ ನಗರ ಬಂದಿದೆ ಹತ್ತಿರ

ಈ ರಾತ್ರಿ. ಬಂದಾಗಿ ಕಿಟಕಿಗಳು, ಬಂದಿವೆ ಮನೆಗಳು.

ತೀರ ಸಮೀಪದಲ್ಲಿಯೇ ಕಾಯುತ್ತಿವೆ ಗುಂಪುಗುಂಪಾಗಿ

ಖಾಲಿಖಾಲಿ ಮೋರೆಗಳ ಜನರ ದೊಡ್ಡಸಂದಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry