ಸೋಮವಾರ, ಜೂನ್ 14, 2021
22 °C
11ನೇ ದಿನವೂ ಬಿರುಸಿನಿಂದ ಮುಂದುವರಿದ ಅಂತರರಾಷ್ಟ್ರೀಯ ಶೋಧ ಕಾರ್ಯ

ಥಾಯ್ಲೆಂಡ್‌ ರೇಡಾರ್‌ನಲ್ಲಿ ಮಲೇಷ್ಯಾ ವಿಮಾನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಪಿಟಿಐ): ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ನಿಗೂಢತೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. 11ನೇ ದಿನವಾದ ಮಂಗಳ­ವಾರ ಕೂಡ ಅಂತರರಾಷ್ಟ್ರೀಯ ಶೋಧ ಕಾರ್ಯ ಹುರುಪಿನಿಂದಲೇ ನಡೆದಿದೆಯಾದರೂ ಯಾವುದೇ ಸ್ಪಷ್ಟ ಸುಳಿವು ದೊರಕಿಲ್ಲ.

ಈ ಮಧ್ಯೆ, ಥಾಯ್ಲೆಂಡ್‌ ವಾಯುಪಡೆಯ ರೇಡಾರ್‌ಗೆ ಪ್ರಯಾಣಿಕ ವಿಮಾನವೊಂದರ ಸಂಕೇತ ದೊರಕಿದೆ.ಇದು ನಾಪತ್ತೆಯಾದ ಮಲೇಷ್ಯಾ ವಿಮಾನದ್ದಿರಬೇಕು ಎಂದು ಶಂಕಿಸ­ಲಾಗಿದೆ. ಜೊತೆಗೆ, ವಿಮಾನದ ಸಂಚಾರ ಮಾರ್ಗ­ವನ್ನು ಅದರ ಕಾಕ್‌ಪಿಟ್‌ನಲ್ಲಿದ್ದ (ಚಾಲಕರ ಕೋಣೆ) ಕಂಪ್ಯೂಟರ್‌ನಿಂದ ಬದಲಿಸಲಾಗಿದೆ ಎಂಬ ಹೊಸ ಮಾಹಿತಿ  ಕೂಡ ಕೇಳಿಬಂದಿದೆ. 

ಉತ್ತರ ವಾಯು ಸಂಚಾರ ವಲಯದ ಕಜಕ­ಸ್ತಾನ ಮತ್ತು ತುರ್ಕ್‌ಮೆನಿಸ್ತಾನಗಳ ಗಡಿಯಿಂದ ಥಾಯ್ಲೆಂಡ್‌ನ ಉತ್ತರ ಭಾಗದವರೆಗೆ ಮತ್ತು ದಕ್ಷಿಣ ವಾಯು ಸಂಚಾರ ವಲಯದ ಇಂಡೊನೇಷ್ಯಾದಿಂದ ಹಿಂದೂ ಮಹಾಸಾಗರದ ದಕ್ಷಿಣ ಅಂಚಿನವರೆಗೂ ಶೋಧ ಕಾರ್ಯ  ಬಿರುಸಿನಿಂದ ಸಾಗಿದೆ.‘ಈವರೆಗೆ 20.24 ಲಕ್ಷ ಚದರ ನಾವಿಕ ಮೈಲಿ (70.7 ಲಕ್ಷ ಚದರ ಕಿ.ಮೀ.) ವ್ಯಾಪ್ತಿಯಲ್ಲಿ 26 ದೇಶಗಳು ಅವಿರತ ಶೋಧ ಕಾರ್ಯ ನಡೆಸಿವೆ. ವಿಸ್ತಾರದಲ್ಲಿ ಆಸ್ಟ್ರೇಲಿಯಾಕ್ಕಿಂತಲೂ ತುಸು ದೊಡ್ಡ­­ದಾದ ಮಧ್ಯ ಏಷ್ಯಾ ಮತ್ತು ಹಿಂದೂ ಮಹಾ­ಸಾಗರ ಪ್ರದೇಶಗಳಲ್ಲಿ ಈಗ ಚುರುಕಿನಿಂದ ಶೋಧ ಕಾರ್ಯ ನಡೆದಿದೆ’ ಎಂದು ಮಲೇಷ್ಯಾದ ರಕ್ಷಣಾ ಮತ್ತು ಸಾರಿಗೆ ಸಚಿವ ಹಿಶಾಮುದ್ದೀನ್‌ ಹುಸೇನ್‌ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.‘ವಿಮಾನ ಪತ್ತೆ ಕಾರ್ಯಾಚರಣೆಗೆ ನೆರವು ನೀಡುವಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್‌) ರಾಷ್ಟ್ರಗಳನ್ನು ಕೋರ­ಲಾಗಿದೆ’ ಎಂದರು. ಉತ್ತರ ವಲಯದಲ್ಲಿ ಕಜಕಸ್ತಾನ, ಚೀನಾ, ದಕ್ಷಿಣ ವಲಯದಲ್ಲಿ ಇಂಡೊನೇಷ್ಯಾ, ಆಸ್ಟ್ರೇ­ಲಿಯಾ ಶೋಧ ಕಾರ್ಯದ ನೇತೃತ್ವವಹಿಸಿವೆ ಎಂದು ‘ಮಲೇಷಿಯನ್‌ ಸ್ಟಾರ್‌’ ವರದಿ ಮಾಡಿದೆ.ಪೈಲಟ್‌ ಆತ್ಮಹತ್ಯೆ– ಅಲ್ಲಗಳೆದ ವಿರೋಧ ಪಕ್ಷ ಮುಖಂಡ: ವಿಮಾನ ಪೈಲಟ್‌ ಜಹರಿ ಅಹ್ಮದ್‌ ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಅತಾರ್ಕಿಕ ಎಂದು ಮಲೇಷ್ಯಾದ ವಿರೋಧ ಪಕ್ಷದ ನಾಯಕರೂ ಆದ ಜಹರಿ ಅವರ ಬಂಧು ಅನ್ವರ್‌ ಇಬ್ರಾಹಿಂ ಹೇಳಿದ್ದಾರೆ.‘ನನ್ನ ಒಬ್ಬ ಅಳಿಯನಿಗೆ ನೆಂಟರಾದ ಜಹರಿ ಅವರನ್ನು ಹಲವು ಸಲ ಭೇಟಿಯಾಗಿದ್ದೇನೆ. ಅವರ ವಿರುದ್ಧ ಕೇಳಿ ಬಂದಿರುವ ಆಕ್ಷೇಪಗಳ ಬಗ್ಗೆ ಚರ್ಚೆ ಮಾಡುವ ಬದಲಿಗೆ ಅವರ ಮತ್ತು ವಿಮಾನದ ಇತರ ಪ್ರಯಾಣಿಕರ ಯೋಗಕ್ಷೇಮಕ್ಕೆ ಪ್ರಾರ್ಥಿಸು­ವುದು ಒಳಿತು. ಅವರ ಕುಟುಂಬದವರ ಭಾವನೆ, ಹಕ್ಕುಗಳನ್ನು ಗೌರವಿಸಬೇಕು ಹಾಗೂ ವಿಮಾನ ನಾಪತ್ತೆ ಪ್ರಕರಣದಲ್ಲಿ ರಾಜಕೀಯ ಮಾಡು­ವುದೂ ತರವಲ್ಲ’ ಎಂದಿದ್ದಾರೆ.ಥಾಯ್ಲೆಂಡ್‌ ವಾಯುಪಡೆ ರೇಡಾರ್‌ಗೆ ಸಿಕ್ಕ ನಾಪತ್ತೆಯಾದ ವಿಮಾನ?

(ಬ್ಯಾಂಕಾಕ್‌ ವರದಿ): ವಾಯುಪಡೆಯ ರೇಡಾರ್‌­ಗೆ ಪತ್ತೆಯಾದ ವಿಮಾನದ ಮಾಹಿತಿಯನ್ನು ಮಲೇಷ್ಯಾದ ಜೊತೆಗೆ ಹಂಚಿಕೊಳ್ಳಲಾಗಿದೆ ಎಂದು ಥಾಯ್ಲೆಂಡ್‌ ಹೇಳಿದೆ.ನಾಪತ್ತೆಯಾದ ವಿಮಾನ ತನ್ನ ನಿಗದಿತ ಮಾರ್ಗ ಬದಲಿಸಿ ಮಲಾಕ ಜಲಸಂಧಿ ಮೇಲೆ ಹಾರಾಟ ಮಾಡಿರಬಹುದು ಎಂದು ಥಾಯ್ಲೆಂಡ್‌ ವಾಯು­ಪಡೆ ಮುಖ್ಯಸ್ಥ ಪ್ರಾಜಿನ್ ಜುನ್‌ಟಾಂಗ್‌ ಶಂಕಿಸಿ­ದ್ದಾರೆ. ಆದರೆ, ರೇಡಾರ್‌ಗೆ ಈ ಮಾಹಿತಿ ದೊರ­ಕಿದ್ದು ಯಾವಾಗ ಎಂಬುದನ್ನು ಅವರು ತಿಳಿಸಿಲ್ಲ.ಸುರತ್‌ ಥಾನಿಯಲ್ಲಿರುವ ವಾಯುಪಡೆಯ ರೇಡಾರ್‌ಗೆ  ವಿಮಾನದ ಮಾಹಿತಿಗಳು ಸಿಕ್ಕಿವೆ. ಆದರೆ, ಇದು ನಾಪತ್ತೆಯಾದ ‘ಎಂಎಚ್‌370’ ವಿಮಾನದ್ದೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂಬ ಜುನ್‌ಟಾಂಗ್‌ ಅವರ ಹೇಳಿಕೆಯನ್ನು ಥಾಯ್ಲೆಂಡ್‌ನ ರಾಷ್ಟ್ರ ಮಟ್ಟದ ಪತ್ರಿಕೆಯೊಂದು ವರದಿ ಮಾಡಿದೆ.ಶೋಧ ಕಾರ್ಯ ಸ್ಥಗಿತಗೊಳಿಸಿದ ಅಮೆರಿಕ ‘ಯುದ್ಧ ನೌಕೆ– 7’

(ವಾಷಿಂಗ್ಟನ್‌ ವರದಿ): ಹಿಂದೂ ಮಹಾಸಾಗರದಲ್ಲಿ ಶೋಧಕಾರ್ಯ ನಡೆಸುತ್ತಿದ್ದ  ಅಮೆರಿಕದ ಅತ್ಯಾಧುನಿಕ ‘ಯುದ್ಧ ನೌಕೆ– 7’ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ.ಆದರೆ, ನೌಕಾಪಡೆಯ ‘ಪಿ8 ಪೊಸೆಡನ್‌’ ಮತ್ತು ‘ಪಿ3 ಓರಿಯನ್‌’ ಯುದ್ಧ ವಿಮಾನಗಳು ಶೋಧ ಕಾರ್ಯ ಮುಂದುವರಿಸಿವೆ ಎಂದು ‘7ನೇ ಯುದ್ಧ ನೌಕೆ’ಯ ವಕ್ತಾರ ಕಮಾಂಡರ್‌ ವಿಲಿಯಂ ಮಾರ್ಕ್ಸ್‌ ಅವರು ಹೇಳಿಕೆಯಲ್ಲಿ ತಿಳಿಸಿದ ್ದಾರೆ.ಚೀನಿ ಪ್ರಯಾಣಿಕರಿಗೆ ಉಗ್ರರ ನಂಟು ಇಲ್ಲ: ಸ್ಪಷ್ಟನೆ

(ಬೀಜಿಂಗ್‌ ವರದಿ): ನಾಪತ್ತೆಯಾಗಿರುವ ಮಲೇಷ್ಯಾದ ವಿಮಾನದಲ್ಲಿರುವ ತನ್ನ ದೇಶದ ಪ್ರಯಾಣಿಕರಿಗೆ ಉಗ್ರರ ನಂಟಿಲ್ಲ ಮತ್ತು ಅವರ್‍ಯಾರೂ ವಿಮಾನ ಅಪಹರಣಕ್ಕೆ ಯತ್ನಿಸಿಲ್ಲ ಎಂದು ಚೀನಾ ಮಂಗಳವಾರ ಸ್ಪಷ್ಟಪಡಿಸಿದೆ.ಈ ಮಧ್ಯೆ, ಚೀನಾ ತನ್ನ ಗಡಿಯ ವ್ಯಾಪ್ತಿಯಲ್ಲಿ ವಿಮಾನಕ್ಕಾಗಿ ಶೋಧ ಕಾರ್ಯ ಮುಂದುವರಿಸಿದೆ. ವಿಮಾನವು ಮಧ್ಯ ಏಷ್ಯಾದಲ್ಲಿ ಪತನವಾಗಿರ­ಬಹುದು ಎಂಬ ಅನುಮಾನಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಟಿಬೆಟ್‌ ಮತ್ತು ಕ್ಸಿನ್‌ಜಿಯಾಂಗ್‌ ಪ್ರದೇಶಗಳಲ್ಲಿ ಚೀನಾ ಶೋಧ ಕಾರ್ಯ ನಡೆಸುತ್ತಿದೆ. ವಿಮಾನದ ಪತ್ತೆಯಾಗಿ ಚೀನಾ ತನ್ನ 21 ಉಪಗ್ರಹಗಳ ನೆರವನ್ನು ಪಡೆದಿದೆ.ಸತ್ಯಾಗ್ರಹ ಬೆದರಿಕೆ: ಈ ವಿಮಾನದಲ್ಲಿ ಚೀನಾದ 154 ಪ್ರಯಾಣಿಕರು ಇದ್ದಾರೆ. ಈ ನಡುವೆ ಯಾವುದೇ ಸುಳಿವು ಸಿಗದ ಕಾರಣ ತೀವ್ರ ಆತಂಕಕ್ಕೆ ಒಳಗಾಗಿರುವ ಪ್ರಯಾಣಿಕರ ಬಂಧುಗಳು ಸರ್ಕಾರದ ಧೋರಣೆ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುವ ಬೆದರಿಕೆ ಒಡ್ಡಿದ್ದಾರೆ.‘ವಿಮಾನದಲ್ಲಿರುವ ದೇಶದ ಯಾವುದೇ ಪ್ರಯಾಣಿಕರು ವಿಮಾನ ಅಪಹರಣದ ಪ್ರಯತ್ನ ಇಲ್ಲವೆ ಅದರ ಮೇಲೆ ಭಯೋತ್ಪಾದನಾ ದಾಳಿಗೆ ಸಂಚು ನಡೆಸಿಲ್ಲ’ ಎಂದು ಮಲೇಷ್ಯಾದಲ್ಲಿರುವ ಚೀನಾ ರಾಯಭಾರಿ ಹುವಾಂಗ್‌ ಹುಯಿಕಾಂಗ್ ತಿಳಿಸಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಶೋಧ ಕಾರ್ಯ ಮುಗಿಸಿರುವ ನೌಕಾಪಡೆಯ  ಹಡಗುಗಳು ಈಗ ದಕ್ಷಿಣ ವಾಯು ಸಂಚಾರ ವಲಯದತ್ತ ಧಾವಿಸು­ತ್ತಿವೆ ಎಂಬ ಹುವಾಂಗ್‌ ಅವರ ಹೇಳಿಕೆಯನ್ನು ‘ಕ್ಸಿನ್‌ಹುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.ಭಾರತ ಗಡಿಯಲ್ಲಿ ಪತನವಾಗಿಲ್ಲ: ವಿಮಾನ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಭಾರತ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳು ವಿಮಾ­ನವು ತಮ್ಮ ದೇಶದ ಗಡಿಯಲ್ಲಿ ಪತನವಾಗಿರುವ ಸಾಧ್ಯತೆಯನ್ನು ತಳ್ಳಿಹಾಕಿವೆ.ಶೋಧ ಕಾರ್ಯಕ್ಕೆ  ಶ್ರೀಲಂಕಾ ವಾಯು ಗಡಿ ಮುಕ್ತ

(ಕೊಲಂಬೊ ವರದಿ): ನಾಪತ್ತೆಯಾಗಿರುವ ವಿಮಾನದ ಶೋಧ ಕಾರ್ಯಕ್ಕೆ ಶ್ರೀಲಂಕಾ ತನ್ನ ವಾಯು ಗಡಿಯನ್ನು ಮಂಗಳವಾರ ಮುಕ್ತ­ಗೊಳಿಸಿದೆ. ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಅಮೆರಿಕದ ವಿಮಾನಗಳು ಶ್ರೀಲಂಕಾ ವಾಯು ಗಡಿಯನ್ನು ಬಳಸಿಕೊಂಡು ಶೋಧ ಕಾರ್ಯ ನಡೆಸುತ್ತಿವೆ.ಪಾಸ್‌ಪೋರ್ಟ್ ತಿದ್ದುವಿಕೆ ಸಾಮಾನ್ಯ: ಮಲೇಷ್ಯಾ ಪ್ರವಾಸೋದ್ಯಮ

(ಮುಂಬೈ ವರದಿ): ಪಾಸ್‌ಪೋರ್ಟ್‌ ತಿದ್ದುವಿಕೆಯು ಸಾಮಾನ್ಯ ನಡವಳಿಕೆಯಾಗಿದ್ದು, ಅದು ಅಂತಹ ದೊಡ್ಡ ಮಟ್ಟದ ಬೆದರಿಕೆಯಲ್ಲ ಅಥವಾ ಘೋರ ರೀತಿಯ ನಿಯಮ ಉಲ್ಲಂಘನೆ­ಯಲ್ಲ ಎಂದಿರುವ ಮಲೇಷ್ಯಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಮಲೇಷ್ಯಾ ಯಾವತ್ತೂ ಮೊದಲ ಆದ್ಯತೆ ನೀಡಿದೆ ಎಂದರು.‘ಪಾಸ್‌ಪೋರ್ಟ್‌ ತಿದ್ದುವಿಕೆಯು ಹಲವು ಕಡೆ ನಡೆಯುತ್ತದೆ. ಭಾವಚಿತ್ರ ಬದಲಾವಣೆ ಮಾಮೂ­ಲು. ಆದರೆ, ನಮ್ಮ ರಾಷ್ಟ್ರದ ವಿಮಾನ ನಿಲ್ದಾಣ­ಗಳಲ್ಲೂ ಅಂತರರಾಷ್ಟ್ರೀಯ ಮಟ್ಟದ ಭದ್ರತಾ ನೀತಿಯನ್ನೆ ಅನುಸರಿಸಲಾಗುತ್ತಿದೆ. ಆದರೂ ವಲಸೆ ನೀತಿಯಲ್ಲಿ ಇರಬಹುದಾದ ಸಣ್ಣಪುಟ್ಟ ಲೋಪ­ದೋಷ­ಗಳನ್ನು ಸರಿಪಡಿಸಲಾಗುವುದು’ ಎಂದು ಮಲೇಷ್ಯಾ ಪ್ರವಾಸೋದ್ಯಮ ಇಲಾಖೆಯ ಮಹಾ­ನಿರ್ದೇಶಕ ಮಿರ್ಜಾ ಮೊಹಮ್ಮದ್ ತೈಯಬಾ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.‘ಮಲೇಷ್ಯಾ ನಾಪತ್ತೆಯಾಗಿ 11 ದಿನವಾದರೂ ಅದರ ಬಗ್ಗೆ ಯಾವುದೇ ಸುಳಿವಿಲ್ಲ.  ಈ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಕಳವಾದ ಪಾಸ್‌ಪೋರ್ಟ್‌ ಬಳಸಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.