ಶುಕ್ರವಾರ, ಮೇ 14, 2021
32 °C

ದಂಗೆ ಪ್ರಕರಣ: ಮೋದಿಗೆ ಸುಪ್ರೀಂ ಉಪಶಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2002ರಲ್ಲಿ ಗೋಧ್ರಾ ಹತ್ಯಾಕಾಂಡದ ಬಳಿಕ ಸಂಭವಿಸಿದ ಹಿಂಸಾಚಾರಗಳನ್ನು ನಿಯಂತ್ರಿಸುವಲ್ಲಿನ ನಿಷ್ಕ್ರಿಯತೆ ಬಗ್ಗೆ ಯಾವುದೇ ಆದೇಶವನ್ನು ಹೊರಡಿಸಲು ಸೋಮವಾರ ನಿರಾಕರಿಸಿದ ಸುಪ್ರೀಂಕೋರ್ಟ್, ಈ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಅಹಮದಾಬಾದಿನ ಸಂಬಂಧಿತ ಮ್ಯಾಜಿಸ್ಟ್ರೇಟ್ ಗೆ ನಿರ್ದೇಶಿಸಿದೆ.ಇದರೊಂದಿಗೆ ದಂಗೆಕಾಲದಲ್ಲಿ ನಿಷ್ಕ್ರಿಯರಾಗಿದ್ದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರಿಗೆ ~ಸುಪ್ರೀಂ ಉಪಶಮನ~ ದೊರಕಿದಂತಾಗಿದೆ.ನ್ಯಾಯಮೂರ್ತಿ ಡಿ.ಕೆ. ಜೈನ್ ನೇತೃತ್ವದ ತ್ರಿಸದಸ್ಯ ಪೀಠವು ದಂಗೆ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಸಿಟ್) ತನ್ನ ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಸಲ್ಲಿಸುವಂತೆ ನಿರ್ದೇಶಿಸಿತು.ನರೇಂದ್ರ ಮೋದಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ 63 ಮಂದಿ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕೆ ಎಂದು ನಿರ್ಧರಿಸುವಂತೆಯೂ ಪೀಠವು ಮ್ಯಾಜಿಸ್ಟ್ರೇಟ್ ಅವರಿಗೆ ಸೂಚಿಸಿತು.ದಂಗೆ ಪ್ರಕರಣಗಳ ಬಗ್ಗೆ ಇನ್ನಷ್ಟು ಪರಿಶೀಲಿಸಬೇಕಾದ ಅಗತ್ಯ ಇಲ್ಲ ಎಂದೂ ಪೀಠ ಸ್ಪಷ್ಟ ಪಡಿಸಿತು.ಮ್ಯಾಜಿಸ್ಟ್ರೇಟ್ ಅವರು ಮೋದಿ ಮತ್ತು ಇತರರ ವಿರುದ್ಧ ಕ್ರಮಗಳನ್ನು ಕೈಬಿಡಲು ನಿರ್ಧರಿಸಿದರೆ, ಅದಕ್ಕೆ ಮುನ್ನ ಗುಜರಾತ್ ಮುಖ್ಯಮಂತ್ರಿಯವರ ವಿರುದ್ಧ ದೂರು ದಾಖಲಿಸಿದ ಹತ ಸಂಸದ ಈಶನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರ ಅಹವಾಲನ್ನು ಆಲಿಸಬೇಕು ಎಂದೂ ನ್ಯಾಯಮೂರ್ತಿ ಪಿ. ಸದಾಶಿವನ್ ಮತ್ತು ಆಫ್ತಾಬ್ ಆಲಂ ಅವರನ್ನೂ ಒಳಗೊಂಡಿರುವ ಪೀಠ ಸೂಚಿಸಿತು.2002ರ ಫೆಬ್ರುವರಿ 27ರಂದು ಸಂಭವಿಸಿದ ಗೋಧ್ರಾ ರೈಲು ಹತ್ಯಾಕಾಂಡ ಬಳಿಕ ಭುಗಿಲೆದ್ದ ರಾಜ್ಯವ್ಯಾಪಿ ಹಿಂಸಾಚಾರವನ್ನು ನಿಗ್ರಹಿಸಲು ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು 62 ಮಂದಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ನಿರಾಕರಿಸಿದ್ದರು ಎಂಬುದಾಗಿ ಆಪಾದಿಸಿ ಝಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈದಿನದ ತನ್ನ ತೀರ್ಪನ್ನು ನೀಡಿದೆ.ಸುಪ್ರೀಂಕೋರ್ಟ್ ಆದೇಶದಂತೆ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ಮೊಹರಾದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿ ಬಗ್ಗೆ ನ್ಯಾಯಾಲಯ ನೇಮಿಸಿದ್ದ ಕೋರ್ಟ್ ಸಹಾಯಕ ಹಿರಿಯ ವಕೀಲ ರಾಜು ರಾಮಚಂದ್ರನ್ ಸಲ್ಲಿಸಿದ್ದ ~ರಹಸ್ಯ ಅಭಿಪ್ರಾಯ~ವನ್ನು ಪರಿಶೀಲಿಸಿದ ಬಳಿಕ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.