ದಂತ ಪಂಕ್ತಿಗೂ ಪ್ರತ್ಯೇಕ ವಿಮೆ

7

ದಂತ ಪಂಕ್ತಿಗೂ ಪ್ರತ್ಯೇಕ ವಿಮೆ

Published:
Updated:

ಬೆಂಗಳೂರು: ಸಾಮಾನ್ಯವಾಗಿ ಆರೋಗ್ಯ ವಿಮೆಯಲ್ಲಿಯೇ ಹಲವು ಕಾಯಿಲೆಗಳನ್ನು ಒಳಗೊಂಡು ಆರೋಗ್ಯ ಭದ್ರತೆ ನೀಡಲಾಗುತ್ತಿದೆ. ಆದರೆ ಈಗ ದಂತ ಪಂಕ್ತಿಗಳಿಗೂ ಪ್ರತ್ಯೇಕ ವಿಮೆ ಮಾಡಿಸುವ ಯೋಜನೆ ಸದ್ಯದಲ್ಲೇ ನಗರದಲ್ಲಿ ಜಾರಿಗೆ ಬರಲಿದೆ.ರಾಜ್ಯದಲ್ಲಿ ಆರೋಗ್ಯ ವಿಮೆಯಲ್ಲಿಯೇ ವಿವಿಧ ಕಾಯಿಲೆಗಳ ಅನುಸಾರ ಇಂತಿಷ್ಟು ಹಣ ನೀಡಲಾಗುತ್ತಿದೆ. ಆರೋಗ್ಯ ವಿಮೆಯಲ್ಲೂ ಜಾಗ ಪಡೆಯದ ದಂತ ಪಂಕ್ತಿಗಳಿಗಳಿಗೆ ಪ್ರತ್ಯೇಕ ವಿಮೆ ಯೋಜನೆ ತರಲು ಭಾರತೀಯ ದಂತ ವೈದ್ಯರ ಸಂಘ ಕನಸು ಕಂಡಿದ್ದು, ಈ ಕನಸನ್ನು ಸಾಕಾರಗೊಳಿಸಲು ಮಹಾನಗರ ಮುಂಬಯಿಯನ್ನು ಆಯ್ಕೆ ಮಾಡಿಕೊಂಡಿದೆ. ಇದರ ಮುಂದುವರಿದ ಭಾಗವಾಗಿ ನಗರದಲ್ಲೂ ದಂತ ವಿಮೆ ಜಾರಿಯಾಗಲಿದೆ.ವಿದೇಶಗಳಲ್ಲಿ ನಿರ್ದಿಷ್ಟ ಅಂಗಾಂಗಳಿಗೆ ವಿಮೆ ನೀಡಲಾಗುತ್ತಿದೆ. ಯುರೋಪ್ ರಾಷ್ಟ್ರಗಳಲ್ಲಿ ಕಣ್ಣು, ದಂತ, ಯಕೃತ್ತು ಬದಲಿ, ಮೂಳೆ ಸೇರಿದಂತೆ ನಿರ್ದಿಷ್ಟ ಅಂಗಗಳಿಗೆ  ವಿಮೆಯಿದೆ.ಇತರೆ ಅಂಗಗಳಿಗೆ ತೋರಿಸುವಷ್ಟು ಕಾಳಜಿ ದಂತ ಪಂಕ್ತಿಗಳಿಗೆ ತೋರುತ್ತಿಲ್ಲ ಎನ್ನಲಾಗುತ್ತಿದೆ. ಅಂದದ ದಂತ ಪಂಕ್ತಿ ಸುಂದರ ನಗುವನ್ನು ಮೂಡಿಸುತ್ತದೆಯೆಂಬ ಕಲ್ಪನೆ ಇದ್ದರೂ ದಂತ ನೋವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಹಾನಗರಗಳಲ್ಲಿ ಸಾಮಾನ್ಯವಾಗಿ ಶೇ 40 ಕ್ಕಿಂತ ಹೆಚ್ಚು ಮಂದಿ ದಂತ ಸಮಸ್ಯೆಗಳಿಂದ ನರಳುತ್ತಿದ್ದು, ತೀವ್ರಗೊಂಡ ನಂತರವಷ್ಟೇ ದಂತ ವೈದ್ಯರ ಬಳಿಗೆ ಹೋಗುತ್ತಿದ್ದಾರೆ.ದಂತ ಸಮಸ್ಯೆಗಳು: ಹಲ್ಲು ಹುಳುಕು, ವಸಡಿನಲ್ಲಿ ರಕ್ತ, ಹಳದಿಯುಕ್ತ ಹಲ್ಲು, ದಂತ ಮರು ಜೋಡಣೆ, ದಂತ ಕ್ಷಯ ಹಾಗೂ 15 ರಿಂದ 22ರ ವಯೋಮಿತಿಯಲ್ಲಿ ಕಾಣಿಸಿಕೊಳ್ಳುವ ವಕ್ರ ದಂತ ಸಮಸ್ಯೆಗಳು ಸಾಮಾನ್ಯವಾಗಿ ಜನರನ್ನು ಕಾಡುತ್ತವೆ. ಸಣ್ಣ ಜ್ವರಕ್ಕೂ ಆಸ್ಪತ್ರೆಗೆ ತೆರಳುವವರು ದಂತದ ಸಮಸ್ಯೆ ಬಂದಾಗ ಮಾತ್ರ ಲವಂಗ, ಉಪ್ಪು ಸೇರಿದಂತೆ ಮನೆ ಮದ್ದಿಗೆ ಮೊರೆ ಹೋಗುತ್ತಾರೆ ಎಂದು ದಂತ ವೈದ್ಯರು ಅಭಿಪ್ರಾಯಪಡುತ್ತಾರೆ. ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಭಾರತೀಯ ದಂತ ವೈದ್ಯರ ಸಂಘದ ಬೆಂಗಳೂರು ಶಾಖೆಯ ಕಾರ್ಯದರ್ಶಿ ಡಾ.ನಂದಕಿಶೋರ್, `ಆಧುನಿಕ ಜೀವನ ಶೈಲಿಯಿಂದಾಗಿ ದಂತ ಸಮಸ್ಯೆಗಳು ಹೆಚ್ಚುತ್ತಿವೆ. ಚಾಕೋಲೆಟ್ ಮತ್ತು ಜಂಕ್‌ಫುಡ್, ಹೊಗೆ ಸೊಪ್ಪು, ಬೀಡಿ, ಸಿಗರೇಟು ಸೇವನೆಯಿಂದ ದಂತ ಸಮಸ್ಯೆಗಳು ತೀವ್ರವಾಗಿವೆ. ಈ ನಿಟ್ಟಿನಲ್ಲಿ ದಂತ ವಿಮೆಯು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಲು ನೆರವು ನೀಡುತ್ತದೆ~ ಎಂದು ಹೇಳಿದರು.`ಸದ್ಯಕ್ಕೆ `ಸ್ಟಾರ್ಸ್‌ ಆರೋಗ್ಯ ವಿಮಾ~ ಕಂಪೆನಿಯು ಈಗಾಗಲೇ ದಂತಗಳಿಗೆ ಪ್ರತ್ಯೇಕ ವಿಮೆ ಮಾಡಲು ಮುಂದೆ ಬಂದಿದೆ. ಇದರನ್ವಯ ವ್ಯಕ್ತಿಯು ದಂತಗಳಿಗೆ ಯಾವುದೇ ತೊಂದರೆಯಿಲ್ಲ ಎಂಬ ಪ್ರಮಾಣಪತ್ರದೊಂದಿಗೆ ಒಂದು ಬಾರಿ ಸಾವಿರ ರೂಪಾಯಿ ಪ್ರಿಮಿಯಂ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಆತನಿಗೆ ಎದುರಾಗುವ ದಂತ ಸಮಸ್ಯೆಗಳ ಆಧಾರದ ಮೇಲೆ ಗರಿಷ್ಠ 25 ಸಾವಿರ ರೂಪಾಯಿಯವರೆಗೆ ಹಣ ನೀಡಲಾಗುತ್ತದೆ~ ಎಂದರು.`ದಂತ ಸಮಸ್ಯೆಗಳಿಗೆ ವೈದ್ಯರ ಶುಲ್ಕ ಕನಿಷ್ಠ 700 ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಹಾಗೇ ಉಬ್ಬಲ್ಲು ಮತ್ತು ವಕ್ರ ದಂತಗಳ ಕ್ಲಿಪ್‌ಗೆ 10 ರಿಂದ 25  ಸಾವಿರ ರೂಪಾಯಿ ತೆರಬೇಕಾಗುತ್ತದೆ. ದಂತ ವಿಮೆಯಿಂದಾಗಿ ಈ ಎಲ್ಲ ಚಿಕಿತ್ಸೆಗಳನ್ನು ಕಡಿಮೆ ವೆಚ್ಚದಲ್ಲಿಯೇ ಪಡೆಯಬಹುದು~ ಅಭಿಪ್ರಾಯಪಟ್ಟರು.ಸ್ಟಾರ್ ಆರೋಗ್ಯ ವಿಮಾ ಕಂಪೆನಿಯ ಹಿರಿಯ ಏಜೆಂಟ್ ಶ್ರೀವತ್ಸ, `ದಂತ ವಿಮೆಯು ಭಾರತೀಯ ದಂತ ವೈದ್ಯರ ಸಹಕಾರದೊಂದಿಗೆ ಜಾರಿಯಾಗಿದೆ. ಇದರಂತೆ ದಂತ ಸಮಸ್ಯೆಗಳಿಗೆ ಅನುಗುಣವಾಗಿ ಪ್ರಿಮಿಯಂ ಪಾವತಿಸಬೇಕು. ಕಂಪೆನಿಯು ಇತರೆ ಅಂಗಗಳಿಗೆ ವಿಮೆ ಜಾರಿಗೊಳಿಸಲು ಉತ್ಸುಕವಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಸಲಿದೆ~ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry