ಬುಧವಾರ, ಮೇ 12, 2021
18 °C

ದಂತ ವೈದ್ಯೆ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಜಯನಗರದ ಒಂಬತ್ತನೇ ಮುಖ್ಯರಸ್ತೆಯಲ್ಲಿ ಭಾನುವಾರ ದಂತವೈದ್ಯೆ ಎಂ.ಎಚ್.ಸುಮತಿ (27) ಎಂಬವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಸುಮತಿ ಪೋಷಕರು ಹಾಗೂ ಸಂಬಂಧಿಕರು, `ಅಳಿಯ ಹಾಗೂ ಅತ್ತೆ-ಮಾವನ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಆರೋಪಿಸಿದ್ದಾರೆ.ಮಂಡ್ಯ ಜಿಲ್ಲೆಯ ಕಾವೇರಿನಗರದ ಹೊಂಬಾಳಯ್ಯ ಮತ್ತು ಸುವರ್ಣಾವತಿ ದಂಪತಿಯ ಮಗಳು ಸುಮತಿ. ನಗರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಮೊಹಿಂದರ್ ಎಂಬುವರ ಜತೆ 2009ರ ಫೆಬ್ರುವರಿ 1ರಂದು ಅವರ ವಿವಾಹವಾಗಿತ್ತು. ದಂಪತಿಗೆ ಎರಡು ವರ್ಷದ ತೇಜಿತಾ ಎಂಬ ಹೆಣ್ಣು ಮಗುವಿದೆ. ಭಾನುವಾರ ಮಧ್ಯಾಹ್ನ ಕೋಣೆಯೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.`ಚನ್ನಸಂದ್ರದಲ್ಲಿ ಭಾನುವಾರ ಸುಮತಿಯ ಸಂಬಂಧಿಕರೊಬ್ಬರ ಮನೆಯಲ್ಲಿ ಬೀಗರ ಊಟವಿತ್ತು. ಹೀಗಾಗಿ, ಅಲ್ಲಿಗೆ ಹೋಗಲು ಪತಿಯನ್ನೂ ಕರೆದಿದ್ದಳು. ಆದರೆ, ಸ್ನೇಹಿತನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇದೆ ಎಂದು ಮಗ ಅಲ್ಲಿಗೆ ಹೋಗಿದ್ದರಿಂದ ಬೇಸರಗೊಂಡಿದ್ದಳು. ಬಳಿಕ ಬೇಗನೆ ಮನೆಗೆಲಸ ಮುಗಿಸಿದ ಸೊಸೆ, 11 ಗಂಟೆ ಸುಮಾರಿಗೆ ಕೋಣೆ ಸೇರಿಕೊಂಡಳು.

ಮಧ್ಯಾಹ್ನ 12.30ರ ಸುಮಾರಿಗೆ ಆ ಕೋಣೆಗೆ ಹೋದಾಗ ನೇಣಿಗೆ ಶರಣಾಗಿದ್ದಳು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೂ ಸೊಸೆ ಬದುಕುಳಿಯಲಿಲ್ಲ' ಎಂದು ಸುಮತಿಯ ಅತ್ತೆ-ಮಾವ ಹೇಳಿದ್ದಾರೆ.ಆದರೆ, ಈ ಹೇಳಿಕೆಯನ್ನು ಒಪ್ಪದ ಸುಮತಿ ಪೋಷಕರು, `ಅಳಿಯ ಮೊಹಿಂದರ್, ಆತನ ಪೋಷಕರಾದ ನಾಗರಾಜ್ ಮತ್ತು ಸುಕನ್ಯಾ ಅವರೇ ಮಗಳನ್ನು ಕೊಲೆ ಮಾಡಿ, ಆತ್ಮಹತ್ಯೆಯ ನಾಟಕವಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.`ಮಗಳ ಮದುವೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಆದರೆ, ಈ ಅವಧಿಯಲ್ಲಿ ಆಕೆ ತವರಿಗೆ ಬಂದಿರುವುದು ಕೇವಲ ಮೂರ‌್ನಾಲ್ಕು ಬಾರಿ ಮಾತ್ರ. ಮನೆಯಲ್ಲಿ ಹಬ್ಬ-ಹರಿದಿನ ಸೇರಿದಂತೆ ಯಾವುದೇ ಕಾರ್ಯಕ್ರಮ ಇದ್ದರೂ ಆಕೆಯ ಅನುಪಸ್ಥಿತಿ ಕಾಡುತ್ತಿತ್ತು. ಕಳೆದ ವಾರ ಅಣ್ಣನ ಮಗನ ಮದುವೆ ಆಯಿತು. ಆಗಲೂ ಅವರ ಅತ್ತೆ-ಮಾವ ಸುಮತಿಯನ್ನು ಮದುವೆಗೆ ಕಳುಹಿಸಿರಲಿಲ್ಲ. ಆದರೆ, ಭಾನುವಾರ ಚನ್ನಸಂದ್ರದಲ್ಲಿ ನಿಗದಿಯಾಗಿದ್ದ ಬೀಗರ ಊಟಕ್ಕೆ ಖಂಡಿತ ಬರುವುದಾಗಿ ಹೇಳಿದ್ದಳು.

ಇದೇ ವಿಷಯವಾಗಿ ಮನೆಯಲ್ಲಿ ಜಗಳ ನಡೆದಿದ್ದು, ಅವರೇ ಮಗಳನ್ನು ಕೊಲೆ ಮಾಡಿದ್ದಾರೆ' ಎಂದು ಸುಮತಿಯ ತಾಯಿ ಸುವರ್ಣಾವತಿ `ಪ್ರಜಾವಾಣಿ'ಗೆ ತಿಳಿಸಿದರು.`ಸುಮತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸೂಕ್ಷ್ಮ ಮನಸ್ಸಿನವಳಲ್ಲ. ಶನಿವಾರ ರಾತ್ರಿ ನನಗೆ ಕರೆ ಮಾಡಿ ಬೀಗರ ಊಟಕ್ಕೆ ಬರುವುದಾಗಿ ಹೇಳಿದ್ದಳು. ಸೋಮವಾರದಿಂದ ಆಕೆ ಉನ್ನತ ವ್ಯಾಸಂಗ ಮುಂದುವರಿಸುತ್ತಿದ್ದರಿಂದ ಮೊದಲೇ ಕೋಪಗೊಂಡಿದ್ದ ಆಕೆಯ ಅತ್ತೆ-ಮಾವ, ಈ ಕಾರ್ಯಕ್ರಮಕ್ಕೂ ಕಳುಹಿಸದೆ ಕಿರುಕುಳ ನೀಡಿದ್ದಾರೆ' ಎಂದು ಸುಮತಿ ಚಿಕ್ಕಮ್ಮ ರಾಧಾ ಆರೋಪಿಸಿದರು.`ವಿಜಯನಗರದಲ್ಲಿರುವ ಕ್ಲಿನಿಕ್‌ವೊಂದರಲ್ಲಿ ದಂತ ವೈದ್ಯೆಯಾಗಿದ್ದ ಆಕೆ, ದಂತ ವೈದ್ಯಕೀಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (ಕಿಮ್ಸ) ಪ್ರವೇಶ ಪಡೆದಿದ್ದರು. ಸೋಮವಾರದಿಂದ (ಜೂ.17) ಅಕ್ಕ ಕಿಮ್ಸಗೆ ಹೋಗಬೇಕಿತ್ತು' ಎಂದು ಸುಮತಿಯ ಸೋದರ ಸಂಬಂಧಿ ಕಾರ್ತಿಕ್ ಹೇಳಿದರು.ಸುಮತಿ ತಂದೆ ಹೊಂಬಾಳಯ್ಯ ಮಂಡ್ಯ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿಯಾಗಿದ್ದಾರೆ. ತಾಯಿ ಸುವರ್ಣಾವತಿ, ಮಂಡ್ಯದ ಸಂತೆಕಲಸಗೆರೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷೆಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಮೊಹಿಂದರ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಜಯನಗರ ಪೊಲೀಸರು ತಿಳಿಸಿದ್ದಾರೆ.

ಆರೋಪ ಸುಳ್ಳು

ಪತ್ನಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೆವು. ಇತ್ತೀಚೆಗೆ ಆಕೆ ಕಿಮ್ಸನಲ್ಲಿ ಉನ್ನತ ವ್ಯಾಸಂಗ ಮಾಡುವುದಾಗಿ ಹೇಳಿದಾಗ ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೇನೆ. ಅಲ್ಲದೇ, ಆಕೆಯ ಓಡಾಟಕ್ಕೆ ಅನುಕೂಲವಾಗುವಂತೆ ಹೊಸ ದ್ವಿಚಕ್ರ ವಾಹನವನ್ನೂ ಕೊಡಿಸಿದ್ದೆ.

ಆಕೆ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದೇ ತಿಳಿಯುತ್ತಿಲ್ಲ. ಆದರೆ, ಅವರ ಪೋಷಕರು ಆರೋಪಿಸುತ್ತಿರುವಂತೆ ನಾನಾಗಲೀ, ಪೋಷಕರಾಗಲೀ ಯಾವುದೇ ರೀತಿಯಲ್ಲಿ ಕಿರುಕುಳ ನೀಡಿಲ್ಲ.

- ಮೊಹಿಂದರ್, ಸುಮತಿ ಪತಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.