ದಂತ ಸ್ವಾಸ್ಥ್ಯದ ಮುನ್ನೆಚ್ಚರಿಕೆ ಕ್ರಮಗಳು

ಶನಿವಾರ, ಜೂಲೈ 20, 2019
22 °C

ದಂತ ಸ್ವಾಸ್ಥ್ಯದ ಮುನ್ನೆಚ್ಚರಿಕೆ ಕ್ರಮಗಳು

Published:
Updated:

`ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲು ಇಲ್ಲ~- ಬಲು ಜನಪ್ರಿಯ ಗಾದೆ ಇದು. ಈ ಗಾದೆಯ ಅರ್ಥ ಅದೇನೇ ಇರಲಿ, ಮನುಷ್ಯನಿಗೆ ಹಲ್ಲಂತೂ ಬಲು ಮುಖ್ಯ. ಕಡಲೆಯಷ್ಟೇ ಏಕೆ. ಬೇರ‌್ಯಾವುದನ್ನೇ ಆಗಲಿ ನೆಮ್ಮದಿಯಿಂದ ಸವಿಯಬೇಕಿದ್ದರೆ, ಮುಖಾರವಿಂದಕ್ಕೆ ಅಂದ ತುಂಬಿಕೊಳ್ಳಬೇಕಾದರೆ ಹಲ್ಲುಗಳು ಆರೋಗ್ಯಯುತವಾಗಿರಬೇಕು.

 

ಹಲ್ಲು ಸ್ವಸ್ಥವಾಗಿದ್ದಾಗ ಅದರ ಮಹತ್ವ ಗೊತ್ತಾಗುವುದು ಕಡಿಮೆ. ಎಷ್ಟೋ ಬಾರಿ ಹಲ್ಲುಜ್ಜುವಿಕೆ ಮಹಾನ್ ಬೋರಿನ ಕೆಲಸ ಅಂತಲೂ ಅನ್ನಿಸಬಹುದು. ಆದರೆ, ಹಲ್ಲನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಬಹುತೇಕ ವೇಳೆ ಹಲ್ಲು ಬಾಧೆ ಕೊಡಲು ಶುರು ಮಾಡಿದ ಮೇಲಷ್ಟೇ ಗೊತ್ತಾಗುವುದು ವಿಪರ್ಯಾಸವೇ ಸರಿ. 
ಇದು ಮಾರುಕಟ್ಟೆ ಯುಗ. ಹಣ ಕೊಟ್ಟರೆ ಬೇಕಾದ್ದನ್ನು ಕೊಳ್ಳಬಹುದು. ದಿನಕ್ಕೊಂದರಂತೆ ತಂತ್ರಜ್ಞಾನದ ಸವಲತ್ತುಗಳೂ ಹೆಚ್ಚುತ್ತಿವೆ. ಆದರೆ, ಹೆಚ್ಚು ಹಣ ಕೊಟ್ಟ ಮಾತ್ರಕ್ಕೆ, ತಂತ್ರಜ್ಞಾನ ಅಳವಡಿಕೆಯಾದ ತಕ್ಷಣಕ್ಕೆ ಗುಣಮಟ್ಟವೂ ಖಾತ್ರಿ ಎನ್ನಲಾಗದು.

ಯಾವುದೇ ಉತ್ಪನ್ನ / ಸೇವೆಯ ಬಗ್ಗೆ ಹಲವಾರು ಮಾಹಿತಿಗಳು ಪ್ರಚಾರದಲ್ಲಿದ್ದರೂ ಗ್ರಾಹಕರಿಗೆ ಗೊಂದಲಗಳೂ ಸಾಕಷ್ಟಿವೆ. ಭಾರತೀಯ ಗ್ರಾಹಕರ ಸಂಘಟನಾ ಬಳಗದ ಸಾರ್ವಜನಿಕ ದತ್ತಿ ಟ್ರಸ್ಟ್ ಆದ `ಕಾನ್ಸರ್ಟ್~ (ಎ ಸೆಂಟರ್ ಫಾರ್ ಕನ್ಸೂಮರ್ ಎಜುಕೇಷ, ರೀಸರ್ಚ್, ಟೀಚಿಂಗ್, ಟ್ರೇನಿಂಗ್ ಅಂಡ್ ಟೆಸ್ಟಿಂಗ್)ಗ್ರಾಹಕರ ಗೊಂದಲ ನಿವಾರಿಸಿ, ಅವರ ಅರಿವು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದೆ.ಸಂಸ್ಥೆಯು ದಕ್ಷಿಣ ಭಾರತದಲ್ಲಿ ಇದೇ ಮೊತ್ತಮೊದಲ ಬಾರಿಗೆ ಏಳು ಉತ್ಪನ್ನಗಳ ಹಾಗೂ ಮೂರು ಸೇವೆಗಳ ಸಮೀಕ್ಷೆ ನಡೆಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಅನುದಾನದ ನೆರವಿನಿಂದ ಕೈಗೊಂಡ ಸಮೀಕ್ಷೆಯು ಉತ್ಪನ್ನಗಳ ಪ್ರಯೋಗಾಲಯ ಪರೀಕ್ಷೆಯನ್ನೂ ಒಳಗೊಂಡಿದೆ. ಅಡುಗೆ ಎಣ್ಣೆ, ಹಾಲು, ವೆಟ್ ಗ್ರೈಂಡರ್‌ನೋವು ನಿವಾರಕ ಕ್ರೀಮ್, ಸೊಳ್ಳೆ ನಿವಾರಕ ಮ್ಯಾಟ್ ಮತ್ತು ಕಾಯಿಲ್, ವಾಟರ್ ಪ್ಯೂರಿಫೈಯರ್, ಹಾಗೂ ಹಲ್ಲುಜ್ಜುವ  ಪೇಸ್ಟ್ ಇವು ಪರೀಕ್ಷೆಗೊಂಡ ಏಳು ಉತ್ಪನ್ನಗಳು. ಜೀವ ವಿಮೆ, ಬ್ಯಾಂಕಿಂಗ್ ಮತ್ತು ಮೊಬೈಲ್ ಸಮೀಕ್ಷೆಗೊಂಡ ಸೇವಾ ಕ್ಷೇತ್ರಗಳು.ವಿಶ್ವಾಸಾರ್ಹ ದಿನಪತ್ರಿಕೆ `ಪ್ರಜಾವಾಣಿ~ ಜತೆ ಸೇರಿ ಈಗಾಗಲೇ ಅಡುಗೆ ಎಣ್ಣೆ, ಹಾಲು, ವೆಟ್ ಗ್ರೈಂಡರ್ ಮತ್ತು ಬ್ಯಾಂಕಿಂಗ್ ಸೇವೆ ಕುರಿತ ಸಮೀಕ್ಷೆಗಳನ್ನು ಜನರ ಮುಂದಿಟ್ಟಿದ್ದೇವೆ.ಇದೀಗ ಜನರ ಪ್ರತಿನಿತ್ಯದ ಬಳಕೆ ವಸ್ತುವಾದ ಹಲ್ಲುಜ್ಜುವ ಪೇಸ್ಟ್‌ಗಳ ಕುರಿತ ಸಮೀಕ್ಷೆ ಪ್ರಕಟಿಸುತ್ತಿದ್ದೇವೆ. ಈ ಮಾಹಿತಿಗಳು ಒಬ್ಬರಿಂದ ಇನ್ನೊಬ್ಬರಿಗೆ ತಿಳಿದು ಬಳಸುವ ವಸ್ತು/ಸೇವೆಗಳ ಬಗ್ಗೆ ಗ್ರಾಹಕರಲ್ಲಿ ತಿಳಿವಳಿಕೆ ಹೆಚ್ಚಾಗಬೇಕೆಂಬುದೇ ಇದರ ಉದ್ದೇಶ.

ಮನುಷ್ಯ ಹಲ್ಲುಜ್ಜುವಿಕೆಯನ್ನು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಆರಂಭಿಸಿದ ಎನ್ನುತ್ತದೆ ಇತಿಹಾಸ. ಆದರೆ, ಆಗ ಈಗಿರುವಂತಹ ಹಲ್ಲುಪುಡಿಗಳಾಗಲಿ , ಪೇಸ್ಟ್‌ಗಳಾಗಲಿ  ಇರಲಿಲ್ಲ. 19ನೇ ಶತಮಾನದ ಮಧ್ಯದ ಅವಧಿಯವರೆಗೂ ಹಲ್ಲುಜ್ಜುವಿಕೆಗೆ ಎಂತೆಂಥದೋ ಒರಟು ಪದಾರ್ಥಗಳನ್ನೋ, ಪುಡಿಗಳನ್ನೋ (ಅಪಘರ್ಷಕಗಳನ್ನೋ, ಅಬ್ರೇಸಿವ್‌ಗಳನ್ನೋ) ಬಳಸುತ್ತಿದ್ದರು.

ಅರಬ್ಬರು, ನಯವಾದ ಮಣ್ಣು (ಚೌಳು), ಬೂದಿ ಅಥವಾ ಇವುಗಳನ್ನು ಹೋಲುವ ಇತರ ಪುಡಿಗಳಿಂದ ಹಲ್ಲು ಉಜ್ಜುತ್ತಿದ್ದರು. ಯೂರೋಪಿಯನ್ನರು, ಹಲ್ಲಿನ ಮೇಲಿನ ಪಾಚಿ, ಲೋಳೆಯ ಸಂಗ್ರಹಗಳನ್ನು ನಿವಾರಿಸಲು ಪ್ರಬಲ ಆಮ್ಲಗಳನ್ನು ಉಪಯೋಗಿಸುತ್ತಿದ್ದರು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, 20ನೇ ಶತಮಾನದ ಆರಂಭದವರೆಗೂ ಒಂದು ರೀತಿಯ  ಘಾಟಾದ ಮಿಶ್ರಣಗಳನ್ನು ಉಪಯೋಗಿಸಲಾಗುತ್ತಿತ್ತು. ಪುಡಿ ಉಪ್ಪನ್ನು ಬಳಸುವ ಪದ್ಧತಿಯೂ ಚಾಲ್ತಿಯಲ್ಲಿತ್ತು. ನಮ್ಮ ರಾಷ್ಟ್ರದ ಹಳ್ಳಿಗಾಡಿನಲ್ಲಿ ಚೌಳು ಮಣ್ಣ, ಬೇವಿನ ಕಡ್ಡಿ ಇತ್ಯಾದಿಗಳನ್ನು ಬಳಸಿ ಹಲ್ಲುಜ್ಜುವ ಪದ್ಧತಿ ಇತ್ತು. ಆದರೆ, ಇಂತಹ ಒರಟು ಪುಡಿಗಳಿಂದ ಹಲ್ಲುಜ್ಜಿದರೆ ಹಲ್ಲಿನ ಮೇಲಿನ ಗಾಜಿನ ಲೇಪಕ್ಕೆ (ಎನಾಮೆಲ್) ಹಾನಿಯಾಗುತ್ತದೆಂಬುದು ಅದಾಗಲೇ ಅರಬ್ಬರ ಗಮನಕ್ಕೆ ಬಂದಿತ್ತು.19ನೇ ಶತಮಾನದ ಮಧ್ಯಭಾಗದಲ್ಲಿ ಹಲ್ಲುಜ್ಜುವ ಪೇಸ್ಟ್ ಆವಿಷ್ಕಾರಗೊಂಡಿತು. ನಂತರ, ಪೇಸ್ಟ್ ತಯಾರಿಕೆ ಪರಿಷ್ಕೃತಗೊಳ್ಳುತ್ತಾ ಸಾಗಿ ಇದೀಗ ಜಗತ್ತಿನೆಲ್ಲೆಡೆ ದಿನನಿತ್ಯದ ಬಳಕೆಯ ವಸ್ತುವಾಗಿಬಿಟ್ಟಿದೆ.ಅಂದಹಾಗೆ, ಬಂಧಕಗಳು (ಬೈಂಡರ್ಸ್‌),  ಅಪಘರ್ಷಕ (ಅಬ್ರೇಸಿವ್), ಶ್ವೇತಕಾರಕ (ಟೂಥ್ ವೈಟ್‌ನರ್ಸ್‌), ಸಂರಕ್ಷಕ (ಪ್ರಿಸರ್ವೇಟಿವ್),  ನೀರು, ಬಣ್ಣಕಾರಕ (ಕಲರಿಂಗ್ ಏಜೆಂಟ್ಸ್)- ಇವು ಜನತೆಯ ಪ್ರತಿದಿನದ ಅವಿಭಾಜ್ಯ ಅಂಗವಾಗಿರುವ ಪೇಸ್ಟ್‌ನ ಪ್ರಮುಖ ಘಟಕಾಂಶಗಳಾಗಿವೆ. ಇವುಗಳ ಜತೆಗೆ  ಹುಳುಕು ಹಲ್ಲು, ದಂತಕುಳಿ ಪ್ರತಿರೋಧಿಸುವ ಏಜೆಂಟ್‌ಗಳು, ಹಲ್ಲಿನ ಮೇಲೆ ಬ್ಯಾಕ್ಟೀರಿಯಾ ಅಸ್ತಿತ್ವವನ್ನು ತೊಡೆದು ಹಾಕುವ ಆಂಟಿ ಪ್ಲೇಕ್ ಏಜೆಂಟ್‌ಗಳು, ಹಲ್ಲಿನ ಪಾಚಿಗಟ್ಟುವಿಕೆ ನಿವಾರಿಸುವ ಆಂಟಿ ಟಾರ್ಟರ್ ಇನ್ನಿತರ ಘಟಕಾಂಶಗಳನ್ನು ಪೇಸ್ಟ್ ಒಳಗೊಂಡಿರುತ್ತದೆ.ಯಾವುದೇ ಪೇಸ್ಟಿನ ಗುಣಮಟ್ಟ ನಿರ್ಧರಿಸುವಾಗ ಅದೆಷ್ಟು ನಯವಾಗಿದೆ, ಅದರ ನೊರೆ ಸಾಮರ್ಥ್ಯ, ಅದರ ಪ್ರಸರಣ ಗುಣ ಹಾಗೂ ಆರೋಗ್ಯದ ಮೇಲೆ ಅದು ಬೀರುವ ಪರಿಣಾಮ ಇತ್ಯಾದಿಗಳು ಮುಖ್ಯವಾಗುತ್ತವೆ. ಪೇಸ್ಟ್ ಎಷ್ಟು ನಯವಾಗಿದೆ ಎಂಬುದು ಅದರಲ್ಲಿರುವ ಅಪಘರ್ಷಕದ ಕಣಗಳ ಗಾತ್ರ, ಹಾಗೂ ಅವುಗಳ ಆಕೃತಿಯನ್ನು ಅವಲಂಬಿಸಿರುತ್ತದೆ. ನೊರೆ ಬರಿಸುವ ಸಲುವಾಗಿ ಮಾರ್ಜಕಗಳನ್ನು ಸೇರಿಸಿರಲಾಗುತ್ತದೆ.ಆದರೆ, ಯಾವುದೇ ಪೇಸ್ಟ್‌ನಲ್ಲಿ ಸೋಡಿಯಂ ಲಾರಿಲ್ ಸಲ್ಫೇಟ್‌ನ್ನು (ಎಸ್‌ಎಲ್‌ಎಸ್) ನೊರೆಕಾರಕವಾಗಿ ಬಳಸಿದ್ದರೆ ಗ್ರಾಹಕರು ವಿಶೇಷ ಎಚ್ಚರಿಕೆ ವಹಿಸಬೇಕು. ಈ ಅಂಶ ಪೇಸ್ಟ್‌ನಲ್ಲಿ ಸೇರಿದ್ದರೆ ಒಸಡುಗಳಿಗೆ ಕಿರಿಕಿರಿಯಾಗುತ್ತದೆ. ವಿಶೇಷವಾಗಿ ಕೆಮೊಥೆರಪಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಎಸ್‌ಎಲ್‌ಎಸ್ ತೀವ್ರ ತೊಂದರೆ ನೀಡುವ ಸಂಭವವಿರುತ್ತದೆ. ಅಧಿಕ ಪ್ರಮಾಣದಲ್ಲಿ ಇದರ ಸೇವನೆಯು ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೂ ದುಷ್ಪರಿಣಾಮ ಬೀರಬಹುದು.ಇನ್ನು ಪ್ರಸರಣ ಗುಣದ ವಿಷಯಕ್ಕೆ ಬಂದರೆ, ಏಕ ಪ್ರಕಾರವಾಗಿ ಎಲ್ಲ ದಿಕ್ಕಿಗೂ ಹರಡಿಕೊಳ್ಳುವ ಗುಣ ಪೇಸ್ಟ್‌ಗೆ ಇರಬೇಕು. ಪೇಸ್ಟಿನ ದ್ರವ ಮತ್ತು ಘನ ಅಂಶಗಳುಪ್ರತ್ಯೇಕಗೊಳ್ಳಬಾರದು.ಅದೇ ರೀತಿ ಪೇಸ್ಟಿನ ಪಿಎಚ್ 7ಕ್ಕಿಂತ ಹೆಚ್ಚು, ಅಂದರೆ ಪ್ರತ್ಯಾಮ್ಲೀಯ ಪಿಎಚ್ ಇದ್ದರೆ ಒಳ್ಳೆಯದು. ಇಂತಹ ಪೇಸ್ಟ್ ಬಾಯಿಯಲ್ಲಿನ ಪಿಎಚ್ ಬದಲಾವಣೆಗಳನ್ನು ಸಮಸ್ಥಿತಿಗೆ ತರಲು ನೆರವಾಗುತ್ತದೆ. ಹಲ್ಲು ಹುಳುಕಾಗುವುದನ್ನು ಹಾಗೂ ದಂತಕುಳಿಯನ್ನು ತಡೆಯಲು ಕೂಡ ಇದು ಸಹಕಾರಿ.ಆಮ್ಲೀಯ ಪೇಸ್ಟ್‌ಗಳು ಬಾಯಿಯ ಆರೋಗ್ಯವನ್ನು ಇನ್ನಷ್ಟು ಹಾಳುಗೆಡವುತ್ತವೆ.ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಪೇಸ್ಟಿನಲ್ಲಿ ಅಧಿಕ ಭಾರದ ಲೋಹಗಳಾದ ಸೀಸ ಮತ್ತು ಆರ್ಸೆನಿಕ್‌ಗಳು ನಿಗದಿತ ಮಟ್ಟಕ್ಕಿಂತ ಕಡಿಮೆ ಇರಬೇಕು.  ಸೀಸದ ಪ್ರಮಾಣ 2 ಪಾರ್ಟ್ ಪರ್ ಮಿಲಿಯನ್‌ಗಿಂತ (2 ಪಿಪಿಎಂ, ಅಂದರೆ ಪ್ರತಿ ದಶಲಕ್ಷ ಕಣಗಳಲ್ಲಿ 2 ಕಣಗಳು) ಕಡಿಮೆ ಹಾಗೂ ಆರ್ಸೆನಿಕ್ ಪ್ರಮಾಣ 20 ಪಾರ್ಟ್ಸ್ ಪರ್ ಮಿಲಿಯನ್‌ಗಿಂತ (20 ಪಿಪಿಎಂ, ಅಂದರೆ ಪ್ರತಿ ದಶಲಕ್ಷ ಕಣಗಳಲ್ಲಿ 20 ಕಣಗಳು) ಕಡಿಮೆ ಇರಬೇಕು.ಹಲ್ಲು ಹಾಳಾಗುವುದನ್ನು ತಡೆಯಲು ಪೇಸ್ಟ್‌ನಲ್ಲಿ ಫ್ಲೋರೈಡ್ ಅಯಾನ್‌ಗಳ ಉಪಸ್ಥಿತಿ ಕನಿಷ್ಠ 1000 ಪಿಪಿಎಂ ಗಳಾದರೂ (ಪ್ರತಿ ದಶಲಕ್ಷ ಕಣಗಳಲ್ಲಿ 1000 ಕಣಗಳು) ಇರಬೇಕು.  (ಮುಂದುವರಿಯುವದು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry