ದಂಪತಿಯ ಅಪರೂಪದ ಕಲಾ ಪಯಣ

7

ದಂಪತಿಯ ಅಪರೂಪದ ಕಲಾ ಪಯಣ

Published:
Updated:

ಮೂಲತಃ ಬಂಗಾಳಿಯವರಾದ ಭಾಸ್ವತಿ ಮತ್ತು ಜ್ಯೋತಿ ದತ್ತಾ ಎಂಬ ದಂಪತಿಯದ್ದು ಕಲೆಯ ಕುಟುಂಬ. ಪತ್ನಿ ಕ್ಯಾನ್ವಾಸ್ ಮೇಲೆ ಕೈಚಳಕ ತೋರಿದರೆ, ಪತಿ ಛಾಯಾ ಚಿತ್ರಗಳ ಮೂಲಕ ತಮ್ಮ ಅಭಿರುಚಿಯನ್ನು ಅಭಿವ್ಯಕ್ತಪಡಿಸಲು ಹೊರಟವರು. ಇಬ್ಬರ ಹಾದಿಯಲ್ಲೂ ಕಲೆ ಅರಳಿಕೊಂಡಿದೆ. ಈ ಕಲೆಯನ್ನು `ಥ್ರೂ ಇನ್ನರ್ ಐ~ (ಒಳಗಣ್ಣಿನ ಮೂಲಕ) ಎಂಬ ಪ್ರದರ್ಶನದ ಮೂಲಕ ನಗರದ  ಜನರಿಗೆ ಪರಿಚಯಿಸಲು ಮುಂದಾಗಿದ್ದಾರೆ.

ಭಾಸ್ವತಿ ಅವರಿಗೆ ಮೊದಲಿನಿಂದಲೂ ಬಣ್ಣಗಳ ಜೊತೆ ನಂಟು. ಬಣ್ಣಗಳಲ್ಲೇ ಭಾವಗಳನ್ನು ಮೂಡಿಸುವ ಗೀಳು ಹುಟ್ಟಿಕೊಂಡದ್ದು  ಚಿಕ್ಕಂದಿನಿಂದಲೇ. ಸಾಂಪ್ರದಾಯಿಕತೆಯ ಒಪ್ಪಿಗೆ ಆಧುನಿಕತೆಯ ನೆಚ್ಚಿಗೆ- ಎರಡೂ ಹದವರಿತು ಬೆರೆತ ಸೂಕ್ಷ್ಮ ಅವರ ಚಿತ್ರಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆಕ್ರಿಲಿಕ್, ತೈಲವರ್ಣ, ಜಲವರ್ಣಗಳನ್ನು ಕ್ಯಾನ್ವಾಸ್ ಮೇಲೆ ಭಾವಕ್ಕೆ ತಕ್ಕಂತೆ ಬಳಸುವುದಕ್ಕೇ ಇವರು ಹೆಸರುವಾಸಿ.

ಭಾಸ್ವತಿಯವರ ಪತಿ ಜ್ಯೋತಿ ದತ್ತಾ ಅವರು ಚಿಕ್ಕ ವಯಸ್ಸಿನಲ್ಲಿಯೇ ಫೋಟೊಗ್ರಫಿ  ಕಡೆಗೆ ವಾಲಿದವರು. ಎಂಜಿನಿಯರ್ ಆಗಿರುವ ಇವರಿಗೆ ಪ್ರಕೃತಿ ಕುರಿತು ಕಾಳಜಿ, ಪ್ರೀತಿ. ಅವರು ಪ್ರಕೃತಿಯ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಸಿಕೊಳ್ಳಲು ಅದೇ ಕಾರಣ.

ಭಾಸ್ವತಿ ಅವರ ಚಿತ್ರಗಳಲ್ಲಿ ಹೆಣ್ಣು, ಹೂವು ಎರಡಕ್ಕೂ ವಿಶೇಷ ಸ್ಥಾನ. ಜೊತೆಗೆ ಪ್ರಕೃತಿಯೂ ಸೇರಿಕೊಂಡಿದೆ. ಇವರ `ದಿ ರೆಫ್ಲೆಕ್ಷನ್~ (ಪ್ರತಿಬಿಂಬ)  ಕಲಾಕೃತಿಯಲ್ಲಿ ನೀರಿನ ಪ್ರತಿಬಿಂಬ ಮೂಡಿಸಲು ಬಣ್ಣಗಳನ್ನು ಬಳಸಿರುವ ರೀತಿ ಬೆರಗು ಹುಟ್ಟಿಸುತ್ತದೆ. `ದಿ ಡಿವೈಡ್~ (ವಿಭಜನೆ), `ದಿ ಮಾಸ್ಕ್~ (ಮುಖವಾಡ) ಎಂಬ ಚಿತ್ರಗಳಂತೂ ಮನುಷ್ಯನ ಸೋಗಲಾಡಿತನ, ಇಬ್ಬಂದಿ ವ್ಯಕ್ತಿತ್ವವನ್ನು ಲೇವಡಿ ಮಾಡುತ್ತವೆ. `ದಿ ಇನೊಸೆನ್ಸ್~ (ಮುಗ್ಧತೆ) ಎಂಬ ಮಕ್ಕಳ ತೈಲವರ್ಣ,  ಸ್ನೋಯಿ ವಿಲೇಜ್ (ಹಿಮಭರಿತ ಹಳ್ಳಿ), `ಟ್ಯುಲಿಪ್ಸ್~, `ಆರ್ಕಿಡ್~, `ವಿಕ್ಟೋರಿಯಾ~ `ಡೆಸರ್ಟ್ ವಿಮೆನ್~ (ಮರಳುಗಾಡಿನ ಮಹಿಳೆಯರು) ಹೀಗೆ ಹಲವು ಚಿತ್ರಗಳು ಇವರಿಂದ ರೂಪುತಾಳಿವೆ. ಗಣೇಶನೂ ಇಲ್ಲಿ ಬಣ್ಣಗಳಿಂದ ವಿಭಿನ್ನ ರೂಪದಲ್ಲಿ ಮೂಡಿದ್ದಾನೆ.

ಇನ್ನು ಜ್ಯೋತಿ ದತ್ತಾ ಅವರ ಛಾಯಾಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ. `ಬರ್ನಿಂಗ್ ಗ್ಲೋ~ ಎಂಬ ಬೂದಿ ಮುಚ್ಚಿದ ಕೆಂಡದ ಕೆಂಪು ಎಂತಹವರನ್ನೂ ಅಚ್ಚರಿಗೊಳಿಸುತ್ತದೆ. ಛಾಯಾಚಿತ್ರಗಳಿಗೆ ನೀಡಿರುವ ಶೀರ್ಷಿಕೆಗಳು ಅವರ ಕ್ರಿಯಾಶೀಲತೆಯನ್ನು ಒರೆಗೆಹಚ್ಚಿದಂತಿದೆ.

ಪುಟ್ಟ ಅಳಿಲಿನ `ಗಿವ್ ಮಿ ವೇ~ (ದಾರಿ ಬಿಡಿ), ಫ್ಲೆಮಿಂಗೋಸ್, `ಬಾತ್ಡ್ ಇನ್ ದಿ ಗೋಲ್ಡನ್ ಸನ್~ (ಸೂರ್ಯನ ಬಂಗಾರದ ಕಿರಣಗಳಿಂದ ಮಿಂದ ಪರ್ವತ) ಇವೆಲ್ಲವೂ ಪ್ರಾಣಿ ಪರಿಸರ ಕುರಿತ ಪ್ರೀತಿಯನ್ನು ಬಿಂಬಿಸುತ್ತದೆ. `ಡೇ ಬ್ರೇಕ್~ (ದಿನದ ವಿರಾಮ) ಎಂಬ ಕಲಾಕೃತಿಯಲ್ಲಿ ಗೋಧೂಳಿ ಸಮಯವನ್ನು ಇವರು ಹಿಡಿದಿಟ್ಟಿರುವ ರೀತಿ ನೈಜವಾಗಿದೆ. ಮುಸ್ಸಂಜೆ ಹೊತ್ತಲ್ಲಿ, ತುಂಬಿದ ನದಿ ನೀರಿನಲ್ಲಿ ನಿಂತ ವ್ಯಕ್ತಿಯ ಏಕಾಂತದ ಫೋಟೋ ಎಷ್ಟು ಸೊಗಸಾಗಿದೆಯೆಂದರೆ ಅದಕ್ಕೆ ಯಾವ ಶೀರ್ಷಿಕೆ ಕೊಡಬೇಕು ಎಂದು ಅವರಿಗೇ ತೋಚಿಲ್ಲ. ಹಾಗಾಗಿ ಅದು `ಅನ್‌ಟೈಟಲ್ಡ್~ (ಹೆಸರಿಲ್ಲದ್ದು) ಚಿತ್ರ.

`ವಿ ಟೂ~ (ನಾವಿಬ್ಬರೂ), `ಇನ್ನರ್ ಗ್ಲೋ~ (ಒಳಗಿನ ಹೊಳಪು), ಬ್ಯಾಕ್ ಟು ಫ್ಯೂಚರ್ (ಮರಳಿ ಭವಿಷ್ಯಕ್ಕೆ), `ದಿ ಲಾಸ್ಟ್ ರೇಸ್~ (ಕೊನೆಯ ಕಿರಣ), `ದಿ ವಿಲೇಜರ್~ (ಹಳ್ಳಿಯವ) ಹೀಗೆ ಹಲವು ದೃಶ್ಯಗಳು ಇವರ ಕ್ಯಾಮೆರಾ ಕೈಚಳಕಕ್ಕೆ ಸಾಕ್ಷಿಯಾಗಿವೆ. ಇನ್ನು `ದಿ ಸ್ಮೈಲ್~ (ನಗು) ಎಂಬ ಅಜ್ಜಿಮುಖದ ಚಿತ್ರವಂತೂ ಎಲ್ಲರನ್ನೂ ಅರೆಕ್ಷಣ ಹಿಡಿದು ನಿಲ್ಲಿಸುತ್ತದೆ. ಮುಖದಲ್ಲಿ ಮೂಡಿದ ಸುಕ್ಕುಗಳ ನಡುವೆ ನೋವು ಹುದುಗಿಸಿಟ್ಟು, ಆ ಅಜ್ಜಿ ನಗುತ್ತಿರಬಹುದೇನೋ ಎಂಬ ಭಾವ ಕಟ್ಟಿಕೊಡುವ ಚಿತ್ರವದು.

“ಯಾವುದೇ ಕಲೆಯನ್ನು ಒಳಗಣ್ಣಿನಿಂದ ನೋಡಿದರೆ ಮಾತ್ರ ಅದರ ಸಾರ ಅರಿವಿಗೆ ಬರುವುದು. ಅದರಲ್ಲಿರುವ ಸಂದೇಶ ಜ್ಞಾನಕ್ಕೆ ನಿಲುಕುವುದು. ಅದಕ್ಕಾಗಿಯೇ ಈ ಪ್ರದರ್ಶನಕ್ಕೆ `ಥ್ರೂ ಇನ್ನರ್ ಐ~ ಎಂಬ ಹೆಸರಿಟ್ಟಿರುವುದು” ಎನ್ನುತ್ತಾರೆ ಜ್ಯೋತಿ ದತ್ತಾ.

ಇವರ ಈ ಚಿತ್ರಕಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನವು ಜೂನ್ 3ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry