ದಂಪತಿ ಕೊಲೆ ಯತ್ನ: ಪತ್ನಿ ಸಾವು

7

ದಂಪತಿ ಕೊಲೆ ಯತ್ನ: ಪತ್ನಿ ಸಾವು

Published:
Updated:

ಬೆಂಗಳೂರು: ಮಲಗಿದ್ದ ದಂಪತಿ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿದ ಪರಿಣಾಮ ಪತ್ನಿ ಮೃತಪಟ್ಟು ಪತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಪರಪ್ಪಅನಗ್ರಹಾರದ ಬೆರೆಟೇನಅಗ್ರಹಾರದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.ತಮಿಳುನಾಡಿನ ಮೂಲದ ಗೋವಿಂದಮ್ಮ (28) ಕೊಲೆಯಾದವರು. ಗಾಯಗೊಂಡಿರುವ ಅವರ ಪತಿ ಚಾಮರಾಜು ನಿಮ್ಹಾನ್ಸ್‌ಗೆ ದಾಖಲಾಗಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿರುವುದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗೋವಿಂದಮ್ಮ ಮತ್ತು ಚಾಮರಾಜು ಗುಜರಿ ವಸ್ತುಗಳನ್ನು ಆರಿಸಿಕೊಂಡು ಬಂದು ಮಾರಾಟ ಮಾಡುತ್ತಿದ್ದರು. ಬೆರೆಟೇನಅಗ್ರಾಹಾರದ ಶಾಲೆಯೊಂದರ ಬಳಿ ಅವರು ಶೆಡ್ ಹಾಕಿಕೊಂಡಿದ್ದರು. ರಾತ್ರಿ ಅವರು ಶೆಡ್ ಹೊರಗೆ ಮಲಗಿದ್ದಾಗ ಇಬ್ಬರು ದುಷ್ಕರ್ಮಿಗಳು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಶೆಡ್ ಸಮೀಪದಲ್ಲೇ ಮಲಗಿದ್ದ ಕದೀರಿಯಪ್ಪನ್ ಎಂಬುವರು ಶಬ್ಧ ಕೇಳಿ ಎಚ್ಚರಗೊಂಡಾಗ ಆತಂಕಗೊಂಡ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆ ನಂತರ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗೋವಿಂದಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಲೆ ಮೇಲೆ ಕಲ್ಲು ಎತ್ತಿ ಹಾಕಿದ ಆರೋಪಿಗಳು ಚಾಮರಾಜ ಅವರ ಜೇಬಿನಲ್ಲಿ ದುಡ್ಡು ಹುಡುಕುತ್ತಿದ್ದರು ಎಂದು ಕದೀರಿಯಪ್ಪನ್ ತಿಳಿಸಿದ್ದಾರೆ. ಹಣ ದೋಚುವ ಉದ್ದೇಶದಿಂದ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಪರಪ್ಪನಅಗ್ರಹಾರ ಠಾಣೆಯ ಇನ್‌ಸ್ಪೆಕ್ಟರ್ ಎ.ವಿ. ಲಕ್ಷ್ಮಿನಾರಾಯಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry