ದಂಪತಿ ಸೇರಿ ನಾಲ್ಕು ಮಂದಿ ಬಂಧನ

7

ದಂಪತಿ ಸೇರಿ ನಾಲ್ಕು ಮಂದಿ ಬಂಧನ

Published:
Updated:

ಬೆಂಗಳೂರು: ಚೀಟಿ ವ್ಯವಹಾರ ಮಾಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಕಾಡುಗೋಡಿ ನಿವಾಸಿ ಕೃಷ್ಣಮೂರ್ತಿ (48) ಮತ್ತು ಅವರ ಪತ್ನಿ ಶಾಂತಮ್ಮ (45) ಸೇರಿದಂತೆ ನಾಲ್ಕು ಮಂದಿಯನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.ಕೋಣನಕುಂಟೆಯ ಸುರೇಶ್ (40) ಹಾಗೂ ವೆಂಕಟೇಶ್ (42) ಇತರೆ ಬಂಧಿತ ಆರೋಪಿಗಳು. ಪ್ರಕರಣದ ಪ್ರಮುಖ ಆರೋಪಿ ಕೃಷ್ಣಮೂರ್ತಿ, ಪತ್ನಿಯ ಹೆಸರಿನಲ್ಲಿ ಹೂಡಿ ಬಳಿಯ ಬಸವನಪುರದಲ್ಲಿ ಸುಮಾರು 15 ವರ್ಷಗಳಿಂದ `ಮಾರುತಿ ಚಿಟ್‌ಫಂಡ್' ಎಂಬ ಸಂಸ್ಥೆ ನಡೆಸುತ್ತಿದ್ದ. ಸುರೇಶ್ ಮತ್ತು ವೆಂಕಟೇಶ್, ಆ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳು ಆರಂಭದ ವರ್ಷಗಳಲ್ಲಿ ಹೂಡಿಕೆದಾರರಿಗೆ ಸರಿಯಾಗಿಯೇ ಹಣ ಹಿಂದಿರುಗಿಸಿದ್ದರು. ಇದರಿಂದಾಗಿ ಅವರನ್ನು ನಂಬಿದ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹಣ ಕಟ್ಟಿದ್ದರು. ಬಳಿಕ ಆರೋಪಿಗಳು ಹಣ ಹಿಂದಿರುಗಿಸದೆ ಸಂಸ್ಥೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು. ಅವರಿಂದ ವಂಚನೆಗೊಳಗಾದ ವ್ಯಕ್ತಿಗಳು ಸೆ.1ರಂದು ಠಾಣೆಗೆ ದೂರು ನೀಡಿದರು. ಆ ದೂರು ಆಧರಿಸಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆ ನಾಲ್ಕು ಮಂದಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೆಲ ಹೂಡಿಕೆದಾರರು ್ಙಎರಡು ಲಕ್ಷದಿಂದ ಐದು ಕೋಟಿವರೆಗೆ ಹಣ ಕಟ್ಟಿದ್ದಾರೆ. ಪ್ರಕರಣದ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸ್ನೇಹಿತರಿಂದಲೂ ಕಟ್ಟಿಸಿದ್ದೆ: `ಒಂದೂವರೆ ವರ್ಷದ ಹಿಂದೆ ಆ ಸಂಸ್ಥೆಯಲ್ಲಿ ಹಣ ಹೂಡಿದ್ದೆ. ಅಲ್ಲದೇ, ಸ್ನೇಹಿತರಿಂದಲೂ ಹಣ ಕಟ್ಟಿಸಿದ್ದೆ. ಆಗಸ್ಟ್ 23ರಂದು ಚೀಟಿ ಹಣ ಕಟ್ಟಲು ಸಂಸ್ಥೆಯ ಬಳಿ ಹೋದಾಗ ಕೃಷ್ಣಮೂರ್ತಿ, ಹೂಡಿಕೆದಾರರ ಹಣದೊಂದಿಗೆ ಪರಾರಿಯಾಗಿರುವುದು ಗೊತ್ತಾಯಿತು. ನಂತರ ಅವರ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಲು ಯತ್ನಿಸಿದೆ. ಆದರೆ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಶಾಂತಮ್ಮ ಅವರ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ' ಎಂದು ಆರೋಪಿಗಳಿಂದ ವಂಚನೆಗೊಳಗಾಗಿರುವ ಆರ್.ಟಿ.ನಗರ ನಿವಾಸಿ ಚರಣ್‌ರಾವ್ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry