ಗುರುವಾರ , ಏಪ್ರಿಲ್ 15, 2021
31 °C

ದಕ್ಷಿಣದ ತಾಜ್ ಮಹಲ್

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಆಗ್ರಾದ ತಾಜ್‌ಮಹಲ್ ವಿಶ್ವಪ್ರಸಿದ್ಧ ಪ್ರೇಮಸ್ಮಾರಕ. ಅದನ್ನು ಹೋಲುವಂತಹ ಇನ್ನೊಂದು ಮಹಲು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್‌ನಲ್ಲಿದೆ. ‘ದಕ್ಷಿಣದ ತಾಜ್‌ಮಹಲ್’ ಎನ್ನುವ ಖ್ಯಾತಿಯ ಇದರ ಹೆಸರು ‘ಬೀಬೀ ಕಾ ಮಕ್ಬರಾ’.ಮೊಗಲ್ ಸಾಮ್ರಾಜ್ಯ ಉನ್ನತ ಸ್ಥಿತಿಯಲ್ಲಿದ್ದ ಕಾಲದಲ್ಲಿ (1631) ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮಮ್ತಾಜ್‌ಳ ಮೇಲಿನ ಪ್ರೀತಿಯ ದ್ಯೋತಕವಾಗಿ ತಾಜಮಹಲ್ ಕಟ್ಟಿಸಿದ್ದ. ‘ಬೀಬೀ ಕಾ ಮಕ್ಬರಾ’ ಕೂಡ ಮೊಗಲ್ ದೊರೆಗಳ ಕೊಡುಗೆಯೇ. ಚಕ್ರವರ್ತಿ ಔರಂಗಜೇಬನ ಮಡದಿ ರಬಿಯಾ-ಉಲ್-ದೌರಾನಿ (ದಿಲ್‌ರಾಸ್ ಬಾನು ಬೇಗಂ) ನೆನಪಿಗಾಗಿ, 1661ರಲ್ಲಿ ಈ ಮಹಲ್ ನಿರ್ಮಾಣಗೊಂಡಿತು. ಆಗ್ರಾದ ತಾಜ್‌ನಷ್ಟು ಭವ್ಯತೆ ಇಲ್ಲದ ಇದಕ್ಕೆ ‘ಬಡವರ ತಾಜ್‌ಮಹಲ್’ ಎನ್ನುವ ಹೆಸರೂ ಇದೆ.ಷಹಜಹಾನ್ ನಿರ್ಮಿಸಿದ ಪ್ರೇಮಸ್ಮಾರಕ ಆತನ ಮೊಮ್ಮಗ ಆಜಂ ಷಹಾನಿಗೆ (ಔರಂಗಜೇಬನ ಮಗ) ಪ್ರೇರಣೆಯಾಗಿತ್ತು. ಆಜಂ ಷಹಾ ತನ್ನ ತಾಯಿಗೆ ತಾಜ್‌ಮಹಲ್ ಹೋಲುವಂತಹದ್ದೇ ಗೋರಿ ಕಟ್ಟಬೇಕೆನ್ನುವ ತುಡಿತದಿಂದ ನಿರ್ಮಿಸಿದ್ದು ಈ ‘ಬೀಬೀ ಕಾ ಮಕ್ಬರಾ’. ಆಗ್ರಾದ ಮಹಲಿನಷ್ಟೇ ಭವ್ಯವಾಗಿ ಈ ಮಹಲನ್ನು ನಿರ್ಮಿಸಲು ಉದ್ದೇಶಿಸಿದ್ದನಾದರೂ, ಇದಕ್ಕಾಗಿ ತಂದೆ ಔರಂಗಜೇಬನಿಂದ ಮಗನಿಗೆ ದೊರೆತದ್ದು 7 ಲಕ್ಷ ರೂಪಾಯಿ ಮಾತ್ರ.ಹಾಗಾಗಿ ‘ಮಿನಿ ತಾಜ್’ಗಷ್ಟೇ ಆಜಂ ತೃಪ್ತಿಪಡಬೇಕಾಯಿತು.ಹಣದ ಕೊರತೆಯಿಂದಾಗಿ ‘ಮಕ್ಬರಾ’ ಬಸಾಲ್ಟ್ ಶಿಲೆಯಲ್ಲಿ ಕಟ್ಟಲಾಗಿದ್ದು, ಅದರ ಮೇಲೆ ಪ್ಲಾಸ್ಟರಿಂಗ್‌ನ ಮೂಲಕ ಅಮೃತ ಶಿಲೆಯ ಹೊಳಪು ಕೊಡಲಾಗಿದೆ. ನೋಡಿದವರಿಗೆ ಇದು ಅಮೃತಶಿಲೆಯಲ್ಲ ಎನ್ನುವ ಸಂದೇಹ ಬಾರದಂತೆ ಗೋಡೆಗಳನ್ನು ಸೂಕ್ಷ್ಮ ಕುಸುರಿ ಚಿತ್ರಗಳಿಂದ ಸಿಂಗರಿಸಲಾಗಿದೆ. ಗುಂಬಜ್‌ಗೆ ಮಾತ್ರ ಅಮೃತಶಿಲೆ ಬಳಸಲಾಗಿದೆ.‘ಬೀಬೀ ಕಾ ಮಕ್ಬರಾ’ ಔರಂಗಾಬಾದ್‌ನಿಂದ 5 ಕಿ.ಮೀ. ದೂರದಲ್ಲಿದೆ. ಆಗ್ರಾದ ತಾಜ್ ಕಾಣದವರು ಇದನ್ನು ನೋಡಿದಾಗ ನಿಜವಾದ ತಾಜಮಹಲ್ ಕಂಡ ಅನುಭವವಾಗುತ್ತದೆ! ಪರ್ಷಿಯನ್, ಭಾರತೀಯ ಮತ್ತು ಮುಸ್ಲಿಂ ವಾಸ್ತು ಶೈಲಿಗಳ ಸಮ್ಮಿಲನವಾದ ಈ ಕಟ್ಟಡದ ವಾಸ್ತುಶಿಲ್ಪಿಗಳು ಅತಾ ಉಲ್ಲಾ ಮತ್ತು ಹನ್ಸ್‌ಪತ್ ರೈ ಎನ್ನಲಾಗಿದೆ.ಕೊಳ, ಕಾರಂಜಿ, ಕಾಲುವೆಗಳ ಮಧ್ಯೆ ಎತ್ತರದ ಚೌಕ ಜಗುಲಿಯ ಮೇಲೆ ನಾಲ್ಕು ಎತ್ತರದ ಮಿನಾರುಗಳ ನಡುವೆ ‘ಬೀಬೀ ಕಾ ಮಕ್ಬರಾ’ ಇದೆ. ಹೆಬ್ಬಾಗಿಲನ್ನು ದಾಟಿಕೊಂಡು ಒಳನಡೆದರೆ ಮೊದಲು ಸಿಗುವುದೇ ಅಷ್ಟಬದಿಯ ಕೋಣೆ. ಇದು ಮಹಡಿಯಂತೆ ಇದ್ದು ನಡುವೆ ಕೆಳ ಅಂತಸ್ತಿನಲ್ಲಿ ಅಷ್ಟಪಟ್ಟಿಯ ಜಾಲರಿಯಂತಹ ಪರದೆಗಳಿಂದ ಸುತ್ತುವರಿದ ಅಮೃತಶಿಲೆಯಿಂದ ನಿರ್ಮಿಸಿದ ಸಮಾಧಿಯಿದೆ.ಸಮಾಧಿ ಸ್ಥಳದತ್ತ ಇಳಿದು ಹೋಗಬಹುದಾದರೂ ಈಗ ಬಾಗಿಲು ಮುಚ್ಚಿರುವ ಕಾರಣದಿಂದ ಅದು ಸಾಧ್ಯವಿಲ್ಲ. ಸಮಾಧಿಯನ್ನು ಸುತ್ತಲಿನ ಮಹಡಿಯ ಮೇಲೆ ನಿಂತು ನೋಡಬಹುದು. ಮಹಲಿನ ಒಳಗೆಲ್ಲ ಇರುವ ಅಂದವಾದ ಜಾಲಂದ್ರದ ಚಿತ್ತಾರವುಳ್ಳ ಕಿಟಕಿಗಳು ಮಂದಿರದ ಚೆಲುವು ಹೆಚ್ಚಿಸಿವೆ. ಔರಂಗಾಬಾದ್‌ಗೆ ಪ್ರವಾಸ ಕೈಗೊಂಡರೆ ಈ ‘ಮಿನಿ ತಾಜ್’ ಜತೆಗೆ ಅಜಂತ - ಎಲ್ಲೋರಾ ಗುಹೆಗಳ ಸೌಂದರ್ಯವನ್ನೂ ಸವಿಯಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.