ದಕ್ಷಿಣೆಯಿಂದ ರಕ್ಷಣೆ

7

ದಕ್ಷಿಣೆಯಿಂದ ರಕ್ಷಣೆ

Published:
Updated:
ದಕ್ಷಿಣೆಯಿಂದ ರಕ್ಷಣೆ

ಘಟನೆ-1

`ಅಯ್ಯೋ, ನಮ್ಮ ಮಗಳನ್ನು ನಾವೇ ಸಾಯಿಸಿಬಿಟ್ವಿ. ವರದಕ್ಷಿಣೆ ಹಣ ಸಾಕಾಗಲಿಲ್ಲ ಅಂತ ಗಂಡ, ಅತ್ತೆ ಕೊಡೋ ಹಿಂಸೆ ತಾಳಲು ಆಗ್ದೆ ನಮ್ ಕಂದ ವಾಪಸ್ ಮನೆಗೆ ಬಂದಿತ್ತು. ಅವ್ಳ ಇಲ್ಲೇ ಇದ್ದಿದ್ರೆ ಇಂತಾ ದಿನ ನೋಡೋ ಕಷ್ಟ ನಮ್ಗೆ ಬರ‌್ತಾನೇ ಇರ‌್ಲಿಲ್ಲ. ಮಗ್ಳು ಗಂಡನ ಮನೆ ಬಿಟ್ಟು ಬಂದ್ರೆ ಅಕ್ಕ ಪಕ್ಕದವ್ರ ಏನು ಹೇಳ್ತಾರೆ ಅಂತ ಹೆದರಿ `ಎಲ್ಲಾನೂ ಸರಿಯಾಗ್ತೈತಿ~ ಅಂತ ಹೇಳಿ ವಾಪಸ್ ಕಳಿಸ್‌ಬಿಟ್ವಿ. ಅಯ್ಯೋ ನಾವೇ ತಪ್ಪು ಮಾಡಿಬಿಟ್ವಿ...~ ಎನ್ನುತ್ತಾ ಸ್ನೇಹಾಳ ಶವದ ಮುಂದೆ ಪೋಷಕರ ರೋದನ ಮುಂದುವರಿದಿತ್ತು...ಘಟನೆ-2

`ನನ್ನ ಮಗಳು ಆಶಾ ಹಾಗೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆ ಧೈರ್ಯವಂತಳು. ಚಿಕ್ಕಂದಿನಿಂದಲೂ ಏನೇ ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸಿದ್ದಾಳೆ.ಹತಾಶನಾದಾಗ ನನಗೇ ಬುದ್ಧಿ ಹೇಳಿದ್ದಾಳೆ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರೂ, ನನಗೇ ತಾಯಿಯಾಗಿ ಸೇವೆ ಮಾಡಿದ್ದಾಳೆ. ಅವಳು ಇಷ್ಟು ಚಿಕ್ಕ ವಿಷಯಕ್ಕೆ ವಿಷ ಸೇವಿಸಲು ಸಾಧ್ಯವೇ ಇಲ್ಲ. ಅವಳಿಗೆ ಗಂಡನ ಮನೆಯವರೇ ವಿಷ ಕುಡಿಸಿದ್ದಾರೆ.

 

ಹಣಕ್ಕಾಗಿ ನನ್ನ ಮಗಳ ಜೀವ ಬಲಿ ತೆಗೆದುಕೊಂಡಿದ್ದಾರೆ ಪಿಶಾಚಿಗಳು~ ಎಂದು ತಂದೆಯೊಬ್ಬರು ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಎದುರು ಗೋಳಾಡುತ್ತಿದ್ದರು. ಆದರೆ `ಹೊಟ್ಟೆ ನೋವು ಸಹಿಸಲಾರದೆ ಆತ್ಮಹತ್ಯೆ~ ಎಂದು ವೈದ್ಯರ ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ ಆಕೆಯ ಸಾವು! ಇದು `ಕೊಲೆ~ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಈ ಬಡ ತಂದೆ, ಇದ್ದಬದ್ದ ಆಸ್ತಿಯೆಲ್ಲವನ್ನು ಮಾರಿಯಾದರೂ ಪತಿಯ ಮನೆಯವರಿಗೆ ಶಿಕ್ಷೆಯಾಗುವಂತೆ ಮಾಡಲು ಕೋರ್ಟ್‌ನಲ್ಲಿ ಹೆಣಗಾಡುತ್ತಿದ್ದಾರೆ.ಇದು ಆಶಾ ಅಥವಾ ಸ್ನೇಹಾಳ ಕಥೆ ಮಾತ್ರ ಅಲ್ಲ. ಬದಲಿಗೆ ಕರ್ನಾಟಕ ಒಂದರಲ್ಲಿಯೇ ಪ್ರತಿ ವರ್ಷ 190-200 ಹೆಣ್ಣು ಮಕ್ಕಳ ಪೋಷಕರ ವ್ಯಥೆಯೂ ಹೌದು! `ವರದಕ್ಷಿಣೆ ಸಾವು~ ಕಲಮಿನ ಅಡಿ ಇಷ್ಟು ಪ್ರಕರಣಗಳು ದಾಖಲಾಗುತ್ತಿವೆ ಎನ್ನುತ್ತದೆ ಪೊಲೀಸ್ ಕಡತ.ಸುಪ್ರೀಂಕೋರ್ಟ್ ತೀರ್ಪು

ಹಣದ ದಾಹಕ್ಕೆ ಜೀವವನ್ನೇ ಬಲಿ ತೆಗೆದುಕೊಳ್ಳುವ ಇಂತಹ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್, ಸಾವಿಗೆ ಕಾರಣರಾಗುವವರಿಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಕಳೆದ ವಾರವಷ್ಟೇ ಮಹತ್ವದ ತೀರ್ಪು ನೀಡಿದೆ. 1996ರಲ್ಲಿ ಉತ್ತರಾಖಂಡದಲ್ಲಿ ನಡೆದಿದ್ದ ವರದಕ್ಷಿಣೆ ಸಾವಿನ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.ಭಾರತೀಯ ದಂಡ ಸಂಹಿತೆಯ 304 ಬಿ ಕಲಮಿನಲ್ಲಿ ಹೇಳಿದಂತೆ ವರದಕ್ಷಿಣೆ ಸಾವು ನಡೆದಿರುವುದು ಸಾಬೀತಾದಲ್ಲಿ, ಆ ಮಹಿಳೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಲ್ಲಿ ಅಪರಾಧಿಗೆ ವಿಧಿಸಬಹುದಾದ ಏಳು ವರ್ಷಗಳ ಗರಿಷ್ಠ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ತ್ದ್ದಿದುಪಡಿ ಮಾಡಲು ಕೋರ್ಟ್ ಹೇಳಿದೆ.ಈ ತೀರ್ಪಿನ ಹಿನ್ನೆಲೆಯಲ್ಲಿ ವರದಕ್ಷಿಣೆಯ ವಿಚಾರವಾಗಿ ತಲ್ಲಣದ ಅಲೆಯೊಂದು ಎದ್ದಿದೆ. ಶೋಷಣೆಗೊಳಗಾದ ಹೆಣ್ಣಿನ ಕುಟುಂಬಕ್ಕೆ ವರದಾನವೂ, ಗಂಡಿನ ಗುಂಡಿಗೆಗೆ ನಡುಕವನ್ನುಂಟು ಮಾಡುವ ತೀರ್ಪು ಇದಾಗಿದೆ ಎನ್ನುವುದು ಜನಸಾಮಾನ್ಯರ ನಿಲುವು.ಆದರೆ, ಎಷ್ಟೇ ಗರಿಷ್ಠ ಶಿಕ್ಷೆ ವಿಧಿಸಬಹುದಾದ ಕಾನೂನು ಜಾರಿಯಾದರೂ, ವರದಕ್ಷಿಣೆ ಪ್ರಕರಣಗಳಲ್ಲಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದೇ ಕಷ್ಟ ಎನ್ನುತ್ತಾರೆ ಕಾನೂನು ತಜ್ಞರು.`ಪತಿಯ ಮನೆಯಲ್ಲಿ ಹಣಕ್ಕಾಗಿ ಹಿಂಸೆ ನೀಡುತ್ತಿರುವ ಬಗ್ಗೆ ಹೆಚ್ಚಿನ ಹೆಣ್ಣು ಮಕ್ಕಳು ತವರಿನವರಿಗೆ ತಿಳಿಸಿರುವುದಿಲ್ಲ. ಪೋಷಕರು ನೊಂದುಕೊಳ್ಳುತ್ತಾರೆ ಎಂಬ ಆತಂಕ ಅವರಲ್ಲಿ ಇರುತ್ತದೆ. ಬದುಕಲೂ ಆಗದೆ, ನೋವನ್ನು ತೋಡಿಕೊಳ್ಳಲೂ ಆಗದೆ ಅವರು ಆತ್ಮಹತ್ಯೆ ಹಾದಿ ಹಿಡಿದರೆ ಅದು `ವರದಕ್ಷಿಣೆ ಸಾವು~ ಎಂದು ಎನಿಸುವುದೇ ಇಲ್ಲ. ಇನ್ನು ಹಣಕ್ಕಾಗಿ ಬೇಡಿಕೆ ಇಟ್ಟಾಗ ಮಾತ್ರ ತವರಿನವರಿಗೆ ವಿಷಯ ತಿಳಿಯುತ್ತದೆ. ಆಗ ತವರಿನವರು ಸಮಾಧಾನ ಮಾಡಿ, ಇಲ್ಲವೇ ಒಂದಿಷ್ಟು ಹಣ ಕೊಟ್ಟು ಕಳುಹಿಸುತ್ತಾರೆ.ಆದರೆ ಆ ಹಣ ಸಾಕಾಗದಿದ್ದರೆ ಬೆಂಕಿ ಇಟ್ಟೋ, ಇನ್ನಾವುದೋ ರೀತಿಯಲ್ಲಿಯೋ ಆಕೆಯ ಕೊಲೆ ಮಾಡಲಾಗುತ್ತದೆ. ಆದರೆ ಈ ಕೊಲೆ ಹೆಚ್ಚಾಗಿ ನಾಲ್ಕು ಗೋಡೆಗಳಮಧ್ಯೆಯೇ ನಡೆಯುತ್ತದೆ~ ಎನ್ನುತ್ತಾರೆ ಪ್ರಾಸಿಕ್ಯೂಷನ್ ಮಾಜಿ ಉಪ ನಿರ್ದೇಶಕ ವಿ.ಜನಾರ್ದನ.`ಅಪರಾಧಿಗಳೆಲ್ಲ ಮನೆಯವರೇ ಆಗಿರುವ ಕಾರಣ, ಸಾಕ್ಷಿಗಳು ಸಿಗುವುದು ಕಷ್ಟ. ಅದೇ ರೀತಿ ಸಾಕ್ಷ್ಯಾಧಾರಗಳನ್ನು ತಕ್ಷಣ ನಾಶಪಡಿಸುವ ಸಾಧ್ಯತೆ ಇಲ್ಲಿ ಹೆಚ್ಚು. ಕೆಲವೇ ಕೆಲವು ಸಂದರ್ಭಗಳಲ್ಲಿ, ಸಾಯುವ ಮುನ್ನ ಮಹಿಳೆ ಸಾಕ್ಷಿ ನುಡಿಯುವ ಸಾಧ್ಯತೆ ಇರುತ್ತದೆ.

 

ಆದರೆ ಸಾಯುವ ವೇಳೆ ಹೆಚ್ಚಿನ ಸಂದರ್ಭಗಳಲ್ಲಿ ಇರುವುದು ಆಕೆಯ ಅತ್ತೆಯ ಮನೆಯವರೇ ವಿನಾ ತವರಿನವರು ಅಲ್ಲ. ಹಲವು ಪ್ರಕರಣಗಳಲ್ಲಿ ಕೊನೇ ಗಳಿಗೆಯಲ್ಲಿ ಸಾಕ್ಷಿಗಳು `ಪ್ರತಿಕೂಲ ಸಾಕ್ಷಿ~ಗಳಾಗಿ ಬದಲಾಗುತ್ತಾರೆ~ ಎಂದು ವಿವರಿಸುತ್ತಾರೆ.`ಮಹಿಳೆಯರು ಹಳ್ಳಿಗಾಡಿನಲ್ಲಿ ಇದ್ದರೆ ನ್ಯಾಯಕ್ಕಾಗಿ ಕೋರ್ಟ್ ಬಾಗಿಲು ತಟ್ಟಿ ಬಹಳ ವರ್ಷಗಳ ಕಾಲ ಹೋರಾಟ ಮಾಡುವ ಸಾಧ್ಯತೆಯೂ ಕಡಿಮೆ. ಇನ್ನು ಸಂಬಂಧಿಗಳಲ್ಲಿಯೇ ವಿವಾಹ ಮಾಡಿಕೊಟ್ಟರೆ ಇಬ್ಬರ ನಡುವೆ ರಾಜಿಯಾಗುವ ಸಂಭವವೂ ಇರುತ್ತದೆ. ಇದರಿಂದ ವರದಕ್ಷಿಣೆ ಸಾವುಗಳು ಅಲ್ಲಿಯೇ ಮುಚ್ಚಿಹೋಗುತ್ತಿವೆ.

 

ಇನ್ನು ವೈದ್ಯರು ಹಾಗೂ ಪೊಲೀಸರು ಕೂಡ ಪತಿಯ ಮನೆಯವರ ಜೊತೆ ಶಾಮೀಲಾಗಿ ಬಿಟ್ಟರೆ `ನ್ಯಾಯ~ ಎನ್ನುವುದು ಹೆಣ್ಣು ಹೆತ್ತ ಪೋಷಕರಿಗೆ ಮರೀಚಿಕೆ~ ಎನ್ನುತ್ತಾರೆ ಹೈಕೋರ್ಟ್ ವಕೀಲೆ ಪ್ರಮಿಳಾ ನೇಸರ್ಗಿ.`ಸ್ತ್ರೀಯರ ರಕ್ಷಣೆಗಾಗಿ ಎಷ್ಟೇ ಕಠಿಣ ಕಾಯ್ದೆಗಳು ಬಂದರೂ, ಸಂಘಟನೆಗಳು ಹುಟ್ಟಿಕೊಂಡರೂ ಸ್ತ್ರೀಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದಕ್ಕೆ ಹೆಣ್ಣಿನ ಮಾನಸಿಕ ಅಪಕ್ವತೆಯೂ ಒಂದು ಕಾರಣ ಎನ್ನಬಹುದು. ಇದೀಗ ಸುಪ್ರೀಂಕೋರ್ಟ್, ವರದಕ್ಷಿಣೆಯ ವಿಚಾರದಲ್ಲಿ ಏಳು ವರ್ಷದ ಬದಲು ಜೀವಾವಧಿ ಶಿಕ್ಷೆಯನ್ನೇ ವಿಧಿಸಬೇಕೆಂದಿದೆ.

 

ನಿಜಕ್ಕೂ ವರದಕ್ಷಿಣೆ ಕೇಳುವವರಿಗೆ ಇದು ನಡುಕವನ್ನುಂಟು ಮಾಡುತ್ತದೆ, ನಿಜ. ಆದರೆ ಉಳ್ಳವರು ತಮ್ಮ ಪ್ರತಿಷ್ಠೆಗಾಗಿ ಕಾರು, ಸೈಟುಗಳನ್ನು ನೀಡಲು ಮುಂದಾಗುತ್ತಾರೆ. ವರದಕ್ಷಿಣೆಯಾಗಿ ಅಲ್ಲ, ಕಾಣಿಕೆಯಾಗಿ. ಇಂಥ ಕಾಣಿಕೆಗಳೇ ಒಮ್ಮಮ್ಮೆ ಉರುಳಾಗುವುದುಂಟು.ಯೋಗ್ಯತೆ ಇಲ್ಲದ ಅಳಿಯ ತನ್ನ ಹೆಂಡತಿಯನ್ನು ಮುಂದೆ ಮಾಡಿ ಮಾವನ ಪ್ರಾಣವನ್ನು ಹಿಂಡುತ್ತಾನೆ. ಹೆಣ್ಣು ಕೊಟ್ಟವರನ್ನು ಯಾವ ರೀತಿ ಪೀಡಿಸಬೇಕೆನ್ನುವುದು ಪೀಡಕರಿಗೆ ಗೊತ್ತಿರುತ್ತದೆ~ ಎನ್ನುವುದು ವಕೀಲೆ ಸುಶೀಲಾ ಅವರ ಅನಿಸಿಕೆ.ಪೋಷಕರೂ ಹೊಣೆ

ಇದು ಕೇಳಲು ಕಠೋರ ಎನಿಸಿದರೂ, ಕಟು ವಾಸ್ತವ. ವರದಕ್ಷಿಣೆಗೆ ಮಗಳು ಬಲಿಯಾಗುತ್ತಿದ್ದಾಳೆ ಎಂದರೆ ಆಕೆಯ ಪೋಷಕರ ಪಾತ್ರವೂ ಅಷ್ಟೇ ಮುಖ್ಯ. ಕಾಯ್ದೆಯ ಪ್ರಕಾರ ವರದಕ್ಷಿಣೆ ಪಡೆಯುವುದು ಮಾತ್ರವಲ್ಲದೇ ಅದನ್ನು ಕೊಡುವುದು ಕೂಡ ಅಪರಾಧವೇ.

 

ಆದರೆ ಮಗಳು ಸುಖವಾಗಿ ಇರಲಿ ಎಂದು ವರದಕ್ಷಿಣೆ ರೂಪದಲ್ಲಿ ಅಲ್ಲದಿದ್ದರೂ, ಇನ್ನಾವುದೋ ರೂಪದಲ್ಲಿ ಹೆಣ್ಣಿನ ಮನೆಯವರು ಒಂದಿಷ್ಟು ಹಣ, ಒಡವೆ ಕೊಡುವುದು ಮಾಮೂಲು. ಇಲ್ಲದಿದ್ದರೆ ಆಕೆಯ ವಿವಾಹ ನೆರವೇರುವುದಿಲ್ಲ ಎಂಬ ಚಿಂತೆ ಪೋಷಕರದ್ದು.ಲಂಚ ಕೊಡುವವರೆಗೂ ಅದನ್ನು ಪಡೆದುಕೊಳ್ಳುವವರೂ ಇದ್ದೇ ಇರುತ್ತಾರೆ ಎನ್ನುವ ಮಾತು ವರದಕ್ಷಿಣೆಗೂ ಅನ್ವಯ ಆಗುತ್ತದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?ವರದಕ್ಷಿಣೆಯೇನೋ ಕೊಟ್ಟು ವಿವಾಹ ಆಗಿದೆ ಸರಿ. ಮುಂದೆ...? ವರನಿಗೆ ಕೊಡುವ ಈ ದಕ್ಷಿಣೆ ವಧುವನ್ನೇ ದಹಿಸುತ್ತಿದೆ ಎಂದು ಪೋಷಕರಿಗೆ ತಿಳಿದಾಗಲೂ `ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ~ ಎಂಬ ನಾಣ್ನುಡಿಯನ್ನು ಪಾಲಿಸುವುದು ಉಚಿತವೇ? ಇದು ಎಲ್ಲ ಪೋಷಕರೂ ಕೇಳಿಕೊಳ್ಳಬೇಕಾದ ಪ್ರಶ್ನೆ.`ವರದಕ್ಷಿಣೆ ಸಾವಿನ ಘಟನೆಗಳ ಆಳಕ್ಕೆ ಹೋದರೆ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಪೋಷಕರ ಈ ಸಮಾಧಾನದ ಮಾತುಗಳೇ ಮುಳ್ಳಾಗಿ ಪರಿಣಮಿಸುತ್ತಿವೆ~ ಎನ್ನುವುದು ಪ್ರಮಿಳಾ ನೇಸರ್ಗಿ ಅವರ ಅಭಿಮತ. ಹಲವಾರು ಪ್ರಕರಣಗಳಲ್ಲಿ ಮಹಿಳೆಯರ ಪರ ಹೋರಾಟ ನಡೆಸಿರುವ ಇವರು, ಮೊದಲು ಪೋಷಕರಿಗೆ ತರಬೇತಿ ನೀಡುವ ಅಗತ್ಯವಿದೆ ಎನ್ನುತ್ತಾರೆ.ರಾಜ್ಯ ಸರ್ಕಾರದಿಂದ ಕ್ರಮ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ 1980ರ ಸೆಪ್ಟೆಂಬರ್ 16ರಂದು ಸುತ್ತೋಲೆ ಹೊರಡಿಸಿತ್ತು.ಅದರಲ್ಲಿ, ವಿವಾಹವಾಗಿ ಐದು ವರ್ಷಗಳ ಒಳಗೆ ಮಹಿಳೆ ಸಾವನ್ನಪ್ಪಿದ್ದರೆ ಆ ಸಾವಿನ ತನಿಖೆಯನ್ನು ಉಪ ಅಥವಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳೇ ನಡೆಸಬೇಕು, ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನು ಕೂಡ ಇಬ್ಬರು ತಜ್ಞ ವೈದ್ಯರು ಈ ಅಧಿಕಾರಿಗಳ ಸಮ್ಮುಖದಲ್ಲಿಯೇ ನಡೆಸಬೇಕು ಎಂದು ತಿಳಿಸಿದೆ.ಅದೇ ರೀತಿ 1987ರ ಏಪ್ರಿಲ್ 23ರಂದು ಇನ್ನೊಂದು ಸುತ್ತೋಲೆ ಹೊರಡಿಸಿರುವ ಸರ್ಕಾರ, ವಿವಾಹವಾಗಿ 10 ವರ್ಷಗಳ ಒಳಗೆ ಮಹಿಳೆ ಸಾವನ್ನಪ್ಪಿದರೆ ಸತ್ಯಾಂಶ ಹೊರಬೀಳುವವರೆಗೆ ಅದನ್ನು ಕೊಲೆ ಎಂದೇ ಪರಿಗಣಿಸಿ ತನಿಖೆ ನಡೆಸಬೇಕು ಎಂದಿದೆ.ಒಟ್ಟಿನಲ್ಲಿ, ಸುಪ್ರೀಂಕೋರ್ಟ್‌ನ ತೀರ್ಪಿನಿಂದಾಗಿ ವರದಕ್ಷಿಣೆಯ ಪಿಡುಗು ಕಡಿಮೆಯಾಗಬಹುದೇನೊ. ವರದಕ್ಷಿಣೆ ಪಡೆದೂ ಪತ್ನಿಯನ್ನು ಹಿಂಸಿಸುವ ಪತ್ನಿಪೀಡಕನಿಗೆ ಕೋರ್ಟು ಪ್ರದಕ್ಷಿಣೆ ಒಂದು ಹಿಂಸೆಯಾದೀತು! ಶಿಕ್ಷೆ ಅವನ ಪಾಲಿನ ಉರುಳಾದೀತು. ಇದೇ ವೇಳೆ, ಇದರ ದುರುಪಯೋಗವೂ ನಡೆದು ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಲೂಬಹುದು. ಚಿಕ್ಕಪುಟ್ಟ ಕಲಹಗಳಿಗೆ ಈ ಬ್ರಹ್ಮಾಸ್ತ್ರ ಪ್ರಯೋಗಿಸುವ ಕಿತಾಪತಿಗಳೂ ಇಲ್ಲದಿಲ್ಲ.

ಹೆತ್ತವರ ಮರ‌್ಯಾದೆ ಪ್ರಶ್ನೆ!

ಗಂಡಿನ ಮನೆಯಲ್ಲಿ ಎದುರಾದ ತೊಂದರೆಗಳನ್ನು ತವರು ಮನೆಯಲ್ಲಿ ಹೇಳಿಕೊಳ್ಳುವಂತಿಲ್ಲ. ಪತಿಯೇ ದೇವರು. ಅವನಿಗೆ ಅಡಿಯಾಳಾಗಿರಬೇಕು. ಗಂಡನನ್ನು ಬಿಟ್ಟು ತವರು ಮನೆಗೆ ಬಂದು ಸೇರಿಕೊಳ್ಳುವ ಹಾಗಿಲ್ಲ. ಯಾಕೆಂದರೆ, ಇದು ಹೆತ್ತವರ ಮರ‌್ಯಾದೆ ಪ್ರಶ್ನೆ! ಈ ದೌರ್ಬಲ್ಯವೇ ವರದಕ್ಷಿಣೆಯ ಶೋಷಣೆಗೆ ಮುಖವಾಗಿ ನಿಲ್ಲುತ್ತದೆ.ಹೆಣ್ಣು ಹೆಚ್ಚು ಪೀಡನೆಗೊಳಗಾಗುತ್ತಾಳೆ. ಹೆತ್ತವರ ಮುಂದೆ ಕೈಚಾಚುತ್ತಾಳೆ. ಹೆತ್ತವರೋ? ಸಾಲಸೋಲ ಮಾಡಿ ಅಳಿಯನ ಆಸೆ ಪೂರೈಸುತ್ತಾ ಸುಸ್ತಾಗುತ್ತಾರೆ. ಮುಂದೆ ಬೆಸ್ತು ಬೀಳುತ್ತಾರೆ. ಈಗ ಮದುವೆ ಎನ್ನುವ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ.

- ಶೀಲಾ ರಾಮನಾಥನ್, ಹೈಕೋರ್ಟ್ ವಕೀಲೆ (ಹ್ಯೂಮನ್ ರೈಟ್ಸ್ ಲಾ ನೆಟ್‌ವರ್ಕ್)

 ಕಾನೂನಿನ ದುರುಪಯೋಗ

ವರದಕ್ಷಿಣೆಯ ವಿಚಾರದಲ್ಲಿ ಇಡೀ ಪುರುಷ ಸಮಾಜವನ್ನು ದೂಷಿಸುವುದಾಗಲೀ, ಮಹಿಳೆಯರ ವಿಚಾರದಲ್ಲಿ ವಿವೇಚನಾ ರಹಿತ ಅನುಕಂಪ ತೋರಿಸುವುದಾಗಲೀ ಸಮಂಜಸವಲ್ಲ. ಕಾನೂನು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದರ ರಕ್ಷಾಕವಚವಾಗಿದ್ದರೂ, ಅದನ್ನು ಭೇದಿಸುವ ಛಿದ್ರಾನ್ವೇಷಿಗಳ ಮಧ್ಯೆ ಕಾನೂನಿನ ಪುಟ ಮುಚ್ಚಿಕೊಳ್ಳುತ್ತದೆ. ಕೆಲವೊಮ್ಮೆ ಅದರ ದುರುಪಯೋಗವೂ ಆಗುತ್ತದೆ. ವರದಕ್ಷಿಣೆಯ ವಿಚಾರದಲ್ಲಿ ಜೀವಾವಧಿ ಶಿಕ್ಷೆ  ತೀರ್ಪು ಸ್ವಾಗತಾರ್ಹವಾದರೂ, ಸ್ವಹಿತಾಸಕ್ತಿಯ ಸ್ವಾರ್ಥಪರ ಚಿಂತಕರು ಅಮಾಯಕರ ಶೋಷಣೆಗಾಗಿ ತೀರ್ಪಿನ ದುರುಪಯೋಗ ಮಾಡಿಕೊಳ್ಳುವ ಸಂಭವವನ್ನು ಅಲ್ಲಗಳೆಯುವಂತಿಲ್ಲ.ಐಪಿಸಿ `304 ಬಿ~ ಸೆಕ್ಷನ್ ಅಡಿ ವರದಕ್ಷಿಣೆ ಸಾವಿಗೆ ವ್ಯಾಖ್ಯಾನ ನೀಡಲಾಗಿದೆ. ಮದುವೆಯಾಗಿ ಏಳು ವರ್ಷಗಳ ಒಳಗೆ ಮಹಿಳೆ ಅಸ್ವಾಭಾವಿಕವಾಗಿ ಮರಣ ಹೊಂದಿದ್ದಲ್ಲಿ, ಆಕೆಯ ದೇಹದ ಮೇಲೆ ಸುಟ್ಟಗಾಯ ಅಥವಾ ಮತ್ಯಾವುದೇ ಗಾಯ ಉಂಟಾಗಿದ್ದಲ್ಲಿ, ಸಾವಿಗಿಂತ ಮುಂಚೆ ಆಕೆಯ ಪತಿ ಅಥವಾ ಪತಿಯ ಕುಟುಂಬ ಸದಸ್ಯರು ವರದಕ್ಷಿಣೆಗಾಗಿ ಬೇಡಿಕೆ ಇಟ್ಟು ಆಕೆಯ ಮೇಲೆ ದೌರ್ಜನ್ಯಎಸಗಿದ್ದಲ್ಲಿ ಅಂತಹ ಸಾವನ್ನು ವರದಕ್ಷಿಣೆ ಸಾವು ಎಂದು ಪರಿಗಣಿಸಬೇಕು. ಪತಿ ಅಥವಾ ಪತಿಯ ಸಂಬಂಧಿಗಳು ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದೂ ಭಾವಿಸಬಹುದು.ಜೀವಾವಧಿ ಶಿಕ್ಷೆಯಿಂದ ಕಾನೂನಿನ ದುರುಪಯೋಗ ಆಗುವುದನ್ನೂ ಅಲ್ಲಗಳೆಯುವಂತಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಬೇರೆ ಯಾವುದೇ ಕಾರಣಗಳಿಗೆ ಸಾವನ್ನಪ್ಪಿದರೂ ಅದನ್ನು ವರದಕ್ಷಿಣೆ ಸಾವು ಎಂದು ಪರಿಗಣಿಸಿ, ಪತಿಯ ಮನೆಯವರಿಗೆ ಕಿರುಕುಳ ನೀಡುತ್ತಿರುವ ದೂರುಗಳು ಕೂಡ ಕೇಳಿ ಬರುತ್ತಿವೆ.

- ಎಚ್.ಎಸ್.ಚಂದ್ರಮೌಳಿ, ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry