ಮಂಗಳವಾರ, ಏಪ್ರಿಲ್ 13, 2021
24 °C

ದಕ್ಷಿಣ ಆಫ್ರಿಕಾ-ಹಾಲೆಂಡ್ ಪಂದ್ಯ: ಪ್ರೇಕ್ಷಕರಿಲ್ಲದಿದ್ದರೂ ಹೆಚ್ಚು ಭದ್ರತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಹಾಲಿ (ಐಎಎನ್‌ಎಸ್):  ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ವಿಶ್ವಕಪ್ ಟೂರ್ನಿಯ ದಕ್ಷಿಣ ಆಫ್ರಿಕಾ ಮತ್ತು ಹಾಲೆಂಡ್ ನಡುವಣ ಏಕದಿನ ಪಂದ್ಯಕ್ಕೆ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿದೆ. ಆದರೆ, ಈ ಪಂದ್ಯ ವೀಕ್ಷಿಸಲು ಶೇ 25ರಷ್ಟೂ ಟಿಕೆಟ್‌ಗಳು ಮಾರಾಟವಾಗಿಲ್ಲ!ಪಂಜಾಬ್ ಪೊಲೀಸ್ ಇಲಾಖೆಯು 1300 ಪೊಲೀಸರನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಿದೆ. ಅಲ್ಲದೇ 70 ಸಿಸಿಟಿವಿಗಳನ್ನೂ ಅಳವಡಿಸಲಾಗಿದೆ. 28,000 ಆಸನಗಳ ವ್ಯವಸ್ಥೆ ಇಲ್ಲಿಯ ಪ್ರೇಕ್ಷಕರ ಗ್ಯಾಲರಿಯಲ್ಲಿದೆ. ಆದರೆ, 6000 ಟಿಕೆಟ್‌ಗಳು ಮಾತ್ರ ಇದುವರೆಗೆ ಮಾರಾಟವಾಗಿವೆ.‘ಮೂರು ಹಂತದ ರಕ್ಷಣಾ ವ್ಯವಸ್ಥೆಯನ್ನು ಮೈದಾನಕ್ಕೆ ನೀಡುತ್ತಿದ್ದು, ಂದ್ಯವು ಸುಗಮವಾಗಿ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಸಮಾಜಘಾತುಕ ಶಕ್ತಿಗಳ ಮೇಲೆ ತೀವ್ರ ನಿಗಾ ಇಡಲು ಮತ್ತು ಯಾವುದೇ ಅಹಿತಕರ ಘಟನೆಗಳಾಗದಂತೆ ತಡೆಯಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಸಿಸಿಟಿವಿ ತಂತ್ರಜ್ಞಾನ ಬಳಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರೀತ್ ಸಿಂಗ್ ಭುಲ್ಲರ್ ಹೇಳಿದ್ದಾರೆ. ಕ್ರೀಡಾಂಗಣದ ಮುಂದಿನ ರಸ್ತೆಗಳಲ್ಲಿ ಗುರುವಾರ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನಗಳಿಗೆ ಬೇರೆ ಮಾರ್ಗವನ್ನು ನೀಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಆ್ಯಂಬ್ಯುಲೆನ್ಸ್, ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನೂ ನಿಯೋಜಿಸಲಾಗಿದೆ ಎಂದು ಭುಲ್ಲರ್ ತಿಳಿಸಿದ್ದಾರೆ.ದಕ್ಷಿಣ ಆಫ್ರಿಕಾ ತಂಡವು ಸೋಮವಾರ ಮತ್ತು ಹಾಲೆಂಡ್ ತಂಡವು ಮಂಗಳವಾರ ಮೊಹಾಲಿಗೆ ಆಗಮಿಸಿವೆ. ಕಳೆದ ಹಲವು ಪಂದ್ಯಗಳಿಗೆ ಪಂಜಾಬ್ ಪೊಲೀಸ್ ಇಲಾಖೆಯು ಉತ್ತಮವಾದ ಸಂಪೂರ್ಣ ಭದ್ರತೆ ಒದಗಿಸುತ್ತಿದೆ. ಆದರೆ ಪಂಜಾಬ್ ಕ್ರಿಕೆಟ್ ಸಂಸ್ಥೆಯು ಇದಕ್ಕಾಗಿ ನೀಡಬೇಕಿರುವ ಎಂಟು ಕೋಟಿ ರೂಪಾಯಿ ಬಾಕಿಯನ್ನು ಇನ್ನೂ ತೀರಿಸಿಲ್ಲ.ಮೊಹಾಲಿಯಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ಮತ್ತು ಹಾಲೆಂಡ್ ನಡುವಣ ಪಂದ್ಯ, ಮಾರ್ಚ್ 11ರಂದು ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪಂದ್ಯ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.