ಗುರುವಾರ , ಏಪ್ರಿಲ್ 15, 2021
22 °C

ದಕ್ಷಿಣ ಆಫ್ರಿಕ ಮೇಲೆ ಎಲ್ಲರ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಮಹೇಂದ್ರ ಸಿಂಗ್ ದೋನಿ, ಡರೆನ್ ಸಮಿ ಮತ್ತು ಆ್ಯಂಡ್ರ್ಯೂ ಸ್ಟ್ರಾಸ್ ಅವರ ಗಮನವೆಲ್ಲ ಗ್ರೇಮ್ ಸ್ಮಿತ್ ಅವರ ಮೇಲಿದೆ. ದಕ್ಷಿಣ ಆಫ್ರಿಕ ಶನಿವಾರ ಮೀರಪುರದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯ ಆಡಲಿದ್ದು, ಅದರಲ್ಲಿ ಗ್ರೇಮ್ ಸ್ಮಿತ್ ಗೆಲ್ಲಬೇಕು ಎಂಬುದೇ ಭಾರತ, ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ತಂಡದ ಬಯಕೆ. ಅದು ಅವರೆಲ್ಲ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಲಿದೆ. ದಕ್ಷಿಣ ಆಫ್ರಿಕದ ಜೊತೆ ಈ ಮೂರೂ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಲಿವೆ.ಒಂದು ವೇಳೆ, ಅನಿರೀಕ್ಷಿತವಾಗಿ ಬಾಂಗ್ಲಾದೇಶ ಗೆದ್ದಲ್ಲಿ, ಭಾರತ, ವೆಸ್ಟ್‌ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳಲ್ಲಿ ಒಂದು ತಂಡ ಮನೆಗೆ ಹೋಗಬೇಕಾಗುತ್ತದೆ. ಅದು ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವೆ ಭಾನುವಾರ ನಡೆಯುವ ಪಂದ್ಯದ ಫಲಿತಾಂಶವನ್ನೂ ಅವಲಂಬಿಸಿದೆ. ದಕ್ಷಿಣ ಆಫ್ರಿಕ ಈ ವಿಶ್ವ ಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಲೀಗ್‌ನಲ್ಲಿ ಐದು ಪಂದ್ಯಗಳಿಂದ ಎಂಟು ಪಾಯಿಂಟ್ ಗಳಿಸಿದ್ದು ಕ್ವಾರ್ಟರ್‌ಫೈನಲ್‌ನಲ್ಲಿ ಅದರ ಸ್ಥಾನ ಭದ್ರವಾಗಿದೆ. ಬಾಂಗ್ಲಾದೇಶ ಐದು ಪಂದ್ಯಗಳಿಂದ ಆರು ಪಾಯಿಂಟ್ಸ್ ಗಳಿಸಿದ್ದು, ದಕ್ಷಿಣ ಆಫ್ರಿಕ ವಿರುದ್ಧ ಗೆದ್ದರೆ ಅದು ಕೂಡ ಎಂಟು ಪಾಯಿಂಟುಗಳೊಡನೆ ಎಂಟರ ಹಂತಕ್ಕೆ ಮುನ್ನಡೆಯುವುದು. ಆಗ ವೆಸ್ಟ್‌ಇಂಡೀಸ್ ತಂಡಕ್ಕೆ ಭಾರತ ವಿರುದ್ಧ ಗೆಲ್ಲಲೇಬೇಕಾದ ಸ್ಥಿತಿ ಎದುರಾಗುತ್ತದೆ. ಇಂಗ್ಲೆಂಡ್ (+0.072) ತನ್ನ ಎಲ್ಲ ಆರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಹೊಂದಿದ್ದು ರನ್ ಸರಾಸರಿಯಲ್ಲಿ ಭಾರತಕ್ಕಿಂತ (+0.768) ಸ್ವಲ್ಪ ಹಿಂದಿದೆ. ಭಾರತ ಸೋತರೂ ರನ್ ಸರಾಸರಿ ಕಾಯ್ದುಕೊಂಡಲ್ಲಿ ಅದಕ್ಕೆ ತೊಂದರೆಯಾಗುವುದಿಲ್ಲ.ಶನಿವಾರ ದಕ್ಷಿಣ ಆಫ್ರಿಕ ಗೆದ್ದು, ಭಾನುವಾರ ಭಾರತವೂ ಗೆದ್ದಲ್ಲಿ, ವೆಸ್ಟ್‌ಇಂಡೀಸ್ ಆರು ಪಾಯಿಂಟುಗಳೊಡನೆ ತನ್ನ ಲೀಗ್ ವ್ಯವಹಾರ ಮುಗಿಸುತ್ತದೆ. ಆದರೆ ಅದರ ರನ್ ಸರಾಸರಿ (+1.650) ಬಾಂಗ್ಲಾದೇಶಕ್ಕಿಂತ (-0.765) ಉತ್ತಮವಾಗಿದೆ. ಹೀಗಾಗಿ ಬಾಂಗ್ಲಾದೇಶ ಶನಿವಾರ ಸೋಲಬೇಕು ಎಂಬುದೇ ಉಳಿದ ತಂಡಗಳ ನಿರೀಕ್ಷೆ.ಕ್ವಾರ್ಟರ್‌ಫೈನಲ್‌ನಲ್ಲಿ ಯಾರು ಯಾರನ್ನು ಎದುರಿಸುತ್ತಾರೆ ಎಂಬ ಸಂಪೂರ್ಣ ಚಿತ್ರ ಭಾನುವಾರವೇ ಲಭ್ಯವಾಗಲಿದೆ. ‘ಎ’ ಗುಂಪಿನಿಂದ ಕ್ವಾರ್ಟರ್‌ಫೈನಲ್‌ಗೆ ಹೋಗುವ ತಂಡಗಳು ನಿರ್ಧಾರವಾಗಿದ್ದರೂ ಅವುಗಳು ಲೀಗ್‌ನಲ್ಲಿ ಯಾವ ಸ್ಥಾನ ಪಡೆಯುತ್ತವೆ ಎಂಬುದು, ಶನಿವಾರ ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ನಡುವೆ ಕೊಲಂಬೊದಲ್ಲಿ ನಡೆಯುವ ಪಂದ್ಯದ ನಂತರವೇ ತಿಳಿದುಬರಲಿದೆ. ಈ ಪಂದ್ಯದಲ್ಲಿ ಗೆಲುವು ಪಡೆಯುವ ತಂಡ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲಿದೆ.ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಗೆದ್ದ ಶ್ರೀಲಂಕಾ ಆರು ಪಂದ್ಯಗಳಿಂದ 9 ಪಾಯಿಂಟ್‌ಗಳೊಂದಿಗೆ ಸದ್ಯ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಐದು ಪಂದ್ಯಗಳಿಂದ ಒಂಬತ್ತು ಪಾಯಿಂಟ್ ಹೊಂದಿದರೂ ರನ್ ಸರಾಸರಿಯಲ್ಲಿ ಲಂಕಾಕ್ಕಿಂತ ಹಿಂದಿದ್ದು, ಎರಡನೇ ಸ್ಥಾನದಲ್ಲಿದೆ.‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕ ಶನಿವಾರ ಗೆದ್ದರೆ ಹತ್ತು ಪಾಯಿಂಟುಗಳೊಡನೆ ಅಗ್ರಸ್ಥಾನ ಪಡೆಯುವುದು. ಭಾರತ ತನ್ನ ಕೊನೆಯ ಪಂದ್ಯವನ್ನು ಗೆದ್ದರೆ ಒಂಬತ್ತು ಪಾಯಿಂಟುಗಳೊಡನೆ ಎರಡನೇ ಸ್ಥಾನ ಪಡೆಯುವುದು. ಪಾಕಿಸ್ತಾನ ತಂಡ ಶನಿವಾರ ಆಸ್ಟ್ರೇಲಿಯ ಕೈಲಿ ಸೋತರೆ ಗುಂಪಿನಲ್ಲಿ ನಾಲ್ಕನೇ ಸ್ಥಾನ ಪಡೆಯಲಿದೆ.ನ್ಯೂಜಿಲೆಂಡ್ ತಂಡ ಲೀಗ್ ವ್ಯವಹಾರ ಕೊನೆಗೊಳಿಸಿದ್ದು, ಆರು ಪಂದ್ಯಗಳಿಂದ ಎಂಟು ಪಾಯಿಂಟ್ ಕಲೆಹಾಕಿದೆ. ಶನಿವಾರ ಪಾಕ್ ಸೋತರೆ ಕಿವೀಸ್ ತಂಡ ಮೂರನೇ ಸ್ಥಾನದಲ್ಲಿ ಉಳಿದುಕೊಳ್ಳುವ ಸಾಧ್ಯತೆಯೇ ಅಧಿಕ. ಏಕೆಂದರೆ ರನ್ ಸರಾಸರಿಯಲ್ಲಿ  ನ್ಯೂಜಿಲೆಂಡ್  ತಂಡ (+1.135) ಶಾಹಿದ್ ಅಫ್ರಿದಿ ಬಳಗಕ್ಕಿಂತ (+0.729) ಮುಂದಿದೆ.ಕ್ವಾರ್ಟರ್‌ಫೈನಲ್ ಪಂದ್ಯಗಳು ಒಂದು-ನಾಲ್ಕು; ಎರಡು-ಮೂರರ ನಡುವೆ ನಡೆಯಲಿವೆ. ಅಂದರೆ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ‘ಬಿ’ ಗುಂಪಿನ ನಾಲ್ಕನೇ ತಂಡವನ್ನು; ‘ಬಿ’ ಗುಂಪಿನ ಮೊದಲ ತಂಡ ‘ಎ’ ಗುಂಪಿನ ನಾಲ್ಕನೇ ತಂಡವನ್ನು; ‘ಎ’ ಗುಂಪಿನ ಎರಡನೇ ತಂಡ ‘ಬಿ’ ಗುಂಪಿನ ಮೂರನೇ ತಂಡವನ್ನು ಹಾಗೂ ‘ಬಿ’ ಗುಂಪಿನ ಎರಡನೇ ತಂಡ ‘ಎ’ ಗುಂಪಿನ ಮೂರನೇ ತಂಡವನ್ನು ಎದುರಿಸುವವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.