ಭಾನುವಾರ, ಏಪ್ರಿಲ್ 11, 2021
28 °C

ದಕ್ಷಿಣ ಕನ್ನಡ ಜಿಲ್ಲೆ: ದನಕರು ಸಂಖ್ಯೆ ಮೂರುಪಟ್ಟು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಳುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಭವಿಷ್ಯದಲ್ಲಿ ಜಿಲ್ಲೆಯಲ್ಲಿ ಹಾಲಿನ ಕೊರತೆ ತೀವ್ರವಾಗುವ ಆತಂಕ ಎದುರಾಗಿದೆ.

2007ರಲ್ಲಿ ಪಶು ಸಂಗೋಪನಾ ಇಲಾಖೆ ನಡೆಸಿದ ಜಾನುವಾರು ಗಣತಿಯ ಅಂಕಿ ಅಂಶಗಳು ಹಾಗೂ 2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಡೆಸಿದ ಅಂಕಿ -ಅಂಶಗಳನ್ನು ತಾಳೆ ಮಾಡಿ ನೋಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದನಕರುಗಳ ಸಂಖ್ಯೆ ಮೂರುಪಟ್ಟು ಕುಸಿದಿರುವುದು ಕಂಡು ಬರುತ್ತದೆ. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟವು 2010ರಲ್ಲಿ ನಡೆಸಿದ ಜಾನುವಾರು ಗಣತಿ ಅಂಕಿಅಂಶ ಪ್ರಕಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,24,399 ದನಕರುಗಳು ಹಾಗೂ 2093 ಎಮ್ಮೆಗಳಿವೆ. ಈ ಪೈಕಿ ದ.ಕ. ಜಿಲ್ಲೆಯಲ್ಲಿ 1,20,361 ದನಕರುಗಳಿವೆ. ಇದರಲ್ಲಿ 53035 ಸ್ಥಳೀಯ ತಳಿ, 66761 ಮಿಶ್ರ ತಳಿ, ಹಾಗೂ 565 ವಿದೇಶಿ ತಳಿ. ಜಿಲ್ಲೆಯಲ್ಲಿ 2007ರಲ್ಲಿ 3,96,609 ದನಕರುಗಳಿದ್ದವು. ಈ ಪೈಕಿ 229838 ಸ್ಥಳೀಯ ತಳಿ, 166771 ಮಿಶ್ರತಳಿ ದನಗಳಿದ್ದವು ಎನ್ನುತ್ತವೆ ಪಶುಸಂಗೋಪನಾ ಇಲಾಖೆಯ ಅಂಕಿ-ಅಂಶಗಳು.ದನ-ಕರುಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದನ್ನು ಅಧಿಕಾರಿಗಳು, ಹಾಲು ಉತ್ಪಾದಕರ ಒಕ್ಕೂಟದ ಅಧಿಕಾರಿಗಳು ಹಾಗೂ ಸ್ವತಃ ಹೈನುಗಾರರೂ ಒಪ್ಪಿಕೊಳ್ಳುತ್ತಾರೆ.

‘ಹಾಲು ಉತ್ಪಾದಕರ ಸಂಘಗಳು ಅಸ್ತಿತ್ವ–ದಲ್ಲಿಲ್ಲದ ಕಡೆಯೂ ನಾವು ಸಮೀಕ್ಷೆ ನಡೆಸಿದ್ದೇವೆ. ಹಾಗಾಗಿ ನಮ್ಮ ಸಮೀಕ್ಷೆ ಶೇ 95ರಷ್ಟು ನಿಖರವಾಗಿದೆ. ದನಕರುಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದರಲ್ಲಿ ಸಂದೇಹವೇ ಇಲ್ಲ’ ಎಂದು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಶೇಖರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಈ ಸಮೀಕ್ಷೆಯಿಂದ ಜಿಲ್ಲೆಯ ಹೈನುಗಾರಿಕಾ ಕ್ಷೇತ್ರದ ಅನೇಕ ಕೊರತೆಗಳು ಬೆಳಕಿಗೆ ಬಂದಿವೆ. ಇಲ್ಲಿ ಈಗಲೂ ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ರೈತರಲ್ಲಿ ಆಳ ಜ್ಞಾನವಿಲ್ಲ.ಕರಾವಳಿಯಲ್ಲಿ 42ಸಾವಿರಕ್ಕೂ ಅಧಿಕ ಕರುಗಳು ತಡವಾಗಿ ಬೆದೆಗೆ ಬರುವುದು ಪತ್ತೆಯಾಯಿತು. ಇದಕ್ಕೆ ಪೋಷಣೆಯಲ್ಲಿನ ಲೋಪ ದೋಷಗಳೇ ಕಾರಣ ಎಂದು ತಿಳಿಸಿದರು.ಆದರೆ ರೈತರು ಹೇಳುವುದೇ ಬೇರೆ. ‘ಆಕಳುಗಳ ಸಂಖ್ಯೆ ಕುಸಿದಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿ ಲೀ. ಹಾಲಿಗೆ ರೂ 30 ನೀಡಿದರೂ ಇಲ್ಲಿ ಹೈನುಗಾರಿಕೆ ಗೀಟುವುದಿಲ್ಲ. ದಿನವಿಡೀ ಹಸುಗಳ ಆರೈಕೆಗೆ ನಾವು ವಹಿಸುವ ಶ್ರಮಕ್ಕೆ ಸಂಬಳವೇ ಸಿಗುವುದಿಲ್ಲ. ಹಾಗಾಗಿ ನಾಲ್ಕೈದು ದನ ಕಟ್ಟುತ್ತಿದ್ದವರು ಈಗ ಒಂದು ದನ ಮಾತ್ರ ಕಟ್ಟುತ್ತಿದ್ದಾರೆ. ಈಗ ಹಾಲಿನ ದರ ಏರಿಕೆಯಾಗಿದ್ದರಿಂದ ಸ್ವಲ್ಪ ಪರವಾಗಿಲ್ಲ’  ಎನ್ನುತ್ತಾರೆ ಪಳಜೆ ಶ್ರೀಪಾದ ರೈ. ಬಹುತೇಕ ರೈತರು ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.ಒಕ್ಕೂಟವು ಹಾಲು ಉತ್ಪಾದನೆಗೆ ನೀಡುವ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಬಗ್ಗೆ ಆಸಕ್ತಿ ಹುಟ್ಟಿಸುವ ಕಾರ್ಯಕ್ರಮ ಪ್ರಮುಖವಾಗಿದ್ದು, ಕರುಗಳ ಪೋಷಣೆಗೆ ಸಂಬಂಧಿಸಿಯೂ ಉತ್ತೇಜನ ನೀಡಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.