ಸೋಮವಾರ, ಮೇ 23, 2022
21 °C

ದಕ್ಷಿಣ ಸುಡಾನ್: ಹೊಸ ರಾಷ್ಟ್ರ ಉದಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾರ್ಟೂಮ್ (ಪಿಟಿಐ, ಡಿಪಿಎ): ಸುಡಾನ್‌ನಲ್ಲಿ ಎರಡು ದಶಕಗಳಿಂದ ನಡೆಯುತ್ತಿದ್ದ ನಾಗರಿಕ ಸಮರಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಜನವರಿ 9ರಿಂದ 15ರ ತನಕ ನಡೆದ ಜನಮತಗಣನೆಯಲ್ಲಿ ದೇಶ ವಿಭಜನೆಗೆ ಸ್ಪಷ್ಟ ಜನಾದೇಶ ಲಭಿಸಿದ್ದು, ಜುಲೈ 9ರಂದು ದಕ್ಷಿಣ ಸುಡಾನ್ ಉತ್ತರ ಸುಡಾನ್‌ನಿಂದ ಪ್ರತ್ಯೇಕಗೊಂಡು ಜಗತ್ತಿನ ನೂತನ ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಲಿದೆ.ಬಹುತೇಕ ಶಾಂತಿಯುತ ರೀತಿಯಲ್ಲಿ ನಡೆದ ಜನಮತಗಣನೆಯಿಂದ ದೊರೆತಿರುವ ಫಲಿತಾಂಶವನ್ನು ಅಮೆರಿಕ ಮತ್ತು ಚೀನಾಗಳು ಸ್ವಾಗತಿಸಿದ್ದು, ಸುಡಾನ್‌ನ ಎರಡೂ ಭಾಗಗಳಲ್ಲಿನ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಸಿಗಬೇಕು ಎಂದು ಹೇಳಿವೆ.ಜನಮತಗಣನೆಯಲ್ಲಿ ಸುಡಾನ್ ದಕ್ಷಿಣ ಭಾಗದ 38,36,406 ಮಂದಿ ಪಾಲ್ಗೊಂಡಿದ್ದರು. ಈ ಪೈಕಿ 44,888 ಮಂದಿ ಸಂಯುಕ್ತ ಸುಡಾನ್ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಬಿಟ್ಟರೆ ಉಳಿದೆಲ್ಲರೂ ಸುಡಾನ್‌ನಿಂದ ಪ್ರತ್ಯೇಕಗೊಂಡು ದಕ್ಷಿಣ ಸುಡಾನ್ ರಾಷ್ಟ್ರ ನಿರ್ಮಾಣವಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸೋಮವಾರ ಈ ಜನಮತಗಣನೆಯ ಫಲಿತಾಂಶವನ್ನು ದಕ್ಷಿಣ ಸುಡಾನ್ ಜನಮತಗಣನೆ ಕಮಿಷನ್‌ನ ಅಧ್ಯಕ್ಷ ಮೊಹಮ್ಮದ್ ಇಬ್ರಾಹಿಂ ಖಲೀಲ್ ಅಧಿಕೃತವಾಗಿ ಪ್ರಕಟಿಸಿದರು.ಜನರ ಈ ಅಭಿಪ್ರಾಯವನ್ನು ಸುಡಾನ್ ಒಪ್ಪಿಕೊಳ್ಳುತ್ತದೆ, ದೇಶದ ದಕ್ಷಿಣ ಭಾಗವು ಪ್ರತ್ಯೇಕಗೊಂಡರೂ ಅದರೊಂದಿಗೆ ನಿರಂತರ ಸಂಪರ್ಕ ಹೊಂದಿರಲು ನಾವು ಬಯಸುತ್ತೇವೆ ಎಂದು ಸುಡಾನ್‌ನ ಅಧ್ಯಕ್ಷ ಒಮರ್ ಅಲ್ ಬಶೀರ್ ಹೇಳಿದ್ದಾರೆ.ಆಫ್ರಿಕ ಖಂಡದ ಅತಿ ದೊಡ್ಡ ರಾಷ್ಟ್ರವಾಗಿರುವ ಸುಡಾನ್‌ನ ಉತ್ತರ ಭಾಗದಲ್ಲಿ ಮುಸ್ಲಿಮರ ಸಂಖ್ಯೆ ಅಧಿಕ ಇದ್ದರೆ, ದಕ್ಷಿಣ ಭಾಗದಲ್ಲಿ ಕ್ರೈಸ್ತ ಮತ್ತು ಅನಿಮಿಸ್ಟ್ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಜನಮತಗಣನೆಯ ಫಲಿತಾಂಶಕ್ಕೆ ಸುಡಾನ್ ಸಮ್ಮತಿ ಸೂಚಿಸಲಾರದು ಎಂಬ ಭಾವನೆ ದಟ್ಟವಾಗಿತ್ತು. ಆದರೆ ಫಲಿತಾಂಶವನ್ನು ಒಪ್ಪಿಕೊಳ್ಳುವ ಮೂಲಕ ದೇಶದಲ್ಲಿ ಶಾಂತಿ ನೆಲೆಸುವ ಸೂಚನೆ ಕಂಡುಬಂದಿದೆ.ನೈಲ್ ನದಿಯ ಉತ್ತರಕ್ಕಿರುವ ಸುಡಾನ್ ಮೊದಲು ಬ್ರಿಟಿಷ್ ಮತ್ತು ಈಜಿಪ್ಟ್‌ನ ಆಡಳಿತಗಾರರ ಹಿಡಿತದಲ್ಲಿತ್ತು. 1955-72ರ ನಡುವೆ ಸಂಭವಿಸಿದ ಸ್ವಾತಂತ್ರ್ಯ ಹೋರಾಟ ತೀವ್ರ ಹಿಂಸಾರೂಪ ತಳೆದಿತ್ತು. ಸುಡಾನ್ ಸ್ವತಂತ್ರ ರಾಷ್ಟ್ರವಾದ ಮೇಲೂ ಹಿಂಸೆಗೆ ತೆರೆ ಬೀಳಲಿಲ್ಲ. 1983-2005ರ ನಡುವೆ ನಿರಂತರ ನಾಗರಿಕ ಸಮರ ನಡೆಯುತ್ತಲೇ ಇತ್ತು. ಇದರಿಂದ 20 ಲಕ್ಷ ಮಂದಿ ಸತ್ತಿದ್ದರೆ, 40 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದರು.ಜನಮತಗಣನೆಯ ಫಲಿತಾಂಶದಿಂದ ದಕ್ಷಿಣ ಸುಡಾನ್‌ನ ಜನ ಸಂತೋಷಗೊಂಡಿದ್ದು, ರಾಜಧಾನಿ ಜುಬಾದಲ್ಲಿ ವಿಜಯೋತ್ಸವ ಆಚರಿಲಾಗುತ್ತಿದೆ. ಫ್ರಾನ್ಸ್‌ನಷ್ಟು ದೊಡ್ಡದಿರುವ ದಕ್ಷಿಣ ಸುಡಾನ್‌ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವೂ ನಡೆದಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.