ಸೋಮವಾರ, ಜನವರಿ 20, 2020
18 °C
ಕ್ಷಿಪ್ರಕ್ರಾಂತಿ ಆರೋಪ: ವಿರೋಧಿ ಬಣಗಳ ನಡುವಣ ಘರ್ಷಣೆ ತೀವ್ರ

ದಕ್ಷಿಣ ಸೂಡಾನ್‌: ನೂರಾರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜುಬಾ (ಎಎಫ್‌ಪಿ): ದಕ್ಷಿಣ ಸೂಡಾನ್‌ನಲ್ಲಿ ಅಧ್ಯಕ್ಷ ಸಾಲ್ವಾ ಕಿರ್‌ ವಿರೋಧಿ ಬಣಕ್ಕೆ ನಿಷ್ಠರಾಗಿರುವ ಸೇನೆಯು ನಡೆಸಿದೆ ಎನ್ನಲಾದ  ಕ್ಷಿಪ್ರಕ್ರಾಂತಿಯ ಘರ್ಷಣೆಯಿಂದ  ನೂರಾರು ಜನರು ಸಾವನ್ನಪ್ಪಿ ದ್ದಾರೆ. ಸಾವಿರಾರು ಮಂದಿ ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯಲು ತೆರಳಿದ್ದಾರೆ.ಈ ಘರ್ಷಣೆಗೆ ಮಾಜಿ ಉಪಾಧ್ಯಕ್ಷ ರೀಕ್‌ ಮ್ಯಾಚರ್‌ ಅವರಿಗೆ ನಿಷ್ಠರಾಗಿರುವ ಸೇನೆಯೇ ಕಾರಣ ಎಂದು ಅಧ್ಯಕ್ಷ ಸಾಲ್ವಾ ಕಿರ್‌ ಆರೋಪಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಮ್ಯಾಚರ್‌, ಅಧ್ಯಕ್ಷ ಕಿರ್‌ ಅವರನ್ನು ಪದಚ್ಯುತಗೊಳಿಸಲು ತಾವು ಪ್ರಯತ್ನಿಸು ತ್ತಿಲ್ಲ. ಆದರೆ, ಅವರು (ಕಿರ್‌)  ತಮ್ಮನ್ನು ಪ್ರಶ್ನಿಸುವವರನ್ನು ಬಗ್ಗುಬಡಿಯಲು ಹಿಂಸಾ ಮಾರ್ಗ ಹಿಡಿದಿದ್ದಾರೆ ಎಂದು ಆಪಾದಿಸಿದ್ದಾರೆ.ಈ ಮಧ್ಯೆ, ವಿಶ್ವಸಂಸ್ಥೆಯ ದಕ್ಷಿಣ ಸೂಡಾನ್ ದೂತಾವಾಸ ಗಳಲ್ಲಿ ಅತ್ಯಾವಶ್ಯಕವಲ್ಲದ ರಾಜ ತಾಂತ್ರಿಕರನ್ನು ದೇಶದಿಂದ ತೆರಳುವಂತೆ ಸೂಚಿಸಿದೆ.400ರಿಂದ 500 ಶವಗಳನ್ನು ಆಸ್ಪತ್ರೆಗೆ ಸಾಗಿಸ ಲಾಗಿದೆ. 800ಕ್ಕೂ ಹೆಚ್ಚು ಜನರು ಗಾಯ ಗೊಂಡಿ ದ್ದಾರೆ ಎಂದು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಮುಖ್ಯಸ್ಥ ಹೆರ್ವೆ ಲ್ಯಾಡ್‌ಸೌಸ್‌ ಹೇಳಿದ್ದಾರೆ.ಜನಾಂಗೀಯವಾಗಿ ಬಿಗುವಿನಿಂದ ಕೂಡಿದ ಪ್ರದೇಶ ಗಳಲ್ಲಿ ಭಾನುವಾರ ರಾತ್ರಿ ಆರಂಭವಾದ ಘರ್ಷಣೆ ತೀವ್ರ ಹಿಂಸಾಚಾರಕ್ಕೆ ಕಾರಣವಾಗಿದೆ. ಇದರಿಂದ ದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವರದಿ ಮಾಡಿದ್ದಾರೆ.ದಕ್ಷಿಣ ಸೂಡಾನ್‌ ರಾಜಧಾನಿ ಜುಬಾದಲ್ಲಿ ಬುಧವಾರ ಮುಂಜಾನೆ ಕೂಡ ಘರ್ಷಣೆ ನಡೆದಿದೆ. ಎರಡು ದಿನಗಳಿಂದ ಮನೆಯೊಳಗೆ ಇದ್ದ ಜನರು ಬುಧವಾರ ಹೊರಗೆ ಕಾಣಿಸಿಕೊಂಡರು.  ಸಾಮಾನು– ಸರಂಜಾಮುಗಳೊಂದಿಗೆ  ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರಗಳೂ ಸೇರಿದಂತೆ ಸುರಕ್ಷಿತ ಸ್ಥಳಕ್ಕೆ ತೆರಳಲು ತವಕಿಸುತ್ತಿದ್ದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.ಮುಚ್ಚಿದ್ದ ವಿಮಾನ ನಿಲ್ದಾಣವನ್ನು ತೆರೆಯುವಂತೆ ಸರ್ಕಾರ ಆದೇಶಿಸಿದೆ. ಆದರೂ, ಭದ್ರತಾ ಖಾತರಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ.ಹಿನ್ನೆಲೆ: ಸೂಡಾನ್‌ ಉಪಾಧ್ಯಕ್ಷರಾಗಿದ್ದ ರೀಕ್‌  ಮ್ಯಾಚರ್‌ ಅವರನ್ನು ಕಳೆದ ಜಲೈನಲ್ಲಿ ವಜಾ ಮಾಡಲಾಯಿತು. ಇದರಿಂದ ಅಧ್ಯಕ್ಷ ಕಿರ್‌ ಮತ್ತು ಮ್ಯಾಚರ್‌ ಮಧ್ಯೆ ದ್ವೇಷ ಬೆಳೆದಿದೆ.

ಪ್ರತಿಕ್ರಿಯಿಸಿ (+)