ಶುಕ್ರವಾರ, ಮೇ 27, 2022
30 °C

ದ.ಕ. ಜಿಲ್ಲೆಗೆ 41.80 ಕೋಟಿ ಪ್ರಸ್ತಾವನೆ

ಪ್ರಜಾವಾಣಿ ವಾರ್ತೆ ಮುರಳೀಧರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಮಂಗಳೂರು: ಪ್ರಾಥಮಿಕ ಶಿಕ್ಷಣದ ಕಾಯಕಲ್ಪಕ್ಕಾಗಿ ಹೊಸ ಶಿಕ್ಷಣ ಹಕ್ಕು ಅನ್ವಯ 2011-12ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಬೇಕಾದ ಶೈಕ್ಷಣಿಕ ಚಟುವಟಿಕೆ ಪ್ರಸ್ತಾವನೆ ಇದೀಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇಷ್ಟರಲ್ಲೇ ಅನುಮೋದನೆ ಸಿಗಲಿದೆ.ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿಯೇ ದಾಖಲೆ ಎನ್ನುವಂತೆ ಒಟ್ಟು ರೂ. 41.80 ಕೋಟಿ ಮೊತ್ತದ ಈ ಪ್ರಸ್ತಾವವನ್ನು ರಾಜ್ಯದ ಶಿಕ್ಷಣ ಇಲಾಖೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದು, ಈ ಮೂಲಕ ಶಿಕ್ಷಣ ಹಕ್ಕಿನ ಅನ್ವಯ ಮಾರ್ಪಾಡು ಮಾಡಲಾದ ಶೈಕ್ಷಣಿಕ ಯೋಜನೆ ಇದೇ ಮೊದಲ ಬಾರಿಗೆ ಜಾರಿಯಾಗಲಿದೆ. ಪರಿಣಾಮ ಮಕ್ಕಳಿಗೆ ಮತ್ತೊಂದು ಜತೆ ಸಮವಸ್ತ್ರ ಸಿಗಲಿದೆ.ಪ್ರಾಥಮಿಕ ಶಾಲೆಗಳಿಗೆ ಅಗತ್ಯವಾದ ಗರಿಷ್ಠ ಶಿಕ್ಷಕರನ್ನು ಒದಗಿಸುವುದರ ಜತೆಯಲ್ಲಿಯೇ ಶಾಲೆಗಳ ಮೂಲ ಸೌಕರ್ಯ ಸುಧಾರಿಸುವುದು ಹಾಗೂ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.ನೂರಕ್ಕಿಂತ ಹೆಚ್ಚು ಮಕ್ಕಳಿರುವ 9 ಶಾಲೆಗಳಿಗೆ ಈಗ ಮುಖ್ಯ ಶಿಕ್ಷಕರೇ ಇಲ್ಲ. ಇಂಥ ಶಾಲೆಗಳಿಗೆ ಮುಖ್ಯ ಶಿಕ್ಷಕರನ್ನು ಒದಗಿಸುವುದರ ಜತೆಗೇ 130 ಕಲಾ ಶಿಕ್ಷಕರನ್ನು ಹೊಸದಾಗಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಈಗಿರುವ ವ್ಯವಸ್ಥೆಯಂತೆ ಪ್ರಾಥಮಿಕ ಶಾಲೆಗಳ ಎಲ್ಲ ಲೆಕ್ಕಪತ್ರಗಳನ್ನು ಆಯಾ ಶಾಲೆಗಳ ಮುಖ್ಯ ಗುರುಗಳೇ ನೋಡಿಕೊಳ್ಳಬೇಕಾಗುತ್ತದೆ. ಆದರೆ ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಕಿರಿಕಿರಿ ಮುಖ್ಯ ಶಿಕ್ಷಕರಿಗೆ ಇರುವುದಿಲ್ಲ. ಪ್ರತಿ 50 ಪ್ರಾಥಮಿಕ ಶಾಲೆಗಳಿಗೆ ಒಬ್ಬ ಲೆಕ್ಕಾಧಿಕಾರಿಯಂತೆ ಒಟ್ಟು 42 ಹುದ್ದೆಗಳನ್ನು ಸೃಷ್ಟಿಸಲು ಹೊಸ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 933 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು ಬಹುತೇಕ ಶಾಲೆಗಳ ಲೆಕ್ಕಪತ್ರ ನಿರ್ವಹಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಮನ್ವಯಾಧಿಕಾರಿ ಶಿವಪ್ರಕಾಶ್ ಮಂಗಳವಾರ ‘ಪ್ರಜಾವಾಣಿ’ಗೆ ತಿಳಿಸಿದರು.ಕಡ್ಡಾಯ ತರಬೇತಿ: ಶಿಕ್ಷಣ ಹಕ್ಕು ಕಾಯ್ದೆ ಈ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುತ್ತಿಲ್ಲ. ಹಾಗಾಗಿ ಶಿಕ್ಷಕರ ತರಬೇತಿ ಕಡ್ಡಾಯ ಮಾಡಿಲ್ಲ. ಆದರೆ ಕೆಲವು ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ಹಲವು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಆದರೆ ಮುಂಬರುವ ಶೈಕ್ಷಣಿಕ ವರ್ಷದಿಂದ ತರಬೇತಿ ಕಡ್ಡಾಯ ಮಾಡಲಾಗುವುದು. ಪ್ರತಿ ಪ್ರಾಥಮಿಕ ಶಾಲಾ ಶಿಕ್ಷಕ ವರ್ಷದಲ್ಲಿ 20 ದಿನ ಕಡ್ಡಾಯವಾಗಿ ತರಬೇತಿಗೆ ಹಾಜರಾಗಲೇಬೇಕಿದೆ. ಇದಕ್ಕಾಗಿ ರೂ. 1.14 ಕೋಟಿ ಮೀಸಲಿಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜಾರಿಗೊಳಿಸಲಾದ ‘ಮೀನಾ ಕ್ಲಬ್’ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ರೂ. 11.28 ಲಕ್ಷ ಒದಗಿಸಲಾಗಿದೆ.ಉಚಿತ ಸಮವಸ್ತ್ರ: ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 8ನೇ ವರ್ಗದಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ವರ್ಷಕ್ಕೆ ಒಂದು ಜತೆ ಮಾತ್ರ ಸಮವಸ್ತ್ರ ನೀಡಲಾಗುತ್ತಿದೆ. ಹೀಗಾಗಿ ವಾರವಿಡೀ ಒಂದು ಜತೆ ಸಮವಸ್ತ್ರವನ್ನೇ ಬಳಸುವ ಅನಿವಾರ್ಯತೆ ಮಕ್ಕಳಿಗಿತ್ತು. ಮುಂಬರುವ ವರ್ಷದಿಂದ 2 ಜತೆ ಸಮವಸ್ತ್ರ ನೀಡಲಾಗುವುದು. ಇದಕ್ಕಾಗಿ ರೂ. 2.41 ಕೋಟಿ ಮೀಸಲಿಡಲಾಗಿದೆ ಎಂದು ಶಿವಪ್ರಕಾಶ್ ವಿವರಿಸಿದರು.ಶಾಲೆಗಳ ಶೌಚಾಲಯ ಸಮಸ್ಯೆಗೂ ಮುಂದಿನ ವರ್ಷ ಬಹುತೇಕ ಪರಿಹಾರ ದೊರಕಲಿದೆ. ನಗರ ಪ್ರದೇಶದ ಒಟ್ಟು 23 ಶಾಲೆಗಳಿಗೆ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯ 420 ಶಾಲೆಗಳಿಗೆ ಕಾಂಪೌಂಡ್ ಇಲ್ಲ. ಹೊಸದಾಗಿ ನಿರ್ಮಿಸಲು ಗರಿಷ್ಠ ರೂ. 7.91 ಕೋಟಿ ಅನುದಾನ ಲಭ್ಯವಾಗಲಿದೆ. ಚಿಣ್ಣರ ಜಿಲ್ಲಾ ದರ್ಶನ ಕಾರ್ಯಕ್ರಮಕ್ಕೆ ಈ ಬಾರಿ ರೂ. 15 ಲಕ್ಷ ಒದಗಿಸಲಾಗಿದೆ.ವಸತಿ ಶಾಲೆ: ಬೇರೆ ಬೇರೆ ಯೋಜನೆಗಳಲ್ಲಿ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ವಸತಿ ಶಾಲೆಗಳು ಈಗ ಕಾರ್ಯಾಚರಿಸುತ್ತಿದ್ದರೂ ಶಿಕ್ಷಣ ಇಲಾಖೆಯಿಂದ ವಸತಿ ಶಾಲೆ ಇರಲಿಲ್ಲ. ಈ ಕೊರತೆ ಮನಗಂಡು ಮುಂದಿನ ವರ್ಷ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಸರ್ಕಾರಿ ವಸತಿ ಶಾಲೆಯೊಂದನ್ನು ತೆರೆಯಲು ಒಟ್ಟು ರೂ. 75 ಲಕ್ಷಕ್ಕೆ ಬೇಡಿಕೆ ಸಲ್ಲಿಸಲಾಗಿದೆ.ಸಾರಿಗೆ ಸೌಲಭ್ಯ ಇಲ್ಲದ ಕೆಲವೆಡೆ ಬಡ ಮಕ್ಕಳು ಶಾಲೆಗೆ ಬಂದುಹೋಗುವುದಕ್ಕೆ ತೊಂದರೆಯಾಗುತ್ತಿದ್ದು ಇಂತಹ 135 ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ರೂ. 6.75 ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿದೆ.ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಶೈಕ್ಷಣಿಕ ಅಗತ್ಯಗಳ ಪ್ರಸ್ತಾವನೆಯನ್ನು ಈಗಾಗಲೇ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದು ಇದೇ 28ರಂದು ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಪ್ರಸ್ತಾವಕ್ಕೆ ಅನುಮೋದನೆ ಸಿಗುವ ಸಂಭವ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.